ಶಾಲೆ, ಪಿಯು ಕಾಲೇಜುಗಳಲ್ಲಿ ಧ್ಯಾನ ಮತ್ತು ನೈತಿಕ ಶಿಕ್ಷಣ ವಿಚಾರವಾಗಿ ಡಾ. ಗುರುರಾಜ ಕರ್ಜಗಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ವರದಿ ಪಡೆಯಲು ರಾಜ್ಯ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ.

Image Credit source: asianetnews.com
ಬೆಂಗಳೂರು: ಶಾಲೆ, ಪಿಯು ಕಾಲೇಜುಗಳಲ್ಲಿ ಧ್ಯಾನ (Meditation) ಮತ್ತು ನೈತಿಕ ಶಿಕ್ಷಣ ವಿಚಾರವಾಗಿ ಡಾ. ಗುರುರಾಜ ಕರ್ಜಗಿ (Dr. Gururaja Karjagi) ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ವರದಿ ಪಡೆಯಲು ರಾಜ್ಯ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ. ರಾಜ್ಯದ ಎಲ್ಲ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಧ್ಯಾನ ಮತ್ತು ನೈತಿಕ ಶಿಕ್ಷಣ ನೀಡುವ ಕುರಿತು ತಜ್ಞರಿಂದ ಮಾಹಿತಿ ಪಡೆದು ಶಾಲಾ ಕಾಲೇಜುಗಳಲ್ಲಿ ನೈತಿಕ ಶಿಕ್ಷಣ ಜಾರಿಗೆ ಶಿಕ್ಷಣ ಇಲಾಖೆ ಮುಂದಾಗಿದೆ. ಸರ್ಕಾರದಿಂದ ಆರು ಶಿಕ್ಷಣ ತಜ್ಞರನ್ನು ಸಮಿತಿ ಒಳಗೊಂಡಿದ್ದು, ಸರ್ಕಾರಕ್ಕೆ ವರದಿ ನೀಡಲು ಸಮಿತಿಗೆ ಒಂದು ತಿಂಗಳ ಕಾಲಾವಕಾಶ ನೀಡಲಾಗಿದೆ. ಮಕ್ಕಳಲ್ಲಿ ದೃಢತೆ, ಏಕಾಗ್ರತೆ, ಆರೋಗ್ಯ ವೃದ್ಧಿ, ದೈಹಿಕ ಮತ್ತು ಮಾನಸಿಕ ಒತ್ತಡ ಕಡಿಮೆಯಾಗಲು ಸಹಕಾರಿಯಾಗುವಂತೆ ಶಾಲೆಗಳಲ್ಲಿ ಪ್ರತಿದಿನ ಧ್ಯಾನ ಮಾಡಿಸುವುದು ಅಗತ್ಯವಾಗಿರುತ್ತದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಕೆಲ ತಿಂಗಳ ಹಿಂದೆ ಸುತ್ತೋಲೆಯಲ್ಲಿ ತಿಳಿಸಿದ್ದರು.
ವಿದ್ಯಾರ್ಥಿಗಳಲ್ಲಿ ಸಕಾರಾತ್ಮಕ ಸ್ಪಂದನೆ
ಧ್ಯಾನದ ಅಭ್ಯಾಸವು ವಿದ್ಯಾರ್ಥಿಗಳಲ್ಲಿ ಸಕಾರಾತ್ಮಕ ಸ್ಪಂದನೆ, ಒಳ್ಳೆಯ ಹವ್ಯಾಸ ಬೆಳೆಸಿಕೊಂಡು ಉತ್ತಮ ಪ್ರಜೆಯಾಗಲು ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದರು. ರಾಜ್ಯದ ಕೆಲವು ಜಿಲ್ಲೆಗಳ ಶಾಲೆಗಳಲ್ಲಿ ಈಗಾಗಲೇ ಧ್ಯಾನವನ್ನು ಮಾಡಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಪ್ರಾಥಮಿಕ ಶಾಲೆಗಳಲ್ಲಿ ಪ್ರತಿದಿನ 10 ನಿಮಿಷಗಳ ಕಾಲ ಧ್ಯಾನವನ್ನು ಮಾಡಿಸಲು ಅವಕಾಶ ಕಲ್ಪಿಸುವಂತೆ ಪ್ರಾಥಮಿಕ ಶಾಲಾ ಶಿಕ್ಷಣ ಸಂಘದ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು ಕೋರಿರುತ್ತಾರೆ ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿತ್ತು.