Mangalore Blast: ಪ್ರತ್ಯೇಕ ಇಸ್ಲಾಮಿಕ್ ಸ್ಟೇಟ್ ಪ್ರಕರಣದಲ್ಲಿ ನಾಪತ್ತೆಯಾದ ಪ್ರಮುಖ ಆರೋಪಿಗಳೊಂದಿಗೆ ಶಾರಿಕ್​​ ನಂಟು: ಅಲೋಕ್​ ಕುಮಾರ್​ – Mangaluru Blast: Accused Sharik have link with separate Islamic State case missing persons


ಮಂಗಳೂರು ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಶಾರಿಕ್ 2020ರ ಮಂಗಳೂರಿನ ಗೋಡೆ ಬರಹ ಪ್ರತ್ಯೇಕ ಇಸ್ಲಾಮಿಕ್ ಸ್ಟೇಟ್ ಪ್ರಕರಣದ ಪ್ರಮುಖ ಆರೋಪಿಗಳೊಂದಿಗೆ ಸಂಪರ್ಕ ಹೊಂದಿದ್ದಾನೆ ​ಎಂದು ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.

Mangalore Blast: ಪ್ರತ್ಯೇಕ ಇಸ್ಲಾಮಿಕ್ ಸ್ಟೇಟ್ ಪ್ರಕರಣದಲ್ಲಿ ನಾಪತ್ತೆಯಾದ ಪ್ರಮುಖ ಆರೋಪಿಗಳೊಂದಿಗೆ ಶಾರಿಕ್​​ ನಂಟು: ಅಲೋಕ್​ ಕುಮಾರ್​

ಅಲೋಕ್ ಕುಮಾರ್, ಎಡಿಜಿಪಿ

ಮಂಗಳೂರು: ಮಂಗಳೂರು ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ (Mangalore Blast) ಆರೋಪಿ ಶಾರಿಕ್ 2020ರ ಮಂಗಳೂರಿನ ಪ್ರತ್ಯೇಕ ಇಸ್ಲಾಮಿಕ್ ಸ್ಟೇಟ್ ಪ್ರಕರಣದ ಪ್ರಮುಖ ಆರೋಪಿಗಳಾದ ಮುಸಾಬಿರ್ ಹುಸೇನ್, ಅಬ್ದುಲ್ ಮಥೀನ್ ತಾಹಾ ಮತ್ತು ಅರಾಫತ್ ಅಲಿ ಜೊತೆ ಸಂಪರ್ಕ ಹೊಂದಿದ್ದಾನೆ ​ಎಂದು ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ (Alok Kumar) ತಿಳಿಸಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ಈತನು ಅಂತಾರಾಷ್ಟ್ರೀಯ ಉಗ್ರ ಸಂಘಟನೆಗಳಿಂದ ಪ್ರಭಾವಿತನಾಗಿದ್ದಾನೆ ಎಂದು ತಿಳಿಸಿದರು.

ಶಾರಿಕ್​ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ವಾಸಿ ಎಂದು ಸ್ಪಷ್ಟವಾಗಿದೆ. ಈತನ ಮೇಲೆ ಈ ಮೊದಲು ಮೂರು ಪ್ರಕರಣಗಳು ದಾಖಲಾಗಿವೆ. ಮುಸಾಬಿರ್ ಹುಸೇನ್ ಮತ್ತು ಮಥೀನ್ ತಾಹಾ ವಿರುದ್ಧ 2020ರಲ್ಲಿ ಬೆಂಗಳೂರಿನಲ್ಲಿ ಪ್ರಕರಣದ ದಾಖಲಾಗಿತ್ತು. ಇನ್ನು ಗೋಡೆ ಬರಹ ಪ್ರಕರಣದಲ್ಲಿ ತಲೆಮರೆಸಿಕೊಂಡ ಅರಾಫತ್ ಅಲಿ ದುಬೈನಲ್ಲಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಈವರೆಗೂ ನಾಲ್ವರನ್ನು ಬಂಧಿಸಲಾಗಿದೆ. ಮೈಸೂರಿನ ಇಬ್ಬರು, ಮಂಗಳೂರಿನ ಒಬ್ಬ ಹಾಗೂ ಊಟಿಯಿಂದ ಒಬ್ಬನನ್ನು ಬಂಧಿಸಿ ಕರೆತರಲಾಗಿದೆ ಎಂದರು.

ಶಾರಿಕ್ ಕೊಯಂಬತ್ತೂರು, ಕೇರಳ, ತಮಿಳುನಾಡು ತಿರುಗಾಡಿ ಕಳೆದ ಸೆ.20ರಂದು ಮೈಸೂರಿಗೆ ಬಂದಿದ್ದನು. ಶಾರಿಕ್​ ಲೋಕ ನಾಯಕ ನಗರದಲ್ಲಿ ಮೋಹನ್‍ಕುಮಾರ್ ಎಂಬುವರ ಮನೆಯಲ್ಲಿ ಬಾಡಿಗೆಗೆ ಇದ್ದನು. ಮನೆ ಮಾಲೀಕರಿಗೆ ಈತನ ಬಗ್ಗೆ ಗೊತ್ತಿರಲಿಲ್ಲ. ಹುಬ್ಬಳ್ಳಿ-ಧಾರವಾಡ ನಿವಾಸಿ ಪ್ರೇಮ್‍ರಾಜ್ ಎಂಬ ಆಧಾರ್ ಕಾರ್ಡ್ ಹೊಂದಿದ್ದನು ಎಂದು ಹೇಳಿದರು.

ಶಾರಿಕ್ ಇನ್ನೂ ಚಿಕಿತ್ಸೆ ಪಡೆದುಕೊಳ್ಳುತ್ತಿರುವುದರಿಂದ ಆತ ಬ್ಲಾಸ್ಟ್​​ಗೆ ಸಂಬಂಧಿಸಿದ ಸಾಧನಗಳನ್ನು ಎಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದನು ಎಂಬುವುದನ್ನು ತಿಳಿಯಬೇಕಾಗಿದೆ. ಬ್ಲಾಸ್ಟ್​​ಗೂ ಮುನ್ನ ಶಾರಿಕ್​ ನವೆಂಬರ್ 10 ರಂದು ಮಂಗಳೂರಿಗೆ ಭೇಟಿ ನೀಡಿದ್ದನು. ಘಟನೆಯಲ್ಲಿ ಕೆಲ ಸ್ಥಳೀಯರ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ ಎಂದು ಅಲೋಕ್ ಕುಮಾರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

TV9 Kannada


Leave a Reply

Your email address will not be published.