Naga Panchami 2022: ನಾಗರ ಪಂಚಮಿ ಹಬ್ಬದ ವಿಶೇಷತೆ, ಆಚರಣೆ ಮತ್ತು ಮಹತ್ವದ ಮಾಹಿತಿ ಇಲ್ಲಿದೆ | Naga Panchami 2022: Here is the special, celebration and important information of Naga Panchami festival


ನಾವು ಆಚರಿಸುವ ಹಬ್ಬಗಳಲ್ಲಿ ಅತ್ಯಂತ ಮಹತ್ವಪೂರ್ಣ ಹಬ್ಬ ಶ್ರಾವಣ ಶುಕ್ಲ ಪಂಚಮಿಯಂದು ಆಚರಿಸುವ ನಾಗರಪಂಚಮಿ ಹಬ್ಬ. ವ್ರತವನ್ನು ಮಾಡುವ ವಿಧಾನವನ್ನು ತಿಳಿಯುವ ಮೊದಲು ಇದರ ಅನಿವಾರ್ಯತೆ ಏನು ಎಂದು ತಿಳಿಯೋಣ.

ನಮ್ಮ ದೇಶದ ಮಹತ್ವವೇ ಅದ್ಭುತ. ಇಲ್ಲಿ ಹೆಚ್ಚಿನ ಆಚರಣೆಗಳು ಪ್ರಕೃತಿಯ ಆರಾಧನೆಯೊಂದಿಗೇ ನಡೆಯುತ್ತದೆ. ಇದರಲ್ಲಿ ನಾವು ಆಚರಿಸುವ ಹಬ್ಬಗಳೂ ಸೇರಿವೆ. ಶ್ರಾವಣ ಮಾಸ ಬಂತೆಂದರೆ ಹಬ್ಬಗಳು ಒಂದರ ಮೇಲೊಂದರಂತೆ ಬರುತ್ತನೇ ಇರುತ್ತದೆ. ಈ ಹಬ್ಬಗಳು ನಮ್ಮ ಬಾಂಧವ್ಯ ಬೆಸೆಯುವಲ್ಲಿ ಅತ್ಯಂತ ಮಹತ್ವದ ಪಾತ್ರವಹಿಸುತ್ತದೆ. ಮನೆಯವರು,ಊರವವರು, ಹೀಗೆ ಒಂದೊಂದು ಸಲ ಒಬ್ಬೊಬ್ಬರಂತೆ ಸೇರುತ್ತಿರುವಂತೆ ಈ ಹಬ್ಬಗಳು ಮಾಡುತ್ತವೆ ಅಲ್ಲವೇ…. ? ಡಿವಿಜಿ ಅವರ ಮಾತು ಒಂದು ನೆನಪಿಗೆ ಬರುತ್ತದೆ “ಹಳೆಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು” ಎಂದು. ಹಳಬರ ಮತ್ತು ಹೊಸಬರ (ಹಿರಿಯರ ಮತ್ತು ಕಿರಿಯರ) ಸಮ್ಮಿಲನವನ್ನು ಈ ಹಬ್ಬ ಮಾಡುತ್ತದೆ. ಒಂದು ರೀತಿಯಲ್ಲಿ ಅಧ್ಯಾತ್ಮ ಮತ್ತು ಜೀವನದಪಾಠ ಈ ಲಾಭ ಹಬ್ಬದ ಕಾರಣದಿಂದ ಸುಲಭವಾಗಿ ಆಗುತ್ತದೆ.

ನಾವು ಆಚರಿಸುವ ಹಬ್ಬಗಳಲ್ಲಿ ಅತ್ಯಂತ ಮಹತ್ವಪೂರ್ಣ ಹಬ್ಬ ಶ್ರಾವಣ ಶುಕ್ಲ ಪಂಚಮಿಯಂದು ಆಚರಿಸುವ ನಾಗರಪಂಚಮಿ ಹಬ್ಬ. ವ್ರತವನ್ನು ಮಾಡುವ ವಿಧಾನವನ್ನು ತಿಳಿಯುವ ಮೊದಲು ಇದರ ಅನಿವಾರ್ಯತೆ ಏನು ಎಂದು ತಿಳಿಯೋಣ. ಒಂದು ಉದಾಹರಣೆಯ ಮೂಲಕ ವಿವರಿಸುವೆ – ನಮ್ಮ ಕುರಿತಾಗಿ ಯಾರೋ ಒಬ್ಬ ವ್ಯಕ್ತಿ ತುಂಬಾ ಭಾರವನ್ನು ಹೊತ್ತುತರುತ್ತಾನೆ. ನಾವು ಅವನಿಗೆ ಗೌರವವನ್ನು ಸಲ್ಲಿಸುವುದು ಧರ್ಮ. ಆದರೆ ಅಷ್ಟಕ್ಕೇ ಮುಗಿಯಲಿಲ್ಲ ವಿಚಾರ. ಮುಂದಿನ ದಿನಗಳಲ್ಲಿ ಆ ವ್ಯಕ್ತಿ ಸಿಕ್ಕಿದಾಗ ಅವನನ್ನು ನಾವು ಮಾತನಾಡಿಸುತ್ತೇವೆ ಅಲ್ಲವೇ ? ಯಾಕೆಂದರೆ ಅವನು ನಮಗೆ ಭಾರಹೊತ್ತು ಸಹಕರಿಸಿದವ ಎಂಬ ಕೃತಜ್ಞತೆಯಿಂದ.

ಈಗ ಯೋಚಿಸಿ ಪುರಾಣದ ಪ್ರಕಾರ ಆದಿಶೇಷ ಇಡೀ ಭೂಮಂಡಲವನ್ನು ತನ್ನ ತಲೆಯ (ಹೆಡೆಯಲ್ಲಿ) ಧರಿಸಿಕೊಂಡಿದ್ದಾನೆ. ಆ ಭೂಮಿಯಲ್ಲಿ ನಾವು ವಾಸಿಸುತ್ತಿದ್ದೇವೆ. ಅಲ್ಲದೇ ನಾವು ಆರಾಧಿಸುವ ವಿಷ್ಣುವಿಗೆ ಅವನು ನೆರಳನ್ನು ನೀಡುತ್ತಿದ್ದಾನೆ. ಶಿವನ ಆಭರಣವಾಗಿದ್ದಾನೆ ಮತ್ತು ಶಿವನ ಕಂಠದಿಂದ ಹಾಲಾಹಲ ಕೆಳಗಿಳಿಯದಂತೆ ಸುತ್ತಿಕೊಂಡಿರುತ್ತಾನೆ. ಇವೆಲ್ಲಾ ಕಾರಣದಿಂದ ಮತ್ತು ನಾವು ವಾಸಿಸುವ ನಮ್ಮದು ಎಂದು ಹೇಳುವ ಎಲ್ಲದನ್ನೂ ಧರಿಸಿರುವಾತ ಸರ್ಪ/ಶೇಷ . ಅದೂ ವಿಶ್ರಾಂತಿಯೇ ಇಲ್ಲದೆ. ಈ ಕಾರಣಗಳಿಂದ ನಾವು ಅವನಿಗೆ / ಅವನ ಕುಲಕ್ಕೆ ಗೌರವ ನೀಡುವುದು ಕರ್ತವ್ಯವಲ್ಲವೇ? ಇದು ಭಾವನೆಗೆ ಸಂಬಂಧಿಸಿದ ವಿಚಾರವಾದರೆ. ಇನ್ನು ನಾಗನ ಆರಾಧನೆ ಮಾಡುವುದರಿಂದ ಚರ್ಮಕ್ಕೆ ಸಂಬಂಧ ಪಟ್ಟ ರೋಗಗಳು ಶಮನವಾಗುತ್ತದೆ.

ನಾಗರಪಂಚಮಿಯಂದು ಪ್ರಾತಃಕಾಲದಲ್ಲಿ ಮನೆಮಂದಿ ಸ್ವಚ್ಛವಾಗಿ ಸ್ನಾನಮಾಡಿ . ಶುಭ್ರವಸ್ತ್ರವನ್ನು ಧರಿಸಿ ನಾಗನ ಆರಾಧನೆಯನ್ನು ಮಾಡಬೇಕು. ತಮ್ಮ ಮನೆಯ ಆಸು-ಪಾಸಲ್ಲಿ ನಾಗನ ವನ , ನಾಗನ ದೇವಸ್ಥಾನವಿದ್ದರೆ ಅಲ್ಲಿಗೆ ತೆರಳಿ ಅಲ್ಲಿ ಅಭಿಷೇಕಕ್ಕೆ ಹಾಲು,ಸೀಯಾಳ (ಗೆಂದಾಳಿ/ಕೆಂಬಣ್ಣದ ಸೀಯಾಳ ವಿಶೇಷ) ವನ್ನು ನೀಡಿ ಪರಿಮಳ ಭರಿತ ಹೂವುಗಳನ್ನು ಅರ್ಚನೆಗೆ ನೀಡಿರಿ.ಮತ್ತು ಜನ್ಮಾರ್ಜಿತ ಸಂಚಿತ ಪಾಪಕರ್ಮಗಳಿಂದ ಮುಕ್ತಿಯನ್ನು ನೀಡು ಎಂದು ಪಾರ್ಥಿಸಿ.

ಇನ್ನು ಮನೆಯಲ್ಲೇ ಆಚರಿಸುವ ಬಯಕೆಯುಳ್ಳವರು ಮೊದಲು ಹೇಳಿದಂತೆ ಸ್ನಾನವನ್ನು ಮುಗಿಸಿ ಮನೆಯಲ್ಲಿ ನಾಗಪ್ರತಿಮೆಯಿದ್ದರೆ ಸರಿ. ಇಲ್ಲದಿದ್ದಲ್ಲಿ ಹಿಟ್ಟಿನಿಂದ ನಾಗನ ರೂಪ ಮಾಡಿ ಅದಕ್ಕೆ ಪೂಜೆ ಮಾಡಬೇಕು. ಹಿಟ್ಟಿನನಾಗನಿಗೆ ಅಭಿಷೇಕ ಮಾಡಲು ಸಾಧ್ಯವಿಲ್ಲ. ಆದಕಾರಣ ಹಾಲಿನ,ಸೀಯಾಳದ ಪ್ರೋಕ್ಷಣೆ ಮಾಡಿ. ಪ್ರತಿಮೆಯಾಗಿದ್ದರೆ ಅಭಿಷೇಕ ಮಾಡಿರಿ.

ಸ್ನಾನದ ನಂತರ ಒಂದು ತಂಬಿಗೆ ಶುದ್ಧ ನೀರನ್ನು ತಂದು ಅದಕ್ಕೆ ಕಲಶಪೂಜೆ ಮಾಡಬೇಕು. ನಂತರ ಹೂವಿನ ಹರಿವಾಣ(ಬಟ್ಟಲು) ಸಿದ್ಧಮಾಡಿಕೊಂಡು, ಅಕ್ಷತೆಯನ್ನು ಬಲಗೈಯಲ್ಲಿ ತೆಗೆದುಕೊಂಡು ನಾಗನನ್ನು ಮನಸ್ಸಲ್ಲಿ ಧ್ಯಾನಿಸಿ “ಅದ್ಯ ನಾಗಾರಾಧನಂ ಕರೋಮಿ” ಎಂದು ಸಂಕಲ್ಪಿಸಿ ಆ ಅಕ್ಷತೆಗೆ ನೀರುಹಾಕಿ ಬಿಂಬದ ಮೇಲೆ ಹಾಕಿ. ಅದಕ್ಕೆ ಅಭಿಷೇಕ ಮಾಡುವುದು.ಆನಂತರ ನಾಗನ ಸ್ತೋತ್ರವನ್ನು ಹೇಳುತ್ತಾ ಪುಷ್ಪಾರ್ಚನೆ ಮಾಡಬೇಕು. ನಾಗನಿಗೆ ಬಾಳೇ ಹಣ್ಣು, ಅದರಿಂದ ಮಾಡಿದ ಭಕ್ಷ್ಯಗಳು ಅತ್ಯಂತ ಪ್ರಿಯ. ಆದ್ದರಿಂದ ಅಂತಹ ಭಕ್ಷ್ಯ ಸಾಧ್ಯವಿದ್ದಲ್ಲಿ ಮಾಡಿ ದೇವನಿಗೆ ನೈವೇದ್ಯ ಮಾಡಿರಿ. ಅರಶಿನ ಬಣ್ಣದ ದಾರವನ್ನು ನಾಗನಿಗೆ ಸುತ್ತ ಸುತ್ತಿ ಪೂಜೆಯನಂತರ ಅಂದರೆ ಆರತಿಯನ್ನು ಮಾಡಿದ ನಂತರ ಆ ದಾರವನ್ನು ಗಂಡಸರು ಬಲಗೈಗೂ,ಹೆಂಗಸರು ಎಡಗೈಗೂ ಧರಿಸಿದರೆ ಆಪತ್ತುಗಳು ದೂರವಾಗುತ್ತದೆ.

ಸಂತಾನದ ಸಮಸ್ಯೆಯಿದ್ದರೆ ನಾಗನಿಗೆ ತನು ಕಟ್ಟುವುದು ಎಂದಿದೆ ಅದನ್ನು ಈ ದಿನದಂದು ಮಾಡಿದರೆ ನಿಶ್ಚಯವಾಗಿ ನಿಮ್ಮ ಸಮಸ್ಯೆ ದೂರವಾಗಿ ಸಂತಾನಭಾಗ್ಯ ಪ್ರಾಪ್ತಿಯಾಗುವುದು. ಅದೇ ರೀತಿ ಹೆಣ್ಣು ಮಕ್ಕಳಿಗೆ ವಿವಾಹ ತಡವಾಗುತ್ತಿದ್ದರೆ ನಾಗನಿಗೆ ಈ ದಿನದಂದು ಮಲ್ಲಿಗೆ ಹೂವಿನ ಸೇವೆ ಮಾಡುವುದರಿಂದ ಕಂಕಣ ಭಾಗ್ಯ ಕೂಡಿಬರುವುದು. ಭೂ ಸಂಬಂಧಿತ ವ್ಯಾಜ್ಯವಿದ್ದರೆ ನಾಗನಿಗೆ ಈ ದಿನದಂದು ಆಶ್ಲೇಷಾಬಲಿ ಸೇವೆ ಮಾಡಿದರೆ ಸಮಸ್ಯೆ ಪರಿಹಾರವಾಗುವುದು. ಕಷ್ಟವಾದಲ್ಲಿ ನಾಗಪೂಜೆ ಮಾಡಿ ಪ್ರಾರ್ಥಿಸಿದರೂ ಸಾಕು. ಅಲ್ಲದೇ ಮುಖ್ಯವಾಗಿ ಈ ದಿನ ನಾಗನಿಗೆ ಅಭಿಷೇಕ ಮಾಡಿಸಿ ನಾಗ ಸಾನ್ನಿಧ್ಯದಲ್ಲಿ 48 ಷಷ್ಠೀ ಉಪವಾಸ ಮಾಡುವುದಾಗಿ ಸಂಕಲ್ಪಿಸಿ ಪ್ರಾರ್ಥಿಸಿಕೊಂಡರೆ ದೃಷ್ಟಿದೋಷ, ಮಾನಸಿಕ ಕಾಯಿಲೆಗಳು ಸಂಪೂರ್ಣ ಗುಣಮುಖವಾದ ದಾಖಲೆಗಳು ಇವೆ. ಕೃತಜ್ಞತೆಯ ಸಮರ್ಪಣೆಯಿಂದ ಆರಂಭಿಸಿ ದೈಹಿಕ,ಮಾನಸಿಕ ಮತ್ತು ಆಧ್ಯಾತ್ಮಿಕ ಸಮಸ್ಯೆಗಳ ಪರಿಹಾರ ಈ ನಾಗರಾಧನೆಯಿಂದ ಆಗುತ್ತದೆ. ನಾಗಾರಾಧನೆಯೆನ್ನುವುದು ಪರಶುರಾಮ ಸೃಷ್ಟಿಯಲ್ಲಿ ಹೆಚ್ಚಾಗಿ ಕಾಣಬಹುದು.

ಡಾ.ಕೇಶವ ಕಿರಣ ಬಿ, ಪ್ರಾಧ್ಯಾಪಕರು

S.R.B.S.S College ಹೊನ್ನಾವರ
[email protected]

TV9 Kannada


Leave a Reply

Your email address will not be published. Required fields are marked *