ಮೇಕೆದಾಟು ಪಾದಯಾತ್ರೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್
ರಾಮನಗರ: ಕಾಂಗ್ರೆಸ್ ಒಂದು ವೇಳೆ ಮೇಕೆದಾಟು ಪಾದಯಾತ್ರೆ ಮುಂದುವರಿಸಲು ಮುಂದಾದರೆ ಅದನ್ನು ತಡೆಯಲು ಪೊಲೀಸರು ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದರು. ಸ್ವತಃ ಎಡಿಜಿಪಿ, ಡಿಐಜಿ ಮತ್ತು ಐಪಿಜಿ ಸ್ಥಳದಲ್ಲಿ ಮೊಕ್ಕಂ ಹೂಡಿದ್ದರು. ಈ ಹಿಂದೆ ರಾಮನಗರದಲ್ಲಿ ಕೆಲಸ ಮಾಡಿದ್ದ ಎಸ್ಪಿಗಳು ಸೇರಿ ನಾಲ್ಕು ಜನ ಎಸ್ಪಿಗಳನ್ನು ನಿಯೋಜನೆ ಮಾಡಲಾಗಿತ್ತು. 16 ಕೆಎಸ್ಆರ್ಪಿ, 6 ಡಿಎಆರ್ ತುಕಡಿ ಸೇರಿದಂತೆ 2000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ರಾಮನಗರಕ್ಕೆ ನಿಯೋಜಿಸಲಾಗಿತ್ತು. ಪಾದಯಾತ್ರೆ ಮುಂದುವರಿಸುವ ಕಾಂಗ್ರೆಸ್ ನಾಯಕರನ್ನು ಬಂಧಿಸಲು ಪೊಲೀಸರು ಸನ್ನದ್ಧರಾಗಿದ್ದರು. ಬಂಧಿತರನ್ನು ಕರೆದೊಯ್ಯಲೆಂದು ಕೆಎಸ್ಆರ್ಟಿಸಿ ಬಸ್ ಸಿದ್ಧಪಡಿಸಿಕೊಂಡಿದ್ದರು. ರಾಮನಗರದ ಐಜೂರು ವೃತ್ತದಲ್ಲಿ ಱಲಿ ತಡೆಯಲು ಬ್ಯಾರಿಕೇಡ್ ಹಾಕಿ, ಎರಡು ವಾಟರ್ಜೆಟ್ಗಳನ್ನು ಇರಿಸಿಕೊಳ್ಳಲಾಗಿತ್ತು.
ರಾಮನಗರಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳನ್ನೂ ಬಂದ್ ಮಾಡುವ ಮೂಲಕ ಪಾದಯಾತ್ರೆಗೆ ಹೊರಜಿಲ್ಲೆಯಿಂದ ಬರುವ ಕಾರ್ಯಕರ್ತರಿಗೆ ತಡೆಯೊಡ್ಡಲಾಯಿತು. ಮೈಸೂರು-ಬೆಂಗಳೂರು ಪ್ರಯಾಣಿಕರಿಗೆ ಪರ್ಯಾಯ ಮಾರ್ಗ ಕಲ್ಪಿಸಲಾಗಿತ್ತು. ಹಿರಿಯ ಅಧಿಕಾರಿಗಳು ನಿನ್ನೆ (ಜ.12) ತಡಯಾತ್ರಿಯಿಂದಲೂ ರಾಮನಗರದ ವಿವಿಧೆಡೆ ಸಭೆಗಳನ್ನು ನಡೆಸುತ್ತಿದ್ದಾರೆ. ಎಡಿಜಿಪಿ (ಕಾನೂನು ಸುವ್ಯವಸ್ಥೆ) ಪ್ರತಾಪ್ ರೆಡ್ಡಿ ನೇತೃತ್ವದಲ್ಲಿ ಸಭೆ ನಡೆಸಿ, ಹಲವು ಪ್ರಮುಖ ಸೂಚನೆಗಳನ್ನು ನೀಡಲಾಯಿತು. ರಾಮನಗರ ಜಿಲ್ಲೆಯಾದ್ಯಂತ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ಸೂಚನೆಯ ಮೇರೆಗೆ ರಾಜ್ಯ ನಾಯಕರು ಪಾದಯಾತ್ರೆಯನ್ನು ಹಿಂಪಡೆದ ಕಾರಣ ಪೊಲೀಸ್ ಕಾರ್ಯಾಚರಣೆಯ ಅಗತ್ಯ ಬೀಳಲಿಲ್ಲ.
ಕಾಂಗ್ರೆಸ್ ಪಾದಯಾತ್ರೆ ಸ್ಥಗಿತಕ್ಕೆ ಪ್ರಮುಖ ಕಾರಣಗಳು
– ತೀವ್ರಗೊಳ್ಳುತ್ತಿರುವ ಕೋವಿಡ್ ಸೊಂಕಿನ ಆತಂಕ
– ಕಾಂಗ್ರೆಸ್ ಹಿರಿಯ ನಾಯಕರಿಗೆ ಕಾಣಿಸಿಕೊಳ್ಳುತ್ತಿರುವ ಕೋವಿಡ್
– ಮುಂದೆ ಕೋವಿಡ್ ತೀವ್ರವಾಗಿ ಹರಡಿದರೆ ಕಾಂಗ್ರೆಸ್ ಹೊಣೆ ಹೊರಬೇಕಾಗುತ್ತದೆ
– ಕಾಂಗ್ರೆಸ್ನ ಹಟಮಾರಿತನದಿಂದ ಕೋವಿಡ್ ಹೆಚ್ಚಾಯ್ತು ಎಂಬ ಆರೋಪ ಎದುರಿಸಬೇಕಾಗಬಹುದು
– ಆರೋಗ್ಯ ತುರ್ತು ಪರಿಸ್ಥಿತಿ ಇರುವಾಗಲೂ ಕಾಂಗ್ರೆಸ್ಗೆ ರಾಜಕೀಯ ಪಾದಯಾತ್ರೆಯೇ ಮುಖ್ಯವಾಯ್ತು ಎಂಬ ಆರೋಪ ಎದುರಾಗಬಹುದು
– ಎಐಸಿಸಿ ಮಟ್ಟದಲ್ಲಿಯೂ ಕೂಡ ರಾಜ್ಯ ಕಾಂಗ್ರೆಸ್ ಪಾದಯಾತ್ರೆ ಮುಜುಗರ ಉಂಟು ಮಾಡುವ ಸಾಧ್ಯತೆ
– ಚುನಾವಣೆ ಇರುವ ಉತ್ತರ ಪ್ರದೇಶದಲ್ಲಿಯೇ ಕಾಂಗ್ರೆಸ್ ವರ್ಚುವಲ್ ಸಭೆಗಳನ್ನು ಹಮ್ಮಿಕೊಳ್ಳುತ್ತಿದೆ
– ಕಾಂಗ್ರೆಸ್ ಪ್ರಮುಖ ನಾಯಕಿ ಪ್ರಿಯಾಂಕ ಗಾಂಧಿ ವರ್ಚುವಲ್ ಪ್ರಚಾರಕ್ಕೆ ಹೆಚ್ಚು ಒತ್ತು ಕೊಡ್ತಿದ್ದಾರೆ
– ಅವರದೇ ಪಕ್ಷ ಕೋವಿಡ್ ಹೆಚ್ಚಳಕ್ಕೆ ಕಾರಣವಾದರೆ ರಾಷ್ಟ್ರೀಯ ಮಟ್ಟದಲ್ಲೂ ಮುಜುಗರ
– ಕಾನೂನಾತ್ಮಕವಾಗಿಯೂ ಪಾದಯಾತ್ರೆಯನ್ನು ಮುಂದುವರಿಸಲು ಅಡ್ಡಿ
– ಹೈಕೋರ್ಟ್ಗೆ ಕಾಂಗ್ರೆಸ್ ಪಕ್ಷವು ನಾಳೆಯೇ (ಜನವರಿ 14) ಉತ್ತರ ನೀಡಬೇಕಿತ್ತು