Music: ವೈಶಾಲಿಯಾನ; ‘ಇದನ್ನು ನೀವು ‘ಹರಾಮ್’ ಎಂದರೆ, ನಾನು ಮತ್ತಷ್ಟು ಹರಾಮ್…’ ಎಂದಿದ್ದರು ಬಿಸ್ಮಿಲ್ಲಾ ಖಾನ್ | History of Hindustani Classical Music Vaishaliyaana column by Dr KS Vaishali


Music: ವೈಶಾಲಿಯಾನ; ‘ಇದನ್ನು ನೀವು ‘ಹರಾಮ್’ ಎಂದರೆ, ನಾನು ಮತ್ತಷ್ಟು ಹರಾಮ್...’ ಎಂದಿದ್ದರು ಬಿಸ್ಮಿಲ್ಲಾ ಖಾನ್

ಸಂಗೀತ ದಿಗ್ಗಜರುಗಳಾದ ಗಂಗೂಬಾಯಿ ಹಾನಗಲ್, ಲತಾ ಮಂಗೇಶ್ಕರ ಬಡೇ ಗುಲಾಮ್ ಅಲೀ ಖಾನ್ ಎಂ.ಎಸ್. ಸುಬ್ಬಲಕ್ಷ್ಮೀ ಅಲ್ಲಾ ದಿಯಾಖಾನ್

ವೈಶಾಲಿಯಾನ | Vaishaliyaana : ನನ್ನ ಗುರುಗಳಾದ ಗಾನಸರಸ್ವತಿ ಪಂಡಿತಾ ಕಿಶೋರಿ ಅಮೋನ್‌ಕರ್‌ರವರು ತಮ್ಮ ತಾಯಿ ಮೂಗೂಬಾಯಿ ಕುರ್ಡೀಕರ್‌ರವರ ಮಾರ್ಗದರ್ಶನದಲ್ಲಿಯೇ ತಮ್ಮ ಸಂಗೀತ ಅಭ್ಯಾಸ ಮಾಡಿದವರಾಗಿದ್ದರು. ಉಸ್ತಾದ್ ಅಲ್ಲಾದಿಯಾ ಖಾನ್‌ರವರ ಅಗಾಧವಾದ ಸಂಗೀತ ಜ್ಞಾನದ ಬಗ್ಗೆ, ಅವರು ಎಷ್ಟು ಶಿಷ್ಯವತ್ಸಲರಾಗಿ ತಮ್ಮ ಹಿಂದೂ ಶಿಷ್ಯೆಯರಿಗೆ ಪಾಠ ಹೇಳಿದರೆಂಬುದರ ಬಗ್ಗೆ ನನ್ನ ಬಳಿ ಕಿಶೋರಿ ತಾಯಿ ಹಲವಾರು ಬಾರಿ ಹೇಳಿಕೊಂಡಿದ್ದರು. ಈ ಇತಿಹಾಸದ ಪುಟಗಳನ್ನು ತಿರುವಿ ಹಾಕುವುದೂ ಕೂಡ ನನ್ನ ಪಾಲಿಗೆ ಸಾರ್ಥಕತೆಯ ಅಪೂರ್ವ ಕ್ಷಣಗಳಾಗಿದ್ದವು. ದೀಕ್ಷಿತರ ಕೃತಿ ‘ವಾತಾಪಿ ಗಣಪತಿಂ ಭಜೆ’ ಯಿಂದ ಪ್ರೇರಿತರಾಗಿ ರಾಗ ಹಂಸಧ್ವನಿಯಲ್ಲಿ ತಾವು ರಚಿಸಿದ ಧೃತ್ ತೀನ್​ತಾಲ್​ ಬಂದಿಶ್ “ಲಾಗೆ ಲಗನ ಪತಿ ಸಖಿ ಸಂಗ್” ಮೂಲಕ ಜನಪ್ರಿಯರಾದ ಉಸ್ತಾದ್ ಅಮಾನ್ ಅಲೀ ಖಾನ್‌ರವರು ಮತ್ತೊಂದು ಪ್ರಸಿದ್ಧ ಭೇಂಡಿ ಬಜಾರ್ ಘರಾನದ ಸಂಸ್ಥಾಪಕರು. ಈ ಬಂದಿಶನ್ನು ಮುಂದೆ ಉಸ್ತಾದ್ ಅಮೀರ್ ಖಾನರೂ ಜನಪ್ರಿಯಗೊಳಿಸಿದರು. ಉಸ್ತಾದ್ ಅಮಾನ್ ಆಲಿ ಖಾನರ ಖ್ಯಾತಿ ಎಲ್ಲೆಡೆಯೂ ಹಬ್ಬಿತ್ತು. ಉಸ್ತಾದರ ಗಾಯನಕ್ಕೆ ಮಾರು ಹೋಗಿದ್ದ ಲತಾ ಮಂಗೇಶ್ಕರ್‌ರವರು ಕೂಡ ಸ್ವಲ್ಪ ಕಾಲ ಅವರ ಬಳಿ ಸಂಗೀತಾಭ್ಯಾಸ ಮಾಡಿದ್ದರು.
ಡಾ. ಕೆ. ಎಸ್. ವೈಶಾಲಿ (Dr. K. S. Vaishali)

(ಯಾನ 8, ಭಾಗ 3)

ಪಾಟಿಯಾಲಾ ಘರಾನದ ಮಹಾನ್ ಗಾಯಕ ಉಸ್ತಾದ್ ಬಡೆ ಗುಲಾಂ ಅಲೀ ಖಾನ್‌ರವರ ಪರಂಪರೆಯ ಪ್ರತಿನಿಧಿಗಳಾಗಿ ಇಂದು ನಮ್ಮ ನಡುವೆ ಪಂಡಿತ್ ಅಜಯ್ ಚಕ್ರವರ್ತಿ, ಅವರ ಸುಪುತ್ರಿ ಕೌಶಿಕಿ ಚಕ್ರವರ್ತಿ ಇದ್ದಾರೆ. ಬಡೆ ಗುಲಾಂ ಆಲಿ ಖಾನ್ ಹಾಗೂ ಅವರ ಪುತ್ರ ಮುನಾವರ್ ಅಲೀ ಖಾನರಿಗೆ ಅನೇಕ ಸುಪ್ರಸಿದ್ಧ ಹಿಂದೂ ಶಿಷ್ಯರಿದ್ದರು. ಅವರಲ್ಲಿ ಪಂಡಿತ್ ಜಗದೀಶ್ ಪ್ರಸಾದ್, ಪಂಡಿತ್ ಜ್ಞಾನಪ್ರಕಾಶ್ ಘೋಷ್ , ಬೇಗಂ ಪರ್ವೀನ್ ಸುಲ್ತಾನರ ಗುರು ಪಂಡಿತ್ ಚಿನ್ಮಯ್ ಲಾಹಿರಿ ಪ್ರಮುಖರೆಂದು ಹೆಸರಿಸಬಹುದು. ಇದರೊಂದಿಗೆ ರಾಮ್‌ಪುರ್ ಸಹಸ್ವಾನ್ ಘರಾನದ ಉಸ್ತಾದ್ ಇನಾಯತ್ ಹುಸೇನ್ ಖಾನ್, ಉಸ್ತಾದ್ ಗುಲಾಮ್ ಮುಸ್ತಾಫ ಖಾನ್, ಖಯಾಲ್ ಸಂಗೀತದ ತಾರೆಗಳಲ್ಲಿ ಒಬ್ಬರಾದ ಉಸ್ತಾದ್ ರಶೀದ್ ಖಾನ್, ಆಗ್ರಾ ಘರಾನಾದ ಖ್ಯಾತನಾಮರಾದ ಉಸ್ತಾದ್ ಫಯಾಜ್ ಖಾನ್, ಪಂಡಿತ್ ಜಸ್‌ರಾಜ್‌ರವರ ಜನಪ್ರಿಯತೆಯಿಂದ ಜನಜನಿತಗೊಂಡ ಮೇವಾತಿ ಘರಾನದ ಆದ್ಯ ಪ್ರವರ್ತಕರಾದ ಖಗ್ಗೆ ನಾಜಿರ್ ಖಾನ್ – ಹೀಗೆ ನೂರಾರು ಹೆಸರುಗಳು ನನ್ನ ಮುಂದೆ ನಿಲ್ಲುತ್ತವೆ. ನಾನು ಇಲ್ಲಿ ಕೇವಲ ಶಾಸ್ತ್ರೀಯ ಖಯಾಲ್ ಗಾಯನಕ್ಕೆ ಸಂಬಂಧಿಸಿದ ಘರಾನೆಗಳ ಮುಸ್ಲಿಂ ಉಸ್ತಾದರುಗಳ ಕೊಡುಗೆಯನ್ನು ಮಾತ್ರ ಸಂಕ್ಷಿಪ್ತವಾಗಿ ದಾಖಲಿಸಿದ್ದೇನೆ ಅಷ್ಟೆ. ಇನ್ನು ಸಿತಾರ್, ಸರೋದ್, ಸಾರಂಗಿ, ತಬಲಾ ಘರಾನೆಗಳಲ್ಲಿ ಮುಸ್ಲಿಂ ಉಸ್ತಾದರ ಕೊಡುಗೆಗಳ ಬಗ್ಗೆ ನಾನು ವಿಶದೀಕರಿಸಲು ಹೊರಟರೆ ಒಂದು ಪುಸ್ತಕವನ್ನೇ ಹೊರತರಬೇಕಾಗುತ್ತದೆ.

ಭಾಗ 2 : Music: ವೈಶಾಲಿಯಾನ; ‘ಕರೀಮ ನಾಮ ತೇರೋ, ತೂ ಸಾಹೇಬ’ ಕಿಶೋರಿತಾಯಿ ಧ್ಯಾನಸ್ಥರಾಗಿ ಹಾಡುವಾಗ

ಹಿಂದೂಗಳ ಪವಿತ್ರ ತೀರ್ಥಕ್ಷೇತ್ರವಾದ ಕಾಶಿಯ ಜಗದ್ವಿಖ್ಯಾತ ವಿಶ್ವನಾಥ ಮಂದಿರದಲ್ಲಿ ಪ್ರಾತಃಕಾಲದ ಶೆಹನಾಯಿ ಸೇವೆ ಉಸ್ತಾದ್ ಅಲ್ಲಾ ಭಕ್ಷ್​ರದ್ದೇ ಆಗಿರುತ್ತಿತ್ತು. ತಮ್ಮ ಸೋದರಮಾವನಿಂದ ಪ್ರಭಾವಿತರಾದ ಉಸ್ತಾದ್ ಬಿಸ್ಮಿಲ್ಲಾ ಖಾನ್‌ರವರು ಮಂದಿರದ ಒಂದು ಕೊಠಡಿಯಲ್ಲಿಯೇ ತಮ್ಮ ರಿಯಾಜ್ ಮಾಡುತ್ತಿದ್ದರೆಂಬುದು ಗಮನಾರ್ಹ ಸಂಗತಿ. ಒಬ್ಬ ಷಿಯಾ ಮುಸ್ಲಿಂ ಕಲಾವಿದನಾಗಿ ಬಿಸ್ಮಿಲ್ಲಾಖಾನರು ಕಾಶಿ ವಿಶ್ವನಾಥನ ಬಗ್ಗೆ ಅಚಲ ಭಕ್ತಿ -ಶ್ರದ್ಧೆಗಳನ್ನು ಹೊಂದಿದ್ದರು. ತಮ್ಮ ಸಂಗೀತದಲ್ಲಿ ಯಾವ ಧರ್ಮ ಸಂಬಂಧಿ ಸಂಕುಚಿತ ರಾಜಕೀಯವೂ ಇಲ್ಲವೆಂದು ಸಂದರ್ಶನವೊಂದರಲ್ಲಿ ಹೇಳಿಕೆ ನೀಡಿದ್ದ ಬಿಸ್ಮಿಲ್ಲಾ ಖಾನ್ ಸಾಹೇಬ್‌ರವರು “ಸಂಗೀತದ ಧರ್ಮ ಎಲ್ಲೆಡೆಯೂ ಒಂದೇ. ನಾನು ಮೌಲ್ವಿಗಳಿಗೂ ಇದನ್ನೇ ಹೇಳಬಯಸುತ್ತೇನೆ. ಅದೊಂದೇ ಹಕೀಕತ್. ನನ್ನ ಪ್ರಪಂಚ ಇದು ಮಾತ್ರ. ನನ್ನ ಮಟ್ಟಿಗೆ ಹೇಳುವುದಾದರೆ ನಮಾಜ್ ಎಂದರೆ ಪ್ರತೀದಿನ ಸಪ್ತಸ್ವರಗಳ ಸಪ್ತಕದ ಸಮುಚ್ಚಯದಲ್ಲಿರುವ ಏಳು ಶುದ್ಧ ಸ್ವರಗಳು, ಮತ್ತು ಐದು ಕೋಮಲ ಸ್ವರಗಳ ಮೇಲೆ ನಾನು ಮಾಡುವ ಕುಸುರಿ ಕೆಲಸ ಮಾತ್ರ. ಇದನ್ನು ನೀವು ಯಾರಾದರೂ ‘ಹರಾಮ್’ ಎಂದು ಖಂಡಿಸಿದರೆ, ನಾನು ಮತ್ತಷ್ಟು ಹರಾಂ ಮಾಡಬೇಕಾಗುತ್ತದೆ” ಎಂದು ನಸುನಗುತ್ತ ಹೇಳಿದ್ದರು. ಅಮೇರಿಕಾದಲ್ಲಿ ನೆಲೆಸಬೇಕೆಂದು ಅವರ ಅಭಿಮಾನಿಯೊಬ್ಬ ಒತ್ತಾಯ ಮಾಡಿದಾಗ ಮಗುಳ್ನಗುತ್ತ ಸೌಮ್ಯವಾಗಿಯೇ “ನನ್ನ ಪ್ರೀತಿಯ ಶಹನಾಯಿಯೂ ಮತ್ತು ನಾನು, ವಾರಣಾಸಿಯ ಕಾಶಿ ವಿಶ್ವನಾಥ ಮಂದಿರವನ್ನು ಹಾಗೂ ಗಂಗಾ ನದಿಯನ್ನು ಅಗಲಿ ಜೀವಿಸಲಾರೆವು.” ಎಂದಿದ್ದರು.

ಅದ್ಭುತವಾದ ಹಿಂದೂ- ಮುಸ್ಲಿಂ ಐಕ್ಯಮತದ ಸಂಕೇತವಾಗಿರುವ ಹಿಂದುಸ್ತಾನಿ ಸಂಗೀತ ಪ್ರಪಂಚದಿAದ ನಾವು ಕಲಿಯಬೇಕಾದ ಮಾನವೀಯತೆಯ ಪಾಠಗಳು ಅನೇಕ . “ವಸುದೈವ ಕುಟುಂಬಕಂ, ಸರ್ವೇ ಜನಾ ಸುಖಿನೋ ಭವಂತು” ಎಂಬ ಆಶಯಗಳು ಬೂಟಾಟಿಕೆಯ ಕಹಕತನ, ಅಸಹಿಷ್ಣತೆಯ ವಿಷಾನಿಲಗಳಲ್ಲಿ ಮಲಿನಗೊಂಡು, ಸವಕಲಾಗಿ, ಸತ್ವಹೀನ ಘೋಷಣೆಗಳಾಗುವ ಮುನ್ನ ಸಂಗೀತದ ಸುವರ್ಣ ಸೇತುವೆಯ ಮೂಲಕ ನಾವು ನಮ್ಮ ವಿಶ್ವಮಾನವಧರ್ಮ ಹಾಗೂ ಭ್ರಾತೃತ್ವದ ಬೇರುಗಳನ್ನು ಗಟ್ಟಿಗೊಳಿಸಿಕೊಳ್ಳಬೇಕಾಗಿದೆ.

(ಮುಗಿಯಿತು)

(ಮುಂದಿನ ಯಾನ : 7.5.2022)

ಪ್ರತಿಕ್ರಿಯೆಗಾಗಿ : [email protected]

ಈ ಅಂಕಣದ ಎಲ್ಲಾ ಭಾಗಗಳನ್ನೂ ಇಲ್ಲಿ ಓದಿ : https://tv9kannada.com/tag/vaishaliyaana

TV9 Kannada


Leave a Reply

Your email address will not be published.