Narendra Modi Horoscope: ಸೋಲೇ ಕಾಣದ ಪ್ರಧಾನಿ ನರೇಂದ್ರ ಮೋದಿ ಜಾತಕದಲ್ಲಿ ಸನ್ಯಾಸ ಯೋಗ | Narendra Modi Horoscope: Yoga in the Horoscope of Prime Minister Narendra Modi


Narendra Modi Horoscope: ಸೋಲೇ ಕಾಣದ ಪ್ರಧಾನಿ ನರೇಂದ್ರ ಮೋದಿ ಜಾತಕದಲ್ಲಿ ಸನ್ಯಾಸ ಯೋಗ

ನರೇಂದ್ರ ಮೋದಿ ಜಾತಕದಲ್ಲಿ ಸನ್ಯಾಸ ಯೋಗ

Image Credit source: Tv9 kannada

Narendra Modi Horoscope: ಒಂದೆಡೆ ಕುಜನಿಗೆ ರುಚಕ ಮಹಾಯೋಗವೂ, ಶಶಿ- ಮಂಗಳ ಯೋಗವೂ, ಗುರು- ಮಂಗಳ ಯೋಗವೂ ಇದೆ. ಅಂತಹ ದಶಾಧಿಪತಿ ಕಾಲ ಅತ್ಯುತ್ತಮ ಪರಾಕ್ರಮ ನೀಡುವ ಕಾಲವೆಂದೇ ಹೇಳಬೇಕು. ಆದರೆ ಅದೇ ಕುಜನಿಗೆ ಶತ್ರು ರಾಶ್ಯಾಧಿಪತ್ಯವೂ ಇರುವುದರಿಂದ ಶತ್ರು ಕಾಟವನ್ನೂ ಅವನೇ ನೀಡಬಹುದು. ಅಂದರೆ ಇದನ್ನು ಸ್ವಯಂಕೃತ ಅಪರಾಧ ಎನ್ನಬಹುದು.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಮೇ 24, 2022ಕ್ಕೆ ಎಂಟು ವರ್ಷ ಪೂರ್ಣಗೊಂಡಿದೆ. ಈ ಹಿನ್ನೆಲೆಯಲ್ಲಿ ಹಿಂದಣ ಹೆಜ್ಜೆಯನ್ನೊಮ್ಮೆ ನೋಡಿ, ಮುಂದೆ ನರೇಂದ್ರ ಮೋದಿ ಭವಿಷ್ಯ ಏನು ಎಂಬುದನ್ನು ಕರ್ನಾಟಕದ ಖ್ಯಾತ ಜ್ಯೋತಿಷಿಗಳಾದ ಉಡುಪಿಯ ಕಾಪು ಮೂಲದ ಪ್ರಕಾಶ್ ಅಮ್ಮಣ್ಣಾಯ ಜ್ಯೋತಿಷ್ಯ ವಿಶ್ಲೇಷಣೆ ಮಾಡಿದ್ದಾರೆ. ಇಲ್ಲಿರುವ ಎಲ್ಲ ಅಭಿಪ್ರಾಯಗಳು ಲೇಖಕರ ವೈಯಕ್ತಿಕವಾದವು. ದಿನ ಬೆಳಗಾದರೆ ಒಂದು ವರ್ಗ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತವನ್ನು ಹೊಗಳುವರು. ಇನ್ನೊಂದು ವರ್ಗ ತೆಗಳುವರು. ಎಲ್ಲವೂ ಅವರವರ ಅಭಿಪ್ರಾಯಗಳೇ. ಆದರೆ ಒಬ್ಬ ಜ್ಯೋತಿಷ್ಯ ಶಾಸ್ತ್ರ ಅಧ್ಯಯನಕಾರನಾಗಿ ನಾನು ನೋಡುವ ದೃಷ್ಟಿಕೋನವೇ ಬೇರೆ. ಇಲ್ಲಿ ಯಾರ ಪರವೂ ಅಲ್ಲ, ವಿರೋಧವೂ ಅಲ್ಲ. ಇದು ಕೇವಲ ಅವರ ಜನನ ಕುಂಡಲಿ ಆಧಾರಿತವಾದ ಒಂದು ವಿಮರ್ಶೆಯಷ್ಟೆ. ನರೇಂದ್ರ ದಾಮೋದರ ದಾಸ್ ಮೋದಿಯವರು ಈ ದೇಶದ ಪ್ರಧಾನ ಮಂತ್ರಿಯಾಗಿ ಎಂಟು ವರ್ಷ ಪೂರೈಸಿದ್ದಾರೆ. ಈ ಬಗ್ಗೆಯೇ ಇಲ್ಲಿ ಒಂದು ಜ್ಯೋತಿಷ್ಯ ವಿಶ್ಲೇಷಣೆ ಮಾಡಲಾಗಿದೆ. ಅಂದಹಾಗೆ ನರೇಂದ್ರ ಮೋದಿಯವರ ಜಾತಕದಲ್ಲಿ ಇರುವ ಯೋಗಗಳಲ್ಲಿ ಅಖಂಡ ಸಾಮ್ರಾಜ್ಯ ಯೋಗವೇ ಪ್ರಧಾನ. ಪ್ರಶ್ನಾತೀತ ನಡೆ ಇದು. ಅಲ್ಲದೆ ಕೆಲ ಅಭಿವೃದ್ಧಿ ಪರ ವಿಚಾರಗಳನ್ನು ಹೇಳದೆ ಮಾಡುವ ಒಂದು ಕೌಶಲತೆ ನೀಡುತ್ತದೆ. ಕರ್ಮ ಸ್ಥಾನದ ಶುಕ್ರ- ಶನಿಯೋಗವು ಇವರ ನಿಪುಣತೆಯನ್ನು ಜಗತ್ತು ಒಪ್ಪುವಂತೆ ಮಾಡುವಂಥದ್ದು. ಲಗ್ನ, ಚಂದ್ರ ಏಕಾದಶದಲ್ಲಿ ಬುಧಾದಿತ್ಯ (ಬುಧ ಮತ್ತು ರವಿ ಒಂದೇ ಮನೆಯಲ್ಲಿ ಇದೆ) ಯೋಗವು ಜಗತ್ತೇ ಒಪ್ಪಿಕೊಳ್ಳುವ ಚಕ್ರವರ್ತಿಯೋಗ.

ಯಾಕೆಂದರೆ ಸ್ವಕ್ಷೇತ್ರ, ಉಚ್ಚ ಕ್ಷೇತ್ರ ಬುಧನಿಗೆ ಈ ಯೋಗ! ದ್ವಿತೀಯಾಧಿಪತಿ (ವೃಶ್ಚಿಕ ಲಗ್ನ ಮತ್ತು ರಾಶಿಗೆ) ಗುರು ಚತುರ್ಥದಲ್ಲಿ ಅಖಂಡ ಸಾಮ್ರಾಜ್ಯ, ಗಜ ಕೇಸರಿ ಯೋಗಗಳನ್ನು ನೀಡಿದೆ. ಈಗ ನರೇಂದ್ರ ಮೋದಿಯವರಿಗೆ ಕುಜ ದಶೆ ಆರಂಭವಾಗಿದೆ. ಲಗ್ನಾಧಿಪತಿಯೂ ಷಷ್ಟಾಧಿಪತಿಯೂ (ಮೇಷ) ಕುಜನೇ. ಈಗ ಅವನ ದಶೆಯೇ ನಡೆಯುತ್ತಿದೆ. ಒಂದೆಡೆ ಕುಜನಿಗೆ ರುಚಕ ಮಹಾಯೋಗವೂ, ಶಶಿ- ಮಂಗಳ ಯೋಗವೂ, ಗುರು- ಮಂಗಳ ಯೋಗವೂ ಇದೆ. ಅಂತಹ ದಶಾಧಿಪತಿ ಕಾಲ ಅತ್ಯುತ್ತಮ ಪರಾಕ್ರಮ ನೀಡುವ ಕಾಲವೆಂದೇ ಹೇಳಬೇಕು. ಆದರೆ ಅದೇ ಕುಜನಿಗೆ ಶತ್ರು ರಾಶ್ಯಾಧಿಪತ್ಯವೂ ಇರುವುದರಿಂದ ಶತ್ರು ಕಾಟವನ್ನೂ ಅವನೇ ನೀಡಬಹುದು. ಅಂದರೆ ಇದನ್ನು ಸ್ವಯಂಕೃತ ಅಪರಾಧ ಎನ್ನಬಹುದು.

ಪ್ರಧಾನಿ ಹುದ್ದೆಯಿಂದ ನಿರ್ಗಮನ; ಕೋರ್ಟ್ ವಿಚಾರಣೆ

ಮೋದಿಯವರು ದುಷ್ಕೃತ್ಯ ಮಾಡುವವರ ಮೇಲೆ ಹಠಾತ್ ದಾಳಿ ನಡೆಸುವ ಸಾಧ್ಯತೆಗಳು ಈ ದಶೆಯಲ್ಲಿ ಕಾಣಬಹುದು. ಇದು ದಾಳಿಯಲ್ಲ ಶಿಕ್ಷೆ. 2025ರ ನಂತರದ ಆ ಎರಡೂವರೆ ವರ್ಷಗಳಲ್ಲಿ (ಮೀನ ರಾಶಿಯಲ್ಲಿ ಶನಿ ಸಂಚಾರ ಕಾಲ) ಮೋದಿಯವರ ಮೇಲೆ ದಾಳಿಯೋ, ಅಪರಾಧ ಎಂದು ಕೋರ್ಟು- ಕಟ್ಲೆಯೋ ನಡೆಯಬಹುದು. ಆದರೆ ಮೋದಿಯವರೇ ಹಾಕಿಕೊಂಡ ಚೌಕಟ್ಟಿನ ಪ್ರಕಾರ ಆ ಹೊತ್ತಿಗೆ ಅವರು ಪ್ರಧಾನ ಮಂತ್ರಿ ಹುದ್ದೆಯಿಂದ ನಿರ್ಗಮಿಸುತ್ತಾರೆ. ಆ ನಂತರ ಪೂರ್ಣ ಸನ್ಯಾಸಿಯಾಗಿ ವಿಶ್ವದ ಶಾಂತಿ ಸಂದೇಶ ನೀಡುವ ಕೆಲಸಕ್ಕಿಳಿಯುತ್ತಾರೆ.

ಮೋದಿಯವರಲ್ಲಿ ಇನ್ನೊಂದು ವಿಶೇಷವಾದ ವ್ಯಕ್ತಿತ್ವ ಇದೆ. ದ್ವಿತೀಯಾಧಿಪತಿ ಗುರುವಿಗೆ ಶನಿ ದೃಷ್ಟಿ ಇರುವುದರಿಂದ ತಲೆಗೆ ಹಾಕಿಕೊಳ್ಳದ ಸ್ವಭಾವ ಇದೆ. ಅವರು ಯಾವುದನ್ನು ಬಿಟ್ಟು ಹಾಕಬಹುದು? ಅನಗತ್ಯ, ಅಪ್ರಬುದ್ಧ ಟೀಕೆಗಳನ್ನು ಕಿವಿಗೆ ಹಾಕಿಕೊಳ್ಳದೆ ತನ್ನ ಕಾರ್ಯಸಾಧನೆಯ ಮೂಲಕವೇ ಉತ್ತರ ನೀಡುವ ಒಂದು ಚಾಕಚಕ್ಯತೆ ಅವರಲ್ಲಿದೆ. ಕೆಲವರು ಸಣ್ಣ ಟೀಕೆಗಳು ಬಂದರೂ ಮಾಡುವ ಕೆಲಸ ನಿಲ್ಲಿಸಿ, ಅದಕ್ಕೆ ಉತ್ತರಿಸಲು ಸಮಯ ವ್ಯರ್ಥ ಮಾಡುವುದುಂಟು. ಆದರೆ ಮೋದಿಯವರು ಹಾಗಿರುವುದಿಲ್ಲ. ಅವರು ಕೆಲಸಕ್ಕೇ ಜಾಸ್ತಿ ಆದ್ಯತೆ ನೀಡುತ್ತಾರೆ. ಹೇಳುವವರು ಹೇಳಿಕೊಂಡಿರಲಿ, ನನ್ನ ಗುರಿಯನ್ನು ತಲುಪಲೇ ಬೇಕು ಎನ್ನುವ ಹಠ ಅವರಲ್ಲಿದೆ. ನರೇಂದ್ರ ಮೋದಿ ಅವರು ಅಧಿಕಾರದಲ್ಲಿ ಇರುವವರೆಗೆ ಯಾವ ಪಕ್ಷದವರೂ ಅಧಿಕಾರಕ್ಕೆ ಬರುವುದು ಅಸಂಭವ. ಯಾಕೆಂದರೆ ಚಂದ್ರನ ಎರಡೂ ಕೇಂದ್ರಗಳಲ್ಲಿ ಅಥವಾ ದ್ವಿರ್ದ್ವಾಶದಲ್ಲಿ ಕುಜಾದಿ ಗ್ರಹರಿದ್ದರೆ ಅದು ದುರುಧರಾ ಯೋಗ ಆಗುತ್ತದೆ. ಇದೊಂದು ಅಭೂತಪೂರ್ವ ಯೋಗ. ಎದುರಾಳಿಯನ್ನು ಸೋಲಿಸುವ ಯೋಗವಿದು. ಅಂದರೆ ಸೋಲಿಲ್ಲದ ಸರದಾರ ಎನ್ನಬಹುದು. ಹಾಗಾಗಿ ಈ ಎಂಟನೆಯ ವರ್ಷದ ನಿರಂತರ ಆಡಳಿತದ ಈ ಪರ್ವ ಕಾಲದಲ್ಲಿ ಮೋದಿಯವರ ವ್ಯಕ್ತಿತ್ವವನ್ನು ಸ್ವಲ್ಪ ತಿಳಿಸೋಣ ಎಂದು ಮನಸ್ಸಾಯಿತು.

ಇದನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಯಾವ ಪಕ್ಷದ, ಜಾತಿಯ ರಾಜನೇ ಆಗಲಿ ಪ್ರಜೆಗಳಿಗೆ ಒಳಿತನ್ನು ಮಾಡುವವನು ‘ರಾಜಾ ಪ್ರತ್ಯಕ್ಷ ದೇವತಾ’ ಎಂದು ತಿಳಿದುಕೊಂಡು ಬಂದಂತಹ ಭವ್ಯ ಪರಂಪರೆ ನಮ್ಮದು. ವಾತಾವರಣ( ಗೋಚರ)ಕ್ಕೆ ಹೊಂದಿಕೊಳ್ಳುವ ವ್ಯಕ್ತಿತ್ವ ಇರಬೇಕು. ಮೋದಿಯವರ ಜಾತಕದಲ್ಲಿ ಈ ಲಕ್ಷಣ ಇದೆ. ಆದರೆ ಇಷ್ಟು ಇದ್ದರೂ ಗೋಚರ ಫಲಕ್ಕೆ ಪೂರ್ಣ ಹೊಂದಿಕೊಂಡವರು ಹಿಂದೆಯೂ ಇರಲಿಲ್ಲ, ಮುಂದೆಯೂ ಇರಲ್ಲ, ಇಂದೂ ಇರಲು ಸಾಧ್ಯವಿಲ್ಲ. ಇದನ್ನೇ ದೈವ ಚಿತ್ತ ಎನ್ನುವುದು‌‌.

ಹಿನ್ನಡೆ ತಂದ ದಶಾ- ಭುಕ್ತಿಗಳು

ಪುಲ್ವಾಮಾ ದಾಳಿಯ ಸಂದರ್ಭದಲ್ಲಿ ಮೋದಿಯವರಿಗೆ ಚಂದ್ರ ದಶೆಯಲ್ಲಿ ಬುಧ ಭುಕ್ತಿ ನಡೆಯುತ್ತಿತ್ತು. ಮೋದಿ ಜಾತಕದಲ್ಲಿ ಬುಧನಿಗೆ ಖರದ್ರೇಕ್ಕಾಣಾಧಿಪತ್ಯ ಇದೆ. ನಾಶ ಮಾಡುವ, ಮರಣ ತರುವ ಗ್ರಹನ ಭುಕ್ತಿ. ಎಂತಹ ಬಲಿಷ್ಠನೇ ಇದ್ದರೂ ದೋಷ ನೀಡುವ ಗ್ರಹನ ದಶೆ- ಭುಕ್ತಿಯಲ್ಲಿ ಅದು ಸಂಭವಿಸಿಯೇ ಸಂಭವಿಸುತ್ತದೆ. ಆದರೆ ಇದರಿಂದ ವಿಚಲಿತರಾಗದೆ ಇರುವುದೇ ದೊಡ್ಡ ವ್ಯಕ್ತಿತ್ವ. ಮತ್ತೊಂದೆಡೆ ಒಮ್ಮೆ ತಂದಂತಹ ಶಾಸನವನ್ನು ಹಿಂಪಡೆದದ್ದು. ರೈತ ಮಸೂದೆ. ಆ ಸಮಯದಲ್ಲಿ ಚಂದ್ರ ದಶೆಯ ಶುಕ್ರ ಭುಕ್ತಿ. ವ್ಯಯಾಧಿಪತಿಯೂ ಶುಕ್ರನ ಚತುರ್ಥದಲ್ಲಿ ಕುಜನೂ ಇದ್ದುದರಿಂದ ಶುಕ್ರನ ಬಲ ಹರಣವಾಯಿತು. ಆಗ ಶುಕ್ರನ ಅಲಂಕಾರ ಹಾಳಾಯಿತು. ವ್ಯಕ್ತಿತ್ವಕ್ಕೆ ಹಿನ್ನಡೆಯಾಯಿತು. ಇವೆಲ್ಲವನ್ನೂ ನಾವು ಪ್ರಕೃತಿ ನಿಯಮ ಎಂದೇ ಹೇಳೋದು.

ಇನ್ನು ಇದೇ 2019 ಮಧ್ಯಭಾಗದವರೆಗೆ ಮೋದಿಯವರಿಗೆ ಶನಿ ಭುಕ್ತಿ ಇತ್ತು. ಅದು ಎಷ್ಟು ಕೆಲಸ ಮಾಡಿತು ಎಂದರೆ ತ್ರಿತಲಾಕ್, 370ನೇ ವಿಧಿ ಮುಂತಾದ ಮಹತ್ತರವಾದ ಶಾಸನಗಳ ಪರಿವರ್ತನೆ ಮಾಡುವಲ್ಲಿ ಯಶಸ್ಸನ್ನು ಕಂಡಿತು. ಯಾವಾಗ ಬುಧ ಭುಕ್ತಿ ಶುರುವಾಯಿತೋ ನಂತರ ಅವರಿಗೆ ಸ್ವಲ್ಪ ಹಿನ್ನಡೆಯೇ ಆಯಿತು. ಆದರೂ ಪಂಚಮಾಧಿಪತಿ ಗುರುವಿಗೇ ಮಹಾ ಯೋಗಗಳು ಇರೋದರಿಂದ ಅಂತಹ ಹಿನ್ನಡೆಗಳೂ ಇವರನ್ನು ವಿಚಲಿತ ಮಾಡದೆ ಮತ್ತೆ ಹೊಸ ಹೊಸ ಹುರುಪನ್ನು ತಂದಿತು.

ಮುಂದೇನು?

ಇದು ಎಲ್ಲರಿಗೂ ಕುತೂಹಲದ ಪ್ರಶ್ನೆ. ಗೆಲುವಿನ ಯೋಗ ಇದ್ದವರಿಗೆ ಆಯಾಯ ಕಾಲಕ್ಕೆ ತಕ್ಕಂತಹ ಒಂದು ಪ್ರಕೃತಿ ನಿರ್ಮಾಣ ಆಗುತ್ತದೆ. ಅಯೋಧ್ಯಾ ಮಂದಿರದ ಅಭಿವೃದ್ಧಿ ಕಾರ್ಯಗಳು, ಕಾಶಿಯ ಜ್ಞಾನವಾಪಿ ಕ್ಷೇತ್ರದ ಮುನ್ನಡೆ, ಇನ್ನು ತಾಜಮಹಲ್ ವಿಚಾರ, ಕುತುಬ್ ಮಿನಾರ್ ವಿಚಾರಗಳು ನ್ಯಾಯ ಸಮ್ಮತವಾಗಿ ಬೆಂಬಲವಾದೀತು. ಅಂತೂ ಒಂದು ಹಂತದಲ್ಲಿ ದೇಶದ ಸ್ಥಿತಿಯನ್ನು ಉತ್ತಮ ಸ್ಥಿತಿಗೆ ಕೊಂಡೊಯ್ದು, ಆ ನಂತರ ದೇಶದ ರಾಜಕೀಯದಿಂದ ನಿವೃತ್ತಿ ಹೊಂದುತ್ತಾರೆ. ಅಂದರೆ ನಿಷ್ಕ್ರಿಯ ಎಂದರ್ಥವಲ್ಲ. ಆಗ ಇವರೊಳಗಿರುವ ಪಾರಿವ್ರ್ಯಾಜಕ ಯೋಗವು (ಪಾರಿವ್ರ್ಯಾಜಕ ಎಂದರೆ ನಿಂತಲ್ಲೇ ನಿಲ್ಲದೆ ಧರ್ಮ ಪ್ರಸಾರ ಮಾಡುವವರು. ವಿವೇಕಾನಂದರಂತೆ, ಆಚಾರ್ಯತ್ರಯರಂತೆ) ಮತ್ತಷ್ಟು ಧರ್ಮ ಪ್ರಚಾರದ ಕೆಲಸಗಳನ್ನು ಮಾಡಿಸುತ್ತದೆ.

ಪ್ರಕಾಶ್ ಅಮ್ಮಣ್ಣಾಯ

ಖ್ಯಾತ ಜ್ಯೋತಿಷಿ

ನಿಮ್ಮ ರಾಶಿ ಭವಿಷ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

ಪ್ರಮುಖ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ 

TV9 Kannada


Leave a Reply

Your email address will not be published. Required fields are marked *