Mann Ki Baat: 89ನೇ ಮನ್ ಕಿ ಬಾತ್; ಇಂದು ದೇಶವನ್ನುದ್ದೇಶಿಸಿ ಮಾತನಾಡಲಿರುವ ಪ್ರಧಾನಿ ನರೇಂದ್ರ ಮೋದಿ | Mann Ki Baat PM Narendra Modi Speech and Announcements in 89th Episode of Mann Ki Baat


Mann Ki Baat: 89ನೇ ಮನ್ ಕಿ ಬಾತ್; ಇಂದು ದೇಶವನ್ನುದ್ದೇಶಿಸಿ ಮಾತನಾಡಲಿರುವ ಪ್ರಧಾನಿ ನರೇಂದ್ರ ಮೋದಿ

ನರೇಂದ್ರ ಮೋದಿ

Mann Ki Baat Live News Updates: ಈ ಕಾರ್ಯಕ್ರಮವನ್ನು ಆಕಾಶವಾಣಿ ಮತ್ತು ದೂರದರ್ಶನದ ಎಲ್ಲ ನಿಲಯಗಳು ಏಕಕಾಲಕ್ಕೆ ಮರುಪ್ರಸಾರ ಮಾಡಲಿವೆ.

ದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಭಾನುವಾರ (ಮೇ 29, 2022) ಬೆಳಿಗ್ಗೆ 11 ಗಂಟೆಗೆ ಮಾಸಿಕ ಬಾನುಲಿ ಕಾರ್ಯಕ್ರಮ ‘ಮನ್​ ಕಿ ಬಾತ್​’ನಲ್ಲಿ ಮಾತನಾಡಲಿದ್ದಾರೆ. ಈ ಕಾರ್ಯಕ್ರಮವನ್ನು ಆಕಾಶವಾಣಿ ಮತ್ತು ದೂರದರ್ಶನದ ಎಲ್ಲ ನಿಲಯಗಳು ಏಕಕಾಲಕ್ಕೆ ಮರುಪ್ರಸಾರ ಮಾಡಲಿವೆ. ಆಕಾಶವಾಣಿಯ ಜಾಲತಾಣ (AIR News Website) ಮತ್ತು NEWSONAIR ಮೊಬೈಲ್​ ಆ್ಯಪ್​ಗಳಲ್ಲಿಯೂ ಇದು ಏಕಕಾಲಕ್ಕೆ ಪ್ರಸಾರವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ರೇಡಿಯೊ ಕಾರ್ಯಕ್ರಮವು AIR NEWS, DD NEWS, PMO ಮತ್ತು ಮಾಹಿತಿ ಪ್ರಸಾರ ಇಲಾಖೆಯ ಸಚಿವಾಲಯದ ಯುಟ್ಯೂಬ್ ಚಾನೆಲ್​ಗಳಲ್ಲಿಯೂ ಪ್ರಸಾರವಾಗಲಿದೆ. ಹಿಂದಿಯಲ್ಲಿ ಪ್ರಸಾರ ಮುಕ್ತಾಯವಾದ ನಂತರ ಎಲ್ಲ ಪ್ರಾದೇಶಿಕ ಭಾಷೆಗಳಲ್ಲಿಯೂ ಆಕಾಶವಾಣಿಯು ಕಾರ್ಯಕ್ರಮ ಪ್ರಸಾರ ಮಾಡಲಿದೆ.

ಮನ್​ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಲೆಂದು ದೇಶದ ವಿವಿಧೆಡೆಯಿಂದ ಸಾಕಷ್ಟು ಜನರು ಮಾಹಿತಿ ಕಳಿಸಿಕೊಟ್ಟಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಹೇಳಿದ್ದರು. ಕಳೆದ ತಿಂಗಳು ಮನ್​ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿದ್ದ ಅಂಶಗಳ ಬಗ್ಗೆ ಮೋದಿ ಅವರು ಸಣ್ಣ ಪುಸ್ತಿಕೆಯೊಂದನ್ನು ಬಿಡುಗಡೆ ಮಾಡಿದ್ದರು. ದೊಡ್ಡ ಸಂಖ್ಯೆಯಲ್ಲಿ ಯುವಜನರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡ ಬಗ್ಗೆ ಅವರು ಶ್ಲಾಘಿಸಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರ ಮನ್​ ಕಿ ಬಾತ್ ಕಾರ್ಯಕ್ರಮದ ಮೊದಲ ಭಾಷಣವು ಅಕ್ಟೋಬರ್ 3, 2014ರಲ್ಲಿ ಪ್ರಸಾರವಾಗಿತ್ತು. ಪ್ರತಿ ತಿಂಗಳ ಕೊನೆಯ ಭಾನುವಾರ ಮೋದಿ ರೇಡಿಯೊ ಮೂಲಕ ದೇಶದ ಜನರನ್ನು ಉದ್ದೇಶಿಸಿ ಮಾತನಾಡುವುದನ್ನು ರೂಢಿಸಿಕೊಂಡಿದ್ದಾರೆ. ದೇಶದ ಜನರಿಗೆ ಆಡಳಿತದ ಬಗ್ಗೆ ಮಾಹಿತಿ ಕೊಡುವುದು, ವಿವಿಧ ವಿಷಯಗಳ ಬಗ್ಗೆ ಪ್ರಧಾನಿಯು ತಮ್ಮ ದೃಷ್ಟಿಕೋನ ತಿಳಿಸಿಕೊಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.

ಮೋದಿಗೆ ಮನ್​ ಕಿ ಬಾತ್ ವಿಚಾರ ಹೊಳೆದದ್ದು 1998ರಲ್ಲಿ

ಮೋದಿ ಅವರು ಪ್ರಧಾನಿ ಅಲ್ಲ, ಗುಜರಾತಿನ ಮುಖ್ಯಮಂತ್ರಿಗಳಾಗುವ ಮೊದಲೇ ರೇಡಿಯೋ ಮೂಲಕ ದೇಶದ ಎಲ್ಲಾ ಮೂಲೆಗಳ ಜನರನ್ನು ತಲುಪಬಹುದೆಂಬ ಮನವರಿಕೆಯಾಗಿತ್ತು. ಅದು 1998ರ ಸಮಯ ಮತ್ತು ಮೋದಿಯವರು ಬಿಜೆಪಿಯ ಕಾರ್ಯಕರ್ತನಾಗಿ ಹಿಮಾಚಲ ಪ್ರದೇಶದಲ್ಲಿ ಸಂಘಟನಾ ಕೆಲಸಗಳಲ್ಲಿ ತೊಡಗಿದ್ದರು. ಅದೊಂದು ದಿನ ಅವರು ರಾಜ್ಯದ ಕುಗ್ರಾಮದಂಥ ಪ್ರದೇಶದಲ್ಲಿ ಕೆಲಸ ಮಾಡುವಾಗ ಟೀ ಕುಡಿಯಲು ಅವರು ಒಂದು ಚಿಕ್ಕ ಧಾಬಾಗೆ ಹೋಗಿದ್ದರು. ಖುಷಿಯಿಂದ ಬೀಗುತ್ತಿದ್ದ ಧಾಬಾದ ಮಾಲೀಕ ಮೋದಿಯವರ ಮುಂದೆ ಚಹಾದ ಬದಲು ಲಾಡು ತಂದಿಟ್ಟ. ಮೋದಿಯವರು, ‘ಭಯ್ಯಾ, ನಾನು ಕೇಳಿದ್ದು ಚಾಯ್, ಲಡ್ಡು ಅಲ್ಲ,’ ಎಂದರು. ಅದಕ್ಕೆ ಧಾಬಾದವನು, ‘ಭಯ್ಯಾ, ನೀವದನ್ನು ಅದನ್ನು ತಿನ್ನಲೇಬೇಕು, ಇಂದು ಇಡೀ ದೇಶದಲ್ಲಿ ಸಂತೋಷದ ಅಲೆಯಲ್ಲಿ ತೇಲುತ್ತಿದೆ. ಎಲ್ಲರೂ ಕುಣಿದು ಕುಪ್ಪಳಿಸುತ್ತಿದ್ದಾರೆ, ಬಂದ ಗ್ರಾಹಕರಿಗೆಲ್ಲ ನಾನು ಲಡ್ಡು ಹಂಚುತ್ತಿದ್ದೇನೆ,’ ಎಂದು ಹೇಳಿದ.

‘ಅಂಥದ್ದೇನಾಗಿದೆ,’ ಅಂತ ಮೋದಿಯವರು ಕೇಳಿದಾಗ ಅವನು, ‘ನಿಮಗೆ ಗೊತ್ತಿಲ್ವಾ? ಭಾರತ ಇಂದು ಅಣ್ವಸ್ತ್ರ ಪರೀಕ್ಷೆ ನಡೆಸಿದೆ,’ ಎಂದು ಹೇಳಿದ. ಮೋದಿಯವರು, ‘ನಿಮಗೆ ಹೇಗೆ ಗೊತ್ತಾಯಿತು ಭಯ್ಯಾ?’ ಅಂತ ಕೇಳಿದಾಗ, ಅವನು ರೇಡಿಯೋವನ್ನು ಅವರ ಮುಂದೆ ತಂದಿಟ್ಟ. ಆಗಿನ ಪ್ರಧಾನ ಮಂತ್ರಿ ಅಟಲ ಬಿಹಾರಿ ವಾಜಪೇಯಿ ಅವರು ಪೋಖ್ರಾನ್​ನಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆಸಿದ ಸುದ್ದಿಯ ಬಾನುಲಿ ಪ್ರಸಾರ ಜಾರಿಯಲ್ಲಿತ್ತು. ಅಂದು ಮೋದಿ ಅವರಿಗೆ ರೇಡಿಯೋದ ಶಕ್ತಿ ಮನವರಿಕೆಯಾಯಿತು. ಮುಂದೆ ಪ್ರಧಾನಿಯಾದ ನಂತರ ಅವರು ಮನ್ ಕಿ ಬಾತ್ ಮೂಲಕ ದೇಶದ ಜನರನ್ನು ತಲುಪುವ ಮಾರ್ಗವನ್ನು ರೂಪಿಸಿದರು.

ಅಂಥ ರಿಮೋಟ್ ಜಾಗದಲ್ಲಿದ್ದ ವ್ಯಕ್ತಿಗೆ ದೇಶದಲ್ಲಿ ಏನು ನಡೆಯುತ್ತಿದೆ ಅನ್ನೋದು ರೇಡಿಯೊ ಮೂಲಕ ಗೊತ್ತಾಗಿದೆ. ರೇಡಿಯೊವನ್ನು ದೇಶದಲ್ಲಿ ಯಾವ ಮೂಲೆಯಲ್ಲೂ ಆಲಿಸಬಹುದು, ಇದಕ್ಕಿಂತ ಪವರ್ ಫುಲ್ ಮಾಧ್ಯಮ ಮತ್ತೊಂದಿಲ್ಲ ಅಂತ ಮೋದಿಯವರಿಗೆ ಅವತ್ತು ಮನದಟ್ಟಾಯಿತು. ಆಗಲೇ ಜನರನ್ನು ತಲುಪಲು ರೇಡಿಯೊವನ್ನು ಬಳಸುವ ನಿರ್ಧಾರ ಅವರಲ್ಲಿ ರೂಪ ತಳೆಯಲಾರಂಭಿಸಿತ್ತು. 2014ರಲ್ಲಿ ಅವರು ಪ್ರಧಾನ ಮಂತ್ರಿಯಾದಾಗ ‘ಮನ್ ಕಿ ಬಾತ್’ ಬಾನುಲಿ ಕಾರ್ಯಕ್ರಮ ಅಸ್ತಿತ್ವಕ್ಕೆ ಬಂತು. ಅಗಲೇ ಹೇಳಿದ ಹಾಗೆ ಮೊದಲ ಕಂತು ಅಕ್ಟೋಬರ್ 3, 2014 ವಿಜಯದಶಮಿ ದಿನದಂದು ಪ್ರಸಾರವಾಯಿತು.

ಮನ್​ ಕಿ ಬಾತ್​ಗೆ ನೀವು ಮಾಹಿತಿ ಕಳಿಸಿ

ಮನ್ ಕೀ ಬಾತ್ ನಲ್ಲಿ ಪ್ರಧಾನಿಗಳು ಹಲವು ಬಾರಿ ಕನ್ನಡಿಗರನ್ನೂ ಉಲ್ಲೇಖಿಸಿದ್ದಾರೆ. ಶೌಚಾಲಯಕ್ಕಾಗಿ ಉಪವಾಸ ಧರಣಿ ನಡೆಸಿದ ರಾಯಚೂರು ಜಿಲ್ಲೆ ಗಂಗಾವತಿ ತಾಲ್ಲೂಕಿನ ಮಲ್ಲಮ್ಮ ಹೆಸರಿನ ವಿದ್ಯಾರ್ಥಿನಿ, ಚಕ್ರವರ್ತಿ ಸೂಲಿಬೆಲೆ ನೇತೃತ್ವದ ಯುವ ಬ್ರಿಗೇಡ್, ಶ್ರೀರಂಗಪಟ್ಟಣದ ವೀರಭದ್ರ ದೇವಸ್ಥಾನ ಹಾಗೂ ದಂಪತಿಗಳಾದ ಅನುದೀಪ್ ಹಾಗೂ ಮಿನೀಷಾ ನಡೆಸುತ್ತಿರುವ ಕಾರ್ಯವನ್ನು ಪ್ರಧಾನಿಗಳು ಹೊಗಳಿದ್ದಾರೆ.

‘ಮನ್ ಕಿ ಬಾತ್’ ಕಾರ್ಯಕ್ರಮಕ್ಕೆ ಐಡಿಯಾಗಳನ್ನು ಕಳಿಸುವ ಇಚ್ಛೆ ನಿಮಗಿದ್ದರೆ MyGov, NaMo ಌಪ್ ಬಳಸಬಹುದು ಇಲ್ಲವೇ 1800-11-7800 ಟೋಲ್ ಫ್ರೀ ನಂಬರ್ ಗೆ ಕರೆ ಮಾಡಿ ನಿಮ್ಮ ಸಂದೇಶವನ್ನು ರೆಕಾರ್ಡ್ ಮಾಡಬಹುದು. ಪ್ಯಾಕ್ಸ್ ಕಳುಹಿಸುವ ಹಾಗಿದ್ದರೆ, +91-11-23019545, 23016857 ನಂಬರ್ ಗಳಿಗೆ ಕಳಿಸಬಹುದು. ನಿಮ್ಮ ಪ್ರಶ್ನೆಗೆ ಫ್ಯಾಕ್ ಇಲ್ಲವೇ ಯಾವುದಾದರೂ ಮಾಧ್ಯಮದ ಮೂಲಕ ಉತ್ತರ ಸಿಗುತ್ತದೆ.

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

TV9 Kannada


Leave a Reply

Your email address will not be published. Required fields are marked *