Kieron Pollard: ಟಿ20 ಕ್ರಿಕೆಟ್​ನಲ್ಲಿ ಐತಿಹಾಸಿಕ ದಾಖಲೆ ಬರೆದ ಕೀರನ್ ಪೊಲಾರ್ಡ್​ | Kieron Pollard first cricketer to play 600 T20 matches


Kieron Pollard World Record: ಟಿ20 ಕ್ರಿಕೆಟ್​ನಲ್ಲಿ 600 ಪಂದ್ಯಗಳ 533 ಇನ್ನಿಂಗ್ಸ್‌ಗಳಲ್ಲಿ ಬ್ಯಾಟ್ ಬೀಸಿರುವ ಪೊಲಾರ್ಡ್​ 31 ರ ಸರಾಸರಿಯಲ್ಲಿ 11,723 ರನ್ ಗಳಿಸಿದ್ದಾರೆ.

ವೆಸ್ಟ್ ಇಂಡೀಸ್​ನ ಸ್ಟಾರ್ ಕ್ರಿಕೆಟಿಗ ಕೀರನ್ ಪೊಲಾರ್ಡ್ (Kieron Pollard)​ ಟಿ20 ಕ್ರಿಕೆಟ್​ನಲ್ಲಿ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ ಹೊಂದಿದ್ದ ಪೊಲಾರ್ಡ್ ಸದ್ಯ ​ವಿಶ್ವದಾದ್ಯಂತ ಟಿ20 ಲೀಗ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರಸ್ತುತ ನಡೆಯುತ್ತಿರುವ ದಿ ಹಂಡ್ರೆಡ್‌ ಲೀಗ್​ನಲ್ಲಿ ಲಂಡನ್ ಸ್ಪಿರಿಟ್ ತಂಡದ ಪರ ಕಣಕ್ಕಿಳಿಯುವ ಮೂಲಕ ಪೊಲಾರ್ಡ್​ 600 ಟಿ20 ಪಂದ್ಯಗಳನ್ನು ಆಡಿದ ವಿಶೇಷ ಸಾಧನೆ ಮಾಡಿದ್ದಾರೆ. ಅಂದರೆ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಇದುವರೆಗೆ ಯಾವುದೇ ಆಟಗಾರ 600 ಪಂದ್ಯಗಳನ್ನು ಆಡಿಲ್ಲ. ಇದೇ ಮೊದಲ ಬಾರಿಗೆ ಆಟಗಾರನೊಬ್ಬ ಇಂತಹದೊಂದು ಮೈಲುಗಲ್ಲನ್ನು ದಾಟಿದ್ದು, ಈ ಮೂಲಕ ಕೀರನ್ ಪೊಲಾರ್ಡ್ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ಐಪಿಎಲ್​ ಅಲ್ಲದೆ, ಸಿಪಿಎಲ್, ದಿ ಹಂಡ್ರೆಡ್ ಲೀಗ್, ಬಿಬಿಎಲ್​ ಸೇರಿದಂತೆ ವಿಶ್ವದ ಪ್ರಮುಖ ಟಿ20 ಲೀಗ್​ನಲ್ಲಿ ಪೊಲಾರ್ಡ್ ಕಾಣಿಸಿಕೊಂಡಿದ್ದಾರೆ. ವಿಶೇಷ ಎಂದರೆ ಐಪಿಎಲ್​ನಲ್ಲಿ ಪೊಲಾರ್ಡ್ ಮುಂಬೈ ಇಂಡಿಯನ್ಸ್​ ತಂಡದ ಪರ ಮಾತ್ರ ಆಡಿದ್ದಾರೆ. ಅಂದರೆ ಆರಂಭದಿಂದಲೂ ಏಕೈಕ ತಂಡದ ಪರ ಆಡಿದ ವಿದೇಶಿ ಆಟಗಾರ ಎಂಬ ದಾಖಲೆ ಕೀರನ್ ಪೊಲಾರ್ಡ್ ಹೆಸರಿನಲ್ಲಿದೆ.

ಇನ್ನು ಟಿ20 ಕ್ರಿಕೆಟ್​ನಲ್ಲಿ 600 ಪಂದ್ಯಗಳ 533 ಇನ್ನಿಂಗ್ಸ್‌ಗಳಲ್ಲಿ ಬ್ಯಾಟ್ ಬೀಸಿರುವ ಪೊಲಾರ್ಡ್​ 31 ರ ಸರಾಸರಿಯಲ್ಲಿ 11,723 ರನ್ ಗಳಿಸಿದ್ದಾರೆ. ಈ ವೇಳೆ ಒಂದು ಶತಕ ಮತ್ತು 56 ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಅಷ್ಟೇ ಅಲ್ಲದೆ 780 ಕ್ಕೂ ಹೆಚ್ಚು ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. ಇದೇ ವೇಳೆ ಒಟ್ಟು 309 ವಿಕೆಟ್‌ಗಳನ್ನು ಪಡೆದು ಮಿಂಚಿದ್ದಾರೆ.

ಸದ್ಯ ಟಿ20 ಕ್ರಿಕೆಟ್​ನಲ್ಲಿ ಅತೀ ಹೆಚ್ಚು ಪಂದ್ಯಗಳನ್ನಾಡಿದ ಆಟಗಾರರ ಪಟ್ಟಿಯಲ್ಲಿ ಕೀರನ್ ಪೊಲಾರ್ಡ್ ಅಗ್ರಸ್ಥಾನದಲ್ಲಿದ್ದು, 2ನೇ ಸ್ಥಾನದಲ್ಲಿ ವೆಸ್ಟ್ ಇಂಡೀಸ್ ಆಟಗಾರ ಡ್ವೇನ್ ಬ್ರಾವೋ ಇದ್ದಾರೆ. ಬ್ರಾವೋ ಇದುವರೆಗೆ ಒಟ್ಟು 543 ಟಿ20 ಪಂದ್ಯಗಳನ್ನು ಆಡಿದ್ದಾರೆ. ಈ ಇಬ್ಬರು ವಿಂಡೀಸ್ ಆಟಗಾರರನ್ನು ಹೊರತುಪಡಿಸಿ ಯಾವುದೇ ಕ್ರಿಕೆಟಿಗರು 500 ಟಿ20 ಪಂದ್ಯಗಳನ್ನಾಡಿಲ್ಲ ಎಂಬುದು ವಿಶೇಷ.

ಇನ್ನು ಪಾಕಿಸ್ತಾನದ ಶೋಯೆಬ್ ಮಲಿಕ್ 472 ಪಂದ್ಯಗಳನ್ನು ಆಡಿದರೆ, ವೆಸ್ಟ್ ಇಂಡೀಸ್‌ನ ಕ್ರಿಸ್ ಗೇಲ್ 463 ಮತ್ತು ಇಂಗ್ಲೆಂಡ್‌ನ ರವಿ ಬೋಪಾರಾ 426 ಪಂದ್ಯಗಳನ್ನು ಆಡಿದ್ದಾರೆ. ಹಾಗೆಯೇ ರೋಹಿತ್ ಶರ್ಮಾ 391 ಪಂದ್ಯಗಳನ್ನು ಆಡುವ ಮೂಲಕ ಅತೀ ಹೆಚ್ಚು ಟಿ20 ಪಂದ್ಯವಾಡಿದ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ.

TV9 Kannada


Leave a Reply

Your email address will not be published. Required fields are marked *