ಕೋಳಿಕೋಡ್ ಶಾರದಾ
ಮಲಯಾಳಂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಹಿರಿಯ ನಟಿ ಕೋಳಿಕೋಡ್ ಶಾರದಾ ಅವರು ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರಿಗೆ 84 ವರ್ಷ ವಯಸ್ಸಾಗಿತ್ತು. ಮಂಗಳವಾರ (ನ.9) ಅವರಿಗೆ ಹೃದಯಾಘಾತವಾದ ಬಳಿಕ ಕೇರಳದ ಕೋಳಿಕೋಡ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅವರನ್ನು ಬದುಕಿಸಿಕೊಳ್ಳಲು ಸಾಧ್ಯವಾಗಿಲ್ಲ. ಅವರ ನಿಧನಕ್ಕೆ ಸೆಲೆಬ್ರಿಟಿಗಳು, ಅಭಿಮಾನಿಗಳು ಕಂಬನಿ ಮಿಡಿದ್ದಾರೆ.
ರಂಗಭೂಮಿಯಲ್ಲಿನ ಅಪಾರ ಅನುಭವ ಇಟ್ಟುಕೊಂಡು ಚಿತ್ರರಂಗಕ್ಕೆ ಕಾಲಿಟ್ಟವರು ಶಾರದಾ. ಮಲಯಾಳಂ ಸಿನಿಮಾಗಳ ಮೂಲಕ ಅವರು ಹೆಚ್ಚು ಜನಪ್ರಿಯತೆ ಗಳಿಸಿದ್ದರು. ‘ಅಂಗಕ್ಕುರಿ’ ಸಿನಿಮಾ ಮೂಲಕ 1979ರಲ್ಲಿ ಚಿತ್ರರಂಗಕ್ಕೆ ಶಾರದಾ ಪಾದಾರ್ಪಣೆ ಮಾಡಿದ್ದರು. 40 ವರ್ಷಗಳ ಕಾಲ ಅವರು ಸಿನಿಮಾ ಜಗತ್ತಿನಲ್ಲಿ ಸಕ್ರಿಯರಾಗಿದ್ದರು. 90ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ ಖ್ಯಾತಿ ಅವರದ್ದು. ಹೆಚ್ಚಾಗಿ ತಾಯಿ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಆ ಮೂಲಕ ಅವರು ಸಿನಿಪ್ರಿಯರನ್ನು ರಂಜಿಸಿದ್ದರು. ಮಾಡಿದ್ದೆಲ್ಲವೂ ಚಿಕ್ಕ-ಪುಟ್ಟ ಪಾತ್ರಗಳಾದರೂ ಅವರ ನಟನೆ ಗಮನಾರ್ಹವಾಗಿತ್ತು. ಮಲಯಾಳಂ ಕಿರುತೆರೆಯ ಕೆಲವು ಧಾರಾವಾಹಿಗಳಲ್ಲೂ ಶಾರದಾ ಬಣ್ಣ ಹಚ್ಚಿದ್ದರು.
ಅನುಬಂಧಂ, ಸಾದಯಂ, ನಂದನಂ ಮುಂತಾದವು ಶಾರದಾ ನಟಿಸಿದ ಪ್ರಮುಖ ಸಿನಿಮಾಗಳು. ನಾಲ್ವರು ಮಕ್ಕಳನ್ನು ಅವರು ಅಗಲಿದ್ದಾರೆ. ಪೃಥ್ವಿರಾಜ್ ಸುಕುಮಾರನ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಶಾರದಾ ನಿಧನಕ್ಕೆ ಕಂಬನಿ ಮಿಡಿದ್ದಾರೆ. ಕೇರಳ ಅಸೆಂಬ್ಲಿ ಸ್ಪೀಕರ್ ಎಂಬಿ ರಾಜೇಶ್, ಸಚಿವರಾದ ಮೊಹಮ್ಮದ್ ರಿಯಾಸ್, ಸಾಜಿ ಚೆರಿಯನ್ ಮುಂತಾದ ರಾಜಕೀಯ ಗಣ್ಯರು ಕೂಡ ಸಂತಾಪ ಸೂಚಿಸಿದ್ದಾರೆ.
Rest in peace 🙏 pic.twitter.com/aR4DyQLP5e
— Prithviraj Sukumaran (@PrithviOfficial) November 9, 2021
ನಟ ಪುನೀತ್ ರಾಜ್ಕುಮಾರ್ ಅವರು ಅ.29ರಂದು ಹೃದಯಾಘಾತದಿಂದ ನಿಧನರಾದ ಬಳಿಕ ಇಡೀ ದಕ್ಷಿಣ ಭಾರತಕ್ಕೆ ಸೂತಕದ ಛಾಯೆ ಆವರಿಸಿದೆ. ಅಪ್ಪು ಅವರ ಅಕಾಲಿಕ ಮರಣವನ್ನು ಯಾರಿಂದಲೂ ಒಪ್ಪಿಕೊಳ್ಳಲು ಸಾಧ್ಯವಾಗಿಲ್ಲ. ಪರಭಾಷೆಯ ಅನೇಕ ಕಲಾವಿದರು ಪುನೀತ್ ನಿವಾಸಕ್ಕೆ ಬಂದು ಕುಟುಂಬಸ್ಥರಿಗೆ ಸಾಂತ್ವನ ಹೇಳುತ್ತಿದ್ದಾರೆ. ಇದರ ನಡುವೆಯೇ ಕೋಳಿಕೋಡ್ ಶಾರದಾ ಅವರು ಕೂಡ ಹೃದಯಾಘಾತದಿಂದ ಮೃತಪಟ್ಟಿರುವುದು ನೋವಿನ ಸಂಗತಿ.
ಇದನ್ನೂ ಓದಿ:
Heart Attack: ಹೃದಯಾಘಾತದ ಸಾಮಾನ್ಯ ಲಕ್ಷಣಗಳಾವುವು? ತಿಳಿಯಲೇಬೇಕಾದ ಒಂದಿಷ್ಟು ಮಾಹಿತಿ ಇಲ್ಲಿದೆ
Puneeth Rajkumar: ‘ಪುನೀತ್ ಅತಿಯಾಗಿ ಜಿಮ್ ಮಾಡಿದ್ರು’: ಕರಾಳ ಶುಕ್ರವಾರದ ಘಟನೆ ವಿವರಿಸಿದ ಸೆಕ್ಯೂರಿಟಿ ಸಿಬ್ಬಂದಿ