Khelo India University Games: ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ ಸಮಾರೋಪ ಸಮಾರಂಭದಲ್ಲಿ ಅಮಿತ್​ ಶಾ ಭಾಗಿ | Home Minister Amit Shah will attend the closing ceremony of Khelo India University Games 2022


Khelo India University Games: ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ ಸಮಾರೋಪ ಸಮಾರಂಭದಲ್ಲಿ ಅಮಿತ್​ ಶಾ ಭಾಗಿ

ಅಮಿತ್ ಶಾ

ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ (Khelo India University Games) ಎರಡನೇ ಆವೃತ್ತಿಯು ಬೆಂಗಳೂರಿನಲ್ಲಿ ನಡೆಯುತ್ತಿದೆ. ಈ ಬಾರಿ 200 ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳಿಂದ 4,000 ಕ್ಕೂ ಹೆಚ್ಚು ಆಟಗಾರರು 20 ಕ್ರೀಡೆಗಳಲ್ಲಿ ಸ್ಪರ್ಧಿಸುತ್ತಿದ್ದಾರೆ. ಇನ್ನೂ ಈ ಕ್ರೀಡಾಕೂಟವನ್ನು ಕಳೆದ ಬಾನುವಾರದಂದು(ಏ.23) ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಚಾಲನೆ ನೀಡಿದ್ದರು. ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ರಾಜ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ , ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು. ಕಳೆದ ವರ್ಷ ಈ ವಿಶೇಷ ಕ್ರೀಡಾಕೂಟವನ್ನು ಕೊರೊನಾತಂಕದ ಕಾರಣದಿಂದಾಗಿ ಆಯೋಜಿಸಲಾಗಿರಲಿಲ್ಲ. 10 ದಿನಗಳ ಕಾಲ ಆಯೋಜನೆ ಮಾಡಿದ್ದ ಈ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ದೇಶದ ಗೃಹಮಂತ್ರಿ ಅಮಿತ್ ಶಾ (Amit Shah) ಭಾಗವಹಿಸಲಿದ್ದಾರೆ. ಮೇ 3ರಂದು ಈ ಕ್ರೀಡಾಕೂಟಕ್ಕೆ ತೆರೆ ಬೀಳಲಿದ್ದು ಆ ಕಾರ್ಯಕ್ರಮಕ್ಕಾಗಿ ಕೇಂದ್ರ ಸಚಿವ ಅಮಿತ್ ಶಾ ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ.

ಇನ್ನೂ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ 2021 ರ ಮೂರನೇ ದಿನವು ಅನೇಕ ಆಟಗಾರರು ಪದಕಗಳನ್ನು ಗೆದ್ದಿದ್ದಾರೆ. ಎರಡನೇ ದಿನದಂತೆ, ಏಪ್ರಿಲ್ 26 ರ ಮಂಗಳವಾರದ ಮೂರನೇ ದಿನ, ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯ ಪ್ರಾಬಲ್ಯ ಸಾಧಿಸಿದೆ. ಅದು ತನ್ನ ಬುಟ್ಟಿಗೆ ಇನ್ನೂ 4 ಚಿನ್ನದ ಪದಕಗಳನ್ನು ಹಾಕಿಕೊಳ್ಳುವುದರೊಂದಿಗೆ ಕ್ರೀಡಾಕೂಟದಲ್ಲಿ ತನ್ನ ಮುನ್ನಡೆಯನ್ನು ಬಲಪಡಿಸುತ್ತಿದೆ. ಜೈನ್ ವಿಶ್ವವಿದ್ಯಾಲಯ ಇದುವರೆಗೆ 7 ಚಿನ್ನ ಸೇರಿದಂತೆ ಒಟ್ಟು 10 ಪದಕಗಳನ್ನು ಗೆದ್ದುಕೊಂಡಿದೆ. ಮತ್ತೊಂದೆಡೆ, ಮುಂಬೈ ವಿಶ್ವವಿದ್ಯಾಲಯ 5 ಚಿನ್ನದೊಂದಿಗೆ ಎರಡನೇ ಸ್ಥಾನದಲ್ಲಿದೆ. ಮೂರನೇ ದಿನ ಮಹಿಳಾ ಬಾಕ್ಸಿಂಗ್​ನಲ್ಲಿ ಆಘಾತಕಾರಿ ಫಲಿತಾಂಶ ಕಂಡು ಬಂದಿದ್ದು, ಕುರುಕ್ಷೇತ್ರ ವಿವಿಯ ವಿಂಕಾ ಮುಖಾಮುಖಿ ಸೋಲು ಕಂಡಿದ್ದಾರೆ. ವಿಂಕಾ ಕಳೆದ ವರ್ಷ ಯೂತ್ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರು.

ಕ್ರೀಡಾಕೂಟದ ಮೂರನೇ ದಿನವಾದ ಮಂಗಳವಾರ ಈಜಿನಲ್ಲಿ 10 ಚಿನ್ನದ ಪದಕಗಳು ಪಣಕ್ಕಿಟ್ಟಿದ್ದು, ಈ ಪೈಕಿ 4 ಪದಕಗಳನ್ನು ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯವೇ ವಶಪಡಿಸಿಕೊಂಡಿದೆ. ಜೈನ್ ವಿಶ್ವವಿದ್ಯಾನಿಲಯದ ಈ ನಾಲ್ಕು ಸ್ವರ್ಣಗಳು ಈಜಿನಲ್ಲಿ ಬಂದಿದ್ದು, ಹೀಗಾಗಿ ಈ ವಿಶ್ವವಿದ್ಯಾಲಯವು 7 ಚಿನ್ನ, 2 ಬೆಳ್ಳಿ ಮತ್ತು 1 ಕಂಚಿನೊಂದಿಗೆ ಮೊದಲ ಸ್ಥಾನದಲ್ಲಿದೆ. ವಿಶೇಷವೆಂದರೆ ಜೈನ್ ವಿಶ್ವವಿದ್ಯಾನಿಲಯದ ಎಲ್ಲ 10 ಪದಕಗಳು ಈಜಿನಲ್ಲಿ ಬಂದಿವೆ. ವಿಶ್ವವಿದ್ಯಾನಿಲಯದ ಈಜುಪಟುಗಳು ಪುರುಷರ 4×100 ಮೀ ರಿಲೇಯಲ್ಲಿ ಶಿವ ಶ್ರೀಧರ್, ಸಂಜಯ್ ಜಯಕೃಷ್ಣನ್, ರಾಜ್ ರೆಲೇಕರ್ ಮತ್ತು ಒಲಿಂಪಿಯನ್ ಶ್ರೀಹರಿ ನಟರಾಜ ಅವರ ವೇಗದ ಲ್ಯಾಪ್ ಸಮಯ 3.34.86 ಸೆಕೆಂಡುಗಳು ಸೇರಿದಂತೆ ಕೆಲವು ದಾಖಲೆಗಳನ್ನು ಸ್ಥಾಪಿಸಿದರು.

ವೇಟ್ ಲಿಫ್ಟಿಂಗ್​ನಲ್ಲಿ ಸಾವಿತ್ರಿಬಾಯಿ ವಿಶ್ವವಿದ್ಯಾಲಯ ಮೇಲುಗೈ
ಇದಲ್ಲದೇ ಸಾವಿತ್ರಿಬಾಯಿ ಫುಲೆ ವಿಶ್ವವಿದ್ಯಾನಿಲಯ ವೇಟ್ ಲಿಫ್ಟಿಂಗ್​ನಲ್ಲಿ ತನ್ನ ಅಧಿಪತ್ಯವನ್ನು ಕಾಯ್ದುಕೊಂಡು ಮತ್ತೆ 2 ಚಿನ್ನದ ಪದಕಗಳನ್ನು ಗೆದ್ದುಕೊಂಡಿದೆ. ವೈಷ್ಣವ್ ಠಾಕೂರ್ (96 ಕೆಜಿ) ಮತ್ತು ಚಿರಾಗ್ ವಾಘ್ವಾಲೆ (102 ಕೆಜಿ) ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದರು. ಈ ಮೂಲಕ ಸಾವಿತ್ರಿಬಾಯಿ ವಿಶ್ವವಿದ್ಯಾಲಯ 4 ಚಿನ್ನ ಸೇರಿದಂತೆ 15 ಪದಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.

ವಿಂಕಾಗೆ ಆಘಾತಕಾರಿ ಸೋಲು
ಬಾಲಕಿಯರ 60 ಕೆಜಿ ಬಾಕ್ಸಿಂಗ್‌ನಲ್ಲಿ ದಿನದ ಪ್ರಮುಖ ಫಲಿತಾಂಶ ಬಂದಿದೆ. ಈ ವೇಳೆ ಫೇವರಿಟ್ ಎನಿಸಿಕೊಂಡಿರುವ ಕುರುಕ್ಷೇತ್ರ ವಿವಿಯ ವಿಂಕಾ ಆಘಾತಕಾರಿ ಸೋಲು ಎದುರಿಸಬೇಕಾಯಿತು. ವಿಶ್ವವಿದ್ಯಾನಿಲಯದಲ್ಲಿ ಬಿಎ ಓದುತ್ತಿರುವ ಈ ಬಾಕ್ಸರ್ ಪಂಡಿತ್ ದೀನದಯಾಳ್ ಉಪಾಧ್ಯಾಯ ಶೇಖಾವತಿ ವಿಶ್ವವಿದ್ಯಾನಿಲಯದ ಮುಸ್ಕಾನ್ ವಿರುದ್ಧ ಪರಾಭವಗೊಂಡರು. ವಿಂಕಾ ಕಳೆದ ವರ್ಷ ಐಬಿಎ ಯೂತ್ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ವಿಜೇತರಾಗಿದ್ದರು. ಹೀಗಾಗಿ ಈ ಸೋಲು ಎಲ್ಲರನ್ನು ಆಶ್ಚರ್ಯಗೊಳಿಸಿತು.

TV9 Kannada


Leave a Reply

Your email address will not be published.