Magdalena Andersson: ಸ್ವೀಡನ್ ಇತಿಹಾಸದಲ್ಲೇ ಮೊದಲ ಬಾರಿಗೆ ಮಹಿಳಾ ಪ್ರಧಾನಿಯಾಗಿ ಮ್ಯಾಗ್ಡಲಿನಾ ಆ್ಯಂಡರ್ಸನ್ ಆಯ್ಕೆ | Magdalena Andersson Sweden Elects Magdalena Andersson As First Woman Prime Minister


Magdalena Andersson: ಸ್ವೀಡನ್ ಇತಿಹಾಸದಲ್ಲೇ ಮೊದಲ ಬಾರಿಗೆ ಮಹಿಳಾ ಪ್ರಧಾನಿಯಾಗಿ ಮ್ಯಾಗ್ಡಲಿನಾ ಆ್ಯಂಡರ್ಸನ್ ಆಯ್ಕೆ

ಮ್ಯಾಗ್ಡಲೀನಾ ಆ್ಯಂಡರ್ಸನ್

ಸ್ಟಾಕೋಲ್ಮ್: ಸ್ವೀಡನ್​ನ ಇತಿಹಾಸದಲ್ಲೇ ಮೊದಲ ಬಾರಿಗೆ ಮಹಿಳೆಯೊಬ್ಬರು ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಸ್ವೀಡಿಷ್ ಸಂಸತ್ತು ಇದೇ ಮೊದಲ ಸೋಷಿಯಲ್ ಡೆಮಾಕ್ರಟಿಕ್ ಪಕ್ಷದ ನಾಯಕಿ ಹಾಗೂ ಪ್ರಸ್ತುತ ಸರ್ಕಾರದಲ್ಲಿ ಹಣಕಾಸು ಸಚಿವೆಯಾಗಿದ್ದ ಮ್ಯಾಗ್ಡಲೀನಾ ಆ್ಯಂಡರ್ಸನ್ (Magdalena Andersson) ಅವರನ್ನು ಪ್ರಧಾನಿಯಾಗಿ ಆಯ್ಕೆ ಮಾಡಿದೆ. ಸ್ವೀಡನ್ (Sweden) ದೇಶದ ಇತಿಹಾಸದಲ್ಲಿ ಉನ್ನತ ಅಧಿಕಾರ ವಹಿಸಿಕೊಂಡ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಮ್ಯಾಗ್ಡಲೀನಾ ಪಾತ್ರರಾಗಿದ್ದಾರೆ.

ಸ್ವೀಡನ್‌ ಸಂಸತ್ತು ರಿಕ್ಸ್‌ಡಾಗ್ 349 ಸದಸ್ಯ ಬಲ ಹೊಂದಿದ್ದು, ಮ್ಯಾಗ್ಡಲೀನಾ ಆ್ಯಂಡರ್ಸನ್ ಅವರ ಪರವಾಗಿ 117, ಅವರ ವಿರುದ್ಧವಾಗಿ 174 ಮಂದಿ ಮತ ಚಲಾಯಿಸಿದ್ದಾರೆ. ಸಂಸತ್ ಕಲಾಪಕ್ಕೆ 57 ಸದಸ್ಯರು ಹಾಜರಾಗಿರಲಿಲ್ಲ. ಹೊಸ ಸರ್ಕಾರ ರಚನೆಯಾಗುವವರೆಗೂ ಹಾಲಿ ಪ್ರಧಾನಿ ಸ್ಟೀಫನ್ ಲೋಫ್ವೆನ್ ಸ್ವೀಡನ್ ಸರ್ಕಾರವನ್ನು ಮುನ್ನಡೆಸಲಿದ್ದಾರೆ. ಡೆಮಾಕ್ರಟಿಕ್ ಲೇಬರ್ ಪಕ್ಷದ ನಾಯಕ, ಪ್ರಧಾನಿ ಸ್ಟೀಫನ್ ಲೋಫ್ವೆನ್ ನವೆಂಬರ್ 10ರಂದು ತಮ್ಮ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. 7 ವರ್ಷಗಳ ಕಾಲ ಸ್ವೀಡನ್ ಪ್ರಧಾನಮಂತ್ರಿಯಾಗಿದ್ದ ಅವರ ಸ್ಥಾನಕ್ಕೆ ಆಂಡರ್ಸನ್ ಅವರನ್ನು ಆಯ್ಕೆ ಮಾಡಲಾಗಿದೆ.

ಲಿಂಗ ಸಂಬಂಧಿ ವಿಚಾರಗಳಲ್ಲಿ ಯುರೋಪಿನ ಅತ್ಯಂತ ಪ್ರಗತಿಪರ ರಾಷ್ಟ್ರಗಳಲ್ಲಿ ಒಂದಾಗಿರುವ ಸ್ವೀಡನ್‌ನಲ್ಲಿ ಇದುವರೆಗೆ ರಾಜಕೀಯದ ಉನ್ನತ ಹುದ್ದೆಯಲ್ಲಿ ಮಹಿಳೆಯರಿಗೆ ಸ್ಥಾನ ದೊರೆತಿರಲಿಲ್ಲ. ಹೀಗಾಗಿ, ಈ ಬೆಳವಣಿಗೆಯು ಸ್ವೀಡನ್‌ನಲ್ಲಿ ಒಂದು ಮೈಲಿಗಲ್ಲು ಎನ್ನಲಾಗಿದೆ.

ಮ್ಯಾಗ್ಡಲೀನಾ ಆ್ಯಂಡರ್ಸನ್ ಅವರ ಹೆಸರನ್ನು ಪ್ರಧಾನ ಮಂತ್ರಿ ಹುದ್ದೆಗೆ ಘೋಷಣೆ ಮಾಡುತ್ತಿದ್ದಂತೆ ಸಂಸತ್ತಿನ ಎಲ್ಲಾ ವಿಭಾಗಗಳ ಪ್ರತಿನಿಧಿಗಳು, ಅಧಿಕಾರಿಗಳು ಎದ್ದು ನಿಂತು ಚಪ್ಪಾಳೆ ತಟ್ಟಿ ಗೌರವ ಸಲ್ಲಿಸಿದ್ದಾರೆ ಎಂದು ಸ್ವೀಡನ್‌ ಮಾಧ್ಯಮಗಳು ತಿಳಿಸಿವೆ. ಸಂಸತ್‌ನ 349 ಸದಸ್ಯರ ಪೈಕಿ 174 ಮಂದಿ ಆಂಡರ್ಸನ್ ವಿರುದ್ಧ ಮತ ಚಲಾಯಿಸಿದ್ದಾರೆ. ಆದರೆ, 117 ಸಂಸದರ ಬೆಂಬಲ ಘೋಷಿಸಿದ್ದಾರೆ. ಉಪ್ಸಲಾ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡಿರುವ ಮಾಜಿ ಈಜು ಚಾಂಪಿಯನ್ ಮ್ಯಾಗ್ಡಲೀನಾ 1996ರಲ್ಲಿ ಪ್ರಧಾನ ಮಂತ್ರಿ ಗೋರನ್ ಪರ್ಸನ್ ಅವರ ರಾಜಕೀಯ ಸಲಹೆಗಾರರಾಗಿ ತಮ್ಮ ರಾಜಕೀಯ ವೃತ್ತಿ ಜೀವನವನ್ನು ಪ್ರಾರಂಭಿಸಿದ್ದರು.

ಇದನ್ನೂ ಓದಿ: ನವೆಂಬರ್​ 1 ಆರು ರಾಜ್ಯಗಳ ಸಂಸ್ಥಾಪನಾ ದಿನ; ಪ್ರತಿ ರಾಜ್ಯಗಳ ಜನರಿಗೂ ಶುಭಕೋರಿದ ಪ್ರಧಾನಮಂತ್ರಿ ಮೋದಿ

ಭಾರತಕ್ಕೆ ಆಗಮಿಸಿದ ಡೆನ್ಮಾರ್ಕ್​ ಪ್ರಧಾನಮಂತ್ರಿ ಮೆಟ್ಟೆ ಫ್ರೆಡ್ರಿಕ್ಸನ್; ಪಿಎಂ ಮೋದಿಯವರೊಂದಿಗೆ ದ್ವಿಪಕ್ಷೀಯ ಮಾತುಕತೆ

TV9 Kannada


Leave a Reply

Your email address will not be published. Required fields are marked *