Mukesh Ambani Birthday: ಭಾರತದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಬಾಲ್ಯ, ಐಷಾರಾಮಿ ನಿವಾಸದ ಕುರಿತ ಕುತೂಹಲಕರ ಮಾಹಿತಿ | Mukesh Ambani Birthday Wiki, Early life, family and achievments of the richest businessman of India in Kannada


Mukesh Ambani Birthday: ಭಾರತದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಬಾಲ್ಯ, ಐಷಾರಾಮಿ ನಿವಾಸದ ಕುರಿತ ಕುತೂಹಲಕರ ಮಾಹಿತಿ

ಮುಖೇಶ್ ಅಂಬಾನಿ (ಸಂಗ್ರಹ ಚಿತ್ರ)

ಮುಕೇಶ್ ಅಂಬಾನಿ (Mukesh Ambani) ವ್ಯಾಪಾರ ಕ್ಷೇತ್ರದಲ್ಲಿ ಶ್ರೇಷ್ಠ ಉದ್ಯಮಿಗಳಲ್ಲಿ ಒಬ್ಬರು ಎಂದು ನಿಸ್ಸಂದೇಹವಾಗಿ ಹೇಳಬಹುದು. ಅವರು ತಮ್ಮ ಚಾಣಾಕ್ಷತೆಯ ಮೂಲಕ ಭಾರತೀಯ ಉದ್ದಿಮೆಗಳಿಗೆ ಹೊಸ ಆಯಾಮವನ್ನು ನೀಡಿದ್ದಾರೆ. ಆರ್ಥಿಕತೆಯ ಉನ್ನತೀಕರಣಕ್ಕೆ ಅವರ ಕೊಡುಗೆಯೂ ಅಪಾರ. ಪ್ರಸ್ತುತ ಮುಕೇಶ್ ಅಂಬಾನಿ ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಫೋರ್ಬ್ಸ್ ಜಾಗತಿಕ ಬಿಲಿಯನೇರ್​ಗಳ ಪಟ್ಟಿಯಲ್ಲಿ ಅವರು 10ನೇ ಸ್ಥಾನದಲ್ಲಿದ್ದಾರೆ. ಇಂದು (ಏ.19) ಮುಕೇಶ್ ಅಂಬಾನಿ ಜನ್ಮದಿನ. ಅವರು ಉದ್ದಿಮೆ ಕ್ಷೇತ್ರದಲ್ಲಿ ಯಶಸ್ವಿಯಾಗಿದ್ದು ಹೇಗೆ? ಅವರ ಸಾಧನೆಗಳೇನು? ಅವರ ಐಷಾರಾಮಿ ನಿವಾಸ ಹೇಗಿದೆ? ಈ ಕುರಿತ ಬರಹ ಇಲ್ಲಿದೆ. ಮುಕೇಶ್ ಉದ್ದಿಮೆ ಕ್ಷೇತ್ರದಲ್ಲಿ ತಮ್ಮ ತಂದೆ ಧೀರೂಭಾಯಿ ಹಿರಾಚಂದ್ ಅಂಬಾನಿಯವರ ಹೆಜ್ಜೆಗಳನ್ನು ಅನುಸರಿಸಿದವರು. ನಂತರ ರಿಲಯನ್ಸ್ ಇಂಡಸ್ಟ್ರೀಸ್​ಗೆ ಬಲವಾದ ಅಡಿಪಾಯವನ್ನು ನಿರ್ಮಿಸಿದರು.

ಮುಕೇಶ್ ಅಂಬಾನಿ ಬಾಲ್ಯ:

ಶ್ರೀಮಂತ ಕುಟುಂಬದ ಕುಡಿಯಾದ ಮುಕೇಶ್, ತಮ್ಮ ತಂದೆಯಿಂದ ವ್ಯಾಪಾರ ನಿರ್ವಹಣಾ ಕೌಶಲ್ಯ, ಕ್ರಾಂತಿಕಾರಿ ಮನೋಭಾವ, ಟೀಮ್‌ವರ್ಕ್‌ನಲ್ಲಿ ನಂಬಿಕೆಯನ್ನು ಕಲಿತರೆ, ತಾಯಿ ಕೋಕಿಲಾಬೆನ್ ಅಂಬಾನಿಯವರಿಂದ ಸಹಾಯ ಮಾಡುವ ಮನೋಭಾವವನ್ನು ಪ್ರೇರಣೆಯಾಗಿ ಪಡೆದರು. ಮುಕೇಶ್ ಧೀರೂಭಾಯಿ ಅಂಬಾನಿ ಜನಿಸಿದ್ದು 1957ರ ಏಪ್ರಿಲ್ 19ರಂದು. ಗುಜರಾತಿ ಹಿಂದೂ ಕುಟುಂಬದ ಧೀರೂಭಾಯಿ ಅಂಬಾನಿ ಮತ್ತು ಕೋಕಿಲಾಬೆನ್ ಅಂಬಾನಿ ದಂಪತಿಯ ಪುತ್ರರಾದ ಮುಕೇಶ್ ಹುಟ್ಟಿದ್ದು ಅಡೆನ್‌ನ ಬ್ರಿಟಿಷ್ ಕ್ರೌನ್ ಕಾಲೋನಿಯಲ್ಲಿ (ಇಂದಿನ ಯೆಮೆನ್).

ಅಂಬಾನಿ ಯೆಮೆನ್‌ನಲ್ಲಿ ಸ್ವಲ್ಪ ಕಾಲ ಮಾತ್ರ ವಾಸಿಸುತ್ತಿದ್ದರು. ಅವರ ತಂದೆ 1958 ರಲ್ಲಿ ಮಸಾಲೆಗಳು ಮತ್ತು ಜವಳಿಗಳ ಮೇಲೆ ವ್ಯಾಪಾರ ವ್ಯವಹಾರವನ್ನು ಕೇಂದ್ರೀಕರಿಸಲು ಭಾರತಕ್ಕೆ ಮರಳಲು ನಿರ್ಧರಿಸಿದರು. ಅಂಬಾನಿ ಕುಟುಂಬವು 1970 ರ ದಶಕದವರೆಗೆ ಮುಂಬೈನ ಭುಲೇಶ್ವರದಲ್ಲಿ ಎರಡು ಕೋಣೆಗಳ ಸಾಧಾರಣ ಅಪಾರ್ಟ್ಮೆಂಟ್​ನಲ್ಲಿ ವಾಸಿಸುತ್ತಿತ್ತು. ಸಾರ್ವಜನಿಕ ಸಾರಿಗೆಯನ್ನೇ ಬಳಸುತ್ತಿದ್ದರು. ಭಾರತಕ್ಕೆ ಸ್ಥಳಾಂತರಗೊಂಡ ನಂತರ ಕುಟುಂಬದ ಆರ್ಥಿಕ ಸ್ಥಿತಿ ಸ್ವಲ್ಪ ಸುಧಾರಿಸಿತು.

ಮುಕೇಶ್ ಅಂಬಾನಿ ಕುಟುಂಬ:

ಧೀರೂಭಾಯಿ ನಂತರ ಕೊಲಾಬಾದಲ್ಲಿ ‘ಸೀ ವಿಂಡ್’ ಎಂಬ 14-ಅಂತಸ್ತಿನ ಅಪಾರ್ಟ್‌ಮೆಂಟ್ ಬ್ಲಾಕ್ ಅನ್ನು ಖರೀದಿಸಿದರು. ಅಲ್ಲಿ ಅಂಬಾನಿ ಮತ್ತು ಅವರ ಸಹೋದರರು ತಮ್ಮ ಕುಟುಂಬಗಳೊಂದಿಗೆ ಇತ್ತೀಚಿನವರೆಗೂ ವಾಸಿಸುತ್ತಿದ್ದರು. 1985 ರಲ್ಲಿ ಮುಖೇಶ್ ಅಂಬಾನಿ ಅವರು ನೀತಾ ಅಂಬಾನಿ ಅವರನ್ನು ವಿವಾಹವಾದರು. ದಂಪತಿಗೆ ಅನಂತ್ ಅಂಬಾನಿ ಮತ್ತು ಆಕಾಶ್ ಅಂಬಾನಿ ಎಂಬ ಪುತ್ರರಿದ್ದು, ಇಶಾ ಅಂಬಾನಿ ಎಂಬ ಪುತ್ರಿಯಿದ್ದಾಳೆ. ನೀತಾ ಅಂಬಾನಿ ಭಾಗವಹಿಸಿದ್ದ ನೃತ್ಯ ಸಮಾರಂಭದಲ್ಲಿ ಧೀರೂಬಾಯಿ ಅಂಬಾನಿಯವರೂ ಭಾಗವಹಿಸಿದ್ದರು. ನಂತರ ಅವರು ಮುಕೇಸ್​ಗೆ ನೀತಾರೊಂದಿಗೆ ವಿವಾಹ ಸಮಾರಂಭವನ್ನು ಏರ್ಪಡಿಸಿದರು.

ಅದ್ದೂರಿ ನಿವಾಸವನ್ನು ಹೊಂದಿರುವ ಮುಕೇಶ್:

ಪ್ರಸ್ತುತ ಮುಕೇಶ್ ಅಂಬಾನಿ ಕುಟುಂಬವು ಸುಮಾರು $1 ಬಿಲಿಯನ್ USD ಮೌಲ್ಯದ ‘ಆಂಟಿಲಿಯಾ’ ಎಂಬ 27 ಅಂತಸ್ತಿನ ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿದೆ. ಕಟ್ಟಡದ ನಿರ್ವಹಣೆಗಾಗಿ 600 ಸಿಬ್ಬಂದಿ ಇದ್ದು,ಮೂರು ಹೆಲಿಪ್ಯಾಡ್‌ಗಳು, 160-ಕಾರ್ ಗ್ಯಾರೇಜ್, ಖಾಸಗಿ ಚಲನಚಿತ್ರ ಮಂದಿರ, ಈಜುಕೊಳ ಮತ್ತು ಫಿಟ್‌ನೆಸ್ ಕೇಂದ್ರವನ್ನು ಹೊಂದಿದೆ.

Mukesh and Neeta ambani

ಮುಕೇಶ್ ಅಂಬಾನಿ, ನೀತಾ ಅಂಬಾನಿ, ಅಂಬಾನಿ ನಿವಾಸ ‘ಆಂಟಿಲಿಯಾ’

ಉದ್ಯಮ ಕ್ಷೇತ್ರದಲ್ಲಿ ಸಾಧನೆಗಳು:

ಫೋರ್ಬ್ಸ್ ಮ್ಯಾಗಜೀನ್‌ ಪ್ರಕಟ ಮಾಡುವ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಪಟ್ಟವನ್ನು ಒಂದು ದಶಕದಿಂದ ಅಲಂಕರಿಸಿದ್ದಾರೆ ಮುಕೇಶ್. ಇದರ ಜೊತೆಗೆ ಫೋರ್ಬ್‌ನ ವಿಶ್ವದ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯಲ್ಲಿರುವ ಭಾರತದ ಏಕೈಕ ಉದ್ಯಮಿಯಾಗಿದ್ದಾರೆ. ಜನವರಿ 2018 ರಲ್ಲಿ ಅವರು ಫೋರ್ಬ್ಸ್​​ನ ವಿಶ್ವದ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ 18 ನೇ ಸ್ಥಾನದಲ್ಲಿದ್ದರು.

ಉತ್ತರ ಅಮೆರಿಕಾ ಮತ್ತು ಯುರೋಪ್‌ ಅನ್ನು ಹೊರತುಪಡಿಸಿದರೆ ಮುಕೇಶ್ ಅಂಬಾನಿ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ. 2015ರಲ್ಲಿ ಚೀನಾದ ಹುರುನ್ ರಿಸರ್ಚ್ ಇನ್ಸ್ಟಿಟ್ಯೂಟ್ ಭಾರತದ ಪರೋಪಕಾರಿಗಳಲ್ಲಿ ಮುಕೇಶ್ ಅಂಬಾನಿ ಐದನೇ ಸ್ಥಾನದಲ್ಲಿದ್ದಾರೆ ಎಂದು ಗುರುತಿಸಿತ್ತು. ಬ್ಯಾಂಕ್ ಆಫ್ ಅಮೆರಿಕಕ್ಕೆ ನಿರ್ದೇಶಕರಾದ ಮುಕೇಶ್, ಈ ಜವಾಬ್ದಾರಿ ವಹಿಸಿಕೊಂಡ ಮೊದಲ ಅಮೇರಿಕನ್ ಹೊರತಾದ ವ್ಯಕ್ತಿ. 2012 ರಲ್ಲಿ ಫೋರ್ಬ್ಸ್ ವಿಶ್ವದ ಶ್ರೀಮಂತ ಕ್ರೀಡಾ ಮಾಲೀಕರಲ್ಲಿ ಮುಕೇಶ್ ಕೂಡ ಒಬ್ಬರು ಎಂದು ತನ್ನ ವರದಿಯಲ್ಲಿ ಹೇಳಿತ್ತು.

2020ರ ನವೆಂಬರ್ 11ರಂದು ಮುಕೇಶ್ ಅಂಬಾನಿ ‘ಎಡೆಲ್ ಗಿವ್ ಹುರುನ್ ಇಂಡಿಯಾ ಫಿಲಾಂತ್ರಪಿ ಲಿಸ್ಟ್ 2020’ರ ಏಳನೇ ಆವೃತ್ತಿಯಲ್ಲಿ ₹458 ಕೋಟಿ ದೇಣಿಗೆಯೊಂದಿಗೆ ಮೂರನೇ ಸ್ಥಾನ ಪಡೆದಿದ್ದರು. ಇತ್ತೀಚೆಗೆ ಅಂದರೆ ಮುಕೇಶ್ ಒಡೆತನದ ರಿಲಯನ್ಸ್​ ಪರಿಚಯಿಸಿದ ‘ಜಿಯೋ’ ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯನ್ನೇ ಸೃಷ್ಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಉದ್ದಿಮೆ ಕ್ಷೇತ್ರದಲ್ಲಿನ ಸಾಧನೆಗೆ ಮುಕೇಶ್ ಅಂಬಾನಿಯವರಿಗೆ ಹಲವು ಪುರಸ್ಕಾರಗಳು ಲಭಿಸಿವೆ.

TV9 Kannada


Leave a Reply

Your email address will not be published. Required fields are marked *