Literature: ಅನುಸಂಧಾನ; ‘ನೋಟವು ಶಬ್ದಗಳಿಗಿಂತ ಮೊದಲು ತೊಡಗುತ್ತದೆ’ | Anusandhana Column Meander Spiral Explode of Jane Alison by Narendra Pai


Literature: ಅನುಸಂಧಾನ; ‘ನೋಟವು ಶಬ್ದಗಳಿಗಿಂತ ಮೊದಲು ತೊಡಗುತ್ತದೆ’

ಲೇಖಕಿ ಜೇನ್ ಆಲಿಸನ್

ಅನುಸಂಧಾನ | Anusandhaana : ಜೇನ್ ಅಲಿಸನ್ (Jane Alison) ಅವರ Meander, Spiral, Explode (Design and Pattern in Narrative) ಕೃತಿಯಲ್ಲಿ ಸಾಹಿತ್ಯ ಕೃತಿಯೊಂದು ತನ್ನ ನಿರೂಪಣಾ ವಿಧಾನದ ಹತ್ತು ಹಲವು ಪಟ್ಟುಗಳಿಂದ, ಅಂದರೆ ಅದರ ಭಾಷೆ, ಭಾಷೆಯ ಲಯ, ನಿರ್ದಿಷ್ಟ ಶಬ್ದದ ಬಳಕೆ, ಕಥನದ ಗೊತ್ತಿರುವ ವಿವರವನ್ನು ಹಿಡಿದಿಟ್ಟುಕೊಂಡು ಬಿಚ್ಚುತ್ತ ಹೋಗುವ ತಂತ್ರ, ಓದುಗನ ಮೆದುಳನ್ನು ನಿಯಂತ್ರಿಸುತ್ತಾ ಅವನನ್ನು ಯಾವುದಕ್ಕೋ ಸಜ್ಜುಗೊಳಿಸಿ ಪರವಶಗೊಳಿಸುವ ಮೋಡಿಕಾರಕ ಶೈಲಿ, ಪಂಚೇಂದ್ರಿಯಗಳಿಗೂ ಒಂದು ಅನುಭವವನ್ನು ಭಾಷೆಯ ಮೂಲಕವೇ ತಲುಪಿಸಲು ಒಬ್ಬ ನಿರೂಪಕ ಪಡುವ ಪಡಿಪಾಟಲು ಎಂದೆಲ್ಲ ವಿವರವಾಗಿ ನಿರ್ದಿಷ್ಟ ಸಾಹಿತ್ಯ ಕೃತಿಗಳ ಸ್ಪಷ್ಟ ಸಾಕ್ಷ್ಯದೊಂದಿಗೆ ವಿವರಿಸುತ್ತ ಹೋಗುತ್ತಾರೆ. ಅವರ ಹಲವಾರು ವರ್ಷಗಳ ಅಧ್ಯಯನ ಮತ್ತು ಅಧ್ಯಾಪನದ ಅನುಭವವೇ ಇಲ್ಲಿ ಹರಳುಗಟ್ಟಿರುವುದನ್ನು ಗಮನಿಸಬಹುದು. ಕೃತಿಯ ಹೆಸರಿನಲ್ಲಿ ಆಕೆ ಮೂರನ್ನು ಮಾತ್ರ ಹೆಸರಿಸಿದ್ದರೆ ಉಳಿದ ನೂರನ್ನು ಕೃತಿಯ ಒಳಪುಟಗಳು ತೆರೆದಿಡುತ್ತ ಹೋಗುತ್ತವೆ. ಓದುಗರ ಬೆವರಿಳಿಸಬಲ್ಲ ಅಪರೂಪದ ಕೃತಿಯಿದು. ಈ ಕೃತಿಯ ಪ್ರವೇಶಿಕೆಯ ಒಂದೆರಡು ಸೊಲ್ಲು ಇಲ್ಲಿವೆ.
ನರೇಂದ್ರ ಪೈ, ಲೇಖಕ, ಅನುವಾದಕ (Narendra Pai)

(ಸಂಧಾನ 3)

ಸಿಕ್ಕಾಪಟ್ಟೆ ವೈಭವದ, ಚಿತ್ರವಿಚಿತ್ರ ಪೀಠೋಪಕರಣಗಳನ್ನು ರೂಪಿಸುತ್ತಿದ್ದ, ತೀರ ಅಪರೂಪಕ್ಕೆಂಬಂತೆ ಮನೆಗಳನ್ನು ಡಿಸೈನ್ ಮಾಡುತ್ತಿದ್ದ ಐರಿಷ್ ಡಿಸೈನರ್ ಎಲೀನ್ ಗ್ರೇ ಎಂಬಾಕೆ 1926ರಲ್ಲಿ ಫ್ರಾನ್ಸ್‌ನ ದಕ್ಷಿಣ ಕಡಲ ತೀರದಲ್ಲಿ ಹಡಗಿನಾಕೃತಿಯ ಒಂದು ಮನೆಯನ್ನು ನಿರ್ಮಿಸತೊಡಗಿದಳು. ಪರಿಣಾಮ, ಹೆಸರಾಂತ ಆರ್ಕಿಟೆಕ್ಟ್ ಲೆ ಕಾರ್ಬ್ಯುಸಿರ್ ಇವಳ ಕಾಟಕ್ಕೆ ತಲೆಕೆಟ್ಟು ಕೂತ. ಆ ಹೊತ್ತಿಗಷ್ಟೇ ಕಾರ್ಬೂ ಎಲ್ಲೋ ಒಂದೆಡೆ, ‘ಮನೆ ಎಂಬುದು ವಾಸಿಸುವುದಕ್ಕಿರುವ ಒಂದು ತಾಂತ್ರಿಕ ವ್ಯವಸ್ಥೆ’ ಎಂಬರ್ಥದ ಹೇಳಿಕೆಯನ್ನು ಕೊಟ್ಟಿದ್ದನಷ್ಟೇ. ಆದರೆ ಗ್ರೇಯ ವಿಚಾರ ಬೇರೆ ಹಾದಿಯಲ್ಲಿ ಹರಿದಿತ್ತು, ನೊ, ಮನೆಯೆಂಬುದು ಅವಳಿರುವ ಗರ್ಭ, ಅವಳ ಜೀವ ಚೈತನ್ಯ ಸುಪ್ತವಾಗಿರುವ ಮೊಟ್ಟೆ, ಅವಳ ಮೈಗಂಟಿದ ಚರ್ಮ, ಅವಳ ಬದುಕಿನ ಗತಿಗೆ ಅದರ ಲಯವಿನ್ಯಾಸ ಹೊಂದುವಂತಿರಬೇಕು.

ಮನೆಯ ಡಿಸೈನಿಂಗ್ ಪ್ರಾರಂಭಿಸುವ ಮುನ್ನ ಗ್ರೇ, ಅವಳು ಮತ್ತು ಅವಳ ಮನೆಯ ಕೆಲಸದಾಕೆ ಇಡೀ ದಿನ ಮನೆಯೊಳಗೆ ಓಡಾಡುವ ವಿಧಾನವನ್ನು ಅಭ್ಯಾಸ ಮಾಡತೊಡಗಿದಳು. ಕೋಣೆಯಿಂದ ಕೋಣೆಗೆ ಅವರ ಚಲನೆಯ ವಿಧಾನವನ್ನು ಅನುಸರಿಸಿ ಡಯಗ್ರಾಮ್ ರೂಪಿಸಿಕೊಂಡಳು. ಅದರ ಜೊತೆ ಜೊತೆಗೇ ಸೂರ್ಯನ ಚಲನೆ, ಗಾಳಿಯ ಚಲನೆ, ಕಿಚನ್ನಿನಲ್ಲಿ ಎಲ್ಲಿ ಹಾದಿ ತೆರೆದಿದ್ದರೆ ಚೆನ್ನ, ಕಿಟಕಿ ಎಲ್ಲಿರಬೇಕು (ಅಲ್ಲಿ ದಪ್ಪನೆಯ ಗೆರೆ), ಎಲ್ಲಿ ತಿರುವು, ಲಿವಿಂಗ್ ರೂಮಿನ ಎಲ್ಲೆಲ್ಲಿ ಸುರುಳಿ – ಒಟ್ಟಾರೆ ಒಂದು ಜೈವಿಕ ರಂಗಚಲನೆ. ಕಡಲಿಗೆದುರಾಗಿ ಬಂಡೆಗಳ ಮೇಲೆ ಅವಳು ಹಾಗೆ ಕಟ್ಟಿದ ಮನೆ ನಂತರ ಈ ರಂಗಚಲನೆಯ ಜೀವಂತ ಅಭಿವ್ಯಕ್ತಿಯಾಗಿತ್ತು. ಬಾಯಿಯಂಥ ದ್ವಾರ ನಿಮ್ಮನ್ನು ತನ್ನೊಳಗೆ ಸೆಳೆಯುತ್ತಿತ್ತು. ತೆರೆಗಳು, ಕನ್ನಡಿಗಳು ಗೋಡೆಯಿಂದ ರೆಕ್ಕೆಯಂತೆ ತೆರೆದುಕೊಳ್ಳುತ್ತಿದ್ದವು. ಕಿಟಕಿಗಳೂ, ಮುಚ್ಚುಗಿಂಡಿಗಳು ಎಲ್ಲಾ ಕಡೆಯೂ ಕಾಲಕ್ಕೆ ಸರಿಯಾಗಿ ತಕ್ಕುದಾದ ದಿಕ್ಕಿನಿಂದ ಎಷ್ಟು ಬೇಕೋ ಅಷ್ಟು ಗಾಳಿ, ಬೆಳಕು ಬರುವಂತೆ, ದಿನದ ಯಾವ ಸಮಯದಲ್ಲಾದರೂ ಹೊರಗಿನ ನೋಟ ಸಿಗುವಂತೆ ತೆರೆದುಕೊಳ್ಳುತ್ತಿದ್ದವು. ಆಕೆಯ ನೀಲಿನಕ್ಷೆಯೇನಿತ್ತು, ಅದು ನೀವು ಆ ಮನೆಯಲ್ಲಿ ಓಡಾಡಬಹುದಾದ, ನೋಡಬಹುದಾದ ಮತ್ತು ಬದುಕಬಹುದಾದ ಬಗೆಯನ್ನು ತೋರುತ್ತಿದ್ದವು. ಮನೆ ಕಟ್ಟಿ ಮುಗಿದಾಗ ಈ ರೇಖೆಗಳೆಲ್ಲಾ ಅಲ್ಲಿ ಒಂದು ಹೊಸ ವಿನ್ಯಾಸವಾಗಿ ಬದಲಾದವು.

TV9 Kannada


Leave a Reply

Your email address will not be published.