KSRTC: ಕೆಎಸ್​ಆರ್​ಟಿಸಿ ಬಸ್​ಗಳಲ್ಲಿ ಜೋರಾಗಿ ಹಾಡು ಹಾಕಿದ್ರೆ ಶಿಸ್ತುಕ್ರಮ: ಜಾರಿಯಾಗಿದೆ ಹೊಸ ನಿಯಮ | KSRTC Decides to Punish Passengers who create nuisance in bus using loudspeakers


KSRTC: ಕೆಎಸ್​ಆರ್​ಟಿಸಿ ಬಸ್​ಗಳಲ್ಲಿ ಜೋರಾಗಿ ಹಾಡು ಹಾಕಿದ್ರೆ ಶಿಸ್ತುಕ್ರಮ: ಜಾರಿಯಾಗಿದೆ ಹೊಸ ನಿಯಮ

ಬೆಂಗಳೂರು ಕೆಎಸ್​ಆರ್​ಟಿಸಿ ಬಸ್ ನಿಲ್ದಾಣ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (Karnataka State Road Transport Corporation – KSRTC) ಬಸ್​ಗಳಲ್ಲಿ ಇಯರ್​ಫೋನ್ ಇಲ್ಲದೆ ಜೋರಾಗಿ ಹಾಡು ಹಾಕಿದರೆ ಶಿಸ್ತುಕ್ರಮ ಎದುರಿಸಬೇಕಾಗುತ್ತದೆ. ಈ ಸಂಬಂಧ ಸುತ್ತೋಲೆ ಹೊರಡಿಸಿರುವ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ, ಬಸ್​ಗಳಲ್ಲಿ ಪ್ರಯಾಣಿಸುವಾಗ ಮೊಬೈಲ್​ಗಳಲ್ಲಿ ಜೋರಾಗಿ ಹಾಡು, ಪದ್ಯ, ವಾರ್ತೆ, ಸಿನಿಮಾ ಇತ್ಯಾದಿ ಹಾಕುವಂತಿಲ್ಲ ಎಂದು ಹೇಳಿದ್ದಾರೆ.

ಕೆಲ ಪ್ರಯಾಣಿಕರ ಇಂತ ವರ್ತನೆಯಿಂದ ಸಹ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಈ ಪ್ರವೃತ್ತಿ ನಿಯಂತ್ರಿಸಬೇಕೆಂದು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಬಸ್ಸುಗಳಲ್ಲಿ ಜೋರಾಗಿ ಹಾಡು ಹಾಕುವ ಪ್ರಯಾಣಿಕರ ವಿರುದ್ಧ ಶಿಸ್ತುಕ್ರಮ ಜರುಗಿಸಲು ಚಾಲಕ ಮತ್ತು ನಿರ್ವಾಹಕರಿಗೆ ವ್ಯವಸ್ಥಾಪಕ ನಿರ್ದೇಶಕರು ಸೂಚನೆ ನೀಡಿದ್ದಾರೆ.

ಬಸ್ಸುಗಳಲ್ಲಿ ಶಬ್ದ ಮಾಲಿನ್ಯ ಮಾಡುವವರಿಗೆ ಚಾಲನಾ ಸಿಬ್ಬಂದಿ ತಿಳಿವಳಿಕೆ ನೀಡಿ, ಮೊಬೈಲ್ ಬಳಕೆಯ ಸರಿಯಾದ ಕ್ರಮದ ಬಗ್ಗೆ ವಿವರಿಸಬೇಕು. ಸಿಬ್ಬಂದಿಯ ಮಾತಿಗೆ ಮನ್ನಣೆ ನೀಡದಿದ್ದರೆ ಅಂಥವರನ್ನು ಬಸ್ಸಿನಿಂದ ಕೆಳಗೆ ಇಳಿಯಲು ಸೂಚಿಸಬೇಕು. ಅವರು ಕೆಳಗೆ ಇಳಿಯುವವರೆಗೆ ವಾಹನವನ್ನು ನಿಲ್ಲಿಸಿಕೊಂಡಿರಬೇಕು. ಇಂಥವರಿಗೆ ಪ್ರಯಾಣದರವನ್ನೂ ಹಿಂದಿರುಗಿಸುವಂತಿಲ್ಲ ಎಂದು ಅವರು ಹೇಳಿದ್ದಾರೆ. ಈ ಸುತ್ತೋಲೆಯ ನಿರ್ದೇಶನಗಳು ತಕ್ಷಣದಿಂದ ಜಾರಿಗೆ ಬರುತ್ತವೆ ಎಂದು ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.

ವಿದ್ಯಾರ್ಥಿಗಳಿಗೆ ಬಿಎಂಟಿಸಿ ಬಸ್​ ಪಾಸ್ ವಿತರಣೆ
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (Bengaluru Metropolitan Transport Corporation – BMTC) ನವೆಂಬರ್ 14ರಿಂದ ವಿದ್ಯಾರ್ಥಿಗಳಿಗೆ ಬಸ್​ಪಾಸ್ ವಿತರಿಸಲಿದೆ. ಬೆಂಗಳೂರು ಒನ್ ಕೇಂದ್ರಗಳಲ್ಲಿ ಈ ಪಾಸ್ ಲಭ್ಯವಾಗಲಿವೆ. ಸೇವಾಸಿಂಧು ಪೋರ್ಟಲ್​ ಮತ್ತು ಬಿಎಂಟಿಸಿ ವೆಬ್​ಸೈಟ್​ನಲ್ಲಿ ಬಸ್​ಪಾಸ್​ನ ಆನ್​ಲೈನ್ ಅರ್ಜಿಗಳು ಲಭ್ಯ. ಬೆಂಗಳೂರು ಒನ್ ಕೇಂದ್ರದಲ್ಲಿ ಪ್ರತಿದಿನ ಬೆಳಿಗ್ಗೆ 8ರಿಂದ ಸಂಜೆ 6.30ರವರೆಗೆ ಪಾಸ್​ಗಳನ್ನು ವಿತರಿಸಲಾಗುವುದು ಎಂದು ಬಿಎಂಟಿಸಿ ಪ್ರಕಟಣೆ ತಿಳಿಸಿದೆ.

ವಿದ್ಯಾರ್ಥಿಗಳು ಸಲ್ಲಿಸುವ ಅರ್ಜಿಗಳನ್ನು ಸಂಬಂಧಿಸಿದ ಶಿಕ್ಷಣ ಸಂಸ್ಥೆಗಳಿಂದ ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಿಂದ ಅನುಮೋದಿಸಲಾಗುವುದು. ಈ ಕುರಿತು ಸೂಚನೆ ಲಭ್ಯವಾದ ನಂತರ ವಿದ್ಯಾರ್ಥಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಪಾಸ್ ವಿತರಣೆಗಾಗಿ ಬೆಂಗಳೂರು ಒನ್ ಕೇಂದ್ರದಲ್ಲಿ ದಿನಾಂಕ ಮತ್ತು ಸಮಯ ನಿಗದಿಪಡಿಸಿಕೊಳ್ಳಬೇಕು. ಬೆಂಗಳೂರು ಒನ್ ಕೇಂದ್ರಗಳಿಗೆ ಬರುವಾಗ ಶಿಕ್ಷಣ ಸಂಸ್ಥೆಯ ಗುರುತಿನ ಚೀಟಿ, ಶುಲ್ಕ ರಸೀದಿ, ಶಾಲಾ ಮುಖ್ಯಸ್ಥರು ನೀಡುವ ದೃಢೀಕರಣ ಪತ್ರವನ್ನು ತರಬೇಕು ಎಂದು ಬಿಎಂಟಿಸಿ ಹೇಳಿದೆ.

ವಿದ್ಯಾರ್ಥಿಗಳು ಒಂದು ವೇಳೆ ನೋಂದಣಿಯಾಗದ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುತ್ತಿದ್ದರೆ, ಅಂಥವರು ತಮ್ಮ ಶಾಲೆಗಳನ್ನು ಬಿಎಂಟಿಸಿ ವೆಬ್​ಸೈಟ್​ನಲ್ಲಿ ನೋಂದಣಿ ಮಾಡಲು ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಿಗೆ ತಿಳಿಸಬೇಕು. ಎಲ್ಲೆಲ್ಲಿ ಪಾಸ್ ವಿತರಿಸಲಾಗುವುದು ಎಂಬ ಪಟ್ಟಿಯು ಬಿಎಂಟಿಸಿ ವೆಬ್​ಸೈಟ್​ನಲ್ಲಿ ಲಭ್ಯವಿದೆ. ನಗರದ ಒಟ್ಟು 95 ಬೆಂಗಳೂರು ಒನ್ ಕೇಂದ್ರಗಳಲ್ಲಿ ಪಾಸ್​ಗಳನ್ನು ವಿತರಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ: ಶಿವಮೊಗ್ಗ: ಬೈಕ್- ಕೆಎಸ್​ಆರ್​ಟಿಸಿ ನಡುವೆ ಅಪಘಾತ; ಇಬ್ಬರು ಸವಾರರು ಸ್ಥಳದಲ್ಲೇ ದುರ್ಮರಣ
ಇದನ್ನೂ ಓದಿ: ಕೆಎಸ್​ಆರ್​ಟಿಸಿ 4 ನಿಗಮಗಳಿಗೆ ಹೆಚ್ಚುವರಿ ಹಣ ನೀಡುವಂತೆ ಬಸವರಾಜ ಬೊಮ್ಮಾಯಿಗೆ ಮನವಿ

TV9 Kannada


Leave a Reply

Your email address will not be published. Required fields are marked *