ಲತಾ ಮಂಗೇಶ್ಕರ್
ಕೊರೊನಾ ಮೂರನೆ ಅಲೆಯ ಅಬ್ಬರ ಜೋರಾಗಿದೆ. ದೊಡ್ಡದೊಡ್ಡ ಸೆಲೆಬ್ರಿಟಿಗಳು ಕೊರೊನಾ ಹೊಡೆತಕ್ಕೆ ಸಿಲುಕುತ್ತಿದ್ದಾರೆ. ಇತ್ತೀಚೆಗೆ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ (Lata Mangeshkar) ಅವರಿಗೆ ಕೊವಿಡ್ ಪಾಸಿಟಿವ್ ಆಗಿದೆ. ಮುಂಬೈನ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಆರೋಗ್ಯದ ಬಗ್ಗೆ ಎಲ್ಲರಿಗೂ ಆತಂಕ ಮೂಡಿದೆ. ಐಸಿಯುನಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈಗ ಅವರ ಆರೋಗ್ಯದಲ್ಲಿ ಕೊಂಚ ಸುಧಾರಣೆ ಕಂಡಿದೆ ಎಂದು ವೈದ್ಯರು ಹೇಳಿರುವುದರಿಂದ ಅವರ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
ಲತಾ ಮಂಗೇಶ್ಕರ್ ಅವರಿಗೆ ಕೊವಿಡ್ನ ಕೆಲವು ಲಕ್ಷಣಗಳು ಕಂಡುಬಂದಿವೆ. ಕಳೆದ ಮೂರು ದಿನಗಳಿಂದ ಅವರಿಗೆ ಚಿಕಿತ್ಸೆ ಮುಂದುವರಿಸಲಾಗಿದೆ. ಲತಾ ಮಂಗೇಶ್ಕರ್ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ ಎಂದು ಕುಟುಂಬದವರಿಗೆ ವೈದ್ಯರು ತಿಳಿಸಿದ್ದಾರೆ. ಆದರೆ ಅವರನ್ನು ನೋಡಲು ಯಾರಿಗೂ ಅನುಮತಿ ನೀಡಿಲ್ಲ. ಅವರಿಗೆ 92 ವರ್ಷ ವಯಸ್ಸು ಆಗಿರುವ ಕಾರಣ ಹೆಚ್ಚಿನ ಕಾಳಜಿ ವಹಿಸಲಾಗುತ್ತಿದೆ. ಲತಾ ಮಂಗೇಶ್ಕರ್ ಅವರನ್ನು 10-12 ದಿನಗಳವರೆಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿಸಲಾಗುತ್ತಿದೆ. ಕೊರೊನಾ ಮತ್ತು ನ್ಯುಮೋನಿಯಾ ಸೋಂಕಿಗೆ ಚಿಕಿತ್ಸೆ ನೀಡಲಾಗುತ್ತಿದೆ.
‘ಅತ್ಯುತ್ತಮ ವೈದ್ಯರ ತಂಡ ಲತಾ ಮಂಗೇಶ್ಕರ್ ಅವರಿಗೆ ಚಿಕಿತ್ಸೆ ನೀಡುತ್ತಿದೆ. ಅವರ ಆರೋಗ್ಯ ಸ್ಥಿರವಾಗಿದೆ. ಅವರ ಫೈಟರ್ ಮತ್ತು ವಿನ್ನರ್. ಆ ರೀತಿಯಲ್ಲೇ ನಾವು ಅವರನ್ನು ನೋಡಿಕೊಂಡು ಬಂದಿರುವುದು. ಅವರು ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತಿರುವ ಎಲ್ಲ ಅಭಿಮಾನಿಗಳಿಗೆ ಧನ್ಯವಾದಗಳು’ ಎಂದು ಲತಾ ಮಂಗೇಶ್ಕರ್ ಕುಟುಂಬದವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದರು.
‘ಇದು ಕೊವಿಡ್ ಆದಕಾರಣ ಅಕ್ಕನನ್ನು ನೋಡಲು ನಮಗೆ ಅನುಮತಿ ಸಿಕ್ಕಿಲ್ಲ. ವೈದ್ಯರು ಮತ್ತು ನರ್ಸ್ಗಳು ಹೆಚ್ಚಿನ ಕಾಳಜಿ ವಹಿಸುತ್ತಿದ್ದಾರೆ. ಹೆಚ್ಚು ವಯಸ್ಸು ಆಗಿರುವ ಕಾರಣ ಇನ್ನಷ್ಟು ದಿನಗಳ ಕಾಲ ಆಸ್ಪತ್ರೆಯಲ್ಲಿ ಇರಬೇಕಾಗಬಹುದು ಅಂತ ವೈದ್ಯರು ಹೇಳಿದ್ದಾರೆ’ ಎಂದು ಲತಾ ಅವರ ಸಹೋದರಿ ಉಷಾ ಮಂಗೇಶ್ಕರ್ ತಿಳಿಸಿದ್ದರು.
ಸಂಗೀತ ಕ್ಷೇತ್ರದಲ್ಲಿ 70 ದಶಕಗಳ ಕಾಲ ಸಕ್ರಿಯರಾಗಿದ್ದವರು ಲತಾ ಮಂಗೇಶ್ಕರ್. 13ನೇ ವಯಸ್ಸಿನಿಂದಲೇ ಅವರು ಗಾಯನ ಆರಂಭಿಸಿದ್ದರು. ಭಾರತ ರತ್ನ, ಪದ್ಮ ಭೂಷಣ, ಪದ್ಮ ವಿಭೂಷಣ, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸೇರಿದಂತೆ ನೂರಾರು ಗೌರವಗಳು ಅವರಿಗೆ ಸಂದಿವೆ. 30 ಸಾವಿರಕ್ಕೂ ಅದಿಕ ಹಾಡುಗಳಿಗೆ ಲತಾ ಧ್ವನಿ ಆಗಿದ್ದಾರೆ. ವಿಶ್ವಾದ್ಯಂತ ಅವರು ಅಭಿಮಾನಿಗಳನ್ನು ಹೊಂದಿದ್ದಾರೆ. ಲತಾ ಮಂಗೇಶ್ಕರ್ ಬೇಗ ಗುಣಮುಖರಾಗಲಿ ಎಂದು ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ.