ಮುಂಬಯಿ : ತೀವ್ರ ಕುಸಿತದ ಬಳಿಕವೂ ಚೆನ್ನೈ ತಂಡದ ಬೃಹತ್‌ ಮೊತ್ತಕ್ಕೆ ದಿಟ್ಟ ರೀತಿಯಲ್ಲಿ ಜವಾಬು ನೀಡಿದ ಕೆಕೆಆರ್‌ ಬುಧವಾರದ ಐಪಿಎಲ್‌ ಮುಖಾಮುಖೀಯಲ್ಲಿ 18 ರನ್ನುಗಳ ವೀರೋಚಿತ ಸೋಲನುಭವಿಸಿದೆ.

ಆರಂಭಿಕರಾದ ಫಾ ಡು ಪ್ಲೆಸಿಸ್‌ ಮತ್ತು ಋತುರಾಜ್‌ ಗಾಯಕ್ವಾಡ್‌ ಅವರ ಶತಕದ ಜತೆಯಾಟದ ನೆರವಿನಿಂದ ಚೆನ್ನೈ ಸೂಪರ್‌ ಕಿಂಗ್ಸ್‌ 3 ವಿಕೆಟಿಗೆ 220 ರನ್‌ ರಾಶಿ ಹಾಕಿತು. ಕೆಕೆಆರ್‌ ಅಗ್ರ ಕ್ರಮಾಂಕದ ಘೋರ ವೈಫಲ್ಯದಿಂದ ಪವರ್‌ ಪ್ಲೇ ಒಳಗಾಗಿ 31 ರನ್ನಿಗೆ 5 ವಿಕೆಟ್‌ ಕಳೆದುಕೊಂಡು ದೊಡ್ಡ ಸೋಲಿನತ್ತ ಮುಖ ಮಾಡಿತು. ಆದರೆ ದಿನೇಶ್‌ ಕಾರ್ತಿಕ್‌ (40), ಆ್ಯಂಡ್ರೆ ರಸೆಲ್‌ (22 ಎಸೆತಗಳಿಂದ 54) ಮತ್ತು ಕೊನೆಯಲ್ಲಿ ಪ್ಯಾಟ್‌ ಕಮಿನ್ಸ್‌ (34 ಎಸೆತಗಳಿಂದ ಅಜೇಯ 66) ಅವರ ಸಿಡಿಲಬ್ಬರ ಆಟದಿಂದ ಗೆಲುವಿನ ಸಾಧ್ಯತೆಯನ್ನು ತೆರೆದಿರಿಸಿತು. ಆದರೆ ಲಕ್‌ ಧೋನಿ ತಂಡದ ಪರವಾಗಿತ್ತು. ಮಾರ್ಗನ್‌ ಪಡೆ 19.1 ಓವರ್‌ಗಳಲ್ಲಿ 202ಕ್ಕೆ ಆಲೌಟ್‌ ಆಯಿತು. ರಸೆಲ್‌ ಮತ್ತು ಕಮಿನ್ಸ್‌ ತಲಾ 6 ಸಿಕ್ಸರ್‌ ಸಿಡಿಸಿ ಚೆನ್ನೈ ಬೌಲರ್‌ಗಳಿಗೆ ಬೆವರಿಳಿಸಿದರು.

ಶತಕದ ಜತೆಯಾಟ

ಗಾಯಕ್ವಾಡ್‌-ಡು ಪ್ಲೆಸಿಸ್‌ “ವಾಂಖೇಡೆ ಸ್ಟೇಡಿಯಂ’ನ ಬ್ಯಾಟಿಂಗ್‌ ಟ್ರ್ಯಾಕ್‌ ಮೇಲೆ ಬೊಂಬಾಟ್‌ ಆಟವಾಡಿದರು. ಕೋಲ್ಕತಾ ಬೌಲರ್‌ಗಳ ಎಲ್ಲ ನಮೂನೆಯ ಎಸೆತಗಳಿಗೆ ಭರ್ಜರಿ ಜವಾಬು ನೀಡುತ್ತ ಸಾಗಿದರು. 13ನೇ ಓವರ್‌ ತನಕ ಕ್ರೀಸ್‌ ಆಕ್ರಮಿಸಿಕೊಂಡ ಈ ಜೋಡಿ ಮೊದಲ ವಿಕೆಟಿಗೆ 115 ರನ್‌ ಒಟ್ಟುಗೂಡಿಸಿತು. ಹಿಂದಿನ ಪಂದ್ಯಗಳಲ್ಲಿ ಆರಂಭಿಕ ವಿಕೆಟಿಗೆ ದೊಡ್ಡ ಮೊತ್ತ ದಾಖಲಿಸುವಲ್ಲಿ ಚೆನ್ನೈ ವಿಫ‌ಲವಾಗಿತ್ತು. ಕ್ರಮವಾಗಿ 7, 24 ಹಾಗೂ 25 ರನ್‌ ಮಾತ್ರವೇ ಗಳಿಸಿತ್ತು.

ಆರಂಭಿಕರಿಬ್ಬರೂ ಅರ್ಧ ಶತಕ ಬಾರಿಸಿ ಮೆರೆದರು. ಕೊನೆಯ ತನಕ ಕ್ರೀಸ್‌ ಆಕ್ರಮಿಸಿಕೊಂಡಿದ್ದ ಡು ಪ್ಲೆಸಿಸ್‌ಗೆ ಸೆಂಚುರಿ ಸ್ವಲ್ಪದರಲ್ಲೇ ತಪ್ಪಿತು. ಭರ್ತಿ 60 ಎಸೆತ ಎದುರಿಸಿ ಅಜೇಯವಾಗಿ ಉಳಿದ ಆಫ್ರಿಕಾ ಕ್ರಿಕೆಟಿಗನ ಬ್ಯಾಟಿನಿಂದ 95 ರನ್‌ ಹರಿದು ಬಂದು. ಸಿಡಿಸಿದ್ದು 4 ಸಿಕ್ಸರ್‌, 9 ಬೌಂಡರಿ.ಕಳೆದ ಮೂರೂ ಪಂದ್ಯಗಳಲ್ಲಿ ರನ್‌ ಬರಗಾಲ ಅನುಭವಿಸಿ ಕೇವಲ 20 ರನ್‌ ಮಾಡಿದ್ದ ಗಾಯಕ್ವಾಡ್‌ ಇಲ್ಲಿ 64 ರನ್‌ ಬಾರಿಸುವ ಮೂಲಕ ಫಾರ್ಮ್ಗೆ ಮರಳಿದರು. ಹೀಗಾಗಿ ಉತ್ತಪ್ಪ ಇನ್ನಷ್ಟು ಕಾಯಬೇಕಾದ ಸ್ಥಿತಿ ಎದುರಾಯಿತು. 42 ಎಸೆತ ಎದುರಿಸಿದ ಗಾಯಕ್ವಾಡ್‌ 4 ಸಿಕ್ಸರ್‌, 6 ಫೋರ್‌ ಬಾರಿಸಿ ಕೆಕೆಆರ್‌ ಬೌಲರ್‌ಗಳ ಮೇಲೆರಗಿದರು.

ಸಂಕ್ಷಿಪ್ತ ಸ್ಕೋರ್‌: ಚೆನ್ನೈ-3 ವಿಕೆಟಿಗೆ 220. (ಗಾಯಕ್ವಾಡ್‌ 64, ಫಾ ಡು ಪ್ಲೆಸಿಸ್‌ ಅಜೇಯ 95, ವರುಣ್‌ ಚಕ್ರವರ್ತಿ 27ಕ್ಕೆ 1). ಕೆಕೆಆರ್‌-19.1 ಓವರ್‌ಗಳಲ್ಲಿ ಆಲೌಟ್‌ (ರೆಸೆಲ್‌ 54, ಕಮಿನ್ಸ್‌ ಅಜೇಯ 66, ಕಾರ್ತಿಕ್‌ 40, ದೀಪಕ್‌ ಚಹರ್‌ 29ಕ್ಕೆ 4).

ಕ್ರೀಡೆ – Udayavani – ಉದಯವಾಣಿ
Read More