MI vs CSK: ಐಪಿಎಲ್​​ನಲ್ಲಿಂದು ರೋಚಕ ಕದನ: ಗೆಲ್ಲಲೇ ಬೇಕಾದ ಒತ್ತಡದಲ್ಲಿ ಸಿಎಸ್​​ಕೆ-ಮುಂಬೈ | All you need to know about Mumbai Indians MI vs Chennai Super Kings CSK match in IPL 2022


MI vs CSK: ಐಪಿಎಲ್​​ನಲ್ಲಿಂದು ರೋಚಕ ಕದನ: ಗೆಲ್ಲಲೇ ಬೇಕಾದ ಒತ್ತಡದಲ್ಲಿ ಸಿಎಸ್​​ಕೆ-ಮುಂಬೈ

MI vs CSK IPL 2022

ಐಪಿಎಲ್ 2022 (IPL 2022) ರಲ್ಲಿಂದು ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ಹಾಗೂ ರವೀಂದ್ರ ಜಡೇಜಾ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ (MI vs CSK)​​ ತಂಡ ಇಂದು ಡಾ. ಡಿವೈ ಪಾಟಿಲ್ ಸ್ಫೋರ್ಟ್ಸ್​ ಅಕಾಡೆಮಿ ಅಂಗಣದಲ್ಲಿ ಮುಖಾಮುಖಿ ಆಗಲಿದೆ. ಈ ಟೂರ್ನಿಯ ಪಾಯಿಂಟ್ ಟೇಬಲ್​​ನಲ್ಲಿ ಪಾತಾಳದಲ್ಲಿರುವ ಉಭಯ ತಂಡಗಳ ಕಾದಾಟ ಸಾಕಷ್ಟು ರೋಚಕತೆ ಸೃಷ್ಟಿಸಿದೆ. ಮುಂಬೈ ಇಂಡಿಯನ್ಸ್ ಆಡಿದ ಆರು ಪಂದ್ಯಗಳಲ್ಲಿ ಒಂದೂ ಗೆಲುವು ಸಾಧಿಸಲು ವಿಫಲವಾಗಿದದೆ. ಸಿಎಸ್‌ಕೆ ಕೂಡ ಇಷ್ಟೇ ಪಂದ್ಯಗಳನ್ನು ಆಡಿದ್ದು 1 ಗೆಲುವು ಕಂಡಿದೆ. ಇಂದಿನ ಪಂದ್ಯದಲ್ಲಿ ರೋಹಿತ್ ಪಡೆ ಸೋತರೆ ಬಹುತೇಕ ಟೂರ್ನಿಯಿಂದ ಹೊರಬಿದ್ದಂತೆ. ಇತ್ತ ಜಡೇಜಾ (Ravindra Jadeja) ಪಡೆಗೂ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಉಭಯ ತಂಡಗಳಲ್ಲೂ ಸ್ಟಾರ್ ಆಟಗಾರರ ದಂಡೇ ಇದ್ದರು ಅದೃಷ್ಟ ಕೈ ಹಿಡಿಯುತ್ತಿಲ್ಲ.

ಮುಂಬೈ ತಂಡ ಟೂರ್ನಿ ಶುರುವಾದಾಗಿನಿಂದ ಉತ್ತಮ ಪಡೆದುಕೊಳ್ಳುವಲ್ಲಿ ಎಡವುತ್ತಿದೆ. ಅದರಲ್ಲೂ ನಾಯಕ ರೋಹಿತ್ ಶರ್ಮ ಅವರೇ ಸತತ ವೈಫಲ್ಯದಿಂದ ಬಳಲುತ್ತಿದ್ದಾರೆ. ಇದುವರೆಗಿನ 6 ಇನಿಂಗ್ಸ್‌ಗಳಿಂದ ಕೇವಲ 114 ರನ್ ಪೇರಿಸಲಷ್ಟೇ ಶಕ್ತರಾಗಿದ್ದಾರೆ. ಅಂತೆಯೆ ಭಾರೀ ಬೆಲೆ 15.25 ಕೋಟಿ ರೂ. ಪಡೆದಿರುವ ಯುವ ಬ್ಯಾಟರ್ ಇಶಾನ್ ಕಿಶನ್ ಕೂಡ ಎರಡು ಅರ್ಧ ಶತಕಗಳ ಸಹಾಯದಿಂದ ಆರು ಪಂದ್ಯಗಳಿಂದ 191 ರನ್‌ಗಳಿಸಿದ್ದು, ಇನ್ನೂ ಹೆಚ್ಚಿನದನ್ನು ಮಾಡಬೇಕಾಗಿದೆ. ಇವರಿಬ್ಬರು ಸಿಡಿಯಲೇ ಬೇಕಾದ ಒತ್ತಡಕ್ಕೆ ಸಿಲುಕಿಗೊಂಡಿದ್ದಾರೆ.

ಮಧ್ಯಮ ಕ್ರಮಾಂಕದಲ್ಲಿ ಡೆವಾಲ್ಡ್ ಬ್ರೆವಿಸ್, ತಿಲಕ್ ವರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಅವರು ವೈಯಕ್ತಿಕವಾಗಿ ಉತ್ತಮ ಆಡಿದ್ದಾರಾದರೂ ಒಟ್ಟಾಗಿ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಗಿದೆ. ಇಲ್ಲಿಯವರೆಗಿನ ಮತ್ತೊಂದು ನಿರಾಶೆ ಎಂದರೆ ಆಲ್‌ರೌಂಡರ್ ಕೀರಾನ್ ಪೊಲಾರ್ಡ್ ಅವರ ಪಂದ್ಯಗಳನ್ನು ಗೆಲ್ಲುವ ಸಾಮರ್ಥ್ಯ ಕ್ಷೀಣಿಸುತ್ತಿದೆ. ಕೇವಲ 82 ರನ್‌ಗಳೊಂದಿಗೆ, ಪೊಲಾರ್ಡ್ ಸಂಪೂರ್ಣ ವಿಫಲರಾಗಿದ್ದಾರೆ, ಅವರ ಉಳಿಸಿಕೊಳ್ಳುವಿಕೆಯ ಬಗ್ಗೆ ಪ್ರಶ್ನೆಗಳು ಹುಟ್ಟಿಕೊಂಡಿವೆ. ಬೌಲಿಂಗ್ ವಿಭಾಗದಲ್ಲಿ ವೇಗಿ ಜಸ್‌ಪ್ರೀತ್ ಬುಮ್ರಾಗೆ ಅಗತ್ಯ ಸಾಥ್ ಸಿಗುತ್ತಿಲ್ಲ. ಇದರ ನಡುವೆ ಹಿರಿಯ ಪೇಸ್‌ ಬೌಲರ್‌ ಧವಳ್‌ ಕುಲಕರ್ಣಿ ಮುಂಬೈ ಇಂಡಿಯನ್ಸ್‌ ತಂಡವನ್ನು ಕೂಡಿಕೊಳ್ಳುವ ಸಾಧ್ಯತೆ ಇದೆ. ಇವರು ಮೆಗಾ ಹರಾಜಿನಲ್ಲಿ ಮಾರಾಟವಾಗಿರಲಿಲ್ಲ.

ಇನ್ನು ಚೆನ್ನೈ ಸೂಪರ್ ಕಿಂಗ್ಸ್ ನಾಲ್ಕು ಬಾರಿ ಟ್ರೋಫಿ ಎತ್ತಿ ಹಿಡಿದಿದ್ದರೂ ಈ ಬಾರಿ ಸಂಪೂರ್ಣ ವಿಫಲವಾಗಿದೆ. ಇದುವರೆಗೂ ಆಡಿರುವ 6 ಪಂದ್ಯಗಳಲ್ಲಿ 5 ರಲ್ಲಿ ಸೋತು, 1ರಲ್ಲಿ ಗೆದ್ದಿರುವ ಸಿಎಸ್‌ಕೆ ತಂಡಕ್ಕೂ ಗೆಲುವೊಂದೇ ಮಾರ್ಗವಾಗಿದೆ. ರಾಬಿನ್ ಉತ್ತಪ್ಪ, ಶಿವಂ ದುಬೆ ಜೋಡಿ ಆರ್‌ಸಿಬಿ ಎದುರು ಅಬ್ಬರಿಸಿದರೂ ಗುಜರಾತ್ ವಿಲರಾಗಿದ್ದಾರೆ. ಆರಂಭಿಕ ಬ್ಯಾಟರ್ ಋತುರಾಜ್ ಗಾಯಕ್ವಾಡ್  ಫಾರ್ಮ್‌ಗೆ ಮರಳಿರುವುದು ಸಮಾಧಾನಕರ ವಿಷಯ. ಅನುಭವಿಗಳಾದ ಮೊಯಿನ್ ಅಲಿ, ಅಂಬಟಿ ರಾಯುಡು, ನಾಯಕ ರವೀಂದ್ರ ಜಡೇಜಾರಿಂದ ಜವಾಬ್ದಾರಿ ಪ್ರದರ್ಶನ ಬರಬೇಕಿದೆ. ಬೌಲಿಂಗ್‌ನಲ್ಲಿ ಡ್ವೇನ್ ಬ್ರಾವೋ, ಮಹೀಶ್ ತೀಕ್ಷಣ ಜೋಡಿ ಗಮನಸೆಳೆಯುತ್ತಿದ್ದರೂ ಇತರರಿಂದ ಬೆಂಬಲ ದಕ್ಕುತ್ತಿಲ್ಲ. ಹೀಗಾಗಿ ಸಿಎಸ್​ಕೆ ತಂಡದಲ್ಲಿ ಇಂದಿನ ಪಂದ್ಯಕ್ಕೆ ಕೆಲ ಬದಲಾವಣೆ ನಿರೀಕ್ಷಿಸಲಾಗಿದೆ.

ಉಭಯ ತಂಡಗಳು ಇದುವರೆಗೆ ಐಪಿಎಲ್​ನಲ್ಲಿ ಒಟ್ಟು 32 ಬಾರಿ ಮುಖಾಮುಖಿ ಆಗಿವೆ. ಇದರಲ್ಲಿ, ಮುಂಬೈ 19 ಪಂದ್ಯಗಳಲ್ಲಿ ಮತ್ತು ಸಿಎಸ್‌ಕೆ 13 ಪಂದ್ಯಗಳಲ್ಲಿ ಗೆದ್ದ ಇತಿಹಾವಿದೆ. ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಬ್ಯಾಟರ್‌ಗಳಿಗೆ ಉತ್ತಮ ಸಹಕಾರಿಯಾಗಿದೆ. ಹೀಗಾಗಿ ಮತ್ತೊಂದು ಹೈಸ್ಕೋರ್ ಪಂದ್ಯ ನಡೆದರೆ ಅಚ್ಚರಿಯಿಲ್ಲ. ಪಿಚ್ ಹಸಿರಿನಿಂದ ಕೂಡಿದ್ದ ಸ್ಪಿನ್ನರ್‌ಗಳಿಗೆ ನೆರವು ನೀಡುವ ಸಾಧ್ಯತೆ ಕಡಿಮೆಯಿದೆ. ಆದರೆ ವೇಗಿಗಳಿಗೆ ಈ ಪಿಚ್ ಲಾಭದಾಯಕವಾಗಿರಲಿದೆ.

ಸಂಭಾವ್ಯ ಪ್ಲೇಯಿಂಗ್ XI:

ಸಿಎಸ್​​ಕೆ: ರವೀಂದ್ರ ಜಡೇಜಾ (ನಾಯಕ), ರಿತುರಾಜ್ ಗಾಯಕ್ವಾಡ್, ರಾಬಿನ್ ಉತ್ತಪ್ಪ, ಮೊಯಿನ್ ಅಲಿ, ಅಂಬಟಿ ರಾಯುಡು, ಶಿವಂ ದುಬೆ, ಮಹೇಂದ್ರ ಸಿಂಗ್ ಧೋನಿ, ಡ್ವೇನ್ ಬ್ರಾವೋ, ಡ್ವೇನ್ ಪ್ರಿಟೋರಿಯಸ್, ಮುಖೇಶ್ ಚೌಧರಿ, ಮಹಿಷ್ ತೀಕ್ಷಣ.

ಮುಂಬೈ: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ಡೆವಾಲ್ಡ್ ಬ್ರೆವಿಸ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಕೀರಾನ್ ಪೊಲಾರ್ಡ್, ಫ್ಯಾಬಿಯನ್ ಅಲೆನ್, ಜಯದೇವ್ ಉನದ್ಕತ್, ಮಯಾಂಕ್ ಮಾರ್ಕಾಂಡೆ, ಜಸ್ಪ್ರೀತ್ ಬುಮ್ರಾ, ಟೈಮಲ್ ಮಿಲ್ಸ್.

DC vs PBKS, IPL 2022: 6.3 ಓವರ್​ನಲ್ಲಿ 83 ರನ್: ವಾರ್ನರ್-ಪೃಥ್ವಿ ಶಾ ಸಿಡಿಲಬ್ಬರದ ಬ್ಯಾಟಿಂಗ್ ಹೇಗಿತ್ತು ನೋಡಿ

TV9 Kannada


Leave a Reply

Your email address will not be published.