
ತೆಲುಗು ಕಥೆಗಾರ ಪಾಲಗುಮ್ಮಿ ಪದ್ಮರಾಜು, ಅನುವಾದಕ ರಾಜಣ್ಣ ತಗ್ಗಿ
Short Story of Palagummi Padmaraju : ಆ ಮೂರನೇ ಕಲಾಸು ಬೋಗೀಲಿ ಬಡವ್ರಿರ್ತಾರೆ. ಈ ಸಾಮಿಗಳ್ಗಿಂತ ಅವ್ರಿಗೇ ಜಾಸ್ತಿ ಕರುಣೆ. ನನ್ನ ಕಷ್ಟ ಅವ್ರಿಗೆ ಅರ್ಥವಾಯ್ತದೆ. ಈ ದುಡ್ಡಿರೊ ಸಾಮಿಗಳ್ದು ಕಲ್ಲೆದೆ ಅಂತ ತಿಳ್ಕೊಳ್ದೆ ವೋದ್ನಲ್ಲಪ್ಪ ದೇವ್ರೇ.
ನೆರೆನಾಡ ನುಡಿಯೊಳಗಾಡ | Nerenaada Nudiyolagaadi : ಗಾಳಿ ಕ್ರಮೇಣ ಭಯಂಕರವಾಗಿ ಬೀಸತೊಡಗಿತು. ದೊಡ್ಡ ದೊಡ್ಡ ಹನಿಗಳು ಧೋ ಎಂದು ರೈಲು ಬೋಗಿಯ ಮೇಲೆ ಬೀಳುತ್ತಿದ್ದವು. ಆ ಮಳೆಯ ಆರ್ಭಟದಲ್ಲಿ ರೈಲು ಚಲಿಸುತ್ತಿರುವ ಸದ್ದು ಕೂಡ ಮರೆಯಾಗಿತ್ತು. ರೈಲು ಚಲಿಸುತ್ತಿದೆ ಎಂಬುದನ್ನು ಅದರ ಕುಲುಕಿನಿಂದ ರಾವ್ ಗ್ರಹಿಸಿದರು. ‘ತುಫಾನಿನಂತೆ ಕಾಣುತ್ತಿದೆಯಲ್ಲ’ ಎಂದ ಯುವಕ ತನ್ನ ಹೆಂಡತಿಗೆ. ಆ ಯುವತಿ ಅದಕ್ಕೆ ಉತ್ತರಿಸದೆ ಒಂದು ರಗ್ಗನ್ನು ಎಳೆದುಕೊಂಡು ಹೊದ್ದುಕೊಂಡಳು. ಆಕೆಯ ಮುಖದಲ್ಲಿ ಯಾವುದೊ ದೊಡ್ಡ ಚಿಂತೆಯೊಂದು ಪ್ರತಿಫಲಿಸುತ್ತಿತ್ತು. ಗಾಳಿ ಮಳೆಯನ್ನು ಕಂಡು ರಾವ್ ಅವರ ಮನಸ್ಸಿನಲ್ಲಿ ನಡುಕ ಪ್ರಾರಂಭವಾಯಿತು. ರೈಲುಬೋಗಿಯ ಬಾಗಿಲು ತೆರೆದುಕೊಂಡಿತು. ಒಂದೇ ಸಲಕ್ಕೆ ಗಾಳಿ ಮತ್ತು ಮಳೆ ಎರಡೂ ತೂರಿಬಂದವು. ಹರಿದು ಹೋದ ಮತ್ತು ಒದ್ದೆಯಾದ ಬಟ್ಟೆ ಧರಿಸಿದ್ದ ಒಬ್ಬಾಕೆ ರೈಲುಬೋಗಿಯೊಳಕ್ಕೆ ಪ್ರವೇಶಿಸಿದಳು. ಒಳಗೆ ಕುಳಿತಿದ್ದವರು ಹೇಳುತ್ತಿದ್ದ ಅಭ್ಯಂತರಗಳನ್ನೂ ಲೆಕ್ಕಿಸದೆ ಬಾಗಿಲು ಮುಚ್ಚಿ ಒಂದು ಮೂಲೆಯಲ್ಲಿ ನೀರನ್ನು ಸುರಿಸುತ್ತ ನಿಂತುಕೊಂಡಳು. ಹಿರಿಯ ವ್ಯಕ್ತಿ ಅತಿಯಾದ ಕೋಪದಿಂದ ‘ಇದು ಗೌರವ ಮರ್ಯಾದೆ ಇರುವವರ ಬೋಗಿ ಅನ್ನೋದು ಗೊತ್ತಿಲ್ವಾ ?’ ಎಂದ.
ಕಥೆ : ಗಾಳಿ ಮಳೆ | ತೆಲುಗು ಮೂಲ : ಪಾಲಗುಮ್ಮಿ ಪದ್ಮರಾಜು | ಕನ್ನಡಕ್ಕೆ : ಟಿ.ಡಿ. ರಾಜಣ್ಣ ತಗ್ಗಿ
(ಭಾಗ 2)
‘ಅಯ್ಯಾ ಬುದ್ದಿ…! ತಾತ.. ತಾತ.. ಈ ತಿರುಪೆಯೋಳ ಮೇಲೆ ದಯೆ ತರ್ಸಿ ಇಲ್ಲಿ ಸೊಲ್ಪ ನಿಂತ್ಕಳಾಕೆ ಜಾಗ ಕೊಡಿ ಸಾಮಿ. ದಯಾಮಯ ಸ್ವಾಮ್ಗೋಳು… ಮಕ್ಳು ಮರಿ ಇರೋ ತಂದೆಯೋರು… ಈ ತಿರುಪೆಯೋಳ್ ಕೈಗೆ ಒಂದೆರಡು ಕಾಸು ಬಿಸಾಕಿ ಸಾಮಿ. ವೊಟ್ಟೆ ಹಸ್ವು ನನ್ನನ್ನು ಸುಟ್ಹಾಕ್ತಾ ಐತೆ ಸಾಮಿ. ಮರ್ಯಾದಸ್ಥ ಸ್ವಾಮ್ಗೋಳು… ದುಡ್ಡಿರೊ ಧಣಿಗಳು… ಎಲ್ರೂ ದೊಡ್ಡ ಪ್ರಭುಗಳೇ… ಈ ಬಡಭಿಕ್ಷುಕಿಯನ್ನು ಹಿಂಗೆ ಹಸಿವ್ನಿಂದ ಸಾಯೋಕೆ ಬಿಡಲ್ಲ ಸ್ವಾಮ್ಗೋಳು…’
ರಾವ್ ಅವರು ಆಕೆಯ ಕಡೆ ನೋಡಿದರು. ಆಕೆಯ ಕಣ್ಣಿನಲ್ಲಿ ತಮಾಷೆಯಂತೆ ಹೊಳೆಯುತ್ತಿದ್ದ ಒಂದು ಕಾಂತಿಯಿತ್ತು. ಆ ಕಾಂತಿಯು ರಾವ್ ಅವರ ಹೃದಯಲ್ಲಿ ವಿರೋಧಭಾವವನ್ನು ಕೆರಳಿಸಿತು. ಆಕೆಯ ವಯಸ್ಸು ಸುಮಾರು ಮೂವತ್ತರ ಆಸುಪಾಸಿನಲ್ಲಿತ್ತು. ಹೊಟ್ಟೆ ತುಂಬ ಉಂಡು ಅಷ್ಟೊಂದು ಕೊಬ್ಬಿಲ್ಲದಿದ್ದರೂ ಹಸಿವಿನಿಂದ ಸಾಯುತ್ತಿರುವಂತೆ ಮಾತ್ರ ಆಕೆ ಕಾಣಿಸುತ್ತಿರಲಿಲ್ಲ. ಆಕೆ ಎಷ್ಟೇ ಅಸಹಾಯಕತೆಯನ್ನು ನಟಿಸಿದರೂ ಆಕೆಯಲ್ಲಿ ಯಾವುದೊ ಒಂದು ಸ್ಥೈರ್ಯವಿತ್ತು. ಭಿಕ್ಷೆ ಕೇಳುವವರ ಬಗ್ಗೆ ರಾವ್ ಅವರಿಗೆ ಅನುಕಂಪವಿಲ್ಲದೆ ಏನಿಲ್ಲ. ಆದರೆ ಭಿಕ್ಷೆ ಕೇಳುವುದು ತಪ್ಪು ಎಂಬುದೇ ಅವರ ಖಚಿತಾಭಿಪ್ರಾಯ. ಆ ಭಿಕ್ಷುಕಿ ಅವರ ಬಳಿಗೆ ಬಂದು ಭಿಕ್ಷೆ ಕೇಳಿದ್ದಕ್ಕೆ ಅವರು ಯಾವ ಮುಲಾಜೂ ಇಲ್ಲದೆ ಜೋರಾಗಿ, ‘ಮುಂದೆ ಹೋಗು’ ಎಂದರು. ಆಕೆ ತನ್ನ ಮುಖವನ್ನು ಅದೊಂದು ರೀತಿ ಮಾಡಿಕೊಂಡು ಇನ್ನೊಂದು ಕಡೆಗೆ ತಿರುಗಿದಳು. ಎದುರಲ್ಲಿ ಕುಳಿತಿದ್ದ ಹಿರಿಯ ವ್ಯಕ್ತಿಯ ಹತ್ತಿರಕ್ಕೆ ಹೋಗಿ ಬಗ್ಗಿ ಆತನ ಪಾದವನ್ನು ಮುಟ್ಟಿದಳು. ಆತ ತನ್ನ ಕಾಲುಗಳನ್ನು ಹಿಂದಕ್ಕೆಳೆದುಕೊಂಡು ವ್ಯಂಗ್ಯ ನಗೆಯನ್ನು ನಗುತ್ತ,
‘ಹೋಗ್ ಹೋಗ್’ ಎಂದ.
‘ಹಂಗನ್ಬೇಡಿ ತಾತೋರೆ… ಆ ಸಾಮಿಯಷ್ಟು ಕಲ್ಲು ಹೃದಯ ನಿಮ್ದಲ್ಲ ಬಿಡಿಸಾಮಿ. ಆ ಸಾಮಿಯರ್ಗೆ ಇಷ್ಟು ಮಾತ್ರಾನೂ ಕರುಣೆಯಿಲ್ಲ. ಹಸಿವ್ನಿಂದ ಸತ್ತೋಗ್ತಿರೊ ಭಿಕಾರಿ ಭಿಕ್ಷೆ ಕೇಳುದ್ರೆ ‘ಮುಂದೆ ಹೋಗು’ ಅಂತಾನೆ ಸಾಮಿ…’
ತಾನು ಹೇಳಿದ, ‘ಮುಂದೆ ಹೋಗು’ ಅನ್ನು ಅಣಕದಿಂದ ಅನುಕರಿಸಿದ್ದು ದೊಡ್ಡ ಅಹಂಕಾರಿತನ ಅಂತ ರಾವ್ ಅವರಿಗೆ ಅನ್ನಿಸಿತು. ಆದರೆ ಅವರಿಗೆ ಏನು ಅನ್ನಬೇಕೊ ಅಂತ ತೋಚಲಿಲ್ಲ. ಇಷ್ಟವಿಲ್ಲದಿದ್ದರೂ ಆಕೆಯ ಕಡೆ ನೋಡುತ್ತ ಹಾಗೇ ಕುಳಿತುಕೊಂಡಿದ್ದರು. ಹಿರಿಯ ವ್ಯಕ್ತಿ ಮಾತ್ರ ವಿಚಿತ್ರವಾದ ಅವಸ್ಥೆಯಲ್ಲಿ ಬಿದ್ದ. ಅವಳಿಗೆ ಏನೊ ಒಂದು ಕಾಸು ಕೊಟ್ಟು ಕಳಿಸಿದರೆ ಬೋಗಿಯಲ್ಲಿರುವ ನಾಲ್ಕೂ ಮಂದಿ ಮೇಲ್ನೋಟಕ್ಕೆ ಏನನ್ನೂ ಹೇಳದಿದ್ದರೂ ಸಂತೋಷಿಸುವುದಿಲ್ಲ ಅನ್ನೋದು ಆತನ ಅನುಮಾನ. ಕೊಡದೆ ಹೋದರೆ ಈ ತಿರುಪೆಯವಳು ತನ್ನ ಬಾಯನ್ನು ಹೇಗೆಲ್ಲ ಹರಿಯಬಿಡುತ್ತಾಳೊ ಅನ್ನೋ ಭಯ. ಇದರಲ್ಲಿ ಯಾವುದು ಉತ್ತಮವೊ ಆತನಿಗೆ ತಿಳಿಯಲಿಲ್ಲ. ಕೊನೆಗೆ ಇಲ್ಲದ ಆವೇಶವನ್ನು ತಂದುಕೊಂಡು ಆಕೆಯನ್ನು ಮುಂದಕ್ಕೆ ಹೋಗೆಂದ. ತಿರುಪೆಯವಳು ವ್ಯಥೆಪಡತೊಡಗಿದಳು.