National Defence: ಅರಬ್ಬಿ ಸಮುದ್ರ ಮತ್ತು ಪಾಕಿಸ್ತಾನದ ಸುಳ್ಳು: ಕರಾಚಿ ಸಮೀಪ ಭಾರತದ ಜಲಾಂತರ್ಗಾಮಿ ಸಂಚರಿಸಿದ್ದು ನಿಜವೇ? | Indian submarine in pakistan commercial capital karachi what is the truth


National Defence: ಅರಬ್ಬಿ ಸಮುದ್ರ ಮತ್ತು ಪಾಕಿಸ್ತಾನದ ಸುಳ್ಳು: ಕರಾಚಿ ಸಮೀಪ ಭಾರತದ ಜಲಾಂತರ್ಗಾಮಿ ಸಂಚರಿಸಿದ್ದು ನಿಜವೇ?

ಭಾರತೀಯ ನೌಕಾಪಡೆಯ ಜಲಾಂತರ್ಗಾಮಿ (ಸಂಗ್ರಹ ಚಿತ್ರ)

ಭಾರತದ ಜಲಾಂತರ್ಗಾಮಿಯನ್ನು ತನ್ನ ದೇಶದ ನೀರಿನಲ್ಲಿ ಪತ್ತೆ ಮಾಡಿದ್ದಾಗಿ ಈಚೆಗೆ ಪಾಕಿಸ್ತಾನವು ಹೇಳಿಕೆ ನೀಡಿ, ಗದ್ದಲವೆಬ್ಬಿಸಿತ್ತು. ಭಾರತದ ಜಲಾಂತರ್ಗಾಮಿಯನ್ನು ತಡೆದಿರುವುದಾಗಿ ಹೇಳಿಕೊಂಡಿರುವ ಪಾಕಿಸ್ತಾನ, ಅದಕ್ಕೆ ಸಂಬಂಧಿಸಿದ್ದು ಎಂದು ಹೇಳಿ ಒಂದು ಚಿತ್ರ ಹಾಗೂ ವಿಡಿಯೊವೊಂದನ್ನು ಬಿಡುಗಡೆ ಮಾಡಿತ್ತು. ಈ ಲೇಖನದಲ್ಲಿ ಪಾಕಿಸ್ತಾನದ ಹೇಳಿಕೆಯ ಸತ್ಯಾಸತ್ಯತೆಯನ್ನು ಪರಿಶೀಲಿಸಿದ್ದಾರೆ ರಕ್ಷಣಾ ವಿದ್ಯಮಾನಗಳ ವಿಶ್ಲೇಷಕ ಗಿರೀಶ್ ಲಿಂಗಣ್ಣ.

ತನ್ನ ವಾಣಿಜ್ಯ ನಗರಿಯ ಸಮೀಪ ಭಾರತದ ಜಲಾಂತರ್ಗಾಮಿ ಬಂದಿತ್ತು ಎಂಬ ಪಾಕಿಸ್ತಾನದ ಹೇಳಿಕೆಯನ್ನು ಭಾರತೀಯ ನೌಕಾಪಡೆ ತಳ್ಳಿ ಹಾಕಿತ್ತು. ಪಾಕಿಸ್ತಾನವು ಬಿಡುಗಡೆ ಮಾಡಿದ್ದ ವಿಡಿಯೊದಲ್ಲಿ ತೋರಿಸಿರುವ ಜಿಪಿಎಸ್ ನಿರ್ದೇಶಾಂಕಗಳು ಈ ಜಲಾಂತರ್ಗಾಮಿ ನೌಕೆಯು ಕರಾಚಿಯಿಂದ 140-150 ನಾಟಿಕಲ್ ಮೈಲುಗಳಷ್ಟು (1 ನಾಟಿಕಲ್ ಮೈಲು 1.85 ಕಿ.ಮೀ.ಗೆ ಸಮ) ದೂರದಲ್ಲಿ ಇರುವುದನ್ನು ತೋರಿಸುತ್ತದೆ ಎಂದು ಹೇಳಿತ್ತು. ಯಾವುದೇ ದೇಶದ ಸಾಗರ ಗಡಿಯು ಕರಾವಳಿಯಿಂದ ಕೇವಲ 12 ನಾಟಿಕಲ್ ಮೈಲುಗಳವರೆಗೆ ವಿಸ್ತರಿಸಿರುತ್ತದೆ. ಈ ವಿಡಿಯೊದಲ್ಲಿ ತೋರಿಸಿರುವ ಜಲಾಂತರ್ಗಾಮಿ ಬೇರಾವುದೋ ದೇಶದ್ದಾಗಿರಬಹುದು. ಅಲ್ಲದೆ, ವಿಡಿಯೊದ ಸತ್ಯಾಸತ್ಯತೆ ಬಗ್ಗೆಯೇ ಪ್ರಶ್ನಾರ್ಥಕ ಚಿಹ್ನೆ ಇದೆ. ಪಾಕಿಸ್ತಾನವು ಈ ಹಿಂದೆಯೂ ಇಂತಹ ಸಂಶಯಾಸ್ಪದ ಹೇಳಿಕೆಗಳನ್ನು ನೀಡಿತ್ತು ಎಂದು ಭಾರತೀಯ ನೌಕಾಪಡೆ ಪ್ರತಿಕ್ರಿಯಿಸಿತ್ತು.

ಈ ಪ್ರತ್ಯುತ್ತರದೊಂದಿಗೆ ವಿಷಯ ಮುಕ್ತಾಯ ಕಂಡಿದ್ದರೂ, ನೆರೆಯ ದೇಶದ ಹಕ್ಕುಗಳನ್ನು ನೋಡುವಾಗ ಈ ಘಟನೆಯು ನಮ್ಮ ಚಿಂತನೆಗೆ ಸರಕನ್ನು ಒದಗಿಸುತ್ತದೆ. ಪಾಕಿಸ್ತಾನದ ನೀರಿನಲ್ಲಿ ಜಲಾಂತರ್ಗಾಮಿಯು ಪ್ರವೇಶಿಸಲು ಸಾಧ್ಯವಿಲ್ಲ ಎನ್ನುವ ಸಂಕೀರ್ಣ ವಿಷಯವನ್ನು ವಿವರಿಸಲು ಸ್ವಲ್ಪ ಅಧ್ಯಯನಾತ್ಮಕವಾಗಿ ಹೋಗಬೇಕೆಂದು ನಾನು ಯೋಚಿಸಿದೆ. ಮೊದಲನೆಯದಾಗಿ ಅರಬ್ಬಿ ಸಮುದ್ರದ ಜಲಶಾಸ್ತ್ರವನ್ನು ಅರ್ಥಮಾಡಿಕೊಳ್ಳೋಣ. ಇದು ನೀರೊಳಗಿನ ಹಲವು ಅಡೆತಡೆಗಳಿಂದ ನಿರ್ಬಂಧಿಸಲ್ಪಟ್ಟಿದೆ. ಸಾಂಪ್ರದಾಯಿಕ ಜಲಾಂತರ್ಗಾಮಿ ನೌಕೆಗಳಿಗೆ ಪರವಾಗಿಲ್ಲ. ಆದರೆ, ಆಳ ಸಮುದ್ರದಲ್ಲಿ ಸಂಚರಿಸುವ ಶಕ್ತಿಶಾಲಿ ಜಲಾಂತರ್ಗಾಮಿ ನೌಕೆಗಳಿಗೆ ಈ ಪ್ರದೇಶವು ಸೂಕ್ತವಲ್ಲ.

ತನ್ನ ವ್ಯಾಪ್ತಿಯ ನೀರಿನೊಳಗೆ ಜಲಾಂತರ್ಗಾಮಿ ನೌಕೆಯನ್ನು ನೋಡಿರುವುದಾಗಿ ಪಾಕಿಸ್ತಾನ ಹೇಳಿಕೊಂಡಿದ್ದು ಸುಳ್ಳು ಪ್ರಚಾರವೇ ಆಗಿದೆ. ಏಕೆಂದರೆ, ಕರಾಚಿಯ ಸಮೀಪ ಸುಮಾರು 50 ಕಿಮೀ ದೂರದ ವರೆಗೆ ಸಮುದ್ರದ ಆಳ ಕೇವಲ 50 ಮೀಟರ್ ಅಷ್ಟೇ ಇದೆ. ಈ ನೀರಿನಲ್ಲಿ ಜಲಾಂತರ್ಗಾಮಿ ನೌಕೆ ಪ್ರವೇಶಿಸಿದರೆ ಅದು ಸುಲಭವಾಗಿ ಕಣ್ಣಿಗೆ ಬೀಳುತ್ತದೆ, ಅಷ್ಟೇ ಅಲ್ಲದೆ, ಅದರ ಗೋಚರತೆಯನ್ನು ಪರಿಗಣಿಸಿ ದಾಳಿಗೊಳಗಾಗುವ ಸಾಧ್ಯತೆಯೂ ಜಾಸ್ತಿಯಿರುತ್ತದೆ.

ಸಾಂಪ್ರದಾಯಿಕ ಜಲಾಂತರ್ಗಾಮಿ ನೌಕೆಗಳು ಗಾಳಿಯನ್ನು ಸಂಗ್ರಹಿಸಿಕೊಳ್ಳಲು ಅಥವಾ ಬ್ಯಾಟರಿಗಳನ್ನು ರೀಚಾರ್ಜ್ ಮಾಡಲು ಆಗಾಗ್ಗೆ ನೀರಿನ ಮೇಲ್ಭಾಗಕ್ಕೆ ಬರಬೇಕಾಗುತ್ತದೆ. ಶತ್ರು ನೆಲೆಯ ಸಮೀಪ ಬೇಹುಗಾರಿಕೆ ಕಾರ್ಯಾಚರಣೆ ನಡೆಸುತ್ತಿದ್ದರೆ ಉಸಿರಾಡಲು ಸ್ನಾರ್ಕೆಲ್ ಎತ್ತುವ ಮೂಲಕ ತನ್ನ ಇರವನ್ನು ಪತ್ತೆ ಮಾಡಿಕೊಡಲು ಯಾವ ಜಲಾಂತರ್ಗಾಮಿಯೂ ಧೈರ್ಯ ಮಾಡುವುದಿಲ್ಲ. ಪಾಕಿಸ್ತಾನ ಈ ಮೊದಲು 2019ರಲ್ಲೂ ಇಂತಹ ಹೇಳಿಕೆಗಳನ್ನು ಕೊಟ್ಟಿತ್ತು. ಆದರೆ, ಆ ಹೇಳಿಕೆಗಳನ್ನೂ ನೌಕಾಪಡೆ ತಳ್ಳಿಹಾಕಿತ್ತು. ಆರ್ಥಿಕ ದಿವಾಳಿತನದ ಅಂಚಿನಲ್ಲಿರುವ ಪಾಕಿಸ್ತಾನವು ಹತಾಶೆಯಿಂದ ಇಂತಹ ಅಪಪ್ರಚಾರಗಳನ್ನು ಮಾಡುತ್ತಿದೆ ಅಷ್ಟೇ.

ಭಾರತವು ಅದ್ಭುತವಾದ ನೌಕಾ ಇತಿಹಾಸವನ್ನು ಹೊಂದಿದೆ. ಅಲ್ಲಿ ಚೋಳರು, ವಿಶೇಷವಾಗಿ ರಾಜ ರಾಜ ಚೋಳರು ಅಸಾಧಾರಣ ನೌಕಾಪಡೆಯನ್ನು ನಿರ್ಮಿಸಿದ್ದರು. ಅದರಿಂದ ಆಗ್ನೇಯ ಏಷ್ಯಾದ ರಾಷ್ಟ್ರಗಳು ಮತ್ತು ಶ್ರೀಲಂಕಾವನ್ನು ವಶಪಡಿಸಿಕೊಳ್ಳಲು ಅವರಿಗೆ ಸಾಧ್ಯವಾಯಿತು. ಆಗ ಭಾರತವನ್ನು ಬಹು ವಿಸ್ತಾರವಾಗಿ ಪರಿಗಣಿಸಲಾಗಿತ್ತು. ಮರಾಠಾ ಸಾಮ್ರಾಜ್ಯವನ್ನು, ವಿಶೇಷವಾಗಿ ಶಿವಾಜಿಯನ್ನು, ಭಾರತೀಯ ನೌಕಾಪಡೆಯ ಪಿತಾಮಹ ಎಂದು ಪರಿಗಣಿಸಲಾಗುತ್ತದೆ. ಅಲ್ಲಿ ಅವರು ಯುದ್ಧನೌಕೆಗಳನ್ನು ನಿರ್ಮಿಸಿದರು ಮತ್ತು ನಾವಿಕರಿಗೆ ತರಬೇತಿ ನೀಡಿದರು. ಆರ್ಥಿಕತೆಯನ್ನು ಉತ್ತೇಜಿಸಲು ಸಮುದ್ರಗಳನ್ನು ನಿಯಂತ್ರಿಸುವ ಮಹತ್ವವನ್ನು ಪರಿಗಣಿಸಿ ಅವರು ಸಮುದ್ರ ಕೋಟೆಯನ್ನೂ ನಿರ್ಮಿಸಿದ್ದರು. ಮೊಗಲರು ಸಮುದ್ರ ವ್ಯಾಪಾರಕ್ಕೆ ಉತ್ತೇಜನ ನೀಡಿದರೂ, ತಮ್ಮದೇ ಆದ ನೌಕಾಪಡೆಯೊಂದನ್ನು ಕಟ್ಟುವ ಪರಿಕಲ್ಪನೆಗೆ ಉತ್ತೇಜನ ನೀಡಲಿಲ್ಲ.

ಈ ಇತಿಹಾಸವು ಸಮುದ್ರ ಯುದ್ಧದ ಪರಿಪಕ್ವತೆ ಮತ್ತು ಕಲ್ಪನೆಗಳನ್ನು ಉಲ್ಲೇಖಿಸುತ್ತದೆ. ಭಾರತೀಯ ನೌಕಾಪಡೆ, ನೌಕಾ ಶಕ್ತಿಯು ಅರ್ಧದಷ್ಟೂ ಇಲ್ಲದ ಪಾಕಿಸ್ತಾನದ ಹೇಳಿಕೆಗಳ ಬಗ್ಗೆ ಭಾರತೀಯರು ತಲೆಕೆಡಿಸಿಕೊಳ್ಳಬಾರದು. ಆಳವಿಲ್ಲದ ನೀರಿನಲ್ಲಿ ಇಳಿಯುವಂತಹ ಪ್ರಮಾದವನ್ನು ಭಾರತವು ಖಂಡಿತವಾಗಿಯೂ ಮಾಡುವುದಿಲ್ಲ. ಪಾಕಿಸ್ತಾನ ಮತ್ತೆ ಮತ್ತೆ ಜಗತ್ತಿನೆದುರು ಬೆತ್ತಲಾಗುತ್ತಿದೆ.

Submarine

ಜಲಾಂತರ್ಗಾಮಿ ಮತ್ತು ಲೇಖಕ ಗಿರೀಶ್ ಲಿಂಗಣ್ಣ (ಒಳಚಿತ್ರ)

ಇದನ್ನೂ ಓದಿ: ಜಲಗಡಿ ಪ್ರವೇಶಿಸಿದ ಭಾರತದ ಜಲಾಂತರ್ಗಾಮಿ ನೌಕೆಯನ್ನು ತಡೆದಿದ್ದೇವೆ ಎಂದ ಪಾಕ್ ನೌಕಾ ಪಡೆ
ಇದನ್ನೂ ಓದಿ: Hypersonic Missile: ರಷ್ಯಾದಲ್ಲಿ ಮಹತ್ವದ ಬೆಳವಣಿಗೆ: ಜಲಾಂತರ್ಗಾಮಿಯಿಂದ ಶಬ್ದಾತೀತ ವೇಗದ ಹೈಪರ್​ಸಾನಿಕ್ ಕ್ಷಿಪಣಿ ಉಡಾವಣೆ

TV9 Kannada


Leave a Reply

Your email address will not be published. Required fields are marked *