Literature: ನೆರೆನಾಡ ನುಡಿಯೊಳಗಾಡಿ; ವೈರಿ ತನ್ನೊಂದಿಗೆ ನಿದ್ರಿಸುವಾಗ ರಾತ್ರಿಗಳನ್ನು ಕಳೆಯುವುದಾದರೂ ಹೇಗೆ? | NereNaada Nudiyolagaadi Malayalam short story of Santhosh Echikkanam Translated by KK Gangadharan


Literature: ನೆರೆನಾಡ ನುಡಿಯೊಳಗಾಡಿ; ವೈರಿ ತನ್ನೊಂದಿಗೆ ನಿದ್ರಿಸುವಾಗ ರಾತ್ರಿಗಳನ್ನು ಕಳೆಯುವುದಾದರೂ ಹೇಗೆ?

ಅನುವಾದಕ ಕೆ.ಕೆ. ಗಂಗಾಧರನ್, ಮಲಯಾಳದ ಕಥೆಗಾರ ಸಂತೋಷ ಏಚ್ಚಿಕಾನಂ

ನೆರೆನಾಡ ನುಡಿಯೊಳಗಾಡಿ | NereNaada Nudiyolagaadi : ನೀರುಹಾವು ಕತ್ತನ್ನು ಬಳ್ಳಿಗಳ ಸಂದಿಯಿಂದ ಕಲ್ಲಿನ ಮೇಲಕ್ಕೆ ಚಾಚಿತು. ‘ಸರಿ ಹಾಗಿದ್ದರೆ’ ಕಪ್ಪೆ ಸಿದ್ದವಾಯಿತು, ‘ಆದರೆ ನನ್ನ ನಂತರ ನೀನು ಯಾರನ್ನು  ತಿನ್ನುತ್ತೀಯ? ನಿನ್ನ ಹಸಿವನ್ನು ಹೇಳಿ ಕೊಲ್ಲುವುದಕ್ಕಾದರೂ ಒಬ್ಬರು ಇರುತ್ತಾರೆಯೆ? ಒಬ್ಬರ ಸಾವಿನಿಂದ ಮತ್ತೊಬ್ಬರಿಗೆ ಶಾಶ್ವತ ಪರಿಹಾರವಾಗುವುದಾದರೆ ನನ್ನ ಒಪ್ಪಿಗೆಯಿದೆ.’ ‘ನೋಡು, ಒಬ್ಬ ಮಾವನ ಮಗಳಂತೆ, ಆಹಾರಸರಪಳಿಯಲ್ಲಿ ಜೀವಶಾಸ್ತ್ರ ನನಗೆ ನಿನ್ನನ್ನು ಹೇಳಿಟ್ಟಿದ್ದಾರೆ’. ‘ನೀನು ಹೇಳುವ ಅಷ್ಟನ್ನೂ ನಾನು ಅಂಗೀಕರಿಸುತ್ತೇನೆ’. ಕಪ್ಪೆ ಮತ್ತೊಮ್ಮೆ ಭದ್ರವಾಗಿ ಕುಳಿತುಕೊಂಡಿತು, ‘ಬದುಕಿನ ವಿಶಾಲವಾದ ಹೊರ ಜಗತ್ತಿನಲ್ಲಿ ನಾವು ಪರಿಸ್ಥಿತಿಗೆ ಹೊಂದಿಕೊಂಡು ಸಮರಸದಿಂದ ಬದುಕೋಣ. ಜೀವಶಾಸ್ತ್ರದಂತೇ ಅಲ್ಲ ಜಗತ್ತಿನ ಎಲ್ಲಾ ನೀತಿನಿಯಮಗಳನ್ನು ಕಣ್ಮುಚ್ಚಿ ಅಂಗೀಕರಿಸೋಣ. ಆದರೆ ಇದು ಒಂದು ಗುಂಡಿ. ನಾವು ಸಿಕ್ಕಿಬಿದ್ದ ಗುಂಡಿ. ಹತ್ತುತ್ತಾ ಹೋದಂತೆ ಎಳೆದು ಕೆಳಕ್ಕೆ ಹಾಕುವ ಸತ್ತವನ ಕಣ್ಣುಗಳಂತೆ ಏಕಾಂತವಾದ ಒಂದು ಸ್ಥಳ. ಇದರಿಂದ ಹೇಗೆ ಪಾರಾಗುವುದು ಎಂಬ ಪ್ರಶ್ನೆಗೆ ಪರ್ಯಾಯವಾಗಿ ನನ್ನನ್ನು ನುಂಗುವುದೇ ಉತ್ತರವಾದರೆ ಹಾಗೆಯೇ ಅಗಲಿ.’

ಕಥೆ : ಉಭಯ ಜೀವನ | ಮಲಯಾಳ ಮೂಲ : ಸಂತೋಷ ಏಚಿಕಾನಂ | ಕನ್ನಡಕ್ಕೆ : ಕೆ.ಕೆ. ಗಂಗಾಧರನ್ 

(ಭಾಗ 2)

ಕಪ್ಪೆಯ ಮಾತುಗಳು ಅದರ ಹೊಟ್ಟೆಯ ಶೂನ್ಯತೆಯಲ್ಲಿ ಬಂದು ನಾಟಿತು. ನೀರುಹಾವು ಉಗಿಯಲೂ ಆಗದ ನುಂಗಲೂ ಆಗದ ತೀವ್ರ ಮಾನಸಿಕ ಸಂದಿಗ್ಧದಲ್ಲಿ ಸಿಲುಕಿತು.

ಬಾವಿಯ ಮೇಲೆ ತಣ್ಣನೆಯ ಗಾಳಿ ಬೀಸಿತು. ಅದರ ಒಂದು ಅಲೆ ಅರಳೀ ಮರದ ತುದಿಯನ್ನು ಸ್ಪರ್ಶಿಸಿತು. ಹೊತ್ತು ನಡುಹಗಲು ದಾಟಿದೆ. ಸ್ವಲ್ಪ ದೂರದಲ್ಲಿ ಒಂದು ಕಾರು ಹಾರ್ನ್ ಹೊಡೆಯುವುದು ಕೇಳಿಸಿತು. ಅದು ಒಂದು ಗೇಟಿನೊಳಕ್ಕೆ ಹೋಗುವ ಸಿದ್ಧತೆಯಲ್ಲಿತ್ತು. ಶಬ್ಧದ ಲಯ ವಿನ್ಯಾಸಗಳು ಅದೊಂದು ಬೆಲೆಬಾಳುವ ವಾಹನವೆಂಬುದನ್ನು ಧ್ವನಿಸುತ್ತಿತ್ತು. ಇಬ್ಬರು ಮಕ್ಕಳು ಒಟ್ಟಿಗೆ ಕರೆಯುವುದು ಕೇಳಿಸಿತು, ‘ಡ್ಯಾಡೀ’

ಅವರು ಅನಂತರ ಚಾಕ್ಲೆಟ್, ಹಲವು ರೀತಿಯ ಆಟದ ಸಾಮಾನುಗಳ ಕತೆ ಪುಸ್ತಕಗಳ ಹೆಸರುಗಳನ್ನು ಹೇಳುವುದು ಕೇಳಿಸಿತು.

ಆತ ಬೆಳಿಗ್ಗೆ ಆಫೀಸಿಗೆ ಹೊರಡುವಾಗ ಮಕ್ಕಳು ಏನೋ ಒಂದಷ್ಟನ್ನು ತರಲು ಹೇಳಿರಬಹುದು. ಪಾಪ ಕೆಲಸದ ಒತ್ತಡದಲ್ಲಿ ಅವನು ಅವೆಲ್ಲವನ್ನು ಮರೆತಿರಹುದು. ಅದಕ್ಕಾಗಿ ಮಕ್ಕಳಲ್ಲಿ ಅವನು ಕ್ಷಮೆ ಯಾಚಿಸುತ್ತಿದ್ದಾನೆ. ಪ್ರೀತಿ ವಾತ್ಸಲ್ಯ ತುಂಬಿದ ಹುಸಿ ಜಗಳದ ನಡುವೆ ಒಬ್ಬ ಮಹಿಳೆಯ ಸುಂದರವಾದ ನಗು ಹೊರ ಹೊಮ್ಮುತ್ತಿತ್ತು.

ಕಪ್ಪೆ ಹೇಳಿತು.

‘ಇಲ್ಲಿ ಸಮೀಪದಲ್ಲೇ ಒಂದು ಕುಟುಂಬ ವಾಸವಿದೆ’

ನೀರುಹಾವು ಮತ್ತೆ ಮೌನಾವಲಂಬಿಯಾಗಿರುವುದನ್ನು ಗಮನಿಸಿ, ಕಪ್ಪೆ ತನ್ನ ದೇಹದ ಮೇಲೆ ಯಾವುದೇ ಸ್ವಾರ್ಥವನ್ನೂ ಬಯಸದೆ ಒಬ್ಬ ವ್ಯಕ್ತಿಯಂತೆ ಹೇಳತೊಡಗಿತು.

‘ಗೆಳೆಯಾ, ನೀನು ಈಗಲೂ ನಿನ್ನ ಹಸಿವಿನ ಕುರಿತೇ ಯೋಚಿಸುತ್ತಿರುವೆಯೆಂದು ನನಗೊತ್ತು. ಆದರೆ ನಾಳೆ ಎಂಬ ಕಲ್ಪನೆ ಬದುಕನ್ನು ಚೇತೋಹಾರಿಯನ್ನಾಗಿ ಮಾಡುತ್ತದೆ. ಸದ್ಯದ ನಿನ್ನ ಹಸಿವಿಗೆ ಕ್ರಿಮಿ ಕೀಟಗಳಿವೆ. ನಿಧಾನವಾಗಿ ನೀನು ಹಸಿರು ಎಲೆಗಳನ್ನು ತಿನ್ನುವುದನ್ನು ರೂಢಿಸಿಕೊಳ್ಳುವೆ.’

TV9 Kannada


Leave a Reply

Your email address will not be published.