Viral Video: ಸದನದಲ್ಲಿ ಬೆಲೆ ಏರಿಕೆ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆಯುತ್ತಿರುವಾಗ ಟಿಎಂಸಿ ಮಹುವಾ ಮೊಯಿತ್ರಾ ತನ್ನ 1.6 ಲಕ್ಷ ರೂ. ಮೌಲ್ಯದ ಲೂಯಿಸ್ ವಿಟಾನ್ ಬ್ಯಾಗ್ ಅನ್ನು ಮೇಜಿನ ಕೆಳಗೆ ಇಡುತ್ತಿರುವ ವಿಡಿಯೋ ವೈರಲ್ ಆಗಿದೆ.

Image Credit source: Zee News
ನವದೆಹಲಿ: ಲೋಕಸಭೆ ಅಧಿವೇಶನದಲ್ಲಿ ಬೆಲೆ ಏರಿಕೆ ಕುರಿತು ನಡೆಯುತ್ತಿರುವ ಚರ್ಚೆಯ ವೇಳೆ ತೃಣಮೂಲ ಕಾಂಗ್ರೆಸ್ (TMC) ಸಂಸದೆ ಮಹುವಾ ಮೊಯಿತ್ರಾ (Mahua Moitra) ತಮ್ಮ ದುಬಾರಿ ಬ್ಯಾಗ್ ಅನ್ನು ಬಚ್ಚಿಟ್ಟಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಸದನದಲ್ಲಿ ಬೆಲೆ ಏರಿಕೆ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆಯುತ್ತಿರುವಾಗ ಟಿಎಂಸಿ ಮಹುವಾ ಮೊಯಿತ್ರಾ ತನ್ನ 1.6 ಲಕ್ಷ ರೂ. ಮೌಲ್ಯದ ಲೂಯಿಸ್ ವಿಟಾನ್ (Louis Vuitton) ಬ್ಯಾಗ್ ಅನ್ನು ಮೇಜಿನ ಕೆಳಗೆ ಇಡುತ್ತಿರುವ ವಿಡಿಯೋ ವೈರಲ್ ಆಗಿದೆ. ಬೆಲೆ ಏರಿಕೆಯನ್ನು ಟೀಕಿಸುವಾಗ ತನ್ನ ದುಬಾರಿ ಬ್ಯಾಗ್ ಕಾಣಬಾರದು ಎಂದು ಆಕೆ ಈ ರೀತಿ ಮಾಡಿದ್ದಾರೆ ಎಂದು ಚರ್ಚೆಯಾಗುತ್ತಿದೆ.
ತೃಣಮೂಲ ಕಾಂಗ್ರೆಸ್ನ ಕಾಕೋಲಿ ಘೋಷ್ ದಸ್ತಿದಾರ್ ಲೋಕಸಭೆಯಲ್ಲಿ ಬೆಲೆಯೇರಿಕೆ ವಿರೋಧಿಸಿ ಮಾತನಾಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಈ ವೇಳೆ ಪಕ್ಕದಲ್ಲಿ ಕುಳಿತಿದ್ದ ಮಹುವಾ ಮೊಯಿತ್ರಾ ಬೇಗನೆ ತನ್ನ ಪಕ್ಕದಲ್ಲಿದ್ದ ಲೂಯಿ ವಿಟಾನ್ ಬ್ಯಾಗ್ ಅನ್ನು ಮೇಜಿನ ಕೆಳಗೆ ಇಟ್ಟಿದ್ದಾರೆ.
As the issue of “mehengai” is raised, somebody’s Louis Vuitton bag quickly slides under the bench. pic.twitter.com/Rtra8qsBEt
— Ajit Datta (@ajitdatta) August 1, 2022
ಈ ವಿಡಿಯೋವನ್ನು ಅಜಿತ್ ದತ್ತಾ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. “ಬೆಲೆಯೇರಿಕೆ” ವಿಷಯವು ಚರ್ಚೆಯಾಗುತ್ತಿದ್ದಂತೆ ಇವರ ಲೂಯಿ ವಿಟಾನ್ ಬ್ಯಾಗ್ ತಕ್ಷಣ ಮೇಜಿನಡಿ ತೂರಿಕೊಂಡಿದೆ ಎಂದು ಅವರು ಕ್ಯಾಪ್ಷನ್ ನೀಡಿದ್ದಾರೆ.
ಸೋಮವಾರ ಬೆಲೆ ಏರಿಕೆ ಬಗ್ಗೆ ಲೋಕಸಭೆಯಲ್ಲಿ ಚರ್ಚೆ ವೇಳೆ ಕಕೋಲಿ ಘೋಷ್ ದಸ್ತಿದಾರ್, ನಾವು ಹಸಿ ತರಕಾರಿಗಳನ್ನು ತಿನ್ನಬೇಕೆಂದು ಸರ್ಕಾರ ಬಯಸುತ್ತಿದೆಯೇ? ಎಂದು ಕೇಳಿದ ಸಂಸದೆ ಹಸಿ ಬದನೆಕಾಯಿ ಕಚ್ಚುವ ಮೂಲಕ ಅಡುಗೆ ಅನಿಲ ಬೆಲೆ ಏರಿಕೆಯನ್ನು ಖಂಡಿಸಿದ್ದಾರೆ. ಕಳೆದ ಕೆಲವು ತಿಂಗಳಲ್ಲಿ ಎಲ್ ಪಿ ಜಿ ಸಿಲಿಂಡರ್ ಬೆಲೆ ನಾಲ್ಕು ಬಾರಿ ಏರಿಕೆ ಮಾಡಲಾಗಿದೆ. ಸಿಲಿಂಡರ್ ಬೆಲೆ 600ರಿಂದ 1,100ಕ್ಕೇರಿದೆ. ಸಿಲಿಂಡರ್ ದರವನ್ನು ಇಳಿಕೆ ಮಾಡಲೇ ಬೇಕು ಎಂದು ಸಂಸದೆ ಒತ್ತಾಯಿಸಿದ್ದಾರೆ.