
Image Credit source: Dhananjay/ Twitter
Dhananjay | 21 Hours Film: ಡಾಲಿ ಧನಂಜಯ ನಟನೆಯ ‘21 ಅವರ್ಸ್’ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಮೇ 20ರಂದು ತೆರೆ ಕಾಣುತ್ತಿರುವ ಚಿತ್ರವನ್ನು ಕಿಚ್ಚ ಸುದೀಪ್ ವೀಕ್ಷಿಸಿದ್ದು, ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ.
ಸ್ಯಾಂಡಲ್ವುಡ್ ನಟ ಧನಂಜಯ (Dhananjay) ಹಲವು ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದೀಗ ಅವರ ಹೊಸ ಚಿತ್ರ ‘ಟ್ವೆಂಟಿ ಒನ್ ಅವರ್ಸ್’ (21 Hours Movie) ತೆರೆಗೆ ಬರಲು ಸಿದ್ಧವಾಗಿದೆ. ಮೇ 20 ರಂದು ರಾಜ್ಯಾದ್ಯಂತ ತೆರೆಕಾಣುತ್ತಿರುವ ಚಿತ್ರವು ಮಲಯಾಳಿ ಹುಡುಗಿಯೊಬ್ಬಳು ಬೆಂಗಳೂರಿಗೆ ಬಂದು ಕಾಣೆಯಾಗುವ ಕತೆಯನ್ನು ಒಳಗೊಂಡಿದೆ. ಇನ್ವೆಸ್ಟಿಗೇಶನ್ ಥ್ರಿಲ್ಲರ್ ಮಾದರಿಯ ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಮಿಂಚಿದ್ದಾರೆ ಧನಂಜಯ್. ಈಗಾಗಲೇ ಟ್ರೇಲರ್ ಮೂಲಕ ನಿರೀಕ್ಷೆ ಹುಟ್ಟುಹಾಕಿರುವ ಚಿತ್ರವು ಮೊದಲು ಕನ್ನಡದಲ್ಲಿ ತೆರೆಕಂಡು ನಂತರ ಮಲಯಾಳಂನಲ್ಲಿ ತೆರೆಕಾಣಲಿದೆ. ಗೆಲುವಿನ ನಿರೀಕ್ಷೆಯಲ್ಲಿರುವ ಚಿತ್ರತಂಡಕ್ಕೆ ಇದೀಗ ಕಿಚ್ಚ ಸುದೀಪ್ (Kichcha Sudeep) ಮತ್ತಷ್ಟು ಧೈರ್ಯ ತುಂಬಿದ್ದಾರೆ. ಹೊಸ ಚಿತ್ರಗಳನ್ನು ವೀಕ್ಷಿಸಿ ಬೆನ್ನುತಟ್ಟುವ ಕಿಚ್ಚ, ‘21 ಅವರ್ಸ್’ ಚಿತ್ರವನ್ನು ವೀಕ್ಷಿಸಿದ್ದಾರೆ. ಅದನ್ನು ಇಷ್ಟಪಟ್ಟಿರುವುದಲ್ಲದೇ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ. ಈ ಬಗ್ಗೆ ಡಾಲಿ ಧನಂಜಯ್ ಟ್ವಿಟರ್ನಲ್ಲಿ ಸಂತಸ ಹಂಚಿಕೊಂಡಿದ್ದಾರೆ.
ಸುದೀಪ್ ತಮ್ಮ ಪ್ರೀತಿಪಾತ್ರರಿಗೆ ತಾವೇ ಕೈಯಾರೆ ರುಚಿಕರ ಆಹಾರ ತಯಾರಿಸಿ ಪ್ರೀತಿಯಿಂದ ಉಣಬಡಿಸುತ್ತಾರೆ. ಧನಂಜಯ್ ನೇತೃತ್ವದ ‘21 ಅವರ್ಸ್’ ಚಿತ್ರತಂಡಕ್ಕೂ ಸುದೀಪ್ ಕಡೆಯಿಂದ ಇಂಥದ್ದೇ ಆತಿಥ್ಯ ಸಿಕ್ಕಿದೆ. ಚಿತ್ರ ನೋಡಿ ಇಷ್ಟಪಟ್ಟ ಸುದೀಪ್, ಕೈಯಾರೆ ದೋಸೆ ಮಾಡಿಕೊಟ್ಟು ಚಿತ್ರತಂಡಕ್ಕೆ ಆತಿಥ್ಯ ನೀಡಿದ್ದಾರೆ. ಈ ಬಗ್ಗೆ ಬರೆದುಕೊಂಡಿರುವ ಧನಂಜಯ್, ‘‘ಸಿನಿಮಾ ನೋಡಿ, ಪ್ರಾಮಾಣಿಕವಾಗಿ ಅನಿಸಿದ್ದೆಲ್ಲವನ್ನು ಹೇಳಿ, ಒಳ್ಳೆಯದನ್ನೆ ಹಾರೈಸಿ ಬೀಳ್ಕೊಟ್ಟ ನಿಮ್ಮ ಆತಿಥ್ಯಕ್ಕೆ ಇಡೀ ತಂಡ ಆಭಾರಿ’’ ಎಂದು ಧನ್ಯವಾದ ಹೇಳಿದ್ದಾರೆ. ‘‘ನಿಮ್ಮ ನೇರ ನುಡಿ ನನಗೆ ಬಹಳ ಇಷ್ಟವಾಯಿತು’’ ಎಂದೂ ಸುದೀಪ್ ಕುರಿತು ಬರೆದಿದ್ದಾರೆ ಧನಂಜಯ್.
ಧನಂಜಯ್ ಹಂಚಿಕೊಂಡ ಟ್ವೀಟ್ ಇಲ್ಲಿದೆ:
ತಬ್ಬಿ ಬರಮಾಡಿಕೊಂಡು, ತುಂಬು ಪ್ರೀತಿಯಿಂದ ಇಡಿ ತಂಡಕ್ಕೆ ಕೈಯಾರೆ ದೋಸೆ ಮಾಡಿಕೊಟ್ಟು, #21hours ಸಿನಿಮಾ ನೋಡಿ, ಪ್ರಾಮಾಣಿಕವಾಗಿ ಅನಿಸಿದ್ದೆಲ್ಲವನ್ನು ಹೇಳಿ, ಒಳ್ಳೆಯದನ್ನೆ ಹಾರೈಸಿ ಬೀಳ್ಕೊಟ್ಟ ನಿಮ್ಮ ಆತಿಥ್ಯಕ್ಕೆ ಇಡಿ ತಂಡ ಆಭಾರಿ.
In love with your honesty and straightforwardness🤗 @KicchaSudeep pic.twitter.com/STNEWrHrwI
— Dhananjaya (@Dhananjayaka) May 18, 2022