Lata Mangeshkar: ಲತಾ ಮಂಗೇಶ್ಕರ್ ಅವರ ಇಡೀ ಕುಟುಂಬವೇ ಸಂಗೀತಕ್ಕೆ ಮುಡಿಪಾಗಿತ್ತು | Lata Mangeshkar Indian Playback Singer Lata Mangeshkar Whole Family was Dedicated to Music Asha Bhosle


Lata Mangeshkar: ಲತಾ ಮಂಗೇಶ್ಕರ್ ಅವರ ಇಡೀ ಕುಟುಂಬವೇ ಸಂಗೀತಕ್ಕೆ ಮುಡಿಪಾಗಿತ್ತು

ಲತಾ ಮಂಗೇಶ್ಕರ್ ಅವರ ಕುಟುಂಬ

ಭಾರತದ ನೈಟಿಂಗೇಲ್, ಗಾನಕೋಗಿಲೆ ಎಂದೆಲ್ಲ ಖ್ಯಾತರಾಗಿದ್ದ ಸಂಗೀತ ಲೋಕದ ದಂತಕತೆ ಭಾರತರತ್ನ ಲತಾ ಮಂಗೇಶ್ಕರ್ (Lata Manheshkar Death) ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದಾರೆ. 8 ದಶಕಗಳ ಕಾಲ ಭಾರತೀಯ ಚಿತ್ರರಂಗದಲ್ಲಿ ಹಿನ್ನೆಲೆ ಗಾಯಕಿಯಾಗಿ ಗುರುತಿಸಿಕೊಂಡ ಲತಾ ಮಂಗೇಶ್ಕರ್ ಹಿಂದಿ ಮಾತ್ರವಲ್ಲದೆ ಕನ್ನಡ, ಬೆಂಗಾಲಿ, ಕೊಂಕಣಿ, ಮರಾಠಿ, ತಮಿಳು, ತೆಲುಗು, ಮಲಯಾಳಂ, ಒಡಿಯಾ, ಅಸ್ಸಾಮೀಸ್, ಗುಜರಾತಿ ಹಾಡುಗಳಿಗೆ ಕೂಡ ಲತಾ ಮಂಗೇಶ್ಕರ್ ಧ್ವನಿಯಾಗಿದ್ದರು. ಬಾಲಿವುಡ್​ನ ಬಹುತೇಕ ಎಲ್ಲ ಸಂಗೀತ ನಿರ್ದೇಶಕರು, ಗಾಯಕರ ಜೊತೆ ಕೆಲಸ ಮಾಡಿದ ಹೆಗ್ಗಳಿಕೆಯೂ ಲತಾ ಮಂಗೇಶ್ಕರ್ ಅವರದ್ದು. ಪಂಡಿತ್ ದೀನನಾಥ್ ಮಂಗೇಶ್ಕರ್ ಮತ್ತು ಸೇವಂತಿ ದಂಪತಿಯ ಹಿರಿಯ ಮಗಳಾಗಿ ಹುಟ್ಟಿದ ಹೇಮಾ ಮಂಗೇಶ್ಕರ್ ಬಳಿಕ ಸಂಗೀತ ಲೋಕವನ್ನೇ ಆಳಿದ ಲತಾ ಮಂಗೇಶ್ಕರ್ ಆದರು. ಎಲ್ಲರಿಂದ ಲತಾ ದೀದಿ ಎಂದೇ ಕರೆಸಿಕೊಳ್ಳುತ್ತಿದ್ದ ಲತಾ ಮಂಗೇಶ್ಕರ್ ಮದುವೆಯನ್ನೂ ಮಾಡಿಕೊಳ್ಳದೆ ತಮ್ಮ ಇಡೀ ಜೀವನವನ್ನು ಸಂಗೀತಕ್ಕಾಗಿ ಮುಡಿಪಾಗಿಟ್ಟವರು. ಅಂದಹಾಗೆ, ಕೇವಲ ಲತಾ ಮಂಗೇಶ್ಕರ್ ಮಾತ್ರವಲ್ಲದೆ ಅವರ ಕುಟುಂಬವೇ ಸಂಗೀತ ಪರಂಪರೆಯಲ್ಲಿ ಬಹಳ ಮುಖ್ಯವಾದ ಸ್ಥಾನ ಪಡೆದಿದೆ.

ಲತಾ ಮಂಗೇಶ್ಕರ್​ ಅವರ ತಂಗಿ ಆಶಾ ಬೋಸ್ಲೆ ಕೂಡ ಭಾರತೀಯ ಸಂಗೀತ ಲೋಕದ ಮಹಾನ್ ಗಾಯಕಿ. ಆಶಾ ಬೋಸ್ಲೆ ಬಾಲಿವುಡ್ ಸಿನಿಮಾರಂಗವನ್ನು ಬಹುಕಾಲದವರೆಗೆ ಆಳಿದ ಹಿನ್ನೆಲೆ ಗಾಯಕಿ. ತಮ್ಮ ಗಾಯನದ ಸಾಧನೆಗೆ ಅವರು ಗಿನ್ನೆಸ್ ರೆಕಾರ್ಡ್ ಕೂಡ ಮಾಡಿದ್ದಾರೆ. ಹಿಂದಿ, ಬೆಂಗಾಲಿ, ಮರಾಠಿ ಮುಂತಾಧ ಭಾಷೆಗಳಲ್ಲಿ ಸಾವಿರಾರು ಹಾಡುಗಳನ್ನು ಹಾಡಿರುವ ಆಶಾ ಬೋಸ್ಲೆ ಅನೇಕ ಗೀತೆಗಳಿಗೆ ಸಂಗೀತ ಸಂಯೋಜನೆಯನ್ನೂ ಮಾಡಿದ್ದಾರೆ.

ಲತಾ ಮಂಗೇಶ್ಕರ್ ಅವರ ಇನ್ನೋರ್ವ ತಂಗಿ ಮೀನಾ ಖಾಡೀಕರ್ ಕೂಡ ಮರಾಠಿ ಮತ್ತು ಹಿಂದಿ ಚಿತ್ರರಂಗದ ಹಿನ್ನೆಲೆ ಗಾಯಕಿ. ಮತ್ತೋರ್ವ ತಂಗಿ ಉಷಾ ಮಂಗೇಶ್ಕರ್ ಮರಾಠಿ, ಹಿಂದಿ, ಬೆಂಗಾಲಿ, ನೇಪಾಳಿ, ಕನ್ನಡ, ಭೋಜ್​ಪುರಿ, ಅಸ್ಸಾಮೀಸ್, ಗುಜರಾತಿ ಭಾಷೆಯಲ್ಲಿ ಕೆಲವು ಹಾಡುಗಳನ್ನು ಹಾಡಿದ್ದಾರೆ. ಲತಾ ಮಂಗೇಶ್ಕರ್ ಅವರ ಸೋದರ ಹೃದಯನಾಥ್ ಮಂಗೇಶ್ಕರ್ ಕೂಡ ಹಿನ್ನೆಲೆ ಗಾಯಕರಾಗಿದ್ದು, ಮರಾಠಿ, ಹಿಂದಿ ಭಾಷೆಯಲ್ಲಿ ಸಾಕಷ್ಟು ಹಾಡುಗಳನ್ನು ಹಾಡಿದ್ದಾರೆ. ಅನೇಕ ಸಿನಿಮಾಗಳಿಗೆ ಸಂಗೀತ ಸಂಯೋಜನೆ ಕೂಡ ಮಾಡಿದ್ದಾರೆ.

ಹೇಮಾಗೆ ಲತಾ ಮಂಗೇಶ್ಕರ್ ಎಂಬ ಹೆಸರು ಬಂದಿದ್ದು ಹೇಗೆ?:

ಲತಾ ಮಂಗೇಶ್ಕರ್ ಅವರ ತಂದೆ ಪಂಡಿತ್ ದೀನನಾಥ್ ಮಂಗೇಶ್ಕರ್ ಕೂಡ ಶಾಸ್ತ್ರೀಯ ಸಂಗೀತಗಾರರಾಗಿದ್ದರು. ಮರಾಠಿ ಮತ್ತು ಕೊಂಕಣಿ ಹಾಡುಗಳನ್ನು ಸಂಯೋಜಿಸಿ, ಅವರು ಹಾಡುತ್ತಿದ್ದರು. ಅವರು ರಂಗಭೂಮಿ ಕಲಾವಿದರೂ ಆಗಿದ್ದರು. ದೀನನಾಥ್ ಮಂಗೇಶ್ಕರ್ ಅಭಿನಯಿಸಿದ್ದ ನಾಟಕವಾದ ಭಾವ್​ಬಂಧನದ ಲತಿಕಾ ಎಂಬ ಪಾತ್ರದಿಂದ ಪ್ರಭಾವಿತರಾದ ಅವರು ತಮ್ಮ ಮಗಳು ಹೇಮಾಗೆ ಲತಾ ಎಂದು ಹೆಸರಿಟ್ಟರು.

92 ವರ್ಷದ ಲತಾ ಮಂಗೇಶ್ಕರ್ ತಮ್ಮ 13ನೇ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡು ಇಡೀ ಕುಟುಂಬದ ಜವಾಬ್ದಾರಿಯನ್ನು ತಮ್ಮ ಹೆಗಲ ಮೇಲೆ ಹೊತ್ತವರು. ಆರಂಭದಲ್ಲಿ ನಾಟಕ, ಸಿನಿಮಾಗಳಲ್ಲಿ ಬಾಲ ಕಲಾವಿದೆಯಾಗಿ ನಟಿಸುತ್ತಿದ್ದ ಆಕೆ ಬಳಿಕ ಗಾಯನವನ್ನೇ ತಮ್ಮ ವೃತ್ತಿಯಾಗಿಸಿಕೊಂಡರು. ಆ ಕಾಲಕ್ಕೆ ಪ್ರಸಿದ್ಧ ಗಾಯಕಿಯರಾಗಿದ್ದ ನೂರ್ ಜಹಾನ್, ಶಂಶಾದ್ ಬೇಗಂ ಅವರ ಮುಂದೆ ಲತಾ ಬಹಳ ಸಣ್ಣ ಹುಡುಗಿಯಾಗಿದ್ದರು. ಆದರೂ ಕ್ರಮೇಣ ಲತಾ ಅವರನ್ನು ಅರಸಿಕೊಂಡು ಅನೇಕ ಅವಕಾಶಗಳು ಬರತೊಡಗಿದವು. ಕಿಶೋರ್ ಕುಮಾರ್, ಮಖೇಶ್, ಮನ್ನಾ ಡೇ, ಮೊಹಮ್ಮದ್ ರಫಿ ಮುಂತಾದ ದಿಗ್ಗಜ ಗಾಯಕರ ಜೊತೆ ಯುಗಳಗೀತೆ ಹಾಡಿದ ಕೀರ್ತಿ ಲತಾ ಮಂಗೇಶ್ಕರ್ ಅವರದ್ದು. ಲತಾ ಮಂಗೇಶ್ಕರ್ 36 ಭಾಷೆಗಳಲ್ಲಿ ಹಾಡುಗಳನ್ನು ಹಾಡಿದ್ದಾರೆ! ಸಂಗೀತ ಸಂಯೋಜಕಿಯಾಗಿಯೂ ಲತಾ ಮಂಗೇಶ್ಕರ್ ಹೆಸರಾದವರು.

TV9 Kannada


Leave a Reply

Your email address will not be published.