Vijay Deverakonda | Ananya Panday: ತಮಿಳಿಗೂ ಡಬ್ ಆಗಿ ‘ಲೈಗರ್’ ಸಿನಿಮಾ ರಿಲೀಸ್ ಆಗುತ್ತಿದೆ. ತಮಿಳುನಾಡಿನಲ್ಲಿ ವಿಜಯ್ ದೇವರಕೊಂಡ ಅವರಿಗೆ ಅಪಾರ ಅಭಿಮಾನಿಗಳು ಇದ್ದಾರೆ.

ಚೆನ್ನೈನಲ್ಲಿ ಲೈಗರ್ ಸಿನಿಮಾ ಪ್ರಮೋಷನ್
ಖ್ಯಾತ ನಟ ವಿಜಯ್ ದೇವರಕೊಂಡ (Vijay Deverakonda) ಅವರು ‘ಲೈಗರ್’ ಸಿನಿಮಾದ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗುತ್ತಿರುವ ಈ ಸಿನಿಮಾಗೆ ಭರ್ಜರಿ ಪ್ರಚಾರ ನೀಡಲಾಗುತ್ತಿದೆ. ಬಹುಕೋಟಿ ರೂಪಾಯಿ ಖರ್ಚು ಮಾಡಿ ಪ್ರಮೋಷನ್ ಇವೆಂಟ್ಗಳನ್ನು ನಡೆಸಲಾಗುತ್ತಿದೆ. ದೇಶದ ಹಲವು ನಗರಗಳಿಗೆ ವಿಜಯ್ ದೇವರಕೊಂಡ ಭೇಟಿ ನೀಡುತ್ತಿದ್ದಾರೆ. ಆ ಮೂಲಕ ‘ಲೈಗರ್’ ಸಿನಿಮಾ (Liger Movie) ಬಗ್ಗೆ ಹೊಸ ಕ್ರೇಜ್ ಹುಟ್ಟುವಂತೆ ಮಾಡಲಾಗಿದೆ. ಅವರು ಹೋದಲ್ಲೆಲ್ಲ ಜನರು ಮುತ್ತಿಕೊಳ್ಳುತ್ತಿದ್ದಾರೆ. ಈಗ ಅವರು ಚೆನ್ನೈಗೆ ತೆರಳಿ ಅದ್ದೂರಿಯಾಗಿ ಪ್ರಚಾರ ಮಾಡಿದ್ದಾರೆ. ವಿಜಯ್ ದೇವರಕೊಂಡ ಅವರಿಗೆ ನಟಿ ಅನನ್ಯಾ ಪಾಂಡೆ (Ananya Panday) ಸಾಥ್ ನೀಡಿದ್ದಾರೆ. ಟಾಲಿವುಡ್ ನಟನಿಗೆ ಇರುವ ಫ್ಯಾನ್ ಫಾಲೋಯಿಂಗ್ ಕಂಡು ಎಲ್ಲರೂ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಈ ಸಿನಿಮಾ ಬಿಡುಗಡೆ ಆದ ಬಳಿಕ ಅವರ ಹವಾ ಇನ್ನಷ್ಟು ಹೆಚ್ಚಲಿದೆ.
‘ಲೈಗರ್’ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಲು ಹಲವು ಕಾರಣಗಳಿವೆ. ಈ ಚಿತ್ರಕ್ಕೆ ಪುರಿ ಜಗನ್ನಾಥ್ ಅವರು ನಿರ್ದೇಶನ ಮಾಡಿದ್ದಾರೆ. ನಿರ್ಮಾಣದಲ್ಲೂ ಅವರು ಪಾಲುದಾರರಾಗಿದ್ದಾರೆ. ಅವರ ಜೊತೆ ಕರಣ್ ಜೋಹರ್, ಚಾರ್ಮಿ ಕೌರ್ ಕೂಡ ಕೈ ಜೋಡಿಸಿದ್ದಾರೆ. ಬಾಕ್ಸರ್ ಪಾತ್ರದಲ್ಲಿ ವಿಜಯ್ ದೇವರಕೊಂಡ ನಟಿಸಿದ್ದಾರೆ. ವಿಶ್ವ ವಿಖ್ಯಾತ ಬಾಕ್ಸರ್ ಮೈಕ್ ಟೈಸನ್ ಅವರು ಈ ಚಿತ್ರದಲ್ಲೊಂದು ಪ್ರಮುಖ ಪಾತ್ರ ಮಾಡಿರುವುದು ವಿಶೇಷ.
‘ಅರ್ಜುನ್ ರೆಡ್ಡಿ’ ಸಿನಿಮಾದ ನಂತರ ವಿಜಯ್ ದೇವರಕೊಂಡ ಅವರು ಇಡೀ ದೇಶದಲ್ಲಿ ಫೇಮಸ್ ಆದರು. ಈಗ ಅವರು ನೇರವಾಗಿ ಹಿಂದಿ ಬಾಕ್ಸ್ ಆಫೀಸ್ ಮೇಲೆ ಕಣ್ಣಿಟ್ಟಿದ್ದಾರೆ. ಜೊತೆಗೆ ದಕ್ಷಿಣ ಭಾರತದಲ್ಲೂ ತಮ್ಮ ಮಾರುಕಟ್ಟೆಯನ್ನು ಭದ್ರಪಡಿಸಿಕೊಳ್ಳುತ್ತಿದ್ದಾರೆ. ತೆಲುಗು ರಾಜ್ಯಗಳಲ್ಲಿ ಅವರ ಸಿನಿಮಾ ಖಂಡಿತಾ ಭರ್ಜರಿ ಓಪನಿಂಗ್ ಪಡೆದುಕೊಳ್ಳುತ್ತದೆ. ಅದೇ ರೀತಿ, ತಮಿಳುನಾಡಿನಲ್ಲೂ ಧೂಳೆಬ್ಬಿಸಲು ಅವರು ಸಜ್ಜಾಗಿದ್ದಾರೆ.
ತಮಿಳಿಗೂ ಡಬ್ ಆಗಿ ಈ ಸಿನಿಮಾ ರಿಲೀಸ್ ಆಗುತ್ತಿದೆ. ತಮಿಳುನಾಡಿನಲ್ಲಿ ವಿಜಯ್ ದೇವರಕೊಂಡ ಅವರಿಗೆ ಅಪಾರ ಅಭಿಮಾನಿಗಳು ಇದ್ದಾರೆ. ಆ ಕಾರಣದಿಂದ ಅವರು ಚೆನ್ನೈಗೆ ಹೋಗಿ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಈ ಸಂದರ್ಭದ ಫೋಟೋಗಳು ವೈರಲ್ ಆಗಿವೆ. ಆಗಸ್ಟ್ 25ರಂದು ‘ಲೈಗರ್’ ಚಿತ್ರ ತೆರೆಕಾಣಲಿದೆ.
#VD @TheDeverakonda calls #Liger a maranamass cinema which audience will surely enjoy. He says his Tamil speaking skills were pretty good during NOTA days. He says he’s very happy to be back in Chennai.. pic.twitter.com/VSNxOdGd4M
— Kaushik LM (@LMKMovieManiac) August 13, 2022
‘ಲೈಗರ್’ ಸಿನಿಮಾದ ಹಾಡುಗಳು ಮತ್ತು ಟ್ರೇಲರ್ ಈಗಾಗಲೇ ದೊಡ್ಡ ಸಂಚಲನ ಮೂಡಿಸಿವೆ. ಅದನ್ನು ಗಮನಿಸಿದರೆ ಬಾಕ್ಸ್ ಆಫೀಸ್ನಲ್ಲಿ ಈ ಸಿನಿಮಾ ದಾಖಲೆ ಪ್ರಮಾಣದಲ್ಲಿ ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ. ವಿಜಯ್ ದೇವರಕೊಂಡ ಅವರ ವೃತ್ತಿಜೀವನಕ್ಕೆ ಈ ಚಿತ್ರ ಭಾರಿ ಮೈಲೇಜ್ ನೀಡಲಿದೆ ಎಂದು ಅಂದಾಜಿಸಲಾಗುತ್ತಿದೆ.