Luizinho Faleiro: ಟಿಎಂಸಿಯಿಂದ ರಾಜ್ಯಸಭೆಗೆ ಗೋವಾ ಮಾಜಿ ಸಿಎಂ ಫಲೆರೋ ನಾಮ ನಿರ್ದೇಶನ | TMC nominates Former Goa Chief Minister Luizinho Faleiro to Rajya Sabha


Luizinho Faleiro: ಟಿಎಂಸಿಯಿಂದ ರಾಜ್ಯಸಭೆಗೆ ಗೋವಾ ಮಾಜಿ ಸಿಎಂ ಫಲೆರೋ ನಾಮ ನಿರ್ದೇಶನ

ಲುಯಿಜಿನೋ ಫಲೆರೋ

ನವದೆಹಲಿ: ಕೇವಲ ಎರಡು ತಿಂಗಳ ಹಿಂದಷ್ಟೇ ಟಿಎಂಸಿ ಪಕ್ಷ ಸೇರಿರುವ ಗೋವಾದ ಮಾಜಿ ಸಿಎಂ ಲುಯಿಜಿನೋ ಫಲೆರೋ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಲು ಟಿಎಂಸಿ ಪಕ್ಷ ನಿರ್ಧರಿಸಿದೆ. ಟಿಎಂಸಿ ಪಕ್ಷ ಸೇರಿದ ನಾಯಕನಿಗೆ ಕೇವಲ 2 ತಿಂಗಳಲ್ಲೇ ಭರ್ಜರಿ ಗಿಫ್ಟ್ ಅನ್ನು ಟಿಎಂಸಿ ನೀಡುತ್ತಿದೆ. ಈ ಹಿಂದೆ ಕಾಂಗ್ರೆಸ್ ರಾಷ್ಟ್ರೀಯ ಮಹಿಳಾ ಘಟಕದ ಅಧ್ಯಕ್ಷೆಯಾಗಿದ್ದ ಸುಶ್ಮಿತಾ ದೇವ್ ಅವರನ್ನು ಟಿಎಂಸಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಟಿಎಂಸಿ ಪಕ್ಷವು ರಾಜ್ಯಸಭೆಗೆ ಆಯ್ಕೆ ಮಾಡಿತ್ತು. ಟಿಎಂಸಿ ಪಕ್ಷದ ರಾಜಕೀಯ ನಡೆ ಕಾಂಗ್ರೆಸ್ ಪಕ್ಷದ ಅಸಮಾಧಾನಕ್ಕೆ ಕಾರಣವಾಗಿದೆ.

ಸೆಪ್ಟೆಂಬರ್‌ನಲ್ಲಿ ತೃಣಮೂಲ ಕಾಂಗ್ರೆಸ್‌ಗೆ (ಟಿಎಂಸಿ) ಸೇರ್ಪಡೆಗೊಂಡ ಗೋವಾದ ಮಾಜಿ ಮುಖ್ಯಮಂತ್ರಿ ಲುಯಿಜಿನೋ ಫಲೆರೋ ಅವರು ಪಶ್ಚಿಮ ಬಂಗಾಳದಿಂದ ರಾಜ್ಯಸಭೆಗೆ ಆಯ್ಕೆಯಾಗಲಿದ್ದಾರೆ. ಮುಂಬರುವ ರಾಜ್ಯಸಭಾ ಉಪಚುನಾವಣೆಯಲ್ಲಿ ಟಿಎಂಸಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಲೋಕಸಭೆಯಲ್ಲಿ ಎರಡನೇ ಅತಿ ದೊಡ್ಡ ವಿರೋಧ ಪಕ್ಷವಾಗಿರುವ ಟಿಎಂಸಿ ಪಶ್ಚಿಮ ಬಂಗಾಳದ ವಿಧಾನಸಭೆಯಲ್ಲಿ ಸಂಪೂರ್ಣ ಬಹುಮತವನ್ನು ಹೊಂದಿರುವುದರಿಂದ ಮೇಲ್ಮನೆಯಲ್ಲಿ ಫಲೆರೋ ಚುನಾಯಿತರಾಗಲು ಯಾವುದೇ ಸಮಸ್ಯೆಯಾಗುವುದಿಲ್ಲ.

ಸೆಪ್ಟೆಂಬರ್‌ನಲ್ಲಿ ಅರ್ಪಿತಾ ಘೋಷ್ ರಾಜೀನಾಮೆ ನೀಡಿದ ನಂತರ ರಾಜ್ಯಸಭೆಯ ಒಂದು ಸ್ಥಾನ ತೆರವಾಗಿದೆ. ಲುಯಿಜಿನೋ ಫಲೆರೋ ಟಿಎಂಸಿಗೆ ಸೇರುವ ಕೆಲವೇ ದಿನಗಳ ಮೊದಲು ಘೋಷ್ ರಾಜೀನಾಮೆ ನೀಡಿದರು. ಗೋವಾದ ಮಾಜಿ ಸಿಎಂ ಫಲೆರೋ ಮುಂದಿನ ವಾರ ರಾಜ್ಯಸಭೆಗೆ ಟಿಎಂಸಿಯಿಂದ ಆಯ್ಕೆಯಾಗಲಿದ್ದಾರೆ. ಮುಂಬರುವ 2022 ರ ಗೋವಾ ವಿಧಾನಸಭಾ ಚುನಾವಣೆಯಲ್ಲೂ ಅವರು ಸ್ಪರ್ಧಿಸಲಿದ್ದಾರೆ ಎಂದು ಟಿಎಂಸಿ ನಾಯಕರೊಬ್ಬರು ತಿಳಿಸಿದ್ದಾರೆ.

ರಾಷ್ಟ್ರೀಯ ರಾಜಕೀಯದಲ್ಲಿ ಪ್ರಮುಖ ಪಕ್ಷವಾಗಿರುವ ಟಿಎಂಸಿ ತನ್ನ ಸ್ಥಾನವನ್ನು ಬಲಪಡಿಸಲು ಪಶ್ಚಿಮ ಬಂಗಾಳದ ಆಚೆಗೆ ವಿಸ್ತರಿಸುವ ಯೋಜನೆಯ ಭಾಗವಾಗಿ ಬೇರೆ ಬೇರೆ ರಾಜ್ಯಗಳಿಗೆ ತನ್ನ ಪಕ್ಷವನ್ನು ವಿಸ್ತರಿಸುತ್ತಿದೆ. ಫೆಬ್ರವರಿ 2022 ರಲ್ಲಿ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸುತ್ತಿರುವ TMCಗೆ ಮಾಜಿ ಗೋವಾದ ಸಿಎಂ ಲುಯಿಜಿನೋ ಫಲೆರೋ ಅವರನ್ನು ಅಮೂಲ್ಯ ಆಸ್ತಿ ಎಂದು ಪರಿಗಣಿಸಿದೆ. ರಾಜ್ಯಸಭೆಗೆ ಟಿಎಂಸಿಯಿಂದ ಕೊನೆಯ ಬಾರಿ ಆಯ್ಕೆಯಾದವರೆಂದರೇ, ಸುಶ್ಮಿತಾ ದೇವ್, ಕಾಂಗ್ರೆಸ್ ತೊರೆದು ಮಮತಾ ಬ್ಯಾನರ್ಜಿ ಪಕ್ಷಕ್ಕೆ ಸೇರಿದ ಮತ್ತೊಬ್ಬ ನಾಯಕಿ. ಟಿಎಂಸಿಗೆ ಲುಯಿಜಿನೋ ಫಲೆರೋ ಸೇರ್ಪಡೆಯು ಕಾಂಗ್ರೆಸ್‌ನಲ್ಲಿ ಹೃದಯ ಭಗ್ನವಾಗವಂತೆ ಮಾಡಿದೆ. ಇಬ್ಬರು ಹಿರಿಯ ಕಾಂಗ್ರೆಸ್ ನಾಯಕರ ಪ್ರಕಾರ, ಕಾಂಗ್ರೆಸ್ ನಾಯಕರನ್ನು ಟಿಎಂಸಿ ಆಮಿಷಕ್ಕೆ ಒಳಪಡಿಸಿದ ರೀತಿಯ ಬಗ್ಗೆ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅಸಮಾಧಾನಗೊಂಡಿದ್ದಾರೆ.

ಗೋವಾ ಮತ್ತು ತ್ರಿಪುರ ಚುನಾವಣೆಗಳಲ್ಲಿ ಸ್ಪರ್ಧಿಸುವುದಾಗಿ ಟಿಎಂಸಿ ಘೋಷಿಸಿದೆ. ಎರಡು ರಾಜ್ಯಗಳಲ್ಲಿ, ಜನರು ಬಿಜೆಪಿ ಮತ್ತು ಕಾಂಗ್ರೆಸ್ ಎರಡರಿಂದಲೂ ಅಸಮಾಧಾನಗೊಂಡಿದ್ದಾರೆ ಎಂದು ಅದರ ನಾಯಕರು ಹೇಳಿಕೊಂಡಿದ್ದಾರೆ, ಪರಿಸ್ಥಿತಿಯನ್ನು ಟಿಎಂಸಿ ಪರವಾಗಿ ಬಳಸಿಕೊಂಡು ಕೆಲಸ ಮಾಡುವ ಅವಕಾಶವಿದೆ ಎಂದು ಟಿಎಂಸಿ ನಾಯಕರು ವಾದಿಸುತ್ತಿದ್ದಾರೆ.

ಇದನ್ನೂ ಓದಿ: ಟಿಎಂಸಿಗೆ ಸೇರಿದ ಗೋವಾದ ಮಾಜಿ ಸಿಎಂ ಫಲೆರೊ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಶಿವದಾಸ್ ನಾಯಕ್

ಬಿಜೆಪಿ ಸೇರಿ ದೊಡ್ಡ ತಪ್ಪು ಮಾಡಿದೆ ಎನ್ನುತ್ತ ಮರಳಿ ಟಿಎಂಸಿಗೆ ಬಂದ ರಾಜೀವ್ ಬ್ಯಾನರ್ಜಿ

TV9 Kannada


Leave a Reply

Your email address will not be published. Required fields are marked *