Literature: ನೆರೆನಾಡ ನುಡಿಯೊಳಗಾಡಿ; ಹೊಟ್ಟೆ ತುಂಬಿದಾಗ ಅಂದಿನ ಬೇಟೆಯಲ್ಲಿ ತಾಯಿ ತೋರಿಸಿದ ಜಾಣ್ಮೆ ಹೊಗಳಿದರು | NereNaada Nudiyolagaadi Short Story Collection of Rahul Sankrityayana Volga Ganga Translated by BM Sharma


Literature: ನೆರೆನಾಡ ನುಡಿಯೊಳಗಾಡಿ; ಹೊಟ್ಟೆ ತುಂಬಿದಾಗ ಅಂದಿನ ಬೇಟೆಯಲ್ಲಿ ತಾಯಿ ತೋರಿಸಿದ ಜಾಣ್ಮೆ ಹೊಗಳಿದರು

ಲೇಖಕ ರಾಹುಲ ಸಾಂಕೃತ್ಯಾಯನ ಮತ್ತು ಅನುವಾದಕ ಬಿ. ಎಂ. ಶರ್ಮಾ

ನೆರೆನಾಡ ನುಡಿಯೊಳಗಾಡಿ : NereNaada Nudiyolagaadi ; ದೊಡ್ಡ ಕರಡಿಯನ್ನು ಅತ್ತಿತ್ತ ಮಗುಚಿ ಹಾಕಿ ತನ್ನ ಹೊದಿಕೆಯ ತೊಗಲಿನೆಡೆಯಿಂದ ಹೊಳೆಯುವ ಹರಿತವಾದ ಕಲ್ಲು ಕತ್ತಿಯನ್ನು ತಾಯಿ ತೆಗೆದಳು. ಮತ್ತೆ ಕರಡಿಯ ಗಾಯಕ್ಕೆ ಕತ್ತಿಯಿಟ್ಟು ತೊಗಲನ್ನು ಸೀಳಿದಳು. ಕಲ್ಲು ಕತ್ತಿಯಿಂದ ತೊಗಲು ಕತ್ತರಿಸುವ ಕೆಲಸದಲ್ಲಿ ಆಕೆಯ ತೋಳುಗಳು ಅಷ್ಟು ಪಳಗಿವೆ. ಮತ್ತೆ ಮೆತ್ತನೆಯ ಮಾಂಸದ ತುಂಡೊಂದನ್ನು ತೆಗೆದುಕೊಂಡು ತನ್ನ ಬಾಯಿಗಿಟ್ಟುಕೊಂಡಳು. ಎಲ್ಲರೂ ಸುತ್ತುಮುತ್ತು ಮಂಡಿಸತೊಡಗಿದರು. ತಾಯಿ ಮಾಂಸ ಕಡಿದು ಕಡಿದು ತಿನ್ನಿಸತೊಡಗಿದಳು. ದೊಡ್ಡ ಕರಡಿಯ ಮಾಂಸವೆಲ್ಲ ಮುಗಿದಾಗ ಇನ್ನೊಂದರ ಮೇಲೆ ಕತ್ತಿಯಿಟ್ಟಳು. ಆಗ ಆ ಹರೆಯ ಹದಿನಾರರ ತರುಣಿ ಅಲ್ಲಿಂದೆದ್ದು ತುಸು ದೂರ ಹೋಗಿ ಮಂಜುಗಡ್ಡೆಯ ತುಂಡೊಂದನ್ನು ಆರಿಸಿ ಬಾಯಿಗಿಟ್ಟುಕೊಂಡಳು. ಹಿರಿಯ ಗಂಡಸು ಅಲ್ಲಿಗೆ ಬಂದ. ಮಂಜಿನ ತುಂಡೊದನ್ನು ಬಾಯಿಗಿಟ್ಟುಕೊಂಡು ತರುಣಿಯ ಕೈ ಹಿಡಿದುಕೊಂಡ. ಆಕೆ ತುಸು ಹಿಂದೆ ಸರಿದು ಮತ್ತೆ ಸುಮ್ಮನೆ ನಿಂತಳು. ಗಂಡಸು ತರುಣಿಯ ಹೆಗಲ ಮೇಲೆ ಕೈಯಿರಿಸಿಕೊಂಡು ಎಲ್ಲಿಗೋ ಕರೆದೊಯ್ದ.

ಕಥೆ : ನಿಶಾ (ಕ್ರಿ. ಪೂ. 6000) | ಹಿಂದಿ ಮೂಲ : ರಾಹುಲ ಸಾಂಕೃತ್ಯಾಯನ | ಕನ್ನಡಕ್ಕೆ : ಬಿ. ಎಂ. ಶರ್ಮಾ | ಕೃತಿ ಸೌಜನ್ಯ :  ‘ವೋಲ್ಗಾ ಗಂಗಾ’ ನವಕರ್ನಾಟಕ ಪ್ರಕಾಶನ

(ಭಾಗ 3)

ತುಸುಹೊತ್ತಿನಲ್ಲಿ ಆ ಗಂಡಸೂ ತರುಣಿಯೂ ಕೈಗಳಲ್ಲಿ ದೊಡ್ಡದೊಡ್ಡ ಮಂಜುಗಡ್ಡೆಗಳನ್ನೆತ್ತಿಕೊಂಡು ಹಿಂತಿರುಗಿ ಕರಡಿಯ ಬಳಿ ಬಂದರು. ಈಗ ಇಬ್ಬರ ಕಣ್ಣುಗಳೂ ಕೆನ್ನೆಗಳೂ ಕೆಂಪೇರಿದ್ದವು. ಬಳಿ ಬಂದ ಗಂಡಸು ತಾಯಿಯೊಡನೆ ‘‘ನಾನು ಕಡಿಯುತ್ತೇನಮ್ಮ! ನೀನು ಬಲು ಬಳಲಿರುವೆ’’ ಎಂದ. ತನ್ನ ಕತ್ತಿಯನ್ನು ಗಂಡಿನ ಕೈಗಿತ್ತಳು ತಾಯಿ. ಮತ್ತೆ ಆಕೆ ಕಿರಿಯ ತರುಣನನ್ನೊಮ್ಮೆ ಚುಂಬಿಸಿ ಆತನ ಹೆಗಲ ಮೇಲೆ ತೋಳಿರಿಸಿಕೊಂಡು ಗುಹೆಯ ಹೊರಬಂದಳು.

ಹೀಗೆ ಆ ಮಾನವ ಬಳಗ ಮಾಂಸದಲ್ಲಿ ರುಚಿರುಚಿಯಾದ ಭಾಗವನ್ನೆಲ್ಲ ತಿಂದು ಮುಗಿಸಿತು. ನಾಲ್ಕು ತಿಂಗಳ ಕಾಲ ಆಹಾರವಿಲ್ಲದೆ ಮಲಗಿದ್ದ ಆ ಪ್ರಾಣಿಗಳ ಮೈಯಲ್ಲಿ ಮಾಂಸವಾದರೂ ಎಷ್ಟಿದ್ದೀತು! ಆದರೂ ಮರಿಕರಡಿಯ ಮಾಂಸ ತುಂಬಾ ಮೆದುವಾಗಿ ಸವಿಯಾಗಿದ್ದಿರಬೇಕು. ಆದುದರಿಂದಲೇ ಅದರ ಎಲುಬು ಚರ್ಮಗಳು ಮಾತ್ರ ಉಳಿದಿದ್ದವು. ಮತ್ತೆ ಎಲ್ಲರೂ ಅಲ್ಲೇ ಹತ್ತಿರ ಹತ್ತಿರ ಬಳಲಿಕೆ ಕಳೆಯಲೆಂದು ಮಲಗಿಕೊಂಡರು. ಇನ್ನು ಆ ಬಳಗ ತಮ್ಮ ಬೀಡಿಗೆ ಹಿಂದಿರುಗಬೇಕು. ತಿಂದುಳಿದ ಹೆಣ್ಣು ಗಂಡು ಕರಡಿಗಳನ್ನು ಮರಿಕರಡಿಯ ತೊಗಲಿನ ಹಗ್ಗದಿಂದ ಕಾಲು ಕಟ್ಟಿ, ಕಟ್ಟಿಗೆಯ ಸಹಾಯದಿಂದ ನಾಲ್ವರು ಹೆಗಲಿಗೆ ಏರಿಸಿದರು. ಮರಿ ಕರಡಿಯ ಎಲುಬು ಚರ್ಮಗಳನ್ನು ತರುಣಿಯೊಬ್ಬಳೇ ಹೊತ್ತಳು. ತಾಯಿ ತನ್ನ ಕಲ್ಲು ಕೊಡಲಿ ಹಿಡಿದು ಮುಂದೆ ನಡೆದಳು.

ಆ ಕಾಡು ಮನುಷ್ಯರಿಗೆ ಗಂಟೆ ಗಳಿಗೆಗಳ ಅರಿವಾದರೂ ಎಲ್ಲಿಂದ ? ಆದರೆ ಈ ದಿನ ತಿಂಗಳು ಬೆಳಕಿದೆ ಎಂದಿಷ್ಟು ಅವರಿಗೆ ತಿಳಿದಿದೆ. ಎಲ್ಲರೂ ತುಸು ದೂರ ನಡೆದಾಗ ನೇಸರು ದಿಗಂತದಲ್ಲಿಳಿದುದು ಕಂಡಿತು. ಇನ್ನೂ ಆಳಕ್ಕೆ ಇಳಿದಿರಲಿಲ್ಲ. ಬಾನಿನ ಕೆಂಬಣ್ಣ ಇನ್ನೂ ಮಾಸಿರಲಿಲ್ಲ. ಕೆಂಬಣ್ಣ ಮಾಸಿದಾಗ ಆಗಸದಲ್ಲೆಲ್ಲ ತಿಂಗಳ ಬೆಳಕು ಪಸರಿಸಿ ಚಂದ್ರನ ಆಳ್ತನಕ್ಕೆ ಮೊದಲಾಯಿತು.

ಇನ್ನೂ ಮುಂದುವರಿಯುತ್ತಲೇ ಇತ್ತು ಆ ಬಳಗ. ಗುಹಾಗೃಹಕ್ಕೆ ಮತ್ತೂ ದೂರವಿದೆ. ನಡೆಯುತ್ತಿದ್ದಂತೆಯೇ ತಾಯಿ ಒಮ್ಮೆಲೆ ನಿಂತುಬಿಟ್ಟಳು. ಹಿಂಬಾಲಿಸುವವರೂ ಇರಿಸಿದ ಹೆಜ್ಜೆ ಎತ್ತಲಿಲ್ಲ. ಹರೆಯ ಇಪ್ಪತ್ತಾರರ ಸುಂದರ ತರುಣನ ಬಳಿ ಬಂದು ‘‘ಗುರ್ಯೂ! ಗುರ್ಯೂ, ವೃಕ,  ವೃಕ!’’ ಎಂದು ಮೆಲ್ಲನೆ ಉಸುರಿದಳು ತಾಯಿ. ಅದನ್ನು ಕೇಳಿದ ತರುಣ ತಲೆಯಲ್ಲಾಡಿಸುತ್ತ ‘‘ಗುರ್ಯೂ, ಗುರ್ಯೂ, ವೃಕ, ಬಹಳ ಇವೆ, ವೃಕ!’’ ಎಂದು ಮರು ನುಡಿದ. ಮತ್ತೆ ತಾಯಿ ಎಲ್ಲರಿಗೂ ‘‘ಎಚ್ಚರ! ಸಿದ್ಧವಾಗಿರಿ ಎಲ್ಲಾ’’ ಎಂದಳು.

ಕರಡಿಗಳ ಹೊರೆಯನ್ನು ನೆಲದ ಮೇಲಿರಿಸಿದರು. ಎಲ್ಲರೂ ಕೈಯ ಕೈದುಗಳನ್ನು ಸರಿಪಡಿಸಿಕೊಂಡು ಬೆನ್ನಿಗೆ ಬೆನ್ನು ತಾಗಿಸಿ ನಾಲ್ಕೆಡೆಗೂ ಮೋರೆ ಮಾಡಿ ನಿಂತುಕೊಂಡರು. ಅಷ್ಟರಲ್ಲೆ ಏಳೆಂಟು ತೋಳಗಳ ಹಿಂಡು ಕೆನ್ನಾಲಗೆ ನೀಡುತ್ತ ಕಾಣಬಂತು. ಗುರುಗುಟ್ಟುತ್ತ ಹತ್ತಿರ ಬಂದು, ಆ ಮಾನವ ಬಳಗದ ಸುತ್ತಲೂ ತಿರುಗತೊಡಗಿತು. ಮಾನವರ ಕೈಯಲ್ಲಿ ಮರದ ಬರ್ಚಿ ಕಲ್ಲು ಕೊಡಲಿಗಳನ್ನು ಕಂಡು ಒಮ್ಮೆಯೇ ಮೇಲೇರಲು ಅವು ಹೆದರಿದುವು. ಅಷ್ಟರೊಳಗೆ ಇಪ್ಪತ್ತಾರರ ಹರೆಯದ ಈ ತರುಣ ಬಳಗದ ನಡುವಿದ್ದು ತನ್ನಲ್ಲಿದ್ದ ಕಟ್ಟಿಗೆಯೊಂದನ್ನು ತೆಗೆದು ಸೊಂಟಕ್ಕೆ ಕಟ್ಟಿಕೊಂಡಿದ್ದ ತೊಗಲಿನ ಹಗ್ಗ ಬಿಗಿದು ಬಿಲ್ಲು ತಯಾರಿಸಿದ. ಮತ್ತೆ ತನ್ನ ಹೊದಿಕೆಯೊಳಗೆ ಅಡಗಿಸಿಟ್ಟಿದ್ದ ಹರಿತವಾದ ಕಲ್ಲಿನ ತುದಿಯುಳ್ಳ ಕಡ್ಡಿಯೊಂದನ್ನು ಹೊರತೆಗೆದ. ಎದುರಿಗಿದ್ದ ಹರೆಯದ ಗಂಡನ್ನು ಒಳಗೆ ಮಾಡಿ ತಾನವನ ಸ್ಥಳದಲ್ಲಿ ಹೊರಮೊಗವಾಗಿ ನಿಂತುಕೊಂಡ. ನಿಂತವನೇ ತಡೆಯದೇ ಹೆದೆಯೇರಿಸಿ ಠೇಂಕಾರದೊಡನೆ ಬಾಣ ಹೊಡೆದ. ಬಾಣ ತೋಳವೊಂದರ ಪಕ್ಕಕ್ಕೆ ನಾಟಿಕೊಂಡಿತು. ಗಾಯಗೊಂಡ ತೋಳ ಅದೇ ತರುಣನ ಮೇಲೇರಿ ಬಂತು. ಬರುವಾಗಲೇ ಇನ್ನೊಂದು ಕಡ್ಡಿ ಹೂಡಿದ. ಈ ಸಲ ನೆಲಕ್ಕುರುಳಿತು ತೋಳ. ನೆಲಕ್ಕುರುಳಿದ ತಮ್ಮ ಜೊತೆಗಾರ ಅಲುಗಾಡದಿರುವುದನ್ನು ದಿಟ್ಟಿಸಿ ಉಳಿದ ತೋಳಗಳು ಅದರ ಬಳಿಗೆ ಸರಿದವು. ಗಾಯದಿಂದ ಹರಿಯುತ್ತಿದ್ದ ಬಿಸಿ ನೆತ್ತರನ್ನು ನೆಕ್ಕತೊಡಗಿದವು. ಮತ್ತೆ ಜೊತೆಗಾರನನ್ನೆ ಕಚ್ಚಿ ಎಳೆದು ತಿನ್ನತೊಡಗಿದುವು.

TV9 Kannada


Leave a Reply

Your email address will not be published.