KL Rahul: ಕನ್ನಡಿಗನ ಸಿಡಿಲಬ್ಬರದ ಅರ್ಧಶತಕಕ್ಕೆ ಮನಸೋತ ಖ್ಯಾತ ನಟನ ಪುತ್ರಿ..! | Athiya Shetty is all hearts as KL Rahul scores fifty vs Australia


Athiya Shetty: ಕಳೆದ ಕೆಲ ವರ್ಷಗಳಿಂದ ಜೊತೆಯಾಗಿ ಸುತ್ತಾಡುತ್ತಿರುವ ಈ ಜೋಡಿಯ ಪ್ರೀತಿಗೆ ಎರಡೂ ಕುಟುಂಬಗಳಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ. ಅಲ್ಲದೆ ಇಬ್ಬರೂ ಟಿ20 ವಿಶ್ವಕಪ್​ ಬಳಿಕ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನಲಾಗುತ್ತಿದೆ.

ಆಸ್ಟ್ರೇಲಿಯಾ ವಿರುದ್ಧ ಮೊಹಾಲಿಯಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ಆರಂಭಿಕ ಆಟಗಾರ ಕೆಎಲ್ ರಾಹುಲ್ (KL Rahul) ಭರ್ಜರಿ ಅರ್ಧಶತಕ ಬಾರಿಸಿ ಮಿಂಚಿದ್ದರು. ಆರಂಭದಲ್ಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ್ದ ರಾಹುಲ್ 35 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 4 ಫೋರ್​ನೊಂದಿಗೆ 55 ರನ್ ಬಾರಿಸಿದ್ದರು. ಇತ್ತ ಮೈದಾನದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಕನ್ನಡಿಗ ಮಿಂಚುತ್ತಿದ್ದಂತೆ, ಅತ್ತ ಪ್ರಿಯತಮೆ ಆಥಿಯಾ ಶೆಟ್ಟಿ ಫುಲ್ ಖುಷ್ ಆಗಿದ್ದಾರೆ.

ರಾಹುಲ್ ಅವರ ಈ ಅರ್ಧಶತಕದ ಬೆನ್ನಲ್ಲೇ ಆಥಿಯಾ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಕೆಎಲ್​ಆರ್​ ಅವರ ಫೋಟೋ ಹಂಚಿಕೊಳ್ಳುವ ಹಾರ್ಟ್​ ಎಮೋಜಿ ಫೋಸ್ಟ್ ಮಾಡಿದ್ದಾರೆ. ಇದೀಗ ಈ ಫೋಟೋ ವೈರಲ್ ಆಗಿದ್ದು, ಅಭಿಮಾನಿಗಳು ಮೆಚ್ಚುಗೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

ಬಾಲಿವುಡ್ ನಟನ ಮಗಳ ಜೊತೆ ರಾಹುಲ್ ಡೇಟಿಂಗ್:

ಕೆಎಲ್ ರಾಹುಲ್ ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರ ಮಗಳು ಆಥಿಯಾ ಶೆಟ್ಟಿ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ. ಕಳೆದ ಕೆಲ ವರ್ಷಗಳಿಂದ ಜೊತೆಯಾಗಿ ಸುತ್ತಾಡುತ್ತಿರುವ ಈ ಜೋಡಿಯ ಪ್ರೀತಿಗೆ ಎರಡೂ ಕುಟುಂಬಗಳಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ. ಅಲ್ಲದೆ ಇಬ್ಬರೂ ಟಿ20 ವಿಶ್ವಕಪ್​ ಬಳಿಕ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನಲಾಗುತ್ತಿದೆ.

ಟೀಮ್ ಇಂಡಿಯಾಗೆ ಸೋಲು:

ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ನಾಯಕ ಆರೋನ್ ಫಿಂಚ್ ಮೊದಲು ಬೌಲಿಂಗ್ ಆಯ್ದುಕೊಂಡರು. ಅದರಂತೆ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾಗೆ ನಾಯಕ ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಸ್ಪೋಟಕ ಆರಂಭ ಒದಗಿಸಿದ್ದರು. ಆದರೆ 11 ರನ್​ಗಳಿಸಿದ್ದ ವೇಳೆ ಹಿಟ್​ಮ್ಯಾನ್ ಕ್ಯಾಚ್ ನೀಡಿ ಹೊರನಡೆಯಬೇಕಾಯಿತು. ಇದರ ಬೆನ್ನಲ್ಲೇ ವಿರಾಟ್ ಕೊಹ್ಲಿ (2) ಕೂಡ ವಿಕೆಟ್ ಒಪ್ಪಿಸಿದರು. ಆದರೆ ಮತ್ತೊಂದೆಡೆ ಸಿಡಿಲಬ್ಬರದ ಪ್ರದರ್ಶಿಸಿದ ಟೀಮ್ ಇಂಡಿಯಾ ಉಪನಾಯಕ ಕೆಎಲ್ ರಾಹುಲ್ ಭರ್ಜರಿ ಬ್ಯಾಟಿಂಗ್ ಮುಂದುವರೆಸಿದರು. ಪರಿಣಾಮ ಕೇವಲ 32 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಕೆಎಲ್ ರಾಹುಲ್​ಗೆ ಉತ್ತಮ ಸಾಥ್ ನೀಡಿದ ಸೂರ್ಯ ಕುಮಾರ್ ಯಾದವ್ ಕೂಡ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು.

ಆದರೆ ಅರ್ಧಶತಕದ ಬೆನ್ನಲ್ಲೇ ಕೆಎಲ್ ರಾಹುಲ್ (55) ಭರ್ಜರಿ ಹೊಡೆತಕ್ಕೆ ಮುಂದಾಗಿ ಕ್ಯಾಚ್ ನೀಡಿದರು. 35 ಎಸೆತಗಳನ್ನು ಎದುರಿಸಿದ್ದ ರಾಹುಲ್ 3 ಸಿಕ್ಸ್ ಹಾಗೂ 4 ಫೋರ್​ ಬಾರಿಸಿ ಗಮನ ಸೆಳೆದರು. ಇದಾಗ್ಯೂ ಬಿರುಸಿನ ಬ್ಯಾಟಿಂಗ್ ಮುಂದುವರೆಸಿದ್ದ ಸೂರ್ಯಕುಮಾರ್ ಯಾದವ್ 4 ಸಿಕ್ಸ್​ನೊಂದಿಗೆ 25 ಎಸೆತಗಳಲ್ಲಿ 45 ರನ್​ ಬಾರಿಸಿದರು. ಆದರೆ ಹಾಫ್ ಸೆಂಚುರಿ ಹೊಸ್ತಿಲ್ಲಲಿ ಕೀಪರ್​ಗೆ ಕ್ಯಾಚ್ ನೀಡಿದರು.

5ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಹಾರ್ದಿಕ್ ಪಾಂಡ್ಯ ಅಕ್ಷರಶಃ ಅಬ್ಬರಿಸಿದರು. ಆಸೀಸ್ ಬೌಲರ್​ಗಳ ಬೆಂಡೆತ್ತಿದ ಪಾಂಡ್ಯ ಕೇವಲ 25 ಎಸೆತಗಳಲ್ಲಿ ಹಾಫ್ ಸೆಂಚುರಿ ಸಿಡಿಸಿದರು. ಅಷ್ಟೇ ಅಲ್ಲದೆ 5 ಸಿಕ್ಸ್ ಹಾಗೂ 7 ಫೋರ್​ನೊಂದಿಗೆ ಕೇವಲ 30 ಎಸೆತಗಳಲ್ಲಿ ಅಜೇಯ 71 ರನ್ ಬಾರಿಸುವ ಮೂಲಕ 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ ಟೀಮ್ ಇಂಡಿಯಾ ಮೊತ್ತವನ್ನು 208 ಕ್ಕೆ ತಂದು ನಿಲ್ಲಿಸಿದರು.

209 ರನ್​ಗಳ ಕಠಿಣ ಗುರಿ ಪಡೆದ ಆಸ್ಟ್ರೇಲಿಯಾಗೆ ಆರೋನ್ ಫಿಂಚ್ ಹಾಗೂ ಕ್ಯಾಮರೋನ್ ಗ್ರೀನ್ ಸಿಡಿಲಬ್ಬರದ ಆರಂಭ ಒದಗಿಸಿದ್ದರು. ಮೊದಲ ವಿಕೆಟ್​ಗೆ 39 ರನ್​ಗಳ ಜೊತೆಯಾಟವಾಡಿದ ಈ ಜೋಡಿ ಉತ್ತಮ ಅಡಿಪಾಯ ಹಾಕಿಕೊಟ್ಟರು. ಫಿಂಚ್ (22) ಔಟಾದ ಬೆನ್ನಲ್ಲೇ ಅಬ್ಬರಿಸಲಾರಂಭಿಸಿದ ಕ್ಯಾಮರೋನ್ ಗ್ರೀನ್ ಟೀಮ್ ಇಂಡಿಯಾ ಬೌಲರ್​ಗಳನ್ನು ದಂಡಿಸಿದರು. ಈ ನಡುವೆ ಅಕ್ಷರ್ ಪಟೇಲ್ ಕೈಬಿಟ್ಟ ಕ್ಯಾಚ್​ನ ಸಂಪೂರ್ಣ ಲಾಭ ಪಡೆದ ಗ್ರೀನ್ 30 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 8 ಫೋರ್​ನೊಂದಿಗೆ 61 ರನ್ ಬಾರಿಸಿ ಔಟಾದರು. ಅಷ್ಟರಲ್ಲಾಗಲೇ ಆಸ್ಟ್ರೇಲಿಯಾ ಮೊತ್ತವು 10 ಓವರ್​ಗಳಲ್ಲಿ 100 ರ ಗಡಿದಾಟಿತ್ತು.

ಇದಾಗ್ಯೂ ಕೊನೆಯ 6 ಓವರ್​ಗಳಲ್ಲಿ ಆಸ್ಟ್ರೇಲಿಯಾಗೆ 64 ರನ್​ಗಳ ಅವಶ್ಯಕತೆಯಿತ್ತು. ಈ ಹಂತದಲ್ಲಿ ಕಣಕ್ಕಿಳಿದಿದ್ದ ಎಡಗೈ ದಾಂಡಿಗ ಮ್ಯಾಥ್ಯೂವೇಡ್ 21 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 6 ಫೋರ್​ನೊಂದಿಗೆ ಅಜೇಯ 45 ರನ್​ ಚಚ್ಚಿದರು. ವೇಡ್​ಗೆ ಉತ್ತಮ ಸಾಥ್ ನೀಡಿದ ಟಿಮ್ ಡೇವಿಡ್ 14 ಎಸೆತಗಳಲ್ಲಿ 18 ರನ್​ ಬಾರಿಸಿದರು. ಅದರಂತೆ ಅಂತಿಮವಾಗಿ ಆಸ್ಟ್ರೇಲಿಯಾ ತಂಡವು 19.2 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 211 ರನ್​ ಬಾರಿಸಿ 4 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು.

TV9 Kannada


Leave a Reply

Your email address will not be published.