Nassar: ಶೂಟಿಂಗ್​ ವೇಳೆ ಅವಘಡದಿಂದ ‘ಬಾಹುಬಲಿ’ ನಟ ನಾಸರ್​ಗೆ ಪೆಟ್ಟು; ಆಸ್ಪತ್ರೆಗೆ ದಾಖಲು | Bahubali actor Nassar got injured during film shooting in Telangana Health update awaited


Nassar Injured: ಮೆಟ್ಟಿಲುಗಳ ಮೇಲಿಂದ ಬಿದ್ದ ನಾಸರ್​ ಅವರಿಗೆ ಕಣ್ಣಿನ ಭಾಗಕ್ಕೆ ಪೆಟ್ಟಾಯಿತು. ಕೂಡಲೆ ಅವರನ್ನು ಆಸ್ಪತ್ರೆಗೆ ದಾಖಲಿಸಿ, ಶಸ್ತ್ರ ಚಿಕಿತ್ಸೆ ಮಾಡಿಸಲಾಗಿದೆ.

ಖ್ಯಾತ ನಟ ನಾಸರ್​ (Nassar) ಅವರು ಬಹುಭಾಷೆಯಲ್ಲಿ ಫೇಮಸ್​ ಆಗಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಹಾಗೂ ಇಂಗ್ಲಿಷ್​ ಸಿನಿಮಾಗಳಲ್ಲಿ ನಟಿಸಿದ ಅನುಭವ ನಾಸರ್​ ಅವರಿಗೆ ಇದೆ. ದಕ್ಷಿಣ ಭಾರತದಲ್ಲಿ ಅವರಿಗೆ ಭರ್ಜರಿ ಬೇಡಿಕೆ ಇದೆ. ಬಣ್ಣದ ಲೋಕದಲ್ಲಿ ಅವರು ಹೊಂದಿರುವ ಅನುಭವ ಅಪಾರ. ಮೂಲತಃ ಚೆನ್ನೈನವರಾದ ಅವರಿಗೆ ದೇಶಾದ್ಯಂತ ಅಭಿಮಾನಿಗಳಿದ್ದಾರೆ. ಅವರ ಬಗ್ಗೆ ಈಗೊಂದು ಬ್ಯಾಡ್​ ನ್ಯೂಸ್​ ಕೇಳಿಬಂದಿದೆ. ಸಿನಿಮಾ ಶೂಟಿಂಗ್​ ವೇಳೆ ನಾಸರ್​ ಪೆಟ್ಟು ಮಾಡಿಕೊಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವೈದ್ಯರು ಶಸ್ತ್ರಚಿಕಿತ್ಸೆ ನೆರವೇರಿಸಿದ್ದಾರೆ. ಈ ವಿಷಯ ತಿಳಿದು ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳಿಗೆ ಆತಂಕ ಆಗಿದೆ. ನಾಸರ್​ ಹೆಲ್ತ್​ ಅಪ್​ಡೇಟ್ (Nassar Health Update)​ ತಿಳಿಯಲು ಎಲ್ಲರೂ ಕಾದಿದ್ದಾರೆ. ಆದಷ್ಟು ಬೇಗ ಅವರು ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಲಾಗುತ್ತಿದೆ.

ವರದಿಗಳ ಪ್ರಕಾರ, ತೆಲಂಗಾಣ ಪೊಲೀಸ್ ಅಕಾಡೆಮಿಯಲ್ಲಿ ನಾಸರ್​ ಅವರು ಸಿನಿಮಾ ಶೂಟಿಂಗ್​ ಮಾಡುತ್ತಿದ್ದರು. ಅವರ ಜೊತೆ ಸುಹಾಸಿನಿ ಮಣಿರತ್ನಂ, ಮೆಹ್ರೀನ್​ ಪೀರ್ಜಾದಾ, ಸಯ್ಯಾಜಿ ಶಿಂಧೆ ಮುಂತಾದ ಕಲಾವಿದರು ಚಿತ್ರೀಕರಣದಲ್ಲಿ ಭಾಗಿ ಆಗಿದ್ದರು. ಈ ಸಂದರ್ಭದಲ್ಲಿ ನಾಸರ್​ ಅವರು ಮೆಟ್ಟಿಲುಗಳ ಮೇಲಿಂದ ಬಿದ್ದರು. ಅವರ ಕಣ್ಣಿನ ಭಾಗಕ್ಕೆ ಪೆಟ್ಟಾಯಿತು. ಕೂಡಲೆ ಅವರನ್ನು ಆಸ್ಪತ್ರೆಗೆ ದಾಖಲಿಸಿ, ಶಸ್ತ್ರ ಚಿಕಿತ್ಸೆ ಮಾಡಿಸಲಾಗಿದೆ. ಈ ಘಟನೆ ಬಗ್ಗೆ ಚಿತ್ರತಂಡದವರು ಅಥವಾ ನಾಸರ್​ ಕುಟುಂಬದವರು ಇನ್ನಷ್ಟೇ ಅಧಿಕೃತ ಹೇಳಿಕೆ ನೀಡಬೇಕಿದೆ.

ಶಸ್ತ್ರ ಚಿಕಿತ್ಸೆ ಬಳಿಕ ನಾಸರ್​ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಅಭಿಮಾನಿಗಳು ಆತಂಕಕ್ಕೆ ಒಳಗಾಗಬೇಕಾದ ಅವಶ್ಯಕತೆ ಇಲ್ಲ. ಶೀಘ್ರದಲ್ಲೇ ಹೆಲ್ತ್​ ಅಪ್​ಡೇಟ್​ ನೀಡಲಾಗುವುದು ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಪ್ರಸ್ತುತ ಅನೇಕ ಸಿನಿಮಾಗಳಲ್ಲಿ ನಾಸರ್​ ಬ್ಯುಸಿ ಆಗಿದ್ದಾರೆ. ಪೋಷಕ ಪಾತ್ರಗಳನ್ನು ನಿಭಾಯಿಸುವ ಮೂಲಕ ಅವರು ಸಖತ್​ ಜನಪ್ರಿಯತೆ ಪಡೆದುಕೊಂಡಿದ್ದಾರೆ.

‘ಬಾಹುಬಲಿ’ ಸಿನಿಮಾದಲ್ಲಿ ನಾಸರ್​ ಮಾಡಿದ ಬಿಜ್ಜಳದೇವನ ಪಾತ್ರ ತುಂಬ ಜನಪ್ರಿಯವಾಗಿತ್ತು. ಶಿವಗಾಮಿಯ ಪತಿಯಾಗಿ, ಬಲ್ಲಾಳದೇವನ ತಂದೆಯಾಗಿ ಅವರು ನಟಿಸಿ ಗಮನ ಸೆಳೆದಿದ್ದರು. ನಾಸರ್​ ಅವರ ನಟನೆಗೆ ಅನೇಕ ಪ್ರಶಸ್ತಿಗಳು ಸಂದಿವೆ. ತಮಿಳುನಾಡು ಸರ್ಕಾರ ನೀಡುವ ರಾಜ್ಯ ಚಲನಚಿತ್ರ ಪ್ರಶಸ್ತಿಗೆ 6 ಬಾರಿ ಅವರು ಭಾಜನರಾಗಿದ್ದಾರೆ. ವಿಲನ್​ ಪಾತ್ರಕ್ಕೆ ‘ನಂದಿ ಪ್ರಶಸ್ತಿ’ ಪಡೆದಿದ್ದಾರೆ. ನಿರ್ದೇಶಕನಾಗಿಯೂ ಅವರು ಕೆಲಸ ಮಾಡಿದ್ದಾರೆ. ಕೆಲವು ಸಿನಿಮಾಗಳಿಗೆ ನಾಸರ್​ ಆ್ಯಕ್ಷನ್​-ಕಟ್​ ಹೇಳಿದ್ದಾರೆ.

TV9 Kannada


Leave a Reply

Your email address will not be published.