Kerala gold smuggling case ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣ: ಪಿಣರಾಯಿ ವಿಜಯನ್ ಮೇಲೆ ಸ್ವಪ್ನಾ ಸುರೇಶ್ ಗಂಭೀರ ಆರೋಪ | Kerala gold smuggling case Swapna Suresh made allegation against CM Pinarayi Vijayan


Kerala gold smuggling case ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣ: ಪಿಣರಾಯಿ ವಿಜಯನ್ ಮೇಲೆ ಸ್ವಪ್ನಾ ಸುರೇಶ್ ಗಂಭೀರ ಆರೋಪ

ಸ್ವಪ್ನಾ ಸುರೇಶ್ – ಪಿಣರಾಯಿ ವಿಜಯನ್

ಯುಎಇಗೆ ಕರೆನ್ಸಿ ಕೊಂಡೊಯ್ಯುವಲ್ಲಿ ವಿಜಯನ್‌ನ ಕೈವಾಡವಿದೆ ಎಂದು ಆರೋಪಿಸಿರುವ ಸುರೇಶ್, 2016 ರಲ್ಲಿ ನಾನು ಕಾನ್ಸುಲ್ ಜನರಲ್‌ಗೆ ಕಾರ್ಯನಿರ್ವಾಹಕ ಕಾರ್ಯದರ್ಶಿಯಾಗಿದ್ದಾಗ ಶಿವಶಂಕರ್ ನನ್ನನ್ನು ಮೊದಲ ಬಾರಿಗೆ ಭೇಟಿಯಾಗಿದ್ದರು….

ತಿರುವನಂತಪುರಂ: ರಾಜತಾಂತ್ರಿಕ ಮಾರ್ಗ ಮೂಲಕ ಚಿನ್ನ ಕಳ್ಳಸಾಗಣೆ ಪ್ರಕರಣದ (Gold smuggling case)ಆರೋಪಿಗಳಲ್ಲೊಬ್ಬರಾದ ಸ್ವಪ್ನಾ ಸುರೇಶ್ (Swapna Suresh) ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ (Kerala CM Pinarayi Vijayan) ಕರೆನ್ಸಿ ತುಂಬಿದ ಬ್ಯಾಗ್ ಕೊಂಡೊಯ್ದಿದ್ದಾರೆ ಎಂದು ಮಂಗಳವಾರ ಆರೋಪಿಸಿದ್ದು ತಮ್ಮ ಆರೋಪದ ಹಿಂದೆ ಯಾವುದೇ “ರಾಜಕೀಯ ಅಥವಾ ವೈಯಕ್ತಿಕ ಅಜೆಂಡಾ” ಇಲ್ಲ ಎಂದು ಬುಧವಾರ ಹೇಳಿದ್ದಾರೆ. 2016 ರಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ (UAE)ಗೆ ಪಿಣರಾಯಿ ಕರೆನ್ಸಿ ತುಂಬಿದ ಬ್ಯಾಗ್ ಕೊಂಡೊಯ್ದಿದ್ದಾರೆ ಎಂದು ಸ್ವಪ್ನಾ ಸುರೇಶ್ ಆರೋಪಿಸಿದ್ದಾರೆ. ಬುಧವಾರ ಪಾಲಕ್ಕಾಡ್​​ನಲ್ಲಿ ಸ್ವಪ್ನಾ ಸುರೇಶ್ ಮಾಧ್ಯಮಗೋಷ್ಠಿ ನಡೆಸಿದ ಕೆಲವೇ ಗಂಟೆಗಳಲ್ಲಿ ವಿಜಿಲೆನ್ಸ್ ಆಂಡ್ ಆಂಟಿ ಕರಪ್ಶನ್ ಬ್ಯುರೊ ತಂಡ (VACB) ಚಿನ್ನದ ಕಳ್ಳ ಸಾಗಾಣಿಕೆ ಪ್ರಕರಣದ ಮತ್ತೊಬ್ಬ ಆರೋಪಿ ಪಿ.ಎಸ್.ಸರಿತ್ ಎಂಬಾತನನ್ನು ಪಾಲಕ್ಕಾಡ್​​ನಲ್ಲಿರುವ ಫ್ಲಾಟ್​​ನಿಂದ ವಶಕ್ಕೆ ತೆಗೆದುಕೊಂಡಿದೆ. ರೆಡ್ ಕ್ರೆಸೆಂಟ್ ನೆರವಿನಿಂದ ಜಾರಿಗೊಳಿಸಲಾದ ರಾಜ್ಯ ಸರ್ಕಾರದ ವಸತಿ ಯೋಜನೆ ಲೈಫ್ ಮಿಷನ್‌ಗೆ ಸಂಬಂಧಿಸಿದ ಪ್ರಕರಣದಲ್ಲಿ ವಿಎಸಿಬಿ ತನಿಖೆಗೆ ಸಂಬಂಧಿಸಿದಂತೆ ಸರಿತ್​​ನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ಚಿನ್ನ ಕಳ್ಳಸಾಗಣೆ ಪ್ರಕರಣದ ತನಿಖೆ ವೇಳೆ ಸಿಆರ್‌ಪಿಸಿ ಸೆಕ್ಷನ್ 164ರ ಪ್ರಕಾರ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸ್ಥಳೀಯ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ ನಂತರ ಸ್ವಪ್ನಾ ಸುರೇಶ್ ಮಂಗಳವಾರ ಕೊಚ್ಚಿಯಲ್ಲಿ ಮಾಧ್ಯಮಗಳ ಮುಂದೆ ಈ ಆರೋಪವನ್ನು ಮಾಡಿದ್ದಾರೆ. ಪಿಣರಾಯಿ ವಿಜಯನ್ ಅವರು ಈ ಆರೋಪ ನಿರಾಕರಿಸಿದ್ದು ಇದು ತನ್ನ ವಿರುದ್ಧದ “ಕೆಲವು ಕಾರ್ಯಸೂಚಿಯ” (ಅಜೆಂಡಾ) ಭಾಗವಾಗಿದೆ ಎಂದು ಹೇಳಿದರು.

ಸ್ವಪ್ನಾ ಸುರೇಶ್ ಹೇಳಿದ್ದೇನು?

ನಾನು ಮಾಡಿದ ಆರೋಪಗಳ ಹಿಂದೆ ಯಾವುದೇ ರಾಜಕೀಯ ಅಥವಾ ವೈಯಕ್ತಿಕ ಅಜೆಂಡಾ ಇಲ್ಲ. ನಾನು ಸೆಕ್ಷನ್ 164 ಆಧರಿಸಿ ಹೇಳಿಕೆ ನೀಡಿದ್ದೇನೆ. ಇದಕ್ಕಿಂತ ಮುಂಚೆಯೂ ನಾನು ಈ ವಿಷಯವನ್ನು ತನಿಖಾ ಸಂಸ್ಥೆಗೆ ಹೇಳಿದ್ದೇನೆ. ನನಗೆ ಬೆದರಿಕೆ ಇದೆ. ನನ್ನ ಉದ್ಯೋಗದಾತರೂ ಇದರಿಂದ ತೊಂದರೆ ಅನುಭವಿಸುತ್ತಿದ್ದಾರೆ. ಸಾಕ್ಷ್ಯಗಳಿದ್ದ ಕಾರಣವೇ ನಾನು ಸಿಎಂ ವಿಜಯನ್ ವಿರುದ್ಧ ಹೇಳಿಕೆ ನೀಡಿದ್ದೇನೆ. ಪಿಣರಾಯಿ ವಿಜಯನ್ ಅವರ ಪತ್ನಿ ಕಮಲಾ ಮತ್ತು ಮಗಳು ವೀಣಾ ವಿರುದ್ಧವೂ ಆರೋಪ ಮಾಡಿದ ಸ್ವಪ್ನಾ, ಕಮಲಾ ಮತ್ತು ವೀಣಾ ಐಷಾರಾಮಿ ಬದುಕು ಬದುಕುತ್ತಿದ್ದಾರೆ. ನಾನು ಮಾತ್ರ ಕಷ್ಟ ಅನುಭವಿಸುತ್ತಿದ್ದೇನೆ. ತನಿಖಾ ಸಂಸ್ಥೆಗಳ ಮುಂದೆ ನನ್ನ ಹೇಳಿಕೆಗಳನ್ನು ಯಾರೂ ತಮ್ಮ ವೈಯಕ್ತಿಕ ಅಜೆಂಡಾಕ್ಕಾಗಿ ಬಳಸಿಕೊಳ್ಳಬಾರದು ಎಂದಿದ್ದಾರೆ.

ಕಾನ್ಸುಲೇಟ್‌ನ ಮಾಜಿ ಕಾರ್ಯನಿರ್ವಾಹಕ ಕಾರ್ಯದರ್ಶಿ ಆಗಿದ್ದ ಸ್ವಪ್ನಾ ಸುರೇಶ್, ಕಮಲಾ, ವೀಣಾ, ಪಿಣರಾಯಿ ವಿಜಯನ್ ಅವರ ಮಾಜಿ ಪ್ರಧಾನ ಕಾರ್ಯದರ್ಶಿ ಎಂ ಶಿವಶಂಕರ್, ಅವರ ಮುಖ್ಯ ಪ್ರಧಾನ ಕಾರ್ಯದರ್ಶಿ ನಳಿನಿ ನೆಟ್ಟೋ ಮತ್ತು ಮಾಜಿ ಸಚಿವ ಕೆಟಿ ಜಲೀಲ್ ಅವರು ಚಿನ್ನ ಕಳ್ಳಸಾಗಣೆಯಲ್ಲಿ ತೊಡಗಿರುವ ಬಗ್ಗೆ ಹೇಳಿದ್ದೇನೆ. ನಾನು ಹೆಚ್ಚಿನದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಯುಎಇಗೆ ಕರೆನ್ಸಿ ಕೊಂಡೊಯ್ಯುವಲ್ಲಿ ವಿಜಯನ್‌ನ ಕೈವಾಡವಿದೆ ಎಂದು ಆರೋಪಿಸಿರುವ ಸುರೇಶ್, 2016 ರಲ್ಲಿ ನಾನು ಕಾನ್ಸುಲ್ ಜನರಲ್‌ಗೆ ಕಾರ್ಯನಿರ್ವಾಹಕ ಕಾರ್ಯದರ್ಶಿಯಾಗಿದ್ದಾಗ ಶಿವಶಂಕರ್ ನನ್ನನ್ನು ಮೊದಲ ಬಾರಿಗೆ ಭೇಟಿಯಾಗಿದ್ದರು. ದುಬೈಗೆ ಕೊಂಡೊಯ್ಯಬೇಕಾದ ಬ್ಯಾಗ್‌ ತೆಗೆದುಕೊಂಡು ಹೋಗುವುದನ್ನು ಸಿಎಂ ಮರೆತಿದ್ದಾರೆ ಎಂದು ಶಿವಶಂಕರ್‌ ಹೇಳಿದ್ದಾರೆ. ಬ್ಯಾಗ್ ಅನ್ನು ಕಾನ್ಸುಲೇಟ್‌ಗೆ (ತಿರುವನಂತಪುರಂನಲ್ಲಿರುವ) ತಂದಾಗ, ನಾವು ಅದನ್ನು ಸ್ಕ್ಯಾನ್ ಮಾಡಿದ್ದೇವೆ. ಆಗ ಅದರಲ್ಲಿ ಕರೆನ್ಸಿ ಇದೆ ಎಂದು ನಾವು ಅರಿತುಕೊಂಡೆವು. ನ್ಯಾಯಾಲಯದ ಮುಂದೆ ನನ್ನ ಹೇಳಿಕೆಯ ಬಗ್ಗೆ ಎಲ್ಲವನ್ನೂ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ಬಿರಿಯಾನಿ ಪಾತ್ರೆ ಕಳುಹಿಸಲಾಗಿತ್ತು

ಹಲವಾರು ಸಂದರ್ಭಗಳಲ್ಲಿ ಕಾನ್ಸುಲೇಟ್‌ನಿಂದ ಕ್ಲಿಫ್ ಹೌಸ್‌ಗೆ (ಸಿಎಂ ಅಧಿಕೃತ ನಿವಾಸ) ‘ಬಿರಿಯಾನಿ’ ಅಡುಗೆಗೆ ಬಳಸುವ ಪಾತ್ರೆಗಳನ್ನು ಕಳುಹಿಸಲಾಗಿದೆ ಎಂದು ಸ್ವಪ್ನಾ ಹೇಳಿದ್ದಾರೆ.“ಭಾರ ಲೋಹಗಳಿಂದ ಮಾಡಿದ ಪಾತ್ರೆಗಳನ್ನು ಕಾನ್ಸುಲೇಟ್‌ನಿಂದ ಕ್ಲಿಫ್ ಹೌಸ್‌ಗೆ ವರ್ಗಾಯಿಸುವುದು ಹಲವು ಬಾರಿ ನಡೆದಿತ್ತು. ಶಿವಶಂಕರ್ ಅವರ ನಿದರ್ಶನದಲ್ಲಿ ಇದನ್ನು ಮಾಡಲಾಗಿದೆ ಎಂದಿದ್ದಾರೆ ಅವರು.

ಆರೋಪ ನಿರಾಕರಿಸಿದ ಪಿಣರಾಯಿ

ಸ್ವಪ್ನಾ ಸುರೇಶ್ ಆರೋಪ ಬಗ್ಗೆ ಪ್ರತಿಕ್ರಿಯಿಸಿದ ಪಿಣರಾಯಿ ವಿಜಯನ್ ಇದೆಲ್ಲ ಸತ್ಯಕ್ಕೆ ದೂರವಾದುದು ಎಂದಿದ್ದಾರೆ. ಚಿನ್ನ ಕಳ್ಳಸಾಗಾಣಿಕೆ ಪ್ರಕರಣ ಬೆಳಕಿಗೆ ಬಂದಾಗ ಈ ಬಗ್ಗೆ ತನಿಖೆ ನಡೆಸುವಂತೆ ನಾವು ಕೇಂದ್ರ ಸರ್ಕಾರಕ್ಕೆ ಹೇಳಿದ್ದೆವು. ರಾಜಕೀಯ ಕಾರಣಗಳಿಂದ ನಮ್ಮ ಮೇಲೆ ಆಗಾಗ್ಗೆ ಆರೋಪಗಳನ್ನು ಮಾಡಲಾಗುತ್ತಿದೆ. ಇದೆಲ್ಲ ಕೆಲವು ಅಜೆಂಡಾದ ಭಾಗ. ಇಂಥಾ ಆಧಾರ ರಹಿತ ಆರೋಪಗಳಿಂದ ಲಾಭಗಳಿಸುತ್ತಿರುವವರಿಗೆ ಕೇರಳದ ಜನರು ತಕ್ಕ ಉತ್ತರ ನೀಡುತ್ತಾರೆ ಎಂದಿದ್ದಾರೆ.

ಕರಿದಿನ ಆಚರಿಸಿದ ಕಾಂಗ್ರೆಸ್

ಸ್ವಪ್ನಾ ಸುರೇಶ್ ಆರೋಪದ ನಂತರ ಕೇರಳದ ವಿಪಕ್ಷ ನಾಯಕ ವಿ ಡಿ ಸತೀಶನ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಪಿಣರಾಯಿ ವಿಜಯನ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಬುಧವಾರ ‘ಕಪ್ಪು ದಿನ’ (ಕರಿದಿನ) ಆಚರಿಸಿದೆ.

TV9 Kannada


Leave a Reply

Your email address will not be published.