ಕೇರಳದ ತಿರುವನಂತಪುರಂ, ಕೊಲ್ಲಂ, ಪತ್ತನಂತಿಟ್ಟ, ಆಲಪ್ಪುಳ, ಕೊಟ್ಟಾಯಂ, ಎರ್ನಾಕುಲಂ, ಇಡುಕ್ಕಿ, ತ್ರಿಶೂರ್, ಮಲಪ್ಪುರಂ ಮತ್ತು ಕೋಳಿಕ್ಕೋಡ್ ಜಿಲ್ಲೆಗಳಲ್ಲಿ ಇಂದು ಹಳದಿ ಅಲರ್ಟ್ ಘೋಷಿಸಿದೆ.
ತಿರುವನಂತಪುರಂ: ಕೇರಳದಲ್ಲಿ ಭಾರೀ ಮಳೆಯಾಗುತ್ತಿದ್ದು, ಇಲ್ಲಿನ 10 ಜಿಲ್ಲೆಗಳಲ್ಲಿ ಇಂದು ಮತ್ತು ಭಾನುವಾರ ಹಳದಿ ಅಲರ್ಟ್ (Yellow Alert) ಘೋಷಿಸಲಾಗಿದೆ. ಇದರ ನಡುವೆ ಇಡುಕ್ಕಿ (Idukki) ಜಿಲ್ಲಾಡಳಿತ ಹೆಚ್ಚುವರಿ ನೀರನ್ನು ಬಿಡುಗಡೆ ಮಾಡಲು ಕಲ್ಲರ್ಕುಟ್ಟಿ ಮತ್ತು ಪಾಂಬ್ಲಾ ಅಣೆಕಟ್ಟುಗಳ ಗೇಟ್ಗಳನ್ನು ತೆರೆದಿದೆ. ಭಾರತೀಯ ಹವಾಮಾನ ಇಲಾಖೆ (IMD) ಕೇರಳದ ತಿರುವನಂತಪುರಂ, ಕೊಲ್ಲಂ, ಪತ್ತನಂತಿಟ್ಟ, ಆಲಪ್ಪುಳ, ಕೊಟ್ಟಾಯಂ, ಎರ್ನಾಕುಲಂ, ಇಡುಕ್ಕಿ, ತ್ರಿಶೂರ್, ಮಲಪ್ಪುರಂ ಮತ್ತು ಕೋಳಿಕ್ಕೋಡ್ ಜಿಲ್ಲೆಗಳಲ್ಲಿ ಇಂದು ಹಳದಿ ಅಲರ್ಟ್ ಘೋಷಿಸಿದೆ. ಮೇ 22ರಂದು ವಯನಾಡ್ನಲ್ಲಿ ಹಳದಿ ಅಲರ್ಟ್ ಘೋಷಿಸಲಾಗಿದೆ.
ರೆಡ್ ಅಲರ್ಟ್ 24 ಗಂಟೆಗಳಲ್ಲಿ 20 ಸೆಂ.ಮೀಗಿಂತ ಹೆಚ್ಚಿನ ಭಾರೀ ಮಳೆಯನ್ನು ಸೂಚಿಸುತ್ತದೆ. ಆದರೆ, ಆರೆಂಜ್ ಅಲರ್ಟ್ ಎಂದರೆ 6 ಸೆಂ.ಮೀನಿಂದ 20 ಸೆಂ.ಮೀವರೆಗೆ ಮಳೆಯಾಗುತ್ತದೆ ಎಂಬುದನ್ನು ಸೂಚಿಸುತ್ತದೆ. ಹಳದಿ ಎಚ್ಚರಿಕೆ ಎಂದರೆ 6ರಿಂದ 11 ಸೆಂ.ಮೀ ನಡುವೆ ಭಾರೀ ಮಳೆಯಾಗುತ್ತದೆ ಎಂಬುದರ ಮುನ್ನೆಚ್ಚರಿಕೆ. ಕಲ್ಲರ್ಕುಟ್ಟಿ ಅಣೆಕಟ್ಟಿನ ನೀರಿನ ಮಟ್ಟ 455 ಮೀಟರ್ಗೆ ತಲುಪಿರುವುದರಿಂದ ನೀರು ಬಿಡಲು ಶಟರ್ಗಳನ್ನು ತೆರೆಯಲಾಗಿದೆ ಎಂದು ಇಡುಕ್ಕಿ ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ.
ಗುಡ್ಡಗಾಡು ಜಿಲ್ಲೆಯ ಪಾಂಬ್ಲಾ ಅಣೆಕಟ್ಟಿನ ಪ್ರಕರಣದಂತೆಯೇ, ಅಧಿಕಾರಿಗಳು 500 ಕ್ಯುಮೆಕ್ ನೀರು ಬಿಡಲು ಶಟರ್ಗಳನ್ನು ತೆರೆದಿದ್ದಾರೆ. ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಪೆರಿಯಾರ್ ನದಿಯ ದಡದ ಜನರಿಗೆ ನೀರಿನ ಒಳಹರಿವಿನಿಂದ ಜಾಗರೂಕರಾಗಿರಲು ತಿಳಿಸಿದೆ. ಕೇರಳದ ಕರಾವಳಿಯ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ ಎಂದು ಐಎಂಡಿ ತಿಳಿಸಿದೆ.