
ಸುತ್ತಮುತ್ತ ಮನೆಯ ಮಕ್ಕಳೊಂದಿಗೆ ರಾಯನ್ ಸರ್ಜಾ ಆಟವಾಡುತ್ತಿರುವುದು (ಎಡ), ಚಿರು-ಮೇಘನಾ ಹಾಗೂ ರಾಯನ್ (ಬಲ)
Selfie Mummy Google Daddy | Raayan Raj Sarja: ‘ಮೊಬೈಲ್ ಬಿಡಿ, ಮೈದಾನಕ್ಕೆ ಬನ್ನಿ’ ಎಂದು ಸಂದೇಶ ನೀಡಿದ್ದಾರೆ ಮೇಘನಾ ರಾಜ್. ರಾಯನ್ ರಾಜ್ ಸರ್ಜಾ ಆಟವಾಡುತ್ತಿರುವ ವಿಶೇಷ ವಿಡಿಯೋ ಮೂಲಕ ನಟಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ.
ಬಹುಭಾಷಾ ನಟಿ ಮೇಘನಾ ರಾಜ್ ಸರ್ಜಾ (Meghana Raj Sarja) ಸದ್ಯ ಚಿತ್ರರಂಗಕ್ಕೆ ಕಮ್ಬ್ಯಾಕ್ ಮಾಡಿದ್ದಾರೆ. ಸಿನಿಮಾ ಕೆಲಸಗಳ ನಡುವೆಯೇ ಅವರು ಪ್ರಮುಖವಾಗಿ ಪುತ್ರ ರಾಯನ್ ರಾಜ್ ಸರ್ಜಾ (Raayan Raj Sarja) ಬೆಳವಣಿಗೆಯ ಮೇಲೆ ವಿಶೇಷ ಗಮನವಿಟ್ಟಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟಿವ್ ಇರುವ ನಟಿ ರಾಯನ್ ತುಂಟಾಟಗಳ ವಿಡಿಯೋಗಳನ್ನು ಆಗಾಗ ಹಂಚಿಕೊಳ್ಳುತ್ತಿರುತ್ತಾರೆ. ಇದರೊಂದಿಗೆ ಚಿರಂಜೀವಿ ಸರ್ಜಾರ (Chiranjeevi Sarja) ನೆನಪುಗಳನ್ನೂ ಮೇಘನಾ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಮೇಘನಾ ಹೊಸ ವಿಡಿಯೋ ಹಂಚಿಕೊಂಡಿದ್ದಾರೆ. ಅದರಲ್ಲಿ ಚಿರು ಹಾಗೂ ತಮ್ಮ ಬಾಲ್ಯದ ನೆನಪುಗಳನ್ನು ಸ್ಮರಿಸಿಕೊಂಡಿರುವ ನಟಿ, ರಾಯನ್ ಈಗ ಹೇಗೆ ಬೆಳೆಯುತ್ತಿದ್ದಾನೆ ಎನ್ನುವುದನ್ನೂ ವಿವರಿಸಿದ್ದಾರೆ. ಮನೆಯ ಸುತ್ತಮುತ್ತಲಿನ ಬಾಲಕರೊಂದಿಗೆ ರಾಯನ್ ಆಟವಾಡುತ್ತಿರುವ ವಿಡಿಯೋ ಶೇರ್ ಮಾಡಿರುವ ನಟಿ, ‘ಮೊಬೈಲ್ ಬಿಡಿ ಮೈದಾನಕ್ಕೆ ಬನ್ನಿ’ ಎಂದು ಕರೆ ನೀಡಿದ್ದಾರೆ.
ಮೇಘನಾ ರಾಜ್ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಅದರಲ್ಲಿ ಹಲವು ವಿಚಾರಗಳನ್ನು ಬರೆದಿದ್ದಾರೆ. ‘ಮೊಬೈಲ್ ಬಿಡಿ’ ಎಂದು ಕರೆ ನೀಡಿರುವುದರ ಜತೆಗೆ ಹಿಂದಿನ ಕಾಲದಲ್ಲಿ ಮಕ್ಕಳು ಹೇಗೆ ಬೆಳೆಯುತ್ತಿದ್ದರು ಎನ್ನುವುದನ್ನೂ ನಟಿ ನೆನಪಿಸಿಕೊಂಡಿದ್ದಾರೆ. ಇದಕ್ಕೆ ತಮ್ಮದೇ ಉದಾಹರಣೆ ಕೊಟ್ಟಿರುವ ಮೇಘನಾ ‘‘ನಾನು ಹಾಗೂ ಚಿರು ಬೆಳೆದಂತೆಯೇ ರಾಯನ್ ಕೂಡ ನಮ್ಮ ಏರಿಯಾದ ಮಕ್ಕಳೊಂದಿಗೆ ಆಟವಾಡುತ್ತಾ ಬೆಳೆಯಲು ಪ್ರೋತ್ಸಾಹ ನೀಡುತ್ತಿದ್ದೇವೆ’’ ಎಂದು ಹೇಳಿದ್ದಾರೆ.
‘‘ಸಣ್ಣ ವಯಸ್ಸಿನಲ್ಲಿ ಕಾರ್ಟೂನ್ಗಳೊಂದಿಗೆ ಆತ ಸಮಯ ಕಳೆಯಬೇಕು ಎನ್ನುವುದನ್ನು ಒಪ್ಪುತ್ತೇನೆ’’ ಎಂದಿರುವ ಮೇಘನಾ, ‘‘ಆದರೆ ರಾಯನ್ ಹಳೆಯ ಮಾದರಿಯಲ್ಲಿ ಬೆಳೆಯುವಂತೆ ನಾವು ನೋಡಿಕೊಳ್ಳುತ್ತಿದ್ದೇವೆ. ಅಂದರೆ ಸುತ್ತಮುತ್ತಲಿನ ಮಕ್ಕಳೊಂದಿಗೆ ಆಟವಾಡುತ್ತಾ, ಆತನದ್ದೇ ವಯಸ್ಸಿನವರೊಂದಿಗೆ ಬೆರೆಯುತ್ತಾ ಬೆಳೆಯಬೇಕು’’ ಎಂದು ತಿಳಿಸಿದ್ದಾರೆ. ಈ ಪೋಸ್ಟ್ಗೆ ‘ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ’ ಎಂದು ಹ್ಯಾಶ್ ಟ್ಯಾಗ್ ನೀಡಿದ್ದಾರೆ ನಟಿ.
ಮೇಘನಾ ರಾಜ್ ಹಂಚಿಕೊಂಡಿರುವ ವಿಡಿಯೋ ಇಲ್ಲಿದೆ: