KL Rahul
ವಿರಾಟ್ ಕೊಹ್ಲಿ ಟೀಮ್ ಇಂಡಿಯಾ ಟೆಸ್ಟ್ ತಂಡ ನಾಯಕತ್ವದಿಂದ ಕೆಳಗಿಳಿದಿದ್ದಾರೆ. ಇದರ ಬೆನ್ನಲ್ಲೇ ಮುಂದಿನ ಟೆಸ್ಟ್ ತಂಡದ ನಾಯಕ ಯಾರು ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಏಕೆಂದರೆ ರೋಹಿತ್ ಶರ್ಮಾ ODI ಮತ್ತು T20 ತಂಡಗಳ ನಾಯಕತ್ವವನ್ನು ವಹಿಸಿಕೊಂಡಿದ್ದಾರೆ. ಇನ್ನು ಟೆಸ್ಟ್ ತಂಡಕ್ಕೂ ರೋಹಿತ್ ಶರ್ಮಾ ನಾಯಕರಾಗುತ್ತಾರೆಯೇ? ಎಂಬ ಪ್ರಶ್ನೆಗೆ ಸದ್ಯ ಸಿಗುತ್ತಿರುವ ಉತ್ತರ ಇಲ್ಲ. ಏಕೆಂದರೆ ವಿರಾಟ್ ಕೊಹ್ಲಿ ರಾಜೀನಾಮೆ ಬಳಿಕ ಕೆಎಲ್ ರಾಹುಲ್ ಮುಂದಿನ ಟೆಸ್ಟ್ ನಾಯಕರಾಗಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಜೋಹಾನ್ಸ್ಬರ್ಗ್ ಟೆಸ್ಟ್ ತಂಡದಲ್ಲಿ ಕೆಎಲ್ ರಾಹುಲ್ ಭಾರತ ತಂಡದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಕೊಹ್ಲಿ ಬೆನ್ನು ನೋವಿನ ಕಾರಣ ಈ ಆ ಪಂದ್ಯದಲ್ಲಿ ಆಡಿರಲಿಲ್ಲ. ಈ ಪಂದ್ಯದಲ್ಲಿ ಸೋತರೂ ಕೊಹ್ಲಿ ಕೆಎಲ್ ರಾಹುಲ್ ನಾಯಕತ್ವವನ್ನು ಹೊಗಳಿದ್ದರು. ಕೊಹ್ಲಿ ರಾಜೀನಾಮೆ ನೀಡಲು ಈ ಹಿಂದೆ ನಿರ್ಧರಿಸಿದ್ದು, ಹೀಗಾಗಿ ಕೆಎಲ್ ರಾಹುಲ್ ಅವರ ಕಪ್ತಾನಗಿರಿಯನ್ನು ಹೊಗಳಿದ್ದರು ಎನ್ನಲಾಗುತ್ತಿದೆ.
ಮತ್ತೊಂದೆಡೆ ರೋಹಿತ್ ಶರ್ಮಾಗೆ ಮೂರು ಸ್ವರೂಪಗಳ ನಾಯಕತ್ವವನ್ನು ನೀಡುವುದು ಅವರ ವೃತ್ತಿಜೀವನಕ್ಕೆ ತೊಡಕಾಗಬಹುದು. ಪ್ರಸ್ತುತ ಕ್ರಿಕೆಟ್ನ ಪ್ರಮಾಣವನ್ನು ಪರಿಗಣಿಸಿ, ಎಲ್ಲಾ ಮೂರು ಸ್ವರೂಪಗಳ ನಾಯಕತ್ವವನ್ನು ಯಾವುದೇ ಆಟಗಾರನಿಗೆ ಹಸ್ತಾಂತರಿಸುವುದು ತುಂಬಾ ಕಷ್ಟ. ಇನ್ನು ವಯಸ್ಸಿನ ಅಂತರವನ್ನು ಇನ್ನು ಪರಿಗಣಿಸಿದರೆ ರೋಹಿತ್ ಶರ್ಮಾಗೆ 3 ತಿಂಗಳ ನಂತರ 35 ವರ್ಷವಾಗಲಿದೆ. ಇದೇ ವೇಳೆ ಕೆಎಲ್ ರಾಹುಲ್ಗೆ 29 ವರ್ಷ. ಇನ್ನು ಟೆಸ್ಟ್ ಕ್ರಿಕೆಟ್ನಲ್ಲಿ ಕೆಎಲ್ ರಾಹುಲ್ ಉತ್ತಮ ಪ್ರದರ್ಶನವನ್ನೂ ನೀಡುತ್ತಿದ್ದಾರೆ. ಹೀಗಾಗಿ ಮುಂದಿನ 4-5 ವರ್ಷಗಳ ಕಾಲ ಟೆಸ್ಟ್ ತಂಡವನ್ನು ನಿಭಾಯಿಸಬಲ್ಲ ಆಟಗಾರನಿಗೆ ನಾಯಕತ್ವ ನೀಡುವ ಸಾಧ್ಯತೆಯಿದೆ. ಅದರಂತೆ ಕೆಎಲ್ ರಾಹುಲ್ ಹೆಸರು ಮುಂಚೂಣಿಯಲ್ಲಿದೆ.
ಇನ್ನು ಕೆಎಲ್ ರಾಹುಲ್ ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ನ ನಾಯಕತ್ವ ವಹಿಸಿದ್ದರು. ಇದೀಗ ಲಕ್ನೋ ಫ್ರಾಂಚೈಸಿಯ ನಾಯಕರಾಗಲಿದ್ದಾರೆ ಎಂಬ ಸುದ್ದಿ ಕೂಡ ಹೊರಬಿದ್ದಿದೆ. ಪ್ರಸ್ತುತ ಟೆಸ್ಟ್ ತಂಡದ ಆಟಗಾರರನ್ನು ಗಮನಿಸಿದರೆ, ವಿರಾಟ್ ಕೊಹ್ಲಿ ನಂತರ, ಕೆಎಲ್ ರಾಹುಲ್ ಅವರನ್ನು ಪ್ರಮುಖ ಬ್ಯಾಟರ್ ಎಂದು ಪರಿಗಣಿಸಲಾಗಿದೆ. ಜೊತೆಗೆ ಕೆಎಲ್ಆರ್ಗೆ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ನ ಬೆಂಬಲವಿದೆ. ಇಂತಹ ಪರಿಸ್ಥಿತಿಯಲ್ಲಿ ಕೆಎಲ್ ರಾಹುಲ್ ಮುಂದಿನ ಟೆಸ್ಟ್ ನಾಯಕರಾಗುವುದು ಖಚಿತ ಎನ್ನಲಾಗಿದೆ.