Narendra Modi: ನಮ್ಮ ಸೈನಿಕರೇ ಭಾರತ ಮಾತೆಗೆ ಸುರಕ್ಷಾ ಕವಚ; ನೌಶೇರಾದಲ್ಲಿ ಪ್ರಧಾನಿ ನರೇಂದ್ರ ಮೋದಿ | Our soldiers are suraksha kawach of Bharat Matha PM Narendra Modi in Jammu Kashmir Nowshera Rajouri


Narendra Modi: ನಮ್ಮ ಸೈನಿಕರೇ ಭಾರತ ಮಾತೆಗೆ ಸುರಕ್ಷಾ ಕವಚ; ನೌಶೇರಾದಲ್ಲಿ ಪ್ರಧಾನಿ ನರೇಂದ್ರ ಮೋದಿ

ನೌಶೇರಾದಲ್ಲಿ ಪ್ರಧಾನಿ ನರೇಂದ್ರ ಮೋದಿ

ರಾಜೌರಿ: ನಮ್ಮ ದೇಶದ ಸೈನಿಕರು ಭಾರತ ಮಾತೆಗೆ ಸುರಕ್ಷಾ ಕವಚದಂತಿದ್ದಾರೆ. ಎಂಥ ಪರಿಸ್ಥಿತಿಯಲ್ಲೂ ಅವರು ಭಾರತಾಂಬೆಗೆ ಯಾರಿಂದಲೂ ಯಾವುದೇ ತೊಂದರೆಯಾಗಲು ಬಿಡುವುದಿಲ್ಲ. ನಾನಿಂದು ಒಬ್ಬನೇ ಇಲ್ಲಿಗೆ ಬಂದಿಲ್ಲ. ನನ್ನೊಂದಿಗೆ ಕೋಟ್ಯಂತರ ಭಾರತೀಯರ ಆಶೀರ್ವಾದವನ್ನು ಸೈನಿಕರಿಗಾಗಿ ಹೊತ್ತು ತಂದಿದ್ದೇನೆ. ನಿಮ್ಮಂದಾಗಿಯೇ ನಾವಿಂದು ನೆಮ್ಮದಿಯಿಂದ ಹಬ್ಬ ಆಚರಿಸುತ್ತಿದ್ದೇವೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಜಮ್ಮು ಕಾಶ್ಮೀರದ ಗಡಿಯಲ್ಲಿರುವ ರಾಜೌರಿಯಲ್ಲಿ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ರಾಜೌರಿಯಲ್ಲಿರುವ ನೌಶೇರಾ ಸೆಕ್ಟರ್‌ನಲ್ಲಿ ಇಂದು ಪ್ರಧಾನಿ ಮೋದಿ ಭಾರತೀಯ ಯೋಧರೊಂದಿಗೆ ದೀಪಾವಳಿ ಹಬ್ಬವನ್ನು ಆಚರಿಸಿದ್ದಾರೆ. ಇಂದು ನನ್ನ ಎದುರು ಕೆಚ್ಚೆದೆಯ ಸೋದರರು- ಸೋದರಿಯರಿದ್ದೀರಿ. ನಿಮ್ಮ ಮಾತೃಭೂಮಿಗಾಗಿ ನೀವೆಲ್ಲರೂ ಧೈರ್ಯದಿಂದ ಹೋರಾಡುತ್ತಿದ್ದೀರಿ. ನಮ್ಮ ತಾಯ್ನಾಡನ್ನು ಕಾಪಾಡಲೇಬೇಕೆಂಬ ಹಠ, ಬದ್ಧತೆ ನಿಮ್ಮ ಕಣ್ಣುಗಳಲ್ಲಿ ಕಾಣುತ್ತಿದೆ. ನಿಮ್ಮಿಂದಾಗಿಯೇ ನಾವಿಂದು ನಿಶ್ಚಿಂತೆಯಿಂದ ನಿದ್ರೆ ಮಾಡುತ್ತಿದ್ದೇವೆ, ದೇಶಾದ್ಯಂತ ಸಂಭ್ರಮದಿಂದ, ಯಾವುದೇ ಭಯವಿಲ್ಲದೆ ದೀಪಾವಳಿ ಹಬ್ಬವನ್ನು ಆಚರಿಸುತ್ತಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾರತೀಯ ಸೈನಿಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಇದೀಗ ನಮ್ಮ ದೇಶದ ಮಹಿಳೆಯರಿಗೆ ಕೂಡ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡಲಾಗಿದೆ. ನಮ್ಮ ದೇಶದ ಹೆಣ್ಣುಮಕ್ಕಳು ತಮ್ಮ ಸಾಮರ್ಥ್ಯವೇನೆಂದು ಜಗತ್ತಿಗೆ ಮತ್ತೊಮ್ಮೆ ಸಾಬೀತುಪಡಿಸುವ ಸಮಯ ಬಂದಿದೆ. ಮಹಿಳೆಯರು ಕೂಡ ಭಾರತಾಂಬೆಯನ್ನು ಶತ್ರುಗಳಿಂದ ಕಾಪಾಡಲು ಕಂಕಣಬದ್ಧರಾಗಿರುವುದನ್ನು ನೋಡಿದರೆ ನನಗೆ ಹೆಮ್ಮೆ ಎನಿಸುತ್ತಿದೆ ಎಂದು ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

2014ರಲ್ಲಿ ಪ್ರಧಾನ ಮಂತ್ರಿಯಾದಾಗಿನಿಂದಲೂ ನರೇಂದ್ರ ಮೋದಿ ಪ್ರತಿ ವರ್ಷದ ದೀಪಾವಳಿಯಂದು ಗಡಿ ಔಟ್‌ಪೋಸ್ಟ್‌ಗಳಿಗೆ ಭೇಟಿ ನೀಡಿ ಸೈನಿಕರೊಂದಿಗೆ ದೀಪಾವಳಿಯ ಸಂಭ್ರಮವನ್ನು ಹಂಚಿಕೊಳ್ಳುತ್ತಿದ್ದಾರೆ. ಪ್ರತಿ ಬಾರಿ ಸೈನಿಕರಿಗೆ ಸಿಹಿತಿಂಡಿಗಳು ಮತ್ತು ಇತರ ಉಡುಗೊರೆಗಳನ್ನು ನೀಡುತ್ತಾರೆ. ನರೇಂದ್ರ ಮೋದಿ 2019ರಲ್ಲೂ ರಾಜೌರಿಯಲ್ಲಿ ಸೈನಿಕರೊಂದಿಗೆ ದೀಪಾವಳಿಯನ್ನು ಆಚರಿಸಿದ್ದರು.

ಜಮ್ಮು ಮತ್ತು ಕಾಶ್ಮೀರದ ಪೂಂಚ್ ಮತ್ತು ರಾಜೌರಿಯ ಅರಣ್ಯ ಪ್ರದೇಶದಲ್ಲಿ ಉಗ್ರರನ್ನು ಹೊಡೆದುರುಳಿಸಲು ಸೇನಾ ಸಿಬ್ಬಂದಿ ಭಾರೀ ಶೋಧ ನಡೆಸುತ್ತಿದ್ದಾರೆ. ಪೂಂಚ್‌ನಲ್ಲಿ ಭಯೋತ್ಪಾದಕರ ವಿರುದ್ಧದ ಹೋರಾಟದಲ್ಲಿ ಹಲವಾರು ಸೇನಾ ಸಿಬ್ಬಂದಿಗಳು ಸಾವನ್ನಪ್ಪಿದ್ದಾರೆ. ಶನಿವಾರ ರಜೌರಿಯ ಗಡಿ ನಿಯಂತ್ರಣ ರೇಖೆಯ (ಎಲ್‌ಒಸಿ) ಮುಂಚೂಣಿ ಪೋಸ್ಟ್‌ನ ಬಳಿ ಗಣಿ ಸ್ಫೋಟದಲ್ಲಿ ಭಾರತೀಯ ಸೇನೆಯ ಅಧಿಕಾರಿ ಮತ್ತು ಯೋಧ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಇನ್ನೋರ್ವ ಯೋಧ ಗಾಯಗೊಂಡಿದ್ದಾರೆ.

ಭಾರತೀಯ ಸೇನೆಯ ಮತ್ತೊಂದು ಪ್ರಮುಖ ವಲಯವೆಂದರೆ ಲಡಾಖ್ ಸೆಕ್ಟರ್​ನಲ್ಲಿ ನೆರೆಯ ದೇಶದಿಂದ ಯಾವುದೇ ಅತಿಕ್ರಮಣವನ್ನು ಪರಿಶೀಲಿಸಲು 18 ತಿಂಗಳಿಗೂ ಹೆಚ್ಚು ಕಾಲ ಭಾರತ-ಚೀನಾ ಗಡಿಯಲ್ಲಿ ಪಡೆಗಳನ್ನು ನಿಯೋಜಿಸಲಾಗಿದೆ. 2014ರಲ್ಲಿ ಅಧಿಕಾರ ವಹಿಸಿಕೊಂಡಾಗಿನಿಂದ ಉತ್ತರಾಖಂಡ, ಹಿಮಾಚಲ ಪ್ರದೇಶ, ರಾಜಸ್ಥಾನ, ಪಂಜಾಬ್ ಮತ್ತು ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶಗಳ ಮುನ್ನುಗ್ಗುತ್ತಿರುವ ಪ್ರದೇಶಗಳಲ್ಲಿ ಸೈನಿಕರೊಂದಿಗೆ ಸಮಯ ಕಳೆಯುವ ಮೂಲಕ ಪ್ರಧಾನಿ ದೀಪಾವಳಿಯನ್ನು ಆಚರಿಸುತ್ತಿದ್ದಾರೆ.

ಇದನ್ನೂ ಓದಿ: ನೌಶೇರಾ ಗಡಿ ಪ್ರದೇಶ ತಲುಪಿದ ಪ್ರಧಾನಿ ಮೋದಿ; ಯೋಧರೊಂದಿಗೆ ದೀಪಾವಳಿ ಆಚರಣೆ

Deepavali 2021: ದೇಶದ ಜನರಿಗೆ ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯ ತಿಳಿಸಿದ ಪ್ರಧಾನಿ ಮೋದಿ, ರಾಷ್ಟ್ರಪತಿ ರಾಮನಾಥ್​ ಕೋವಿಂದ

TV9 Kannada


Leave a Reply

Your email address will not be published. Required fields are marked *