Matthew Wade Sixes: 6, 6, 6- ಪಾಕಿಸ್ತಾನವನ್ನು ಮನೆಗಟ್ಟಿದ ಮ್ಯಾಥ್ಯೂ ವೇಡ್ ಹ್ಯಾಟ್ರಿಕ್ ಸಿಕ್ಸ್​ ವಿಡಿಯೋ ಇಲ್ಲಿದೆ ನೋಡಿ | Matthew Wade smashed Shaheen Afridi for a hat trick of sixes in Pakistan vs Australia T20 World Cup 2nd Semi Final


Matthew Wade Sixes: 6, 6, 6- ಪಾಕಿಸ್ತಾನವನ್ನು ಮನೆಗಟ್ಟಿದ ಮ್ಯಾಥ್ಯೂ ವೇಡ್ ಹ್ಯಾಟ್ರಿಕ್ ಸಿಕ್ಸ್​ ವಿಡಿಯೋ ಇಲ್ಲಿದೆ ನೋಡಿ

Matthew Wade hat-trick sixes

ಈ ಬಾರಿಯ ಟಿ20 ವಿಶ್ವಕಪ್​ನಲ್ಲಿ (T20 World Cup) ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದ್ದ ಎಲ್ಲ ಟೀಮ್​ಗಳು ಟೂರ್ನಿಯಿಂದಲೇ ಹೊರಬಿದ್ದಿವೆ. ಕ್ರಿಕೆಟ್ ಪಂಡಿತರ ಗುಂಪಿನಲ್ಲಿರದ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ (New Zealand vs Australia) ಫೈನಲ್​ಗೆ ತಲುಪಿದ್ದು, ಚೊಚ್ಚಲ ಪ್ರಶಸ್ತಿಗಾಗಿ ಕಾದಾಟ ನಡೆಸಲಿದೆ. ಟೂರ್ನಿಯ ಆರಂಭದಿಂದ ಒಂದೇ ಒಂದು ಸೋಲು ಕಾಣದೆ ಮೆರೆದಿದ್ದ ಪಾಕಿಸ್ತಾನಕ್ಕೆ ಸೆಮಿ ಫೈನಲ್​ನಲ್ಲಿ ಆಸ್ಟ್ರೇಲಿಯಾ (Pakistan vs Australia) ಸೋಲಿನ ರುಚಿತೋರಿಸಿ ಟೂರ್ನಿಯಿಂದಲೇ ಹೊರದಬ್ಬಿತು. ಪಾಕ್ ಸೋಲಿಗೆ ಆಸೀಸ್ ಗೆಲುವಿಗೆ ಪ್ರಮುಖ ಕಾರಣವಾಗಿದ್ದು ಮ್ಯಾಥ್ಯೂ ವೇಡ್ (Matthew Wade). ಸ್ಫೋಟಕ ಬ್ಯಾಟಿಂಗ್ ನಡೆಸಿದ ಇವರು ಒಂದೇ ಓವರ್​ನಲ್ಲಿ ಹ್ಯಾಟ್ರಿಕ್ ಸಿಕ್ಸ್ (Matthew Wade Hat-trick Sixes) ಸಿಡಿಸಿ ಪಂದ್ಯದ ಗತಿಯನ್ನೇ ಬದಲಾಯಿಸಿ ಬಿಟ್ಟರು. ಸಿಕ್ಕ ಜೀವದಾನವನ್ನು ಅದ್ಭುತವಾಗಿ ಬಳಸಿಕೊಂಡ ವೇಡ್ ಹೀರೋ ಎನಿಸಿಕೊಂಡರು.

96 ರನ್​ಗೆ 5 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿದ್ದ ಆಸ್ಟ್ರೇಲಿಯಾವನ್ನು ಮ್ಯಾಥ್ಯೂ ವೇಡ್ ಹಾಗೂ ಆಲ್‌ರೌಂಡರ್ ಮಾರ್ಕಸ್ ಸ್ಟಾಯ್ನಿಸ್ ಮೇಲೆತ್ತಿದರು. ಪಾಕಿಸ್ತಾನ ಬೌಲರ್‌ಗಳ ದಾಳಿಯನ್ನು ದಿಟ್ಟವಾಗಿ ಎದುರಿಸುತ್ತಾ ಸಾಗಿದ ಇವರಿಬ್ಬರು ವಿಕೆಟ್ ಕಳೆದುಕೊಳ್ಳದಂತೆ ಎಚ್ಚರಿಕೆಯಿಂದ ಆಡಿದರು. 15 ಓವರ್​ವರೆಗೂ ಪಾಕಿಸ್ತಾನಕ್ಕೆ ಗೆಲುವಿನ ನಿರೀಕ್ಷೆ ದಟ್ಟವಾಗಿತ್ತು. ಆದರೆ, ಸ್ಟಾಯ್ನಿಸ್ ಮತ್ತು ಮ್ಯಾಥ್ಯೂ ವೇಡ್ ಅಪ್ರತಿಮವಾಗಿ ಚೇಸಿಂಗ್ ನಡೆಸಿದರು.

ಬಹಳ ದಿನಗಳ ನಂತರ ತಂಡಕ್ಕೆ ಕಂಬ್ಯಾಕ್ ಮಾಡಿದ ವೇಡ್ ಕೊನೆಕೊನೆಯಲ್ಲಿ ಸಿಕ್ಸರ್ ಮಳೆ ಸುರಿಸಿ ಗೆಲುವಿಗೆ ಪ್ರಮುಖ ಕಾರಣರಾದರು. ಹಸನ್ ಅಲಿ ಎಸೆದ 18ನೇ ಓವರ್‌ನಲ್ಲಿ ಆಸ್ಟ್ರೇಲಿಯಾದ ಈ ಜೋಡಿ 15 ರನ್‌ಗಳನ್ನು ಕಸಿದುಕೊಂಡಿತ್ತು. ಹೀಗಾಗಿ ಅಂತಿಮ ಎರಡು ಓವರ್‌ನಲ್ಲಿ ಪಾಕಿಸ್ತಾನದ ಗೆಲುವಿಗೆ 22 ರನ್‌ಗಳ ಅಗತ್ಯವಿತ್ತು.

ಟೂರ್ನಿಯುದ್ದಕ್ಕೂ ಅದ್ಭುತ ಬೌಲಿಂಗ್ ದಾಳಿ ನಡೆಸಿದ್ದ ಶಾಹೀನ್ ಶಾ ಪ್ರಮುಖ ಸೆಮೀಸ್ ಪಂದ್ಯದಲ್ಲೇ ವಿಲನ್ ಆಗಿಬಿಟ್ಟಟರು. ಇವರ 19ನೇ ಓವರ್‌ನ ಕೊನೆಯ 3 ಎಸೆತಗಳಲ್ಲಿ ಸಿಕ್ಸರ್‌ ಸಿಡಿಸುವ ಮೂಲಕ ಆಸೀಸ್‌ ಗೆಲುವಿನ ರೂವಾರಿ ಎನಿಸಿದ ವೇಡ್‌ ಪಂದ್ಯಶ್ರೇಷ್ಠ ಆಟಗಾರನ ಗೌರವಕ್ಕೂ ಭಾಜನರಾದರು. ಅಫ್ರಿದಿ ಎಸೆದ ಎರಡು ಯಾರ್ಕರ್‌ ಎಸೆತಗಳನ್ನು ವಿಕೆಟ್‌ ಹಿಂಬದಿಗೆ ಸ್ಕೂಪ್‌ ಮಾಡಿ ಸಿಕ್ಸರ್‌ ತೆಗೆದ ವೇಡ್‌, ಮಿಡ್‌ವಿಕೆಟ್‌ ಕಡೆಗೆ 96 ಮೀ. ದೂರದ ದೈತ್ಯ ಸಿಕ್ಸರ್‌ ಸಿಡಿಸಿ 2010ರ ಬಳಿಕ ಆಸ್ಟ್ರೇಲಿಯಾ ತಂಡ ಮೊತ್ತ ಮೊದಲ ಬಾರಿ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ ಫೈನಲ್‌ ತಲುಪುವಂತೆ ಮಾಡಿದರು.

 

ಇದಕ್ಕೂ ಮುನ್ನ 19ನೇ ಓವರ್‌ನ ಮೊದಲ ಎಸೆತದಲ್ಲೇ ಮ್ಯಾಥ್ಯೂ ವೇಡ್‌ ಡೀಪ್‌ ಮಿಡ್‌ ವಿಕೆಟ್‌ ಕಡೆಗೆ ಕ್ಯಾಚ್‌ ನೀಡಿದ್ದರು. ಆದರೆ, ಒತ್ತಡ ನಿಭಾಯಿಸುವಲ್ಲಿ ವಿಫಲರಾದ ಫೀಲ್ಡರ್‌ ಹಸನ್‌ ಅಲಿ ಓಡುತ್ತಾ ಕ್ಯಾಚ್‌ ತೆಗೆದುಕೊಳ್ಳುವ ಪ್ರಯತ್ನದಲ್ಲಿ ವಿಫಲರಾಗಿದ್ದರು. ಬಹುಶಃ ಈ ಕ್ಯಾಚ್‌ ಪಡೆಯುವಲ್ಲಿ ಹಸನ್ ಅಲಿ ಯಶಸ್ವಿಯಾಗಿದ್ದರೆ ಫಲಿತಾಂಶ ಬೇರೆಯದ್ದೇ ಆಗಿರುತ್ತಿತ್ತು.

ಅಂತಿಮವಾಗಿ ಆಸ್ಟ್ರೇಲಿಯಾ ಆಸ್ಟ್ರೇಲಿಯಾ ಸೋಲಿನ ಸುಳಿಯಿಂದ ಪಾರಾಗಿ ಪಾಕಿಸ್ತಾನ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ 5 ವಿಕೆಟ್‌ಗಳ ಜಯ ಸಾಧಿಸಿ ಫೈನಲ್​ಗೆ ಲಗ್ಗೆಯಿಟ್ಟಿತು. ವೇಡ್ ಕೇವಲ 17 ಎಸೆತಗಳಲ್ಲಿ 2 ಬೌಂಡರಿ, 4 ಸಿಕ್ಸರ್ ಸಿಡಿಸಿ ಅಜೇಯ 41 ರನ್ ಚಚ್ಚಿದರೆ, ಸ್ಟಾಯ್ನಿಸ್ 31 ಎಸೆತಗಳಲ್ಲಿ ತಲಾ 2 ಬೌಂಡರಿ, ಸಿಕ್ಸರ್ ಬಾರಿಸಿ ಅಜೇಯ 40 ರನ್ ಗಳಿಸಿದರು.

Pakistan vs Australia: ಪಂದ್ಯದ ಗತಿಯನ್ನೇ ಬದಲಾಯಿಸಿದ ಮ್ಯಾಥ್ಯೂ ವೇಡ್ ಹ್ಯಾಟ್ರಿಕ್ಸ್ ಸಿಕ್ಸ್: ಆಸೀಸ್ ಫೈನಲ್​ಗೆ, ಪಾಕ್ ಮನೆಗೆ

(Matthew Wade smashed Shaheen Afridi for a hat-trick of sixes in Pakistan vs Australia T20 World Cup 2nd Semi-Final)

TV9 Kannada


Leave a Reply

Your email address will not be published. Required fields are marked *