ಬೆಂಗಳೂರು: ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಇಂದು ಮಂಡ್ಯ ಶಾಸಕರ ನಿಯೋಗದೊಂದಿಗೆ ಸಿಎಂ ಬಿಎಸ್​ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಮಹತ್ವದ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.

ಬಿಎಸ್​ವೈ ಭೇಟಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, ಮೈಶುಗರ್ ಕಾರ್ಖಾನೆ ಖಾಸಗಿಯವರಿಗೆ ವಹಿಸುವ ಬದಲು ಸರ್ಕಾರದ ಸ್ವಾಮ್ಯದಲ್ಲೇ ಇರಬೇಕು ಎಂದು ಸಿಎಂಗೆ ಮನವಿ ಮಾಡಿದ್ದೇವೆ. ಖಾಸಗಿ ಪಾಲಾಗಲು ಅವಕಾಶ ಕೊಡದಂತೆ ಮನವಿ ಮಾಡಿದ್ದೇವೆ. ಕಾರ್ಖಾನೆಯನ್ನು ಖಾಸಗಿಯವರಿಗೆ ನೀಡಲು ಒಪ್ಪಿಗೆ ಕೊಡುವುದಿಲ್ಲ ಎಂದು ಸಿಎಂ ಭರವಸೆ ಕೊಟ್ಟಿದ್ದಾರೆ ಎಂದರು.

‘ಮಂಡ್ಯದಲ್ಲಿ ಇಂತಹ ಸಂಸದರು ಬಂದಿಲ್ಲ, ಬರೋದಿಲ್ಲ’
ಕೆಆರ್‌ಎಸ್ ಜಲಾಶಯದ ನೀರು ಹಂಚಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ ಸಂಸದೆ ಸುಮಲತಾ ಅಂಬರೀಷ್​ ವಿರುದ್ಧ ಹರಿಹಾಯ್ದರು. ಮಂಡ್ಯ ಜಿಲ್ಲೆಗೆ ಈ ಹಿಂದೆ ಇಂತಹ ಸಂಸದರು ಬಂದಿಲ್ಲ.. ಮುಂದೆಯೂ ಬರುವುದಿಲ್ಲ. ಕೆಆರ್‌ಎಸ್ ಜಲಾಶಯದ ರಕ್ಷಣೆಗೆ ಬಗ್ಗೆ ಮೊನ್ನೆ ಏನೋ ಹೇಳಿಕೆ ಕೊಟ್ಟಿದ್ದಾರೆ. ಜಲಾಶಯದ ಬಾಗಿಲಿನಲ್ಲಿ ನೀರು ಹೋಗದಂತೆ ಸಂಸದರನ್ನೇ ಮಲಗಿಸಿಬಿಟ್ರೆ ಆಯ್ತು. ಸುಮ್ಮನೆ ವೈಯುಕ್ತಿಕ ದ್ವೇಷಗಳಿಗೆ ಮಾತನಾಡುವುದು ಒಳ್ಳೆದಲ್ಲ. ಆಯ್ಕೆಯಾಗಿ ಬಂದಿರುವ ಸಂದರ್ಭವನ್ನು ಸದುಪಯೋಗಪಡಿಸಿಕೊಳ್ಳದಿದ್ದರೆ ಜನರೇ ಮುಂದೆ ಬುದ್ಧಿ ಕಲಿಸುತ್ತಾರೆ ಎಂದರು.

ಇದೇ ವೇಳೆ ತಾ.ಪಂ. ಜಿ.ಪಂ. ಮೀಸಲಾತಿ ಬಗ್ಗೆ ಯೋಗೇಶ್ವರ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ. ಯೋಗೇಶ್ವರ್ ಬಾಲಿಶ ಹೇಳಿಕೆ ಕೊಡೋದು ಎಷ್ಟು ಸರಿ ಅಂತಾ ಅವರೇ ಯೋಚನೆ ಮಾಡಲಿ. ಮೀಸಲಾತಿ ನಿಗದಿ ಮಾಡೋದು ಚುನಾವಣಾ ಆಯೋಗ, ಸರ್ಕಾರ ಅಲ್ಲ ಎಂದು ಹೇಳಿದ್ರು.

ಮೇಕೆದಾಟು ಯೋಜನೆಯಲ್ಲಿ ತಮಿಳುನಾಡಿಗೆ ಅನ್ಯಾಯ ಮಾಡುವ ಯೋಚನೆ ನಮಗೆ ಇಲ್ಲ. ಹಾಗಾದರೆ ತಮಿಳುನಾಡು ಹೊಗೇನೆಕಲ್‌‌ನಲ್ಲಿ ಯಾರ ಅಪ್ಪಣೆ ತೆಗೆದುಕೊಂಡು ಜಲಾಶಯ ಕಟ್ಟಿದರು? ಎಂದು ಹೆಚ್​ಡಿಕೆ ಪ್ರಶ್ನಿಸಿದರು. ಮೇಕೆದಾಟು ಯೋಜನೆ ಬಗ್ಗೆ ತಮಿಳುನಾಡು ಸಿಎಂ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ ನಾನು ಅವರಿಗೆ ನೇರವಾಗಿ ಮನವಿ ಮಾಡುತ್ತೇನೆ. ಪ್ರತಿ ವರ್ಷ ತಮಿಳುನಾಡಿಗೆ ನ್ಯಾಯಧೀಕರಣ ತೀರ್ಪಿನ ಅನ್ವಯ ಕೊಡಬೇಕಾದ ನೀರನ್ನು ಕೊಡುತ್ತಿದ್ದೇವೆ ಎಂದರು.

The post ‘KRS ಜಲಾಶಯದ ಬಾಗಿಲಿನಲ್ಲಿ ಸಂಸದರನ್ನೇ ಮಲಗಿಸಿಬಿಟ್ರೆ ಆಯ್ತು’ -ಸುಮಲತಾ ವಿರುದ್ಧ ಹೆಚ್​​ಡಿಕೆ ಕಿಡಿ appeared first on News First Kannada.

Source: newsfirstlive.com

Source link