Literature: ನೆರೆನಾಡ ನುಡಿಯೊಳಗಾಡಿ; ಆ ನರನಾರಿಯರ ಕೈಯಲ್ಲಿ ಕಟ್ಟಿಗೆ, ಕಲ್ಲು, ಮೂಳೆಗಳ ಕೈದುಗಳಿವೆ | NereNaada Nudiyolagaadi Short Story Collection of Rahul Sankrityayana Volga Ganga Translated by BM Sharma Hindi Story Nisha Literature Volga Ganga


Literature: ನೆರೆನಾಡ ನುಡಿಯೊಳಗಾಡಿ; ಆ ನರನಾರಿಯರ ಕೈಯಲ್ಲಿ ಕಟ್ಟಿಗೆ, ಕಲ್ಲು, ಮೂಳೆಗಳ ಕೈದುಗಳಿವೆ

ಲೇಖಕ ರಾಹುಲ ಸಾಂಕೃತ್ಯಾಯನ ಮತ್ತು ಅನುವಾದಕ ಬಿ. ಎಂ. ಶರ್ಮಾ

ನೆರೆನಾಡ ನುಡಿಯೊಳಗಾಡಿ : NereNaada Nudiyolagaadi ; ‘‘ಅಗ್ನೀ, ಅಗ್ನೀ… ಇಲ್ಲಿ ಬಾ ಮಗು. ಇಲ್ಲಿ ಬಾ!’’ ಇನ್ನೂ ಎದ್ದು ಹೆಜ್ಜೆಯಿರಿಸತೊಡಗಿದ್ದಿಲ್ಲ ಆ ಮಗು. ಅಜ್ಜಿ ಕರೆದುದನ್ನು ಕೇಳಿ ಆ ಎಂಟು ವರ್ಷದ ಹುಡುಗ ಮಗುವನ್ನೆತ್ತಿ ಆಕೆಯ ಬಳಿ ಕೊಂಡೊಯ್ದ. ಹುಡುಗನ ಕೇಶವೂ ಮಗುವಿನ ತಲೆ ಕೂದಲಿನದಂತೆಯೇ ಹಳದಿ. ಬತ್ತಲೆ ಮೈಯೂ ಹಾಗೆಯೇ ಗೌರವರ್ಣ. ಅಲ್ಲಲ್ಲಿ ಮೈಮೇಲೆ ಕೆಸರು ಒಣಗಿ ಹಿಡಿದು ಕಪ್ಪಾಗಿ ತೋರುವುದು. ಹುಡುಗ ಮಗುವನ್ನು ಅಜ್ಜಿಯ ಬಳಿಯಲ್ಲಿ ಬಿಡುತ್ತಾ ಹೀಗೆಂದ. ‘‘ಅಜ್ಜಿ , ಅಗ್ನಿಯ ಕೈಯಲ್ಲಿದ್ದ ಎಲುಬನ್ನು ರೋಚನಾ ಕಸಿದುಕೊಂಡಳು. ಅದಕ್ಕೆ ಅಗ್ನಿ ಅಳುತ್ತಿದ್ದಾನೆ.’’ ಮತ್ತೆ ಆ ಹುಡುಗ ಅಲ್ಲಿಂದ ಹೊರಟು ಅತ್ತ ಸರಿದ. ಮುದುಕಿ ತನ್ನ ಕೊರಡು ಕೈಗಳಿಂದ ಮಗುವನ್ನೆತ್ತಿಕೊಂಡಳು. ಈಗಲೂ ಅಳು ನಿಲ್ಲಿಸಿರಲಿಲ್ಲ ಆ ಕೂಸು. ಕಣ್ಣೀರಿನ ಧಾರೆ ಇಳಿದು ಮಗುವಿನ ಕೆಸರು ತುಂಬಿದ ಕೆನ್ನೆಯಲ್ಲಿ ಕೆಂಪು ಗೆರೆಯೆಳೆದಂತಾಗಿದೆ. ಮಗುವನ್ನು ಮುದ್ದಿಸುತ್ತಾ ಆ ಮುದುಕಿ ‘‘ನೀನಳಬೇಡ ಅಗ್ನಿ! ರೋಚನೆಗೆ ಹೊಡೆಯುತ್ತೇನೆ ನಾನು’’ ಎನ್ನುತ್ತಾ ರಕ್ತ ಮಾಂಸ ಆರಿ ಹೋಗಿ ಕೊರಡು ಕಟ್ಟಿದ ಕೈಯಿಂದ ನೆಲಕ್ಕೆ ಹೊಡೆದಳು. ಅಗ್ನಿಯ ‘ಊ ಊ’ ಇನ್ನೂ ನಿಲ್ಲಲಿಲ್ಲ. ಕಂಬನಿಯೂ ಹಾಗೆಯೇ ಹರಿಯುತ್ತಿತ್ತು.

ಕಥೆ : ನಿಶಾ (ಕ್ರಿ. ಪೂ. 6000) | ಹಿಂದಿ ಮೂಲ : ರಾಹುಲ ಸಾಂಕೃತ್ಯಾಯನ | ಕನ್ನಡಕ್ಕೆ : ಬಿ. ಎಂ. ಶರ್ಮಾ | ಕೃತಿ ಸೌಜನ್ಯ :  ‘ವೋಲ್ಗಾ ಗಂಗಾ’ ನವಕರ್ನಾಟಕ ಪ್ರಕಾಶನ

(ಭಾಗ 2)

ಮುದುಕಿ ತನ್ನ ಕೊಳಕು ಅಂಗೈಯಿಂದ ಮಗುವಿನ ಕಣ್ಣೀರನ್ನೊರೆಸುತ್ತ ಕೆನ್ನೆಗಳ ಕೆಂಪು ಗೆರೆಗಳನ್ನು ಕಪ್ಪಗಾಗಿಸಿದಳು. ಮತ್ತೂ ಅಳುತ್ತಲೇ ಇದ್ದ ಅಗ್ನಿಯನ್ನು ಸುಮ್ಮನಾಗಿಸಲೆಂದು ಆಕೆ ಒಣ ತೊಗಲಿನೊಳಗಿಂದ ಮೇಲೆದ್ದು ಕಾಣುವ ಎದೆಯ ಎಲುಬು ಗೂಡಿನ ಮೇಲೆ ಉದ್ದ ಕುಂಬಳ ಕಾಯಿಯಂತೆ ಅತ್ತಿತ್ತ ಹೊರಳಾಡುವ ಮೊಲೆಯನ್ನು ಅವನ ಬಾಯಿಗಿಟ್ಟಳು. ಹಾಲಿಲ್ಲದ ಮೊಲೆಯನ್ನು ಚೀಪತೊಡಗಿದ ಅಗ್ನಿ ಅಳು ನಿಲ್ಲಿಸಿದ. ಅಷ್ಟರಲ್ಲಿ ಹೊರಗೆ ಯಾರೋ ಮಾತಾಡುವುದು ಕೇಳಿಸಿತು. ಅಗ್ನಿ ಹೊರನೋಡಿದ. ಆಗಲೇ ಯಾರದೋ ಇನಿದನಿ :

‘‘ಅಗ್ನೀ!’’
ಮತ್ತೆ ಅಗ್ನಿಯ ಅಳು ಆರಂಭವಾಯಿತು. ಸ್ತ್ರೀಯರಿಬ್ಬರು ಗುಹೆಯೊಳಗೆ ಬಂದು ತಲೆಯ ಮೇಲಿನ ಸೌದೆಯ ಹೊರೆಯನ್ನೆಲ್ಲ ನೆಲದ ಮೇಲೊಗೆದರು. ಒಬ್ಬಳು ಅಗ್ನಿಯ ಬಳಿಗೂ, ಇನ್ನೊಬ್ಬಳು ರೋಚನೆಯ ಬಳಿಗೂ ಸರಿದರು. ಅಳುತ್ತಲೇ ಅಗ್ನಿ ‘ಅಮ್ಮಾ, ಅಮ್ಮಾ!’ ಎಂದು ಕರೆದ. ಎದೆಯ ಮೇಲೆ ಕಟ್ಟಿಕೊಂಡಿದ್ದ ಬಿಳಿ ರೋಮ ತುಂಬಿದ ತೊಗಲನ್ನು ಬಿಡಿಸಿ ತೆಗೆದು ಕೆಳಗಿಟ್ಟಳು ಆ ಯುವತಿ. ಚಳಿಗಾಲದಲ್ಲಿ ತಿನಿಸು ದೊರಕುವುದು ತುಸು ಕಡಿಮೆಯಾದುದರಿಂದ ಆಕೆಯ ಮೈಯಲ್ಲಿ ಮಾಂಸ ಕಡಿಮೆಯಾಗಿದ್ದರೂ ಅಸಾಧಾರಣ ಸೌಂದರ್ಯವಿತ್ತು. ಆಕೆಯ ಕೆಸರು ತುಂಬಿದ ಸ್ತನಗಳ ಕೆಂಪು ಬಿಳಿ ಛಾಯೆ, ಹಣೆಯ ಮೇಲೆಲ್ಲ ಹರಡಿದ ನಸುಬಿಳಿಗೂದಲು, ಅಲ್ಪ ಮಾಂಸದ ಪೃಥುಲ ವಕ್ಷಸ್ಥಳದಲ್ಲಿನ ಶ್ಯಾಮಲ ಮುಖದ ವೃತ್ತ ಕುಚಗಳು, ಬಡ ನಡು, ಮಧ್ಯಮ ಪರಿಮಾಣದ ಪುಷ್ಟ ನಿತಂಬ, ವೇಗದಿಂದೋಡುವುದರಲ್ಲಿ ತುಂಬಾ ನುರಿತ ಹಿಮ್ಮಡಿಗಳು – ಎಲ್ಲವೂ ಅಚ್ಚುಕಟ್ಟು.

ಹರೆಯ ಹದಿನೆಂಟರ ಆ ಜವ್ವನೆ ತನ್ನೆರಡು ಕೈಗಳಿಂದಲೂ ಅಗ್ನಿಯನ್ನೆತ್ತಿ ಮೋರೆಯ ಮೇಲೆ, ಕಣ್ಣುಗಳಿಗೆ ಎಲ್ಲಾ ಮುತ್ತು ಕೊಟ್ಟಳು. ಆಗ ಅಳುವುದನ್ನೆ ಮರೆತ ಅಗ್ನಿ. ಅವನ ಕೆಂಬಣ್ಣದ ತುಟಿಗಳೆಡೆಯಿಂದ ಬೆಳ್ಳನೆಯ ಹಲ್ಲುಗಳು ಹೊರ ತೋರಿ ಹೊಳೆಯುತ್ತಿವೆ. ಕಣ್ಣು ಅರೆತೆರೆದಿವೆ. ಕೆನ್ನೆಗಳಲ್ಲಿ ಅಲ್ಲಲ್ಲಿ ಕುಳಿ ಬೀಳುತ್ತಿದೆ. ನೆಲದ ಮೇಲೊಗೆದ ಎತ್ತಿನ ತೊಗಲ ಮೇಲೆ ಕುಳಿತಳು ಆ ತರುಣಿ. ಮತ್ತೆ ತನ್ನ ಕೋಮಲ ಕುಚಗಳನ್ನು ಅಗ್ನಿಯ ಬಾಯಿಗಿತ್ತಳು. ಅಗ್ನಿ ತನ್ನೆರಡು ಪುಟ್ಟ ಕೈಗಳಿಂದಲೂ ತಾಯಿಯ ಮೊಲೆಯನ್ನು ಹಿಡಿದುಕೊಂಡು ಹಾಲು ಹೀರತೊಡಗಿದ. ಆಗಲೇ ಇನ್ನೊಬ್ಬಳು ಜವ್ವನೆಯೂ ರೋಚನೆಯನ್ನೆತ್ತಿ ಬಳಿಯಲ್ಲಿಯೇ ಕುಳಿತಿದ್ದಳು. ಮುಖಗಳನ್ನು ನೋಡಿಯೇ ಅವರು ಅಕ್ಕ ತಂಗಿಯರೆಂದು ತಿಳಿಯಬಹುದು.

2
ಗುಹೆಯಲ್ಲಿ ಅವರೆಲ್ಲ ಹಾಗೆಯೇ ಇರಲಿ, ಹೊರಗೇನಾಗಿದೆಯೋ ನೋಡೋಣ ನಾವು. ಮಂಜಿನ ಮೇಲೆ ಹೆಜ್ಜೆಯಿರಿಸುತ್ತ ತೊಗಲು ಹೊದ್ದ ಹಲವು ವ್ಯಕ್ತಿಗಳು ಒಂದೇ ಕಡೆ ನಡೆಯುತ್ತಿವೆ. ಆ ಹೆಜ್ಜೆಗಳನ್ನನುಸರಿಸಿ ನಾವೂ ಮುಂದೊತ್ತೋಣ. ಈಗ ಆ ಹೆಜ್ಜೆಗಳೆಲ್ಲ ಸುತ್ತಿ ಬಂದು ಬೆಟ್ಟದ ಬದಿಯ ಅಡವಿಗೆ ಮುಟ್ಟಿದುವು. ನಾವು ವೇಗದಿಂದಲೇ ನಡೆಯುವೆವು. ಆದರೂ ಅವರ ಹೆಜ್ಜೆ ಇನ್ನೂ ಮುಗಿಯಲಾರವು. ಒಮ್ಮೆ ನಾವೀಗ ಮಂಜಿನ ಬಯಲಲ್ಲಿ ನಡೆಯುವೆವು. ಇನ್ನೊಮ್ಮೆ ಕಾಡಿನೊಳಗಿನ ಹೊನಲನ್ನು ಹಾಯ್ದು ಇನ್ನೊಂದು ಹಿಮಕ್ಷೇತ್ರಕ್ಕೆ ಕಾಲಿರಿಸುವೆವು. ಮತ್ತೆ ಬೇರೊಂದಡವಿ. ಹೀಗೆ ನಡೆ ನಡೆದು ಕಡೆಗೆ ಮರಮಟ್ಟುಗಳಿಲ್ಲದ ಬೆಟ್ಟದೆಡೆಯ ಬೇರೊಂದು ಬದಿಯ ತಗ್ಗಿನಲ್ಲಿ ಹೋಗಿ ನಿಲ್ಲುವುದು ನಮ್ಮ ನೋಟ. ಅಲ್ಲಿಯ ಶ್ವೇತ ಹಿಮನೋಟ ನೀಲಾಕಾಶದೊಡನೆ ಸಂಧಿಸಿದಂತೆ ಕಾಣುವುದು ನಮಗೆ. ಅಲ್ಲೇ ನಾವು ಅನುಸರಿಸಿ ಬಂದ ನಗ್ನ ಮೂರ್ತಿಗಳು ಬೆಟ್ಟದ ಬುಡದಲ್ಲಿ ಲೀನವಾಗುತ್ತವೆ. ಅವರ ಹಿಂದೆ ನೀಲ ಬಣ್ಣದ ಬಾನಿಲ್ಲದಿರುತ್ತಿದ್ದರೆ ನಾವವರನ್ನು ದಿಟ್ಟಿಸಲಾಗುತ್ತಿದ್ದಿಲ್ಲ. ಅವರ ಮೈಮೇಲೆಯೂ ಮಂಜಿನಂತೆ ಶ್ವೇತ ಚರ್ಮದ ಹೊದಿಕೆಗಳು. ಕೈಯ ಕೈದುಗಳೂ ಬೆಳ್ಳಂಬೆಳ್ಳಗಾಗಿ ಹೊಳೆಯುತ್ತಿವೆ. ಹೀಗೆ ಎಲ್ಲಾ ಶ್ವೇತವರ್ಣ. ಆಗಸವೊಂದು ಮಾತ್ರ ನೀಲವರ್ಣ, ಮತ್ತೆ ಆ ಮಹಾ ಹಿಮ ಕ್ಷೇತ್ರದಲ್ಲಿ ಚಲಿಸುತ್ತಿರುವ ಶ್ವೇತಮಾನವ ಮೂರ್ತಿಗಳನ್ನು ಗುರುತಿಸುವುದಾದರೂ ಹೇಗೆ ?

TV9 Kannada


Leave a Reply

Your email address will not be published.