New Book : ಅಚ್ಚಿಗೂ ಮೊದಲು ; ಮಹೇಶ ನಾಯಕ್ ‘ಜಪಾನೀ ಪ್ಲೇಟ್’ ಕೊಡಲು ಸಿದ್ಧರಿದ್ದಾರೆ | Acchigoo Modhalu excerpt of Japani plate short story by Mahesh R Nayak


New Book : ಅಚ್ಚಿಗೂ ಮೊದಲು ; ಮಹೇಶ ನಾಯಕ್ ‘ಜಪಾನೀ ಪ್ಲೇಟ್’ ಕೊಡಲು ಸಿದ್ಧರಿದ್ದಾರೆ

ಲೇಖಕ ಮಹೇಶ ನಾಯಕ ಕಲ್ಲಚ್ಚು

New Book : ಕಾರಣ ಹುಡುಕುತ್ತ ಹೊರಟರೆ ನೂರೆಂಟಿರಬಹುದು, ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ ನಮ್ಮೊಳಗನ್ನು ನಾವು ಹುಡುಕಿಕೊಳ್ಳುತ್ತ ಜೀವಿಸಲು. ಈ ಜೀವಯಾನದಲ್ಲಿ ನಮ್ಮ ಅಭಿವ್ಯಕ್ತಿಗೆ ಸಾಕಷ್ಟು ಮಾರ್ಗಗಳಿದ್ದರೂ ಬರೆವಣಿಗೆಯನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತೇವೆ? ಉತ್ತರಗಳು ಸಾಕಷ್ಟಿದ್ದರೂ ಅಂತಿಮ ಸತ್ಯ ಜೀವದಿಂದ ಜೀವಕ್ಕೆ ತಲುಪಲು. ಈ ತಲುಪುವಿಕೆಗೆ ತಂತ್ರಜ್ಞಾನ ಎನ್ನುವ ಹಕ್ಕಿ ಇಂದು ಅನೇಕ ಸ್ವರೂಪಗಳಲ್ಲಿ ರೆಕ್ಕೆಬಲವನ್ನೂ ವೇಗವನ್ನೂ ತಂದುಕೊಟ್ಟಿರಬಹುದು. ಆದರೆ, ನಿಜವಾದ ಸೃಜನಶೀಲ ಕೃತಿಯೊಂದರ ಆಯುಷ್ಯ ಓದುಗರ ಮನಸ್ಸಿನಾಳದೊಳಗೆ ಕಾಲದ ಹಂಗು ತೊರೆದು ವೃದ್ಧಿಸುತ್ತಲೇ ಇರುತ್ತದೆ.

ಟಿವಿ9 ಕನ್ನಡ ಡಿಜಿಟಲ್​ – ಅಚ್ಚಿಗೂ ಮೊದಲು ಈ ಅಂಕಣದಲ್ಲಿ ಮುದ್ರಣ ಹಂತದಲ್ಲಿರುವ ಅಥವಾ ಓದುಗರ ಕೈಸೇರಲು ಸಿದ್ಧವಾಗಿರುವ ಪುಸ್ತಕಗಳ ಆಯ್ದ ಭಾಗವನ್ನು ಪ್ರಕಟಿಸಲಾಗುವುದು. ನಿಮ್ಮ ಹೊಸ ಪುಸ್ತಕದ ಒಂದೆಸಳು ಜಗತ್ತಿನಾದ್ಯಂತ ಪಸರಿಸಿರುವ ಕನ್ನಡಪ್ರಿಯರಿಗೆಲ್ಲ ತಲುಪಲಿ ಎನ್ನುವುದು ನಮ್ಮ ಆಕಾಂಕ್ಷೆ. ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ನಿಮ್ಮ ಮೊಬೈಲ್​ ನಂಬರ್ ​ಅನ್ನು ನಮಗೆ ಕಳುಹಿಸಿದಲ್ಲಿ ನಾವೇ ನಿಮ್ಮನ್ನು ಖುದ್ದಾಗಿ ಸಂಪರ್ಕಿಸುತ್ತೇವೆ. ಇ- ಮೇಲ್ [email protected]

ಕೃತಿ : ಜಪಾನೀ ಪ್ಲೇಟ್ (ಕಥೆಗಳು)
ಲೇಖಕರು : ಮಹೇಶ ಆರ್. ನಾಯಕ್
ಪುಟ : 100
ಬೆಲೆ : ರೂ. 200
ಪ್ರಕಾಶಕ : ಕಲ್ಲಚ್ಚು ಪ್ರಕಾಶನ, ಮಂಗಳೂರು

ಕಳೆದ 21 ವರ್ಷಗಳಿಂದ ಮಂಗಳೂರಿನಲ್ಲಿ ಕಲ್ಲಚ್ಚು ಪ್ರಕಾಶನದ ಮೂಲಕ ಸಾಹಿತ್ಯ ಸಂಸ್ಕೃತಿ ಕಲೆ ಸಂಘಟನೆಯಲ್ಲಿ ನಿರತರಾಗಿರುವ ಮಹೇಶ ಆರ್. ನಾಯಕ್ ಈತನಕ 18 ಪುಸ್ತಕಗಳನ್ನು ಹೊರತಂದಿದ್ದಾರೆ.  ಕಳೆದವಾರ ಮಂಗಳೂರಿನಲ್ಲಿ ಹಿರಿಯ ಕಥೆಗಾರ, ಕವಿ ಜಯಂತ ಕಾಯ್ಕಿಣಿ ವರು ಪ್ರಸ್ತುತ ಕಥಾಸಂಕಲನವನ್ನು ಬಿಡುಗಡೆ ಮಾಡಿದ್ದು, ಇದೇ 27ರಿಂದ ಓದುಗರಿಗೆ ಲಭ್ಯವಾಗಲಿದೆ.

ಜಪಾನೀ ಪ್ಲೇಟ್ ಕಥೆಯ ಆಯ್ದ ಭಾಗ

ಆಗಷ್ಟೇ ಬೆಳಗಿನ ತಿಂಡಿ ಮುಗಿಸಿ ಪೇಪರ್ ಕಡೆಗೊಮ್ಮೆ ಕಣ್ಣು ಹಾಯಿಸುತ್ತಿದ್ದೇನಷ್ಟೆ, ಮೊಬೈಲ್ ರಿಂಗಣಿಸಿತು ಎದುರಿನಿಂದ ‘ಮೇರಾ ಜೂತಾ ಹೇ ಜಪಾನೀ… ‘ ಹಾಡಿನೊಂದಿಗೆ “ಗುಜ್ಜು ಸಾಹೇಬ ಕಾಲಿಂಗ್” ಅಂತ ಕಣ್ಣಿಗೆ ರಾಚುವಂತೆ ಕಂಡು. ರಿಟೈರ್ಡ್ ಆಗಿ ಈಗೊಂದು ವರ್ಷದಿಂದ ಈ ಗುಜರಿ ಸಾಹೇಬ… ಅದೇ ಮನೆ ಪಕ್ಕದ ಓಣಿಯ ಹಳೇ ಪೇಪರ್ ಅಂಗಡಿಯಾತ ನನಗೀಗ ಒಳ್ಳೆಯ ಫ್ರೆಂಡ್.ಇತ್ತೀಚೆಗಂತೂ ವಾರಕ್ಕೆ ಒಂದೆರಡು ಸಲ ಅದ್ರೂ ಅವನ ಫೋನ್ ಗ್ಯಾರೆಂಟಿ . ನಾನು ಅಷ್ಟೇ… ಅವನ ಫೋನ್ ಬರುವುದೇ ತಡ ಎಲ್ಲಿಲ್ಲದ ಉತ್ಸಾಹದಿಂದ ಕೂಡಲೇ ಎದ್ದು ಹೊರಡುತ್ತೇನೆ ಅವನ ಗುಜರಿ ಅಂಗಡಿ ಕಡೆಗೆ ಹೆಚ್ಚು ಕಡಿಮೆ ಹಾಕಿದ ಬಟ್ಟೆಯಲ್ಲೇ ಚಪ್ಪಲಿ ಮೆಟ್ಟಿಕೊಂಡು!

ಇದೆಲ್ಲ ಶುರುವಾಗಿದ್ದು ಅವತ್ತೊಂದು ದಿನ ಮನೆಯ ಹಳೆ ನ್ಯೂಸ್ ಪೇಪರ್ ಮಾರಿಕೊಂಡು ಬರೋಣ ಅಂತ ಹೇಳಿ ನಾನೇ ಹೊರಟ ದಿನದಿಂದ. ‘ಏನು ಕಾಮತ್ ರೇ… ಕೆಲಸದಿಂದ ರಿಟೈರ್ಡ್ ಆದರಂತೆ… ನೆಕ್ಸ್ಟ್ ಏನು ಪ್ಲಾನ್… ಎಲ್ಲಿಯಾದರೂ ಪುನಃ ಕೆಲಸಕ್ಕೆ ಸೇರೋ ಯೋಚನೆಯೆನಾದರೂ ಇದ್ದಿಯಾ…’ ಅಂತ ಕೇಳಿಯೇ ಮಾತು ಶುರೂ ಮಾಡಿದ್ದನವ. ‘ಅಂತದ್ದೇನಿಲ್ಲ ಸಾಹೇಬ್ರೆ ಮನೆಯಲ್ಲೇ ಪುಸ್ತಕ ಓದಿಕೊಂಡು ಟೈಂಪಾಸ್ ಮಾಡೋದು. ಕೆಲಸ ಮಾಡಿದ್ದು ಸಾಕು’ ತಣ್ಣಗೆ ಉತ್ತರ ಕೊಟ್ಟಿದ್ದೆ ನಾನು. ಹಿಂದಿಯಲ್ಲಿ ಆಗಲೇ ಅಂದಿದ್ದು ಅವ ‘ನಮ್ಮ ಅಂಗಡಿಯಲ್ಲಿ ಒಳ್ಳೊಳ್ಳೆಯ ಹಳೆಯ ಬುಕ್ಸ್ ಬರುತ್ತೆ ಬೇಕಾದರೆ ತೆಗೆದುಕೊಂಡುಹೋಗಿ ಕಡಿಮೆ ದುಡ್ಡಿಗೆ ಕೊಡ್ತೇನೆ’ ಅಂತ. ಹೌದಲ್ಲ ಒಳ್ಳೆಯ ಛಾನ್ಸ್’ ಎಲ್ಲಿ ಕೊಡಪ್ಪ ನೋಡೋಣ… ನಾನು ಅಂದಿದ್ದೆ ತಡ, ದಡಬಡ ಆ ನೂರು ಸ್ಕ್ವೇರ್ ಫೀಟ್ ಅಂಗಡಿಯ ಅಟ್ಟದ ಮೇಲತ್ತಿ ಹಳೇ ಟ್ರಂಕ್ ಒಂದನ್ನು ಹೊರಗೆ ಎಳೆದೆ ಬಿಟ್ಟನವ ತನ್ನ ಬಿಳಿ ಗಡ್ಡ ನೇವರಿಸುತ್ತ.

ಅದೆಲ್ಲ ನೋಡಿದರೆ ಶಿವರಾಮ ಕಾರಂತರ ಪುಸ್ತಕಗಳು. ಯಾರೋ ಆಸಾಮಿ ಎಲ್ಲ ಒಟ್ಟಿಗೆ ಕಟ್ಟಿ ಗುಜರಿಗೆ ಹಾಕಿದ್ದೇನೆ. ಅಲ್ಲಿಲ್ಲಿ ಸ್ವಲ್ಪ ಗೆದ್ದಲು ಹಿಡಿದಿದೆ. ಅಷ್ಟಕ್ಕೂ ಅವೆಲ್ಲ ಹೇಗೋ ನನ್ನತ್ರ ಈಗಲೇ ಇದೆ, ಬೇಡ ಅಂದ್ಕೊಂಡು… ‘ಬೇರೆ ಏನಾದರೂ ಇದ್ದರೆ ತೋರಿಸಪ್ಪ’ ಅಂದಿದ್ದೆ ನಾನು. ಅದಕ್ಕವ ಮೆಲ್ಲಗೆ… ‘ನನ್ನತ್ರ ತುಂಬಾ ಆಂಟಿಕ್ ವಸ್ತುಗಳಿಗೆ ಸಾರ್… ಒಳ್ಳೆ ಬೆಲೆ ಬಾಳುವಂತದ್ದು. ಇಂಟರ್ನ್ಯಾಷನಲ್ ಮಾರ್ಕೆಟ್ನಲ್ಲಿ ಭಾರೀ ಡಿಮ್ಯಾಂಡು ಇರುವಂತಾದ್ದು. ದುಡ್ಡು ಸ್ವಲ್ಪ ಜಾಸ್ತಿ ಆಗುತ್ತೆ’ ಅಂತೇಳಿ, ತಾನೇ ಕೂತಿದ್ದ ಮತ್ತೊಂದು ಹಳೆಯ ಟ್ರಂಕ್ ಮುಚ್ಚಳ ತೆಗೆದೇ ಬಿಟ್ಟ. ಅದರೊಳಗಿಂದ ಒಂದು ಫೀಟ್ ಉದ್ದದ ನಟರಾಜನ ಮೂರ್ತಿಯೊಂದನ್ನು ಹೊರಗೆ ತೆಗೆಯುತ್ತ. ‘ಎಷ್ಟಪ್ಪ ಇದು’ ಅಂತ ಕೇಳಿದ್ದೆ ತಡ, ‘ಇದೆಲ್ಲ ಲಕ್ಷಗಟ್ಟಲೆ ಬೆಲೆ ಬಾಳುವಂತದ್ದು ಸಾರ್.. ಭಾರೀ ಓಲ್ಡ್… ನೀವು ಒಂದು… ಎರಡು ಸಾವಿರ ಕೊಡಿ ಸಾಕು’ ಅಂತ ಸುರುಮಾಡಿ ಕೊನೆಗೆ ನನ್ನ ಚೌಕಾಸಿಗೆ ಸೋತು ಐನೂರು ರೂಪಾಯಿಗೆ ಕೊಟ್ಟೆಬಿಟ್ಟಿದನವ ಅದನ್ನು ನನಗೆ. ‘ಇಂತದ್ದೆಲ್ಲ ಐಟಂ ಅವಾಗವಾಗ ಬರುತ್ತೆ ಸಾರ್… ಫಾರಿನ್​ದು ಇರುತ್ತದೆ ಒಂದೊಂದು ಸಲ, ಫೋನ್ ಮಾಡ್ತೀನಿ ನಿಮಗೆ ‘ ಎಂದು ನಂಬರ್ ತಗೊಳ್ತಾ. ಅವತ್ತೆ ನಂಗೆ ಶುರು ಆದದ್ದು ಇ ಆಂಟಿಕ್ ಕಲೆಕ್ಷನ್ ನ ಹುಚ್ಚು. ಆಮೇಲದಕ್ಕೊಂದಿಷ್ಟು ಐಟಂಗಳನ್ನು ಸೇರಿಸ್ತ… ಅವನತ್ರ ನೇ ಚೌಕಾಸಿ ಮಾಡಿ ತಗೊಂಡು ತಗೊಂಡು ಪ್ರತಿ ಸಲ ಗುಜ್ಜು ಸಾಹೇಬ್ ನ ಫೋನ್ ಬಂದಾಗಲೆಲ್ಲ.

*

ನಾನು ಕುರ್ಚಿಯಿಂದ ಎದ್ದು ಪಂಚೆಯ ಮೇಲೆ ದಡಬಡನೆ ಅಂಗಿ ಹಾಕಿದ್ದೆ ತಡ, “ಏನೂ… ಗುಜರಿ ಅಂಗಡಿಯವನು ಫೋನ್ ಮಾಡಿದ್ನಾ… ಅವನಿಗೊಬ್ಬ ಬಕ್ರ ಸಿಕ್ಕಿದ್ದಾನೆ ಬೇಡದ ವಸ್ತು ಕೊಡಲಿಕ್ಕೆ.. ಯಾರ್ ಯಾರದೋ ಮನೆಯ ಗಲೀಜು ಎಲ್ಲ ತಂದು ಮನೆಯೊಳಗೆ ಇಡ್ತಿರಾ… ಅದೂ ಹಣ ಕೊಟ್ಟು.. ದರಿದ್ರ ಅದೂ.. ಭೂತ ದೈವದ ಕಾಟನೂ ಬರುತ್ತೆ… ಈಗ ನಾನು ಹೇಳವಾಗ ಗೊತ್ತಾಗಲ್ಲ ನಿಮಗೆ… ಗ್ರಹಚಾರ ನೆಟ್ಟಗೆ ಇರುವಾಗ ಸರಿ… ಮುಂದೆ ಶನಿ ವಕ್ಕರಿಸುವಾಗ ಬಡ್ಕೊಳಿ ಮತ್ತೆ…ನಿಮಗೆ ರಿಟೈರ್ಡ್ ಆಗಿದ್ದೇ ಕಷ್ಟ ಆಗೋಯ್ತು.. ” ಅಂತೆಲ್ಲ ಶುರು ಮಾಡಿದ್ದಳು ಒಳಗಿನಿಂದ ಮೀನಾಕ್ಷಿ ಜೋರಾಗಿಯೇ. ನಾನು ಸುಮ್ಮನಿದ್ದು ಹೊಸ್ತಿಲು ದಾಟಿದೆ ಅವಸರವಸರವಾಗಿಯೇ.

*

‘ ಬನ್ನಿ ಕಾಮತರೇ… ಇವತ್ತು ನಿಮ್ಮ ಅದೃಷ್ಟ ಒಂದು ಒಳ್ಳೆಯ ಐಟಂ ಬಂದಿದೆ… ಅದು ಇಲ್ಲಿದ್ದಲ್ಲ… ಜಪಾನಿದ್ದು… ನೀವು ಮಾತ್ರ ಮಾಮೂಲಿ ಹಾಗೇ ನೂರು ಇನ್ನೂರು ರೂಪಾಯಿ ಕೊಟ್ಟರೆ ಸಿಗಲ್ಲ, ಏನಿದ್ದರೂ ಐದು ಸಾವಿರ ಆಗುತ್ತೆ…’ ಅಂತೇಳಿಯೇ ತನ್ನ ಎಂದಿನ ವರಸೆ ಶುರುಮಾಡಿಬಿಟ್ಟಿದ್ದ ಗುಜರಿ ಸಾಹೇಬ. ನನಗಂತೂ ಈಗ ಅವನತ್ರ ವ್ಯಾಪಾರ ಮಾಡಿ ಮಾಡಿ ಸ್ವಲ್ಪ ಅನುಭವ ಬಂದು…’ ಇನ್ ಷ ಅಲ್ಲಾ.. ಬಿಡಪ್ಪ ಕೊಡೋಣ ‘ ಅಂತ ಹೇಳಿ ಆ ಪ್ಲೇಟನ್ನು ಕೈಯಲಿಡಿದು ಮೂರು ಮೂರು ಬಾರಿ ತಿರುಗಿಸಿ ತಿರುಗಿಸಿ ನೋಡಿದೆ, ನಿಜಕ್ಕೂ ಅಪರೂಪದ್ದೇ… ಚಂದದ ಡಿಸೆನ್ ಇತ್ತು.. ನಿಕ್ಕೆಲ್​ನದ್ದಿರಬೇಕಾಂತನಿಸಿತು. Made in JAPAN ಅಂತ ನೀಟಾಗಿ ಪ್ರಿಂಟ್ ಆಗಿತ್ತು… ಪ್ಲೇಟ್ ಮಧ್ಯದಲ್ಲಿ ಮಾರ್ಕರ್ ಪೆನ್​ನಿಂದ ಜಪಾನಿ ಭಾಷೆಯಲ್ಲಿ ಬರೆದ ನಾಲ್ಕೈದು ಮಾಸಿದ ಶಬ್ದಗಳೊಂದಿಗೆ. ಈ ಬಾರಿ ಮಾತ್ರ ಬೇರೆ ಉಪಾಯವಿಲ್ಲದೆ 1000 ಕೊಟ್ಟು ಅದನ್ನು ಕೂಡಲೇ ತೆಗೆದುಕೊಂಡು ಬಂದೆ ಮನೆಗೆ, “ಇದೇನ್ರೀ ಒಳ್ಳೆ ನಾಯಿಗೆ ಅನ್ನ ಹಾಕುವ ಪ್ಲೇಟ್ ತೆಗೆದುಕೊಂಡು ಬಂದಿದ್ದೀರಾ ಮನೆಗೆ… ಸುಮ್ಮನೆ ದುಡ್ಡು ಹಾಳು.. ಹಾ ನೆನಪಿಡಿ ಈಗ ನಿಮಗೆ ಬರೋದು ಸಂಬಳ ಅಲ್ಲ ಜುಜುಬಿ ಚಿಲ್ಲರೆ ಪೆನ್ಷನ್… ಆಮೇಲೆ ನನ್ನತ್ರ ಸಾಲ ಕೇಳಬೇಡಿ” ಅಂತ ಹೊಸ ಡಯಲಾಗ್ ಆರಂಭಿಸುತ್ತಾಳೆ ಮೀನಾಕ್ಷಿ. ಸುಮ್ಮನಿದ್ದು ಸ್ನಾನಕ್ಕೆ ಹೋದೆ ನಾನು.

(ಈ ಸಂಕಲನದ ಖರೀದಿಗೆ ಸಂಪರ್ಕಿಸಿ : 9880692447)

ಇದನ್ನೂ ಓದಿ : Poetry Collection ; ಅಚ್ಚಿಗೂ ಮೊದಲು : ‘ನನ್ನದೇ ಆಕಾಶ ನನ್ನದೇ ರೆಕ್ಕೆ’ ಉದಯಕುಮಾರ ಹಬ್ಬು ಕವಿತೆಗಳು ನಿಮ್ಮೆಡೆ

TV9 Kannada


Leave a Reply

Your email address will not be published. Required fields are marked *