Music: ನಾಕುತಂತಿಯ ಮಿಡಿತ; ಯಾಕೋ ಈಗಲೇ ಗದುಗಿನ ‘ಅಜ್ಜೋರ ಜಾತ್ರೆ’ ನೆನಪಾಗುತ್ತಿದೆ | Pandit Puttaraja Gawai Naakutantiya Midita column by Hindustani Classical Vocalist Shrimathi Devi


Music: ನಾಕುತಂತಿಯ ಮಿಡಿತ; ಯಾಕೋ ಈಗಲೇ ಗದುಗಿನ ‘ಅಜ್ಜೋರ ಜಾತ್ರೆ’ ನೆನಪಾಗುತ್ತಿದೆ

ಪಂಡಿತ ಪುಟ್ಟರಾಜ ಗವಾಯಿಗಳು

ನಾಕುತಂತಿಯ ಮಿಡಿತ | Naakutantiya Midita : ಪುಟ್ಟರಾಜ ಗವಾಯಿಗಳು ಎಂಬುದು ಕೇವಲ ಒಂದು ವ್ಯಕ್ತಿಯ ಹೆಸರಲ್ಲ, ಅದೊಂದು ‘ಶಕ್ತಿ’. ಕರ್ನಾಟಕದಲ್ಲಿ ನಡೆದು ಬಂದ ಹಿಂದೂಸ್ತಾನಿ ಸಂಗೀತ ಧಾರೆಯ ಮೂಲ ಸ್ರೋತ, ಸ್ಫೂರ್ತಿ ಕೇಂದ್ರ. ಅವರು ಏನು ಎಂಬುದನ್ನು ಅರಿಯಲು ಹೋದಷ್ಟು ವ್ಯಾಪ್ತಿವಿಶಾಲವೆನಿಸುವವರು. ಸಂಗೀತಾಸಕ್ತರು, ಸಂಗೀತ ಕಲಿಯುವ ವಿದ್ಯಾರ್ಥಿಗಳೆಲ್ಲರೂ ಪಂಚಾಕ್ಷರಿ ಗವಾಯಿಗಳು ಮತ್ತು ಪುಟ್ಟರಾಜ ಗವಾಯಿಗಳ ಹೆಸರನ್ನು ತುಂಬಾ ಸರಿ ಕೇಳಿರುತ್ತಾರಾದರೂ ಉತ್ತರ ಕರ್ನಾಟಕಕ್ಕೆ ಹೆಜ್ಜೆ ಇಟ್ಟರಷ್ಟೇ ಅವರ ವ್ಯಕ್ತಿತ್ವ ಹಾಗೂ ಅವರು ಮಾಡಿದ ಕೆಲಸದ ಅನುಭವ ಪಡೆಯಲು ಸಾಧ್ಯ. ಬೆಳಗ್ಗಿನಿಂದ ರಾತ್ರಿಯವರೆಗೆ ಪ್ರತಿನಿತ್ಯ ಸಂಗೀತ ಪಾಠ ಮಾಡುತ್ತಿದ್ದ ನನ್ನ ಗುರುಗಳಾದ ಚಂದ್ರಶೇಖರ ಪುರಾಣಿಕಮಠ ಅವರ ದಿನ ಪ್ರಾರಂಭವಾಗುತ್ತಿದ್ದುದೇ ಅವರ ಗುರುಗಳಾದ ಪಂಚಾಕ್ಷರಿ ಮತ್ತು ಪುಟ್ಟರಾಜ ಗವಾಯಿಗಳ ಭಾವಚಿತ್ರಗಳಿಗೆ ವಂದಿಸಿ ತಮ್ಮ ದಿನದ ಸಂಗೀತಾಭ್ಯಾಸ ಆರಂಭಿಸುವುದರೊಂದಿಗೆ.
ಶ್ರೀಮತಿ ದೇವಿ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಾವಿದೆ (Shrimathi Devi)

(ಮಿಡಿತ 8)

ಸಂಗೀತದ ಶ್ರೇಷ್ಠ ಕಲಾವಿದರು ಎಂದು ಗುರುತಿಸಲ್ಪಡುವವರು ದೊಡ್ಡ ದೊಡ್ಡ ವೇದಿಕೆಗಳಲ್ಲಿ ಹಾಡಿರುತ್ತಾರೆ, ಹೆಸರಾದ ಪ್ರಶಸ್ತಿ-ಪುರಸ್ಕಾರಗಳನ್ನು ಪಡೆದಿರುತ್ತಾರೆ. ದೊಡ್ಡ ಗುರುಗಳೆನಿಸಿಕೊಂಡವರು ಹತ್ತಾರು ಭರವಸೆಯ ಶಿಷ್ಯರನ್ನು ತರಬೇತುಗೊಳಿಸಿದವರಾಗಿರುತ್ತಾರೆ. ಸಾವಿರಾರು ಅಭಿಮಾನಿಗಳನ್ನೂ ಇವರು ಹೊಂದಿರಬಹುದು. ಆದರೆ, ಹಲವಾರು ಜಿಲ್ಲೆಗಳ ವ್ಯಾಪ್ತಿಯಲ್ಲಿನ ಊರುಗಳ ಜನರೆಲ್ಲರೂ ಒಬ್ಬ ವ್ಯಕ್ತಿಗೆ ಶರಣಾಗುವುದು ಕೇವಲ ‘ಸಂಗೀತ’ದಿಂದ ನಡೆಯುವ ಸಂಗತಿಯಲ್ಲ. ಅಲ್ಲಿ ಸಂಗೀತದ ಮೂಲಕ ‘ಎಲ್ಲರನ್ನು ಒಳಗು ಮಾಡಿಕೊಳ್ಳುವಂಥ’ದ್ದೇನೋ ನಡೆದಿದೆ ಎಂಬುದು ಸ್ಪಷ್ಟವಾಗುತ್ತದೆ. ಈ ಕೆಲಸವನ್ನು ಮಾಡಿದವರು ಪಂಚಾಕ್ಷರಿ ಮತ್ತು ಪುಟ್ಟರಾಜ ಗವಾಯಿಗಳು. ಅವರು ಸಾವಿರಾರು ವಿದ್ಯಾರ್ಥಿಗಳನ್ನು ಸಾಕಿ ಸಲಹಿದ್ದಾರೆ, ನೂರಾರು ಸಂಗೀತಗಾರರನ್ನು ನಾಡಿಗೆ ನೀಡಿದ್ದಾರೆ, ತಾವು ಪ್ರಶಸ್ತಿ ಸನ್ಮಾನಗಳನ್ನು ಪಡೆದಿದ್ದಾರೆ, ಸಂಘ ಸಂಸ್ಥೆಗಳನ್ನು ಕಟ್ಟಿದ್ದಾರೆ ಮತ್ತು ಎಲ್ಲಕ್ಕೂ ಹೆಚ್ಚಿನದಾದ ವಿಶ್ವಾಸ-ಪ್ರೀತಿಗಳನ್ನು ಜನರ ಮನದಲ್ಲಿ ನೆಟ್ಟು, ಬೆಳೆದು ಅವುಗಳ ಫಲವನ್ನು ಸೂರೆಗೊಂಡಿದ್ದಾರೆ.

ಗವಾಯಿಗಳಿಬ್ಬರ ಬಳಿ ಸಂಗೀತವನ್ನು ಕಲಿಯುವ ಭಾಗ್ಯ ಪಡೆದ ಪುರಾಣಿಕಮಠ್ ಸರ್ ಅವರ ಬಳಿ ಶಿಷ್ಯರು ಯಾರೋ ‘ಪುಟ್ಟರಾಜ ಗವಾಯಿಗಳು ಧ್ಯಾನ ಮಾಡುವಾಗ ಮೂರು ಫೂಟು ಮೇಲೆ ಹೋಗುತ್ತಾರಂತೆ, ನಿಜವೇ’ ಎಂದಾಗ ಗುರುಗಳು ‘ಅವರು ಹಾಗೆ ಮೇಲೆ ಹೋಗುವುದು ನಿಜವೇ ಇರಬಹುದು. ಆದರೆ, ಅವರು ಕೆಳಗೇ ಇದ್ದರೂ ಮಹಾತ್ಮರೇ’ ಎಂದಿದ್ದರು. ಈ ಮಾತಿನ ಮೂಲಕ ನನಗೆ ಪುಟ್ಟರಾಜರಂಥ ಮಹಾತ್ಮರನ್ನು ನೋಡಬೇಕಾದ ದೃಷ್ಟಿ ದೊರಕಿತು.

ಪುಟ್ಟರಾಜ ಗವಾಯಿಗಳು ಪಂಚಾಕ್ಷರಿ ಗವಾಯಿಗಳಿಂದ ಕರ್ನಾಟಕಿ-ಹಿಂದೂಸ್ತಾನಿ ಎರಡೂ ಪದ್ಧತಿಗಳಲ್ಲಿ ಸಂಗೀತ ಕಲಿತವರು. ಹಾರ್ಮೋನಿಯಂ, ತಬಲಾ, ಸರೋದ್, ಸಿತಾರ್, ಸಾರಂಗಿ ಮುಂತಾದ ಹಲವು ವಾದ್ಯಗಳನ್ನು ನುಡಿಸಬಲ್ಲವರಾದರು. ಬ್ರೈಲ್ ಲಿಪಿ ಕಲಿತು ಪುಸ್ತಕ ರಚನೆ ಮಾಡಿದರು. ಕನ್ನಡ, ಹಿಂದಿ, ಸಂಸ್ಕೃತ ಭಾಷೆಗಳಲ್ಲಿ ಸಮನಾದ ಪಾಂಡಿತ್ಯ ಪಡೆದು ಅನೇಕ ಸಂಗೀತ ಮತ್ತು ಪುರಾಣ ಸಂಬಂಧಿತ ಕೃತಿ ರಚನೆ ಮಾಡಿದರು. ನಾಟಕ ಸಂಘವನ್ನು ಎತ್ತರಕ್ಕೆ ಕೊಂಡೊಯ್ದರು. ಶಾಲಾ ಕಾಲೇಜುಗಳನ್ನು ಸ್ಥಾಪಿಸಿದರು. ಗದಗಲ್ಲಿ ಸ್ಥಾಪನೆಯಾದ ‘ವೀರೇಶ್ವರ ಪುಣ್ಯಾಶ್ರಮ’ವನ್ನು ಪ್ರಮುಖವಾದ ಸಾಂಸ್ಕೃತಿಕ, ಅಧ್ಯಾತ್ಮಿಕ ಕೇಂದ್ರವನ್ನಾಗಿ ಬೆಳೆಸಿದರು. ಎಲ್ಲಕ್ಕಿಂತ ಮುಖ್ಯವಾಗಿ ಸಮಾಜದಲ್ಲಿ ಯಾರಿಗೂ ಬೇಡವಾದ ಅಂಗವಿಕಲ, ಅಂಧ, ಕುಂಟ ಮಕ್ಕಳಿಗೆ ಆಶ್ರಯ ನೀಡಿ ಊಟ-ವಸತಿಯ ಜೊತೆಗೆ ವಿದ್ಯೆಯನ್ನೂ ನೀಡಿದರು. ಆಶ್ರಮದಲ್ಲಿನ ವಿದ್ಯಾರ್ಥಿಗಳ ಊಟೋಪಚಾರಕ್ಕಾಗಿ ಹಳ್ಳಿ-ಹಳ್ಳಿಗಳಲ್ಲಿ ಸಂಚರಿಸಿ ಧಾನ್ಯ, ಬೇಳೆ, ಕಾಳುಗಳನ್ನು ಸಿರಿವಂತರಿಂದ ತಂದರು. ಯಾವುದೇ ರೀತಿಯ ಸಂಗೀತದ ಹಿನ್ನೆಲೆಯಿಲ್ಲದ ನೂರಾರು ಮಕ್ಕಳಲ್ಲಿ ಸಾಹಿತ್ಯ-ಸಂಗೀತದ ಮೂಲಾಕ್ಷರಗಳನ್ನು ಬಿತ್ತಿದರು.

TV9 Kannada


Leave a Reply

Your email address will not be published.