Short Story of N.S. Madhavan : ‘ಯಾವತ್ತಾದರೂ ಸಮಯ ಸಿಕ್ಕಿದಾಗ ನನ್ನ ಕೋಣೆಗೆ ಬಾ. ಇಂಟರ್ನೆಟ್ಟಿನ ಬ್ಲಾಗ್ ಸೈಟಲ್ಲಿ ನನ್ನ ಲಘು ಜೀವನ ಚರಿತ್ರೆ ಕೊಟ್ಟಿದ್ದೇನೆ. ನಾನು ಯಾರೂಂತ ಗೊತ್ತಾಗದಿರಲೆಂದು ಸ್ವಲ್ಪ ಸುಳ್ಳುಗಳನ್ನು ಹೇಳಿದ್ದರೂ ಹೆಚ್ಚು ಕಡಿಮೆ ಸರೀನೇ ಇದೆ’.
ನೆರೆನಾಡ ನುಡಿಯೊಳಗಾಡಿ | NereNaada Nudiyolagaadi : ಇರಾಕಿಗೆ ಮಿಲಿಟರಿ ಪ್ರವೇಶಿಸುವುದಕ್ಕಿಂತ ಮೊದಲನೆಯ ದಿನ ಕ್ಯಾಂಪಿನಲ್ಲಿ ಭಾರೀ ಔತಣ ಏರ್ಪಾಡಾಗಿತ್ತು. ಕುವೈಟಿನ ಒಂದು ಹೋಟೆಲಿನಿಂದ ಬ್ಯಾಂಡಿನವರು ಬಂದಿದ್ದರು. ಮಿಲಿಟರಿಯವರು ಸೆಲ್ಫೋನಿನ ಮೂಲಕವೂ ಸೆಟ್ಲೈಟ್ ಫೋನಿನ ಮೂಲಕವೂ ಅವರ ಮನೆಯವರೊಂದಿಗೂ ನಲ್ಲನಲ್ಲೆಯರೊಂದಿಗೂ ದೀರ್ಘ ಕಾಲ ಮಾತನಾಡಿದರು. ಪಾಡಿಗೆ ಅವರು ಹೇಳುವುದೆಲ್ಲ ಅರ್ಥವಾಗತೊಡಗಿತ್ತು. ಸದ್ಯದಲ್ಲೇ ತಾವು ಅಗಲಿದವರನ್ನು ಮತ್ತೆ ಸೇರುವೆವೆಂಬ ರೀತಿಯಲ್ಲಾಗಿತ್ತು ಅವರೆಲ್ಲರ ಮಾತುಕತೆ. ರೋಜರ್, ಪಾಡಿಯನ್ನು ಜೊತೆಗೆ ಕುಳಿತು ಊಟ ಮಾಡೋಣವೆಂದು ಕರೆದ. ಆತನ ಜೊತೆಗೆ ಆಸ್ಕರ್ ಮಾರ್ಗನ್ಸ್ಟೆನ್ ಎಂಬ ಹೆಸರಿನ, ಕೃಶನಾದ, ಹೆಚ್ಚು ಎತ್ತರವಿಲ್ಲದ, ನೀಲಿ ಕಣ್ಣುಗಳ ಒಬ್ಬಾತ ಗೂಢಚಾರ ಬಿಳಿಯರವನೂ ಇದ್ದ. ‘ಪಾಡಿ’ ರೋಜರ್ ಹೇಳಿದ, ‘ನೀನೂ ನಾನೂ ತಲೆಕೂದಲನ್ನು ಕುಂಬಾರನ ಆವೆ ಮಣ್ಣಿನಂತೆ ಕಾಣುವವರು. ನಾವು ಕಲಾವಿದರು, ಕೇಶ ವಿನ್ಯಾಸಕಾರರು. ಹಾಗಿದ್ದೂ ಸೈನ್ಯದ ಶಿಸ್ತಿನಿಂದ ನಾವು ಕೂದಲು ಕತ್ತರಿಸುತ್ತೇವೆ. ನಮ್ಮ ಕಲೆಯನ್ನು ನಾವು ಅತ್ಯಾಚಾರಕ್ಕೊಳಪಡಿಸುತ್ತಿದ್ದೇವೆ.’ ರೋಜರ್ ಸ್ವಲ್ಪ ಹೊತ್ತು ನಿಶ್ಶಬ್ದವಾಗಿ ಕುಳಿತ. ಆಸ್ಕರ್ ಆತನ ಕೆನ್ನೆಗೆ ಮುತ್ತಿಟ್ಟ.
ಕಥೆ : ಕ್ಷೌರಿಕ | ಮಲಯಾಳಂ : ಎನ್.ಎಸ್. ಮಾಧವನ್ | ಕನ್ನಡಕ್ಕೆ : ನಾ ದಾಮೋದರ ಶೆಟ್ಟಿ | ಸೌಜನ್ಯ : ದೇಶಕಾಲ, ಸಾಹಿತ್ಯ ಪತ್ರಿಕೆ
(ಭಾಗ 3)
‘ರೋಜರ್, ವಿಮಾನಗಳು ಇರಾಕಿನ ಮೇಲೆ ಕ್ವಿಂಟಲ್ ಲೆಕ್ಕದಲ್ಲಿ ಬಾಂಬ್ ಸುರಿಸುತ್ತವೆ. ನಾಳೆ ನಾವು ಆ ಕಡೆ ದಾಟಿದರೆ ಮತ್ತೂ ಅವರನ್ನು ಸಾಲಾಗಿ ನಿಲ್ಲಿಸಿ ಕೂದಲು ಕತ್ತರಿಸ್ಬೇಕಾ?’ ಪಾಡಿ ಕೇಳಿದ.
‘ತುಂಬ ಕತ್ತರಿಸಬೇಕಾಗಿ ಬರ್ಲಿಕ್ಕಿಲ್ಲ. ಹೆಚ್ಚಿನದೂ ಅತ್ಯಾಚಾರ’
‘ಅತ್ಯಾಚಾರ? ಹಾಗಂದ್ರೆ?’
‘ಕೂದಲು ಕತ್ತರಿಸುವ ಕೆಲಸ ಕಡಿಮೆ. ಗಾಯಗೊಂಡ ಸೈನಿಕರ ಶರೀರ ಭಾಗಗಳನ್ನು ಶಸ್ತ್ರಕ್ರಿಯೆಗಿಂತ ಮೊದಲು ಶೇವ್ ಮಾಡಬೇಕಾಗುತ್ತದೆ. ಕೆಲವೊಮ್ಮೆ…’
‘ಕೆಲವೊಮ್ಮೆ?’
‘ಏನಿಲ್ಲ’ ರೋಜರ್ ಹೇಳಿದ.
‘ಕೆಲವೊಮ್ಮೆ’
‘ಕೆಲವೊಮ್ಮೆ, ಹಾಗಾಗುವ ಸಾಧ್ಯತೆ ಇರಬೇಕೆಂದಿಲ್ಲ. ಇದೊಂದು ಪುಟ್ಟ ಯುದ್ಧ. ಹಾಗಿದ್ದರೂ ಕೆಲವೊಮ್ಮೆ ಯುದ್ಧದಲ್ಲಿ ಸತ್ತವರ ದೇಹಗಳನ್ನು ಮರಳಿ ಅಮೇರಿಕಾಕ್ಕೆ ಕಳುಹಿಸುವುದಕ್ಕೆ ಮುನ್ನ ಶೇವ್ ಮಾಡಿಯೂ ಕೂದಲು ಬಾಚಿಯೂ ಚಂದ ಮಾಡಬೇಕಾಗಿಯೂ ಬಂದೀತು’.
ರೋಜರ್ ಆಸ್ಕರನ ತೋಳಿನಲ್ಲಿ ತಲೆಯಿಟ್ಟ. ಆಸ್ಕರ್ ಆತನ ತುಟಿಗಳನ್ನು ಚುಂಬಿಸಿದ. ಚುಂಬನ ದೀರ್ಘವಾದಾಗ ಪಾಡಿ ಗಾಬರಿಗೊಂಡ. ಆತ ಕರೋಣ ಬಿಯರಿನ ಕುಪ್ಪಿಯ ಕತ್ತಿನಲ್ಲಿ ಒಂದು ತುಂಡು ನಿಂಬೆಹಣ್ಣನ್ನು ಇಳಿಬಿಟ್ಟ ಬಳಿಕ, ಕುಡಿಯುತ್ತಾ ಹೇಳಿದ, ‘ನಾನೂ ಮಾಡಿದ್ದೇನೆ’.
‘ಏನು?’ ಕೇಳಿದ್ದು ಆಸ್ಕರ್.
‘ಶವದ ಶೇವ್.’
ಬ್ಯಾಂಡ್ ಬಿರುಸಾಯಿತು. ನೃತ್ಯ ಮಾಡುತ್ತಿದ್ದವರ ಪದಗತಿ ಬಿರುಸುಗೊಂಡಿತು. ಅಮೇರಿಕನ್ ಸೈನ್ಯದಲ್ಲಿನ ಹೆಂಗಸರ ಸಂಖ್ಯೆ ಪಾಡಿಗೆ ಅಚ್ಚರಿ ತಂದಿತು. ಒಮ್ಮೆಲೆ ಬೆಳಕು ನಂದಿತು. ಕುವೈಟಿನ ಗಡಿಯಲ್ಲಿ ವಿಮಾನ ಭೇದಕ ತೋಪುಗಳು ಸಿಡಿಯತೊಡಗಿದುವು. ದೂರದ ಬಾಂಬುಗಳ ಶಬ್ದ ಮಾಲೆ ಪಟಾಕಿಯದ್ದೆಂಬಂತ್ತಿತ್ತು. ಬೆಳಕು ಬಂದಾಗ ಸೈನಿಕರ ಮುಖವೆಲ್ಲ ಬಿಳಚಿಹೋಗಿತ್ತು.