New Book : ಅಚ್ಚಿಗೂ ಮೊದಲು ; ರಾಜಶೇಖರ ಕುಕ್ಕುಂದಾ ಮಕ್ಕಳಿಗಾಗಿ ‘ಸೋನ ಪಾಪಡಿ’ ಕಳಿಸುತ್ತಿದ್ದಾರೆ | Acchigoo Modhalu Soan Papadi Children poems by poet rajashekhar kukkunda


New Book : ಅಚ್ಚಿಗೂ ಮೊದಲು ; ರಾಜಶೇಖರ ಕುಕ್ಕುಂದಾ ಮಕ್ಕಳಿಗಾಗಿ ‘ಸೋನ ಪಾಪಡಿ’ ಕಳಿಸುತ್ತಿದ್ದಾರೆ

ಕವಿ ರಾಜಶೇಖರ ಕುಕ್ಕುಂದಾ

New Book : ಕಾರಣ ಹುಡುಕುತ್ತ ಹೊರಟರೆ ನೂರೆಂಟಿರಬಹುದು, ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ ನಮ್ಮೊಳಗನ್ನು ನಾವು ಹುಡುಕಿಕೊಳ್ಳುತ್ತ ಜೀವಿಸಲು. ಈ ಜೀವಯಾನದಲ್ಲಿ ನಮ್ಮ ಅಭಿವ್ಯಕ್ತಿಗೆ ಸಾಕಷ್ಟು ಮಾರ್ಗಗಳಿದ್ದರೂ ಬರೆವಣಿಗೆಯನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತೇವೆ? ಉತ್ತರಗಳು ಸಾಕಷ್ಟಿದ್ದರೂ ಅಂತಿಮ ಸತ್ಯ ಜೀವದಿಂದ ಜೀವಕ್ಕೆ ತಲುಪಲು. ಈ ತಲುಪುವಿಕೆಗೆ ತಂತ್ರಜ್ಞಾನ ಎನ್ನುವ ಹಕ್ಕಿ ಇಂದು ಅನೇಕ ಸ್ವರೂಪಗಳಲ್ಲಿ ರೆಕ್ಕೆಬಲವನ್ನೂ ವೇಗವನ್ನೂ ತಂದುಕೊಟ್ಟಿರಬಹುದು. ಆದರೆ, ನಿಜವಾದ ಸೃಜನಶೀಲ ಕೃತಿಯೊಂದರ ಆಯುಷ್ಯ ಓದುಗರ ಮನಸ್ಸಿನಾಳದೊಳಗೆ ಕಾಲದ ಹಂಗು ತೊರೆದು ವೃದ್ಧಿಸುತ್ತಲೇ ಇರುತ್ತದೆ.

ಟಿವಿ9 ಕನ್ನಡ ಡಿಜಿಟಲ್​ – ಅಚ್ಚಿಗೂ ಮೊದಲು ಈ ಅಂಕಣದಲ್ಲಿ ಮುದ್ರಣ ಹಂತದಲ್ಲಿರುವ ಅಥವಾ ಓದುಗರ ಕೈಸೇರಲು ಸಿದ್ಧವಾಗಿರುವ ಪುಸ್ತಕಗಳ ಆಯ್ದ ಭಾಗವನ್ನು ಪ್ರಕಟಿಸಲಾಗುವುದು. ನಿಮ್ಮ ಹೊಸ ಪುಸ್ತಕದ ಒಂದೆಸಳು ಜಗತ್ತಿನಾದ್ಯಂತ ಪಸರಿಸಿರುವ ಕನ್ನಡಪ್ರಿಯರಿಗೆಲ್ಲ ತಲುಪಲಿ ಎನ್ನುವುದು ನಮ್ಮ ಆಕಾಂಕ್ಷೆ. ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ನಿಮ್ಮ ಮೊಬೈಲ್​ ನಂಬರ್ ​ಅನ್ನು ನಮಗೆ ಕಳುಹಿಸಿದಲ್ಲಿ ನಾವೇ ನಿಮ್ಮನ್ನು ಖುದ್ದಾಗಿ ಸಂಪರ್ಕಿಸುತ್ತೇವೆ. ಇ- ಮೇಲ್ [email protected]

*

ಕೃತಿ : ಸೋನ ಪಾಪಡಿ (ಮಕ್ಕಳ ಪದ್ಯಗಳು)
ಲೇಖಕರು : ರಾಜಶೇಖರ ಕುಕ್ಕುಂದಾ
ಪುಟ : 52
ಬೆಲೆ : ರೂ. 75
ಮುಖಪುಟ ವಿನ್ಯಾಸ : ವಿನಯ ಸಾಯ
ಪ್ರಕಾಶನ : ಕನ್ನಡ ನಾಡು ಪ್ರಕಾಶನ, ಕಲಬುರಗಿ

ಕವಿ ರಾಜಶೇಖರ ಕುಕ್ಕುಂದಾ ಈ ಸಂದರ್ಭದಲ್ಲಿ ತಮ್ಮ ಬಾಲ್ಯವನ್ನೊಮ್ಮೆ ನೆನಪಿಸಿಕೊಂಡಿದ್ದಾರೆ.

*

ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ‘ಕಾಗಿಣೆ’ ನದಿ ತೀರದ ಗ್ರಾಮ ‘ಕುಕ್ಕುಂದಾ’ ನಾನು ಹುಟ್ಟಿದ ಊರು. ಶಾಲೆ ಇರುವಾಗ ಶಹರದಲ್ಲಿ, ಬೇಸಿಗೆ-ದಸರೆ ರಜೆ ಸಿಕ್ಕಾಗಲೆಲ್ಲಾ ಹಳ್ಳಿಯಲ್ಲಿ ಬಾಲ್ಯದ ದಿನಗಳನ್ನು ಕಳೆದವನು ನಾನು. ಹಳ್ಳಿಯಲ್ಲಿರುವಾಗ ಗೆಳೆಯರೊಡಗೂಡಿ ಹೊಲ-ಗದ್ದೆ ಸುತ್ತುವುದು, ನದಿ-ಬಾವಿಯಲ್ಲಿ ಮನಸೋ ಇಚ್ಛೆ ಈಜುವುದು, ಚಿಣ್ಣಿ-ದಾಂಡು, ಗೋಲಿ-ಗಜ್ಜುಗ,ಬುಗುರಿ, ಚೌಕಾಬಾರ, ಹುಲಿಕಟ್ಟು ಆಡುವುದು, ಹಸಿವೆಯ ಖಬರಿಲ್ಲದೇ ಆಟದಲ್ಲಿ ತೊಡಗುವುದು-ನನ್ನ ದಿನಚರಿಯಾಗಿತ್ತು. ಅವ್ವ ಕರೆದಾಗಲೇ ಊಟದ ನೆನಪಾಗುತ್ತಿತ್ತು; ಕಟ್ಟಿಗೆ ಹಚ್ಚಿ ಒಲೆ ಮೇಲೆ ಬೇಯಿಸಿದ ರೊಟ್ಟಿ, ನೆಲುವಿನ ಮೇಲಿಟ್ಟ ಕಣ್ಣಿಕಣ್ಣಿ ಮೊಸರು, ಒಳ್ಳಿನಲ್ಲಿ ಕುಟ್ಟಿದ ಶೇಂಗಾ ಚಟ್ನಿ, ಘಮ ಘಮವೆನ್ನುವ ಅನ್ನ-ತುಪ್ಪ ನನಗಾಗಿ ಕಾದಿರುತ್ತಿತ್ತು. ಅಪ್ಪ ಏನಾದರೂ ಕರೆದರೋ, ಎದೆಯಲ್ಲಿ ಡವ ಡವ; ಓದಿನ ನೆನಪಾಗುತ್ತಿತ್ತು; ಗಾಳಿಯಾಡಿದ ಮೈಗೆ ಬಾಸುಂಡೆ ತಿನಿಸಲು ಬೆತ್ತ ಕಾದಿರುತ್ತಿತ್ತು!

‌ಹಳ್ಳಿಯಲ್ಲಿ ಜರಗುತ್ತಿದ್ದ ಬಯಲಾಟ -ನಾಟಕಗಳು ನನ್ನನ್ನು ಬಹಳ ಸೆಳೆಯುತ್ತಿದ್ದವು. ಹಗಲಿರುಳೆನ್ನದೇ ಪಾತ್ರಧಾರಿಗಳು ನಡೆಸುವ ತಾಲೀಮು, ನಿದ್ದೆಗೆಟ್ಟು ಆಟ ಕಲಿಸುವ ಮಾಸ್ತರರಿಂದ ಅವರು ತಿನ್ನುತ್ತಿದ್ದ ಪೆಟ್ಟು ನನಗೊಂದು ಮೋಜಾಗಿ ಕಾಣುತ್ತಿತ್ತು. ಮನೆಯವರೆಲ್ಲ ಬಯಲಿನಲ್ಲಿ ಹೊರಸಿನ ಮೇಲೆ ಕೌದಿ ಹೊಚ್ಚಿಕೊಂಡು ಕೂತು ರಾತ್ರಿಯಿಡೀ ನಡೆಯುವ ಬಯಲಾಟ-ನಾಟಕ ನೋಡುತ್ತಿದ್ದೆವು. ಮಧ್ಯೆ ಮಧ್ಯೆ ಖಾರದ ಮಂಡಕ್ಕಿ, ಚಹಾ ಸವಿಯಲು ಸಿಗುತ್ತಿತ್ತು. “ಹೀಗೆಯೇ ಆಟ ಮುಂದುವರೆಯಲಿ; ಬೆಳಗಾಗದೇ ಇರಲಿ.”ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದೆವು.

ಆಗ ಶ್ರಾವಣ ಮಾಸ ಬಂತೆಂದರೆ ಹಳ್ಳಿಯಲ್ಲಿ ಸಂಭ್ರಮವೋ ಸಂಭ್ರಮ. ಭಜನಾ ಸಪ್ತಾಹಗಳು ನಡೆಯುತ್ತಿದ್ದವು; ಹಗಲಿರುಳೆನ್ನದೇ ಏಳೂ ದಿನ ಭಜನೆ. ಅಲ್ಲೂ ಮೂರು ಶಿಫ್ಟ್ (ಪಾಳೆ) ಗಳು ಇರುತ್ತಿದ್ದವು. ಸೇರಿದವರು ಯಾರೂ ಎಂಟು ಗಂಟೆ ಹೊರಬರುವಂತಿರಲಿಲ್ಲ. ಅಂದರೆ, ಒಂದಿಲ್ಲ-ಎರಡಿಲ್ಲ! ನನಗೂ ಅಲ್ಲಿ ಸೇರಿ ಕುಣಿಯುವ ಹುಮ್ಮಸ್ಸು; ಬಿಟ್ಟೂ ಬಿಡದೆ ಎಂಟು ಗಂಟೆ ತಾಳಕ್ಕೆ ಮೈ ಕುಣಿಸಿ ನಾನೂ ಹೆಜ್ಜೆ ಹಾಕಿದ್ದಿದೆ. ಹಳ್ಳಿಯ ಹರಟೆ ಕಟ್ಟೆಯಲ್ಲಿ ನಡೆಯುವ ಮಾತುಗಳು, ಸಣ್ಣ ಸಣ್ಣ ವಿಷಯಗಳಿಗೆ ನಡೆಯುವ ಜಗಳಗಳು, ಅಲ್ಲಿಯ ಜನರ ಆಚಾರ, ವಿಚಾರ- ಈ ಎಲ್ಲ ಸಂಗತಿಗಳು ನನ್ನ ಮನದಲ್ಲಿ ಗೂಡು ಕಟ್ಟಿವೆ; ನನ್ನನ್ನೂ ಸದಾ ಕಾಡಿವೆ.

ಅಪ್ಪ ಶಾಲಾ ಶಿಕ್ಷಕರು. ನಾನು ಓದು ಪೂರೈಸಿದ್ದು ಶಹರದಲ್ಲೇ. ಶಹರವೂ ಒಂದು ತರಹದ ಸೆಳೆತವೇ! ನಾನು ಶಹರ ಮತ್ತು ಹಳ್ಳಿ ಎರಡರ ಸವಿಯನ್ನು ಕಂಡುಂಡು ಬೆಳೆದವನು.

ನಾನಾಗ ಸೇಡಂನಲ್ಲಿ ಏಳನೆಯ ತರಗತಿಯಲ್ಲಿ ಓದುತ್ತಿದ್ದೆ. ನನಗೇಕೋ ಪದ್ಯಗಳಲ್ಲಿ ಬಹಳ ಆಸಕ್ತಿ ಮೂಡತೊಡಗಿತು; ಪಠ್ಯದ ಪದ್ಯಗಳು ಸದಾ ನಾಲಿಗೆಯ ಮೇಲೆ ಇರುತ್ತಿದ್ದವು. ಜಿ. ಪಿ. ರಾಜರತ್ನಂ, ಪಂಜೆ ಮಂಗೇಶರಾಯ, ದಿನಕರ ದೇಸಾಯಿ- ಅವರ ಮಕ್ಕಳ ಕವಿತೆಗಳು ನನಗೆ ಗುಂಗು ಹಿಡಿಸಿದವು. ಕವಿತೆಗಳನ್ನು ಬರೆಯಲು ಶುರು ಮಾಡಿದೆ. ಅದೇ ಸಂದರ್ಭದಲ್ಲಿ ಸಹೃದಯ ಕವಿಯಾಗಿ ಆ ಭಾಗದಲ್ಲಿ ಹೆಸರಾಗಿದ್ದ “ಕೆರಳ್ಳಿ ಗುರುನಾಥರೆಡ್ಡಿ”ಯವರು ನಮ್ಮ ಶಾಲೆಗೆ ಬಂದಿದ್ದರು. ಅವರನ್ನು ಕಂಡೆ; ಬರೆದದ್ದನ್ನು ತೋರಿಸಿದೆ. ನನ್ನಲ್ಲಿರುವ ಆಸಕ್ತಿಯನ್ನು ಗುರುತಿಸಿದರು; ಬೆನ್ನು ಚಪ್ಪರಿಸಿದರು. ತಮ್ಮ “ಕಾಲುಗಳು” ಎಂಬ ಕವನ ಸಂಕಲನ ಕೊಟ್ಟು ನೀನು “ಬರೆಯಬಲ್ಲೆ” ಎಂದು ಭರವಸೆ ಮೂಡಿಸಿದರು. ನಿಜ ಹೇಳಬೇಕೆಂದರೆ ಕೆರಳ್ಳಿಯವರ ಆ ಪುಸ್ತಕ ಮತ್ತು ಅವರು ನನಗಿತ್ತ ಸೂಕ್ತ ಮಾರ್ಗದರ್ಶನ ನನಗೆ ಸಾಹಿತ್ಯ ಕ್ಷೇತ್ರದಲ್ಲಿ ಅಂಬೆಗಾಲಿಡಲು ಪ್ರೇರಣೆಯಾಯಿತು. ಅಪಘಾತಕ್ಕೀಡಾಗಿ ಅಗಲಿ ಹೋದ ಅವರು ಈ ದಿನ ನಮ್ಮ ಮಧ್ಯೆ ಇಲ್ಲವಾದರೂ ಅವರ ನೆನಪು ಮಾತ್ರ ನನ್ನಲ್ಲಿ ಸದಾ ಹಸಿರು.

(ಪುಸ್ತಕಕ್ಕಾಗಿ ಸಂಪರ್ಕಿಸಿ : 9986590894)

ಇದನ್ನೂ ಓದಿ : New Book : ಅಚ್ಚಿಗೂ ಮೊದಲು ; ಹಜಾರೀಪ್ರಸಾದ ದ್ವಿವೇದಿಯವರ ‘ಅನಾಮದಾಸನ ಕಡತ’ವನ್ನು ಇಂದು ನಿಮಗೊಪ್ಪಿಸಲಿದೆ ‘ಬಹುವಚನ’

 

TV9 Kannada


Leave a Reply

Your email address will not be published. Required fields are marked *