Kolar: ಕಾಯ್ದೆ ತಿದ್ದುಪಡಿ ಪರಿಣಾಮ; ಬಾಗಿಲು ಹಾಕುವತ್ತ ಎಪಿಎಂಸಿಗಳು, ಕೆಲಸ ಕಳೆದುಕೊಂಡ ಸಿಬ್ಬಂದಿ | The effect of the amendment of the APMC Act in Kolar


Kolar: ಕಾಯ್ದೆ ತಿದ್ದುಪಡಿ ಪರಿಣಾಮ; ಬಾಗಿಲು ಹಾಕುವತ್ತ ಎಪಿಎಂಸಿಗಳು, ಕೆಲಸ ಕಳೆದುಕೊಂಡ ಸಿಬ್ಬಂದಿ

ಕೋಲಾರ ಎಪಿಎಂಸಿ ಯಾರ್ಡ್​

ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ಕಾಯ್ದೆಗೆ ಕೇಂದ್ರ ಸರ್ಕಾರ ತಂದಿರುವ ತಿದ್ದುಪಡಿ ಪರಿಣಾಮ ಈ ವರ್ಷ  ಶೇ.60 ರಷ್ಟು ಆದಾಯ ಕುಸಿತವಾಗಿದ್ದು, ಶೇ.50ಕ್ಕಿಂತಲೂ ಹೆಚ್ಚಿನ ಸಿಬ್ಬಂದಿ ಕೆಲಸ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಹೊಸ ತಿದ್ದುಪಡಿ ಪ್ರಕಾರ  ಎಪಿಎಂಸಿಯ ಅನುಮತಿ ಇಲ್ಲದೆ ರೈತರು ಉತ್ಪನ್ನವನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು, ಎಲ್ಲಿಯಾದರೂ ಖರೀದಿ ಮಾಡಬಹುದಾಗಿದೆ. ಹೀಗಾಗಿ ಎಪಿಎಂಸಿಗಳಿಗೆ ಬರುವ ಆದಾಯ ಭಾರೀ ಪ್ರಮಾಣದಲ್ಲಿ ಕಡಿತಗೊಂಡಿದೆ.  ಅದರಲ್ಲೂ ಪ್ರಮುಖವಾಗಿ ಜಿಲ್ಲಾ ಕೇಂದ್ರದ ಕೋಲಾರ ಎಪಿಎಂಸಿ ಹೊರತುಪಡಿಸಿ ಉಳಿದ ನಾಲ್ಕು ಎಪಿಎಂಸಿಗಳಿಗೆ ಬರುವ ಆದಾಯ ಶೇ.70ರಷ್ಟು ಆದಾಯ ಇಳಿಕೆಯಾಗಿದೆ. ಪರಿಣಾಮ, ಎಪಿಎಂಸಿಗಳಲ್ಲಿ ಕೆಲಸ ಮಾಡುವಂತಹ ಸಿಬ್ಬಂದಿಯನ್ನು ಕೆಲಸದಿಂದ ತೆಗೆಯಲಾಗಿದೆ.

ಹೆಚ್ಚುವರಿ ಸಿಬ್ಬಂದಿ ಕಡಿತ..!
ಎಪಿಎಂಸಿಗಳಲ್ಲಿ ಯಾವಾಗ ಕೆಲಸ ಕಡಿಮೆಯಾಯಿತೋ ಆಗಿನಿಂದ ಹೆಚ್ಚಾಗಿರುವ ಸಿಬ್ಬಂದಿಯನ್ನು ಕಡಿತಗೊಳಿಸುವ ಕೆಲಸವೂ ನಡೆಯುತ್ತಿದೆ. ಕಂಪ್ಯೂಟರ್ ಆಪರೇಟರ್, ಭದ್ರತಾ ಸಿಬ್ಬಂದಿ, ಸ್ವಚ್ಛತಾ ಕಾರ್ಯದ ಸಿಬ್ಬಂದಿ, ಶುಲ್ಕ ಸಂಗ್ರಹಣೆ ಕೆಲಸ ಮಾಡುವವರು ವೇತನವನ್ನು ಎಪಿಎಂಸಿಗಳ ಆದಾಯದಿಂದಲೇ ಭರಿಸಬೇಕಾಗುತ್ತದೆ. ಆದರೆ, ಮಾರುಕಟ್ಟೆಗಳಿಗೆ ಬರುವ ಆದಾಯ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಎಲ್ಲಾ ಎಪಿಎಂಸಿಗಳಲ್ಲಿ ಐದಾರು ಜನರನ್ನು ಕೆಲಸದಿಂದ ತೆಗೆಯಲಾಗಿದೆ.

ಪ್ರಾಂಗಣದ ಹೊರಗಿನ ವಹಿವಾಟಿಗೆ ಸಂಬಂಧವಿಲ್ಲ..!
ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರುವುದಕ್ಕೂ ಮುನ್ನ ಎಪಿಎಂಸಿ ಆಡಳಿತ ಮಂಡಳಿಗೆ ಮಾರುಕಟ್ಟೆ ಪ್ರಾಂಗಣದೊಳಗೆ ಮತ್ತು ಹೊರಗೆ ನಡೆಯುವ ಕೃಷಿ ಉತ್ಪನ್ನಗಳ ಸಗಟು ವಹಿವಾಟಿಗೆ ಮಾರುಕಟ್ಟೆ ಶುಲ್ಕ ಹಾಗೂ ಬಳಕೆದಾರರ ಶುಲ್ಕ ಸಂಗ್ರಹಿಸಲು ಅವಕಾಶವಿತ್ತು. ಕಾಯ್ದೆ ತಿದ್ದುಪಡಿ ನಂತರ ಆಡಳಿತ ಮಂಡಳಿಗೆ ಮಾರುಕಟ್ಟೆ ಪ್ರಾಂಗಣದ ಹೊರಗೆ ನಡೆಯುವ ವಹಿವಾಟಿಗೆ ಸೆಸ್ ಸಂಗ್ರಹಿಸಲು ಅವಕಾಶ ಇಲ್ಲದಂತಾಗಿದೆ. ಸೆಸ್ ಸಂಗ್ರಹಣೆಯು ಮಾರುಕಟ್ಟೆ ಪ್ರಾಂಗಣದೊಳಗಿನ ವಹಿವಾಟಿಗೆ ಮಾತ್ರ ಸೀಮಿತವಾಗಿರುವ ಕಾರಣಕ್ಕೆ ಆದಾಯ ಕಡಿಮೆಯಾಗಿದೆ. ಮಾರುಕಟ್ಟೆ ಸಮಿತಿಗಳು ಸಂಗ್ರಹ ಮಾಡುವ ಮಾರುಕಟ್ಟೆ ಶುಲ್ಕ ಹಾಗೂ ಬಳಕೆದಾರರ ಶುಲ್ಕದ ಸಂಗ್ರಹ ಪ್ರಮಾಣ ಕಡಿಮೆಯಾಗಿದೆ. ಇದರ ನಡುವೆಯೇ ಸರ್ಕಾರ ಎರಡೂ ಶುಲ್ಕಗಳನ್ನು ಪರಿಷ್ಕರಿಸಿ ಶೇ.60 ರಷ್ಟು ಶುಲ್ಕ ಪಡೆಯುವಂತೆ ಸೂಚಿಸಿದೆ. ಪರಿಣಾಮ ಎಪಿಎಂಸಿಗಳಿಗೆ ಬರುವ ಆದಾಯ ಭಾರಿ ಪ್ರಮಾಣದಲ್ಲಿ ಕಡಿತಗೊಂಡಿದ್ದು, ರೈತರು ಮಾರುಕಟ್ಟೆ ಪ್ರಾಂಗಣದಲ್ಲಿ ಮಾರಾಟ ಮಾಡಿದಾಗ ಮಾತ್ರವೇ ಅವರಿಂದ ಶುಲ್ಕ ಸಂಗ್ರಹಿಸಬೇಕಾಗುತ್ತದೆ. ಪ್ರಾಂಗಣದ ಹೊರಗೆ ಮಾರಾಟ ಅಥವಾ ಖರೀದಿ ಮಾಡಿದರೆ ಅವರಿಂದ ಶುಲ್ಕ ಸಂಗ್ರಹಕ್ಕೆ ಅವಕಾಶವಿಲ್ಲದಂತಾಗಿದೆ.

ಎಪಿಎಂಸಿ ಮಾರುಕಟ್ಟೆಗಳ ನಿರ್ವಹಣೆಯೂ ಕಷ್ಟ..!
ಕೋಲಾರ ಎಪಿಎಂಸಿ ಯಾರ್ಡ್​ನಲ್ಲಿ ಸ್ವಚ್ಛತೆ ಹಾಗೂ ಭದ್ರತೆಗಾಗಿ 8 ಲಕ್ಷ ರೂ. ವೆಚ್ಚ ಮಾಡಲಾಗುತ್ತದೆ. ಜತೆಗೆ ವಿದ್ಯುತ್ ಬಿಲ್, ಬೀದಿ ದೀಪಗಳ ನಿರ್ವಹಣೆ ಹೀಗೆ ಇತರೆ ವೆಚ್ಚಗಳಿಗಾಗಿ 2 ಲಕ್ಷ ಸೇರಿ ಒಟ್ಟು 10 ಲಕ್ಷ ರೂ. ಬೇಕಾಗುತ್ತದೆ. ಆದರೆ, ಈಗ  ಬರುತ್ತಿರುವ ಆದಾಯದಲ್ಲಿ ಶೇ.14ರಷ್ಟು ಪಾಲು ಖರ್ಚಿಗೂ ಸಾಕಾಗುವುದಿಲ್ಲ. ಜತೆಗೆ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ ಎಂಬುದು ಎಪಿಎಂಸಿ ಅಧಿಕಾರಿಗಳ ಮಾತು.

ಎಪಿಎಂಸಿಗಳಿಗೆ ಬೀಗ ಹಾಕುವ ಸ್ಥಿತಿ ಬಂದರೂ ಆಶ್ಚರ್ಯವಿಲ್ಲ..!
ಕೋಲಾರ ಜಿಲ್ಲೆಯಲ್ಲಿನ ಐದು ತಾಲೂಕುಗಳಲ್ಲಿ ಎಪಿಎಂಸಿಗಳು ಕೆಲಸ ಮಾಡುತ್ತಿದ್ದು, 1500 ಕ್ಕೂ ಹೆಚ್ಚಿನ ವ್ಯಾಪಾರಿಗಳು ಮಾರುಕಟ್ಟೆ ಗಳಲ್ಲಿದ್ದಾರೆ. ಅದರಂತೆ ಕಳೆದ ಮೂರು ವರ್ಷಗಳ ಒಟ್ಟು ಆದಾಯದ ಅಂಕಿ ಅಂಶಗಳನ್ನು ಪರಿಶೀಲಿಸಿದರೆ ಭಾರಿ ಪ್ರಮಾಣದಲ್ಲಿ ಆದಾಯ ಕಡಿಮೆ ಆಗಿರುವುದು ಕಂಡುಬಂದಿದೆ.

2019-20ನೇ ಸಾಲಿನಲ್ಲಿ ಐದು ಎಪಿಎಂಸಿಗಳಿಗೆ 8.81 ಕೋಟಿ ರೂ.ಗಳು ಆದಾಯ ಬಂದಿತ್ತು.
2020-21ನೇ ಸಾಲಿನಲ್ಲಿ ಆದಾಯ ಪ್ರಮಾಣ 5.47 ಕೋಟಿಗೆ ಇಳಿಕೆಯಾಗಿದೆ.
2021-22ನೇ ಸಾಲಿನ (ಸಪ್ಟೆಂಬರ್ ಅಂತ್ಯಕ್ಕೆ) ಆದಾಯ 2.65 ಕ್ಕೆ ಇಳಿಕೆಯಾಗಿದೆ.

ಪರಿಸ್ಥಿತಿ ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಕೋಲಾರ ಎಪಿಎಂಸಿ ಹೊರತುಪಡಿಸಿ ಉಳಿದ ಎಪಿಎಂಸಿಗಳು ಬಾಗಿಲು ಮುಚ್ಚುವ ಸ್ಥಿತಿಗೆ ತಲುಪಿದರೂ ಆಶ್ಚರ್ಯಪಡುವಂತಿಲ್ಲ ಅನ್ನೋದು ಅಧಿಕಾರಿಗಳ ಮಾತು. ಎಪಿಎಂಸಿ ಪ್ರಾಂಗಣದಲ್ಲಿ ವ್ಯಾಪಾರ ಮಾಡುವವರಿಂದ ಮಾತ್ರವೇ ಸೆಸ್ ಸಂಗ್ರಹಿಸಲು ಅವಕಾಶವಿದೆ. ಹೀಗಾಗಿ ಎಪಿಎಂಸಿಗಳಿಗೆ ಬರುವ ಆದಾಯ ಪ್ರಮಾಣ ಕಡಿಮೆಯಾಗಿದೆ. ಜತೆಗೆ ಎಪಿಎಂಸಿಗಳಿಗೆ ಬರುವ ಆದಾಯದಲ್ಲಿಯೇ ಸಿಬ್ಬಂದಿ ವೇತನ ನೀಡಬೇಕಾದ ಹಿನ್ನೆಲೆಯಲ್ಲಿ ಕೆಲವು ಕಡೆ ಸಿಬ್ಬಂದಿ ಕಡಿತಗೊಳಿಸಲಾಗಿದೆ ಎಂದು ಕೋಲಾರ ಎಪಿಎಂಸಿ ಕಾರ್ಯದರ್ಶಿ ರವಿಕುಮಾರ್ ಟಿವಿ9ಗೆ ಮಾಹಿತಿ ತಿಳಿಸಿದ್ದಾರೆ.

ವರದಿ: ರಾಜೇಂದ್ರ ಸಿಂಹ

ಇದನ್ನೂ ಓದಿ: ಹೊಟ್ಟೆಪಾಡಿಗೆ ಬಟ್ಟೆಬಿಚ್ಚಿ ಓಡಾಡೋರಿಗೆ ಏನು ಗೊತ್ತು ಗಾಂಧಿ ಮೌಲ್ಯ: ಕಂಗನಾ ಹೇಳಿಕೆಗೆ ರಮೇಶ್​ಕುಮಾರ್ ವ್ಯಂಗ್ಯ

TV9 Kannada


Leave a Reply

Your email address will not be published. Required fields are marked *