ಟಿವಿ ನೋಡುತ್ತಾ, ಟೊಮ್ಯಾಟೋ ಹಣ್ಣನ್ನು ಕಟ್ ಮಾಡಿ ಅದನ್ನು ಮ್ಯಾಗಿಗೆ ಹಾಕಿದ ಯುವತಿ ಆ ಮ್ಯಾಗಿಯನ್ನು ತಿಂದ ಬಳಿಕ ವಾಂತಿ ಮಾಡಿಕೊಂಡು ಸಾವನ್ನಪ್ಪಿದ್ದಾಳೆ!
ಮುಂಬೈ: ಸಾವು ಯಾವ ರೀತಿಯಲ್ಲಿ ಬರುತ್ತದೆ ಎಂದು ಯಾರಿಗೂ ಹೇಳಲು ಸಾಧ್ಯವಿಲ್ಲ. ನಾವು ತಿನ್ನುವ ಮ್ಯಾಗಿಯಿಂದ ಬೇಕಾದರೂ ಸಾವು ಬರಬಹುದು ಎಂದರೆ ನೀವು ನಂಬುತ್ತೀರಾ? ನಂಬಲು ಸ್ವಲ್ಪ ಕಷ್ಟವಾದರೂ ಇದು ಸತ್ಯವಾದ ಸಂಗತಿ. ಮಹಾರಾಷ್ಟ್ರದ ಮುಂಬೈನಲ್ಲಿ ಇಂಥದ್ದೊಂದು ವಿಚಿತ್ರವಾದ ಘಟನೆ ನಡೆದಿದೆ. ಮ್ಯಾಗಿ (Maggi) ಮಾಡಿಕೊಳ್ಳಲು ಅಡುಗೆ ಮನೆಗೆ ಹೋದ ಯುವತಿ ತರಕಾರಿಗಳನ್ನು ಹಾಕಿ ಮ್ಯಾಗಿ ಮಾಡಿಕೊಳ್ಳಲು ತಯಾರಿ ನಡೆಸಿದ್ದಳು. ಅಲ್ಲೇ ಕೆಳಗಿದ್ದ ಒಂದು ಟೊಮ್ಯಾಟೋ ಹಣ್ಣನ್ನು ಮ್ಯಾಗಿಗೆ ಹಾಕಿ, ಬೌಲ್ಗೆ ಹಾಕಿಕೊಂಡು ತಿಂದ ಆಕೆ ಆ ಟೊಮ್ಯಾಟೋ (Tomato) ಹಣ್ಣು ಹಾಕಿದ ಮ್ಯಾಗಿಯಿಂದಲೇ ಸಾವನ್ನಪ್ಪಿದ್ದಾಳೆ!
ಟೊಮ್ಯಾಟೋ ಹಣ್ಣು ಹಾಕಿ ಮಾಡಿದ ಮ್ಯಾಗಿ ತಿಂದರೆ ಸಾಯುತ್ತಾರಾ? ಎಂದು ನಿಮಗೆ ಆಶ್ಚರ್ಯವಾಗಬಹುದು. ಆದರೆ, ವಿಷಯ ಬೇರೆಯೇ ಇದೆ. ಆಕೆಯ ಮನೆಯಲ್ಲಿ ಸಿಕ್ಕಾಪಟ್ಟೆ ಇಲಿಗಳ ಕಾಟ ಶುರುವಾಗಿತ್ತು. ಇಲಿಯನ್ನು ಹಿಡಿಯಲು ಟೊಮ್ಯಾಟೋ ಹಣ್ಣಿನೊಳಗೆ ಇಲಿ ಪಾಷಾಣವಿಟ್ಟಿದ್ದ ಆಕೆ ಆಕಸ್ಮಿಕವಾಗಿ ಆ ಇಲಿ ಪಾಷಾಣ ಸವರಿದ್ದ ಟೊಮ್ಯಾಟೋ ಹಣ್ಣನ್ನು ಹಾಕಿ ಮ್ಯಾಗಿ ಮಾಡಿಕೊಂಡಿದ್ದಾಳೆ.