New Book : ಅಚ್ಚಿಗೂ ಮೊದಲು ; ‘1232 ಕಿ.ಮೀ, ಏಳು ಮಂದಿ ವಲಸೆ ಕಾರ್ಮಿಕರು ಆ ಏಳು ದಿನಗಳು’ ಸದ್ಯದಲ್ಲೇ ನಿಮ್ಮ ಓದಿಗೆ | Acchigoo Modhalu 1232 km is a story of the extraordinary courage of seven men in the face of tremendous odds by Director Vinod Kapri translated by Journalist Satish GT

New Book : ಅಚ್ಚಿಗೂ ಮೊದಲು ; ‘1232 ಕಿ.ಮೀ, ಏಳು ಮಂದಿ ವಲಸೆ ಕಾರ್ಮಿಕರು ಆ ಏಳು ದಿನಗಳು’ ಸದ್ಯದಲ್ಲೇ ನಿಮ್ಮ ಓದಿಗೆ

ಪತ್ರಕರ್ತರಾದ ವಿನೋದ್ ಕಾಪ್ರಿ ಮತ್ತು ಸತೀಶ್ ಜಿ.ಟಿ

New Book : ಕಾರಣ ಹುಡುಕುತ್ತ ಹೊರಟರೆ ನೂರೆಂಟಿರಬಹುದು, ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ ನಮ್ಮೊಳಗನ್ನು ನಾವು ಹುಡುಕಿಕೊಳ್ಳುತ್ತ ಜೀವಿಸಲು. ಈ ಜೀವಯಾನದಲ್ಲಿ ನಮ್ಮ ಅಭಿವ್ಯಕ್ತಿಗೆ ಸಾಕಷ್ಟು ಮಾರ್ಗಗಳಿದ್ದರೂ ಬರೆವಣಿಗೆಯನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತೇವೆ? ಉತ್ತರಗಳು ಸಾಕಷ್ಟಿದ್ದರೂ ಅಂತಿಮ ಸತ್ಯ ಜೀವದಿಂದ ಜೀವಕ್ಕೆ ತಲುಪಲು. ಈ ತಲುಪುವಿಕೆಗೆ ತಂತ್ರಜ್ಞಾನ ಎನ್ನುವ ಹಕ್ಕಿ ಇಂದು ಅನೇಕ ಸ್ವರೂಪಗಳಲ್ಲಿ ರೆಕ್ಕೆಬಲವನ್ನೂ ವೇಗವನ್ನೂ ತಂದುಕೊಟ್ಟಿರಬಹುದು. ಆದರೆ, ನಿಜವಾದ ಸೃಜನಶೀಲ ಕೃತಿಯೊಂದರ ಆಯುಷ್ಯ ಓದುಗರ ಮನಸ್ಸಿನಾಳದೊಳಗೆ ಕಾಲದ ಹಂಗು ತೊರೆದು ವೃದ್ಧಿಸುತ್ತಲೇ ಇರುತ್ತದೆ.

ಟಿವಿ9 ಕನ್ನಡ ಡಿಜಿಟಲ್​ – ಅಚ್ಚಿಗೂ ಮೊದಲು ಈ ಅಂಕಣದಲ್ಲಿ ಮುದ್ರಣ ಹಂತದಲ್ಲಿರುವ ಅಥವಾ ಓದುಗರ ಕೈಸೇರಲು ಸಿದ್ಧವಾಗಿರುವ ಪುಸ್ತಕಗಳ ಆಯ್ದ ಭಾಗವನ್ನು ಪ್ರಕಟಿಸಲಾಗುವುದು. ನಿಮ್ಮ ಹೊಸ ಪುಸ್ತಕದ ಒಂದೆಸಳು ಜಗತ್ತಿನಾದ್ಯಂತ ಪಸರಿಸಿರುವ ಕನ್ನಡಪ್ರಿಯರಿಗೆಲ್ಲ ತಲುಪಲಿ ಎನ್ನುವುದು ನಮ್ಮ ಆಕಾಂಕ್ಷೆ. ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ನಿಮ್ಮ ಮೊಬೈಲ್​ ನಂಬರ್ ​ಅನ್ನು ನಮಗೆ ಕಳುಹಿಸಿದಲ್ಲಿ ನಾವೇ ನಿಮ್ಮನ್ನು ಖುದ್ದಾಗಿ ಸಂಪರ್ಕಿಸುತ್ತೇವೆ. ಇ- ಮೇಲ್ [email protected]

ಕೃತಿ : 1232 ಕಿ.ಮೀ. : ಮನೆ ಸೇರಲು ಸಾಗಿದ ದೂರ
ಇಂಗ್ಲಿಷ್ ಮೂಲ : ವಿನೋದ್ ಕಾಪ್ರಿ
ಕನ್ನಡಕ್ಕೆ : ಸತೀಶ್ ಜಿ. ಟಿ. 

ಪುಟ : 180
ಬೆಲೆ : ರೂ. 200
ಮುಖಪುಟ ವಿನ್ಯಾಸ : ಶರತ್ ಎಚ್.ಕೆ.
ಪ್ರಕಾಶನ : ಪ್ರಜೋದಯ ಪ್ರಕಾಶನ, ಬೆಂಗಳೂರು

*

ನಾನು ಈ ಕೃತಿಯನ್ನು ‘ಕತೆ’ಯಲ್ಲದ ಕಾದಂಬರಿ (ನಾನ್‌ಫಿಕ್ಷನ್ ನಾವೆಲ್) ಎಂದು ಕರೆಯಲು ಬಯಸುತ್ತೇನೆ. ಈ ಪ್ರಕಾರದ ಇತರೆ ಜನಪ್ರಿಯ ಕೃತಿಗಳಲ್ಲಿ ಕಾಣುವಂತೆ ಇಲ್ಲಿ ಸನ್ನಿವೇಶಗಳ ಸೃಷ್ಟಿಯೋ, ಮರುಸೃಷ್ಟಿಯೋ ಆಗಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತಲೇ ಇದನ್ನೂ ನಾನ್‌ಫಿಕ್ಷನ್ ಎಂದೇ ಕರೆಯುತ್ತೇನೆ. ಈ ಕಾಲ್ಪನಿಕ ಅಲ್ಲದ ಕಾದಂಬರಿ ತನ್ನೆಲ್ಲಾ ಅನಿರೀಕ್ಷಿತ ತಿರುವುಗಳೊಂದಿಗೆ, ಸರಾಗವಾಗಿ ಓದಿಸಿಕೊಳ್ಳುತ್ತಾ ನಿಮ್ಮನ್ನು ಸೆಳೆದುಕೊಳ್ಳುತ್ತದೆ. ಅವರು ನಡೆದ ಹೆದ್ದಾರಿ ತುಂಬಾ ಲಾಟಿ ಹಿಡಿದ ಪೊಲೀಸರು ಹಾಗೂ ಅಲ್ಲಲ್ಲಿ ಇವರನ್ನು ತಡೆದು ಹಿಡಿಶಾಪ ಹಾಕುವ ಮತ್ತು ಅವಮಾನಿಸುವ ಆಡಳಿತಶಾಹಿಯ ಹೀರೋಗಳ ದಂಡೇ ಇತ್ತು. ಹಾಗಾಗಿ ಅವರು ಅನಿವಾರ್ಯವಾಗಿ ಕಾಲುದಾರಿಯಲ್ಲಿ ಸಾಗಬೇಕಾಯ್ತು. ಅಲ್ಲಿ ಅವರು ಎದುರಿಸಿದ ದುರ್ಗಮ ಸನ್ನಿವೇಶಗಳೇ ಈ ನಿರೂಪಣೆಯ ಕೇಂದ್ರ.

ಈ ಕತೆಯ ಏಳು ಜನ ನಾಯಕರು ನಿಮ್ಮ ಎದೆಯಲ್ಲಿ ಉಳಿಯುತ್ತಾರೆ. ಅಷ್ಟು ಬಲವಾಗಿದೆ ಅವರ ಪಾತ್ರ ಚಿತ್ರಣ. ಪರಿಸ್ಥಿತಿ ಅವರನ್ನು ತೀವ್ರ ದೈಹಿಕ, ಮಾನಸಿಕ ವೇದನೆಗೆ ನೂಕಿದಾಗಲೂ, ಅವರು ಧೈರ್ಯದಿಂದ, ದಿಟ್ಟತನದಿಂದ, ಸ್ವತಂತ್ರವಾಗಿ ಎದ್ದು ನಿಲ್ಲುತ್ತಾರೆ. ಕಷ್ಟಪಟ್ಟು ದುಡಿದರೂ ಬಡತನದಲ್ಲೇ ಬದುಕಬೇಕಾಗಿದ್ದ ಜನ ಇವರು. ಮೇಲಾಗಿ ಅವರು ಹೋದಡೆಯಲ್ಲೆಲ್ಲಾ ಅಸಮಾನತೆಯನ್ನು ಎದುರಿಸಲೇಬೇಕಿತ್ತು. ಅಷ್ಟಾದರೂ ಅವರು ಸನ್ನಿವೇಶಗಳನ್ನು ನಿಭಾಯಿಸಿದ ಪರಿ ನಿಮ್ಮಲ್ಲಿ ಅವರ ಜಾಣ್ಮೆ, ಬುದ್ಧಿವಂತಿಕೆ ಹಾಗೂ ಹೊಸದನ್ನು ಕಲಿಯುವ ಉತ್ಸಾಹದ ಬಗ್ಗೆ ಗೌರವ ಹೆಚ್ಚಿಸುತ್ತದೆ.
ಎನ್. ರಾಮ್, ಹಿರಿಯ ಪತ್ರಕರ್ತ

ಕೆಲವು ತಿಂಗಳುಗಳ‌ ಹಿಂದೆ ಹಿರಿಯ ಪತ್ರಕರ್ತ ಎನ್.ರಾಮ್‌ ಅವರು 1232 km ಡಾಕ್ಯುಮೆಂಟರಿ ಬಗ್ಗೆ ‌ಟ್ವೀಟ್ ‌ಮಾಡಿದ್ದರು. ಪತ್ರಕರ್ತ, ನಿರ್ದೇಶಕ ವಿನೋದ್ ಕಾಪ್ರಿಯವರ ಆ ಡಾಕ್ಯುಮೆಂಟರಿ ನೋಡಿದೆ. ಕಳೆದ ವರ್ಷ ಕೋವಿಡ್ ಕಾರಣದಿಂದ ಲಾಕ್‌ಡೌನ್ ಜಾರಿಗೆ ಬಂದ ನಂತರ ಬಿಹಾರದ ಏಳು ಕಾರ್ಮಿಕರು ಸೈಕಲ್ ತುಳಿದುಕೊಂಡು ದೆಹಲಿಯಿಂದ ಊರು ತಲುಪಿದ ಕಥೆಯಾಗಿತ್ತು ಅದು. ಇಷ್ಟೇ ಅಲ್ಲ, ಕಾರ್ಮಿಕರ ಜೊತೆ ವಿನೋದ್ ಪ್ರಯಾಣ ಮಾಡುತ್ತಲೇ ತಯಾರಿಸಿದ ಡಾಕ್ಯುಮೆಂಟರಿ ನನ್ನನ್ನೂ ಒಳಗೊಂಡಂತೆ ಅನೇಕರನ್ನು ಪರಿಣಾಮಕಾರಿಯಾಗಿ ತಟ್ಟಿಬಿಟ್ಟಿತು. ಕೆಲ ದಿನಗಳ ನಂತರ ವಿನೋದ್ ಅವರ ಈ ಪ್ರಯಾಣ ಪುಸ್ತಕವಾಗಿಯೂ ಹೊರಬಂದಿತು. ಆಗ ಡಾಕ್ಯುಮೆಂಟರಿಯಲ್ಲಿ ವ್ಯಕ್ತವಾಗದ ಸಾಕಷ್ಟು ಸಂಗತಿಗಳು ಗೋಚರಿಸಿದವು. ಇದನ್ನು ನಮ್ಮ ಕನ್ನಡದ ಓದುಗರಿಗೂ ತಲುಪಿಸಲೇಬೇಕು ಎನ್ನಿಸಿ ಅನುವಾದ ಮಾಡಲು ಮನಸ್ಸು ಮಾಡಿದೆ. ಪೂರ್ವ ತಯಾರಿ ಇಲ್ಲದೆ ಘೋಷಿಸಿದ ಲಾಕ್‌ಡೌನ್ ಸೃಷ್ಟಿಸಿದ ಅನಾಹುತಗಳನ್ನು ಈ ಕೃತಿ ನಿರೂಪಿಸುತ್ತದೆ. ಏಳು ದಿನಗಳಲ್ಲಿ ಆ ಕಾರ್ಮಿಕರು ಅನುಭವಿಸಿದ ಯಾತನೆ, ಹಸಿವು, ಅವಮಾನ, ಪೊಲೀಸರ ಲಾಠಿ ಏಟಿನ ಮಧ್ಯೆಯೇ ಅಲ್ಲಲ್ಲಿ ಸಿಗುವ ಜನರ ಸಹಕಾರ ಎಲ್ಲವೂ ನಿರೂಪಿತಗೊಂಡಿದೆ. ಪತ್ರಕರ್ತ, ನಿರ್ದೇಶಕ ವಿನೋದ್ ಕಾಪ್ರಿಯವರು ಈ ಪುಸ್ತಕ ಮತ್ತು ಡಾಕ್ಯುಮೆಂಟರಿಯಿಂದ ಒದಗುವ ಸಂಭಾವನೆಯನ್ನು ಆ ಏಳು ಜನ ಕಾರ್ಮಿಕರಿಗೆ ಹಂಚುತ್ತಿರುವುದು ಗಮನಾರ್ಹ. ಇದೊಂದು ವಿಭಿನ್ನ ‘ಪ್ರವಾಸ’ ಕಥನ. ನಮ್ಮ ದೇಶದ ದುಡಿವ ವರ್ಗವನ್ನು ಅರ್ಥ ಮಾಡಿಕೊಳ್ಳಲು ಈ ಕಥನದ ಓದು ಅಗತ್ಯ.
ಸತೀಶ್ ಜಿ.ಟಿ. ಪತ್ರಕರ್ತ, ಅನುವಾದಕ

Acchigoo Modhalu Vinod Kapri Satish GT 1232 km

ಪತ್ರಕರ್ತ, ನಿರ್ದೇಶಕ ವಿನೋದ್ ಕಾಪ್ರಿ ಮೂಲ ಕೃತಿಯೊಂದಿಗೆ

(ಆಯ್ದ ಭಾಗ)

ಗುರುತು-ಹೆಸರು ಇಲ್ಲದ ಮುಖಗಳು, ಪ್ರಯಾಣಕ್ಕೆ ಮುನ್ನ ಆದದ್ದೇನು?

ಅಂದು 2020ರ ಏಪ್ರಿಲ್ 12. ಟ್ವಿಟರ್‌ನಲ್ಲಿ ನಾನೊಂದು ಪೋಸ್ಟ್ ನೋಡಿದೆ. ಮೂವತ್ತು ಜನ ಕಾರ್ಮಿಕರು ನಾಲ್ಕು ದಿನಗಳಿಂದ ಸರಿಯಾದ ಊಟ ಸಿಗದೆ ಉತ್ತರಪ್ರದೇಶದ ಗಾಜಿಯಾಬಾದ್‌ನಲ್ಲಿರುವ ಲೋನಿಯಲ್ಲಿ ಕಷ್ಟಪಡುತ್ತಿದ್ದಾರೆ ಎಂದು ತಿಳಿಯಿತು. ಅಂದಿಗೆ ರಾಷ್ಟ್ರವ್ಯಾಪಿ ಲಾಕ್‌ಡೌನ್ ಘೋಷಿಸಿ ಹತ್ತೊಂಬತ್ತು ದಿನಗಳಾಗಿದ್ದವು. ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಪ್ರಧಾನಿ ಲಾಕ್‌ಡೌನ್ ಘೋಷಿಸಿದ್ದರು.

ಲಾಕ್‌ಡೌನ್ ಜಾರಿಗೆ ಬಂದ ನಂತರದ ದಿನಗಳಲ್ಲಿ ದೇಶಾದ್ಯಂತ ಎರಡು ಪ್ರಮುಖ ವಿಷಯಗಳ ಸುತ್ತ ಚರ್ಚೆ ನಡೆಯುತ್ತಿದ್ದವು. ಮೊದಲನೆಯದು, ಸೋಂಕಿತರಿಗೆ ಚಿಕಿತ್ಸೆ ಒದಗಿಸಲು ಆರೋಗ್ಯ ಕಾರ್ಯಕರ್ತರಿಗೆ ಅತ್ಯಗತ್ಯವಾಗಿದ್ದ ವೈಯಕ್ತಿಕ ರಕ್ಷಣಾ ಕಿಟ್‌ಗಳ (ಪಿಪಿಇ) ಕೊರತೆ. ಹಾಗೂ ಇನ್ನೊಂದು ವಿಷಯವೆಂದರೆ, ಲಕ್ಷಾಂತರ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಹೊರಟು ನಿಂತಿದ್ದು. ಆದರೆ ಮುಖ್ಯವಾಹಿನಿಯ ಮಾಧ್ಯಮ ಎರಡೂ ವಿಷಯಗಳನ್ನು ನಿರ್ಲಕ್ಷಿಸಿತ್ತು. ಅವರೆಲ್ಲಾ ತಬ್ಲಿಗಿ ಜಮಾತ್‌ನ ನೆಪ ಇಟ್ಟುಕೊಂಡು ಮುಸಲ್ಮಾನರನ್ನು ಗುರಿಯಾಗಿಸಿ ‘ಕೊರೊನಾ ಜಿಹಾದ್’ನಲ್ಲಿ ಮುಳುಗಿದ್ದರು. ಸರಕಾರವೂ ಈ ಎರಡು ಬಹುಮುಖ್ಯ ವಿಷಯಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ನಿದ್ರೆಗೆ ಜಾರಿತ್ತು. ಇನ್ನೊಂದೆಡೆ ವಿರೋಧ ಪಕ್ಷದವರು ಸತ್ತಂತಿದ್ದರು. ಸಾಮಾಜಿಕ ಮಾಧ್ಯಮದ ತಾಣಗಳಲ್ಲಿ ಮಾತ್ರ ವೈದ್ಯರು, ಆರೋಗ್ಯ ಕಾರ್ಯಕರ್ತರು ಎದುರಿಸುತ್ತಿದ್ದ ಕೊರತೆ ಹಾಗು ಕಾರ್ಮಿಕರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯುತ್ತಿತ್ತು.

ನನಗೆ ಈ ಟ್ವಿಟರ್ ಪೋಸ್ಟ್ ಕಣ್ಣಿಗೆ ಬಿದ್ದಿದ್ದು ಇದೇ ಹೊತ್ತಲ್ಲಿ. ಟ್ವಿಟರ್‌ನ ಆ ಪೋಸ್ಟ್​ನಲ್ಲಿ ಒಂದು ಫೋನ್ ನಂಬರ್ ಇತ್ತು. ಅದು ರಾಮ್‌ಬಾಬು ಪಂಡಿತ್‌ದು. ಆ ನಂಬರ್‌ಗೆ ಕರೆ ಮಾಡಿದಾಗ ರಿತೇಶ್ ಎಂಬ ವ್ಯಕ್ತಿ ಉತ್ತರಿಸಿದ. ತನ್ನ ಪೂರ್ತಿ ಹೆಸರು ರಿತೇಶ್ ಕುಮಾರ್ ಪಂಡಿತ್ ಎಂದು ಪರಿಚಯ ಮಾಡಿಕೊಂಡ. ಅವರ ಜೊತೆ 30 ಜನ ಕಾರ್ಮಿಕರಿದ್ದು, ಎಲ್ಲರೂ ಕಷ್ಟದ ಪರಿಸ್ಥಿತಿಯಲ್ಲಿದ್ದಾರೆ ಎಂದು ತಿಳಿಯಿತು. ಲೋನಿಯ ಲೇಬರ್ ಚೌಕ್‌ನ ಬಳಿ ನೆಲೆಸಿದ್ದ ಅವರ ಬಳಿ ಆಹಾರ ಸಾಮಗ್ರಿಯಾಗಲಿ, ದುಡ್ಡಾಗಲಿ ಉಳಿದಿರಲಿಲ್ಲ. ಅವರೆಲ್ಲಾ ಬಿಹಾರದ ಸಹರ್ಸಾ, ಸಮಷ್ಟಿಪುರ ಹಾಗೂ ದರ್ಭಾಂಗ ಜಿಲ್ಲೆಯವರು. ಅಷ್ಟೂ ಜನ ಇಕ್ಕಟ್ಟಿನ ನಾಲ್ಕು ಕೋಣೆಗಳಲ್ಲಿ ನೆಲೆಸಿದ್ದರು. ಸರಕಾರ ಅಥವಾ ಜಿಲ್ಲಾಡಳಿತ ಏನಾದರೂ ನೆರವು ನೀಡಿದೆಯೇ ಎಂದು ಕೇಳಿದಾಗ, ‘ಯಾವ ಸರಕಾರ?, ಯಾವ ಆಡಳಿತ? ನೀವು ಯಾವ ಸರಕಾರ, ಯಾವ ಆಡಳಿತದ ಬಗ್ಗೆ ಮಾತನಾಡುತ್ತಿದ್ದೀರಿ’ ಎಂದು ನನ್ನನ್ನೇ ಪ್ರಶ್ನಿಸಿದರು.

ಅಷ್ಟು ಮಾತನಾಡುವಾಗ ಅವರೆಲ್ಲಾ ದಣಿದಿದ್ದಾರೆ, ಇನ್ನು ಕಾಯುವ ಸ್ಥಿತಿಯಲ್ಲಿ ಇಲ್ಲ ಎನ್ನುವುದು ನನಗರ್ಥವಾಯ್ತು. ಅವರು ಕಟ್ಟಡದ ಕೆಲಸ ಹಾಗು ಹತ್ತಿರದ ಕಾರ್ಖಾನೆಗಳಲ್ಲಿ ಕೆಲಸ ಮಾಡುವವರೆಂದು ರಿತೇಶ್ ಬಳಿ ಮಾತನಾಡಿದಾಗ ಗೊತ್ತಾಯಿತು. ಅವರಲ್ಲೊಬ್ಬ ಮೆಕ್ಯಾನಿಕ್, ಮತ್ತೊಬ್ಬ ಟೈಲ್ಸ್ ಕೆಲಸದವ, ಇನ್ನೊಬ್ಬನಿಗೆ ಪ್ಲಾಸ್ಟರ್ ಆಫ್ ಪ್ಯಾರಿಸ್ ಕೆಲಸ ಗೊತ್ತು. ಉಳಿದವರು ಭಾರ ಹೊರುವ ಕೆಲಸ ಮಾಡುತ್ತಿದ್ದರು. ಲಾಕ್‌ಡೌನ್ ಘೋಷಿಸಿದ ಒಂದು ವಾರದ ಹಿಂದಷ್ಟೇ ಹೊಸ ಕಂಟ್ರಾಕ್ಟರ್ ಜೊತೆ ಕೆಲಸ ಮಾಡಲು ಶುರುಮಾಡಿದ್ದರು.

Acchigoo Modhalu Vinod Kapri Satish GT 1232 km

ಬಿಹಾರ್ ಮೂಲದ ವಲಸೆ ಕಾರ್ಮಿಕರಾದ ರಿತೇಶ್, ಆಶಿಶ್, ರಾಮ್‌ಬಾಬು, ಸೋನು

ಅದುವರೆಗೆ ದಿನಗಳು ಹೇಗೋ ಕಳೆದವು. ಆ ನಂತರವೇ ಸಮಸ್ಯೆಗಳು ಆರಂಭವಾದದ್ದು. ಕಂಟ್ರಾಕ್ಟರ್ ಕರೆ ಮಾಡುವುದನ್ನು ನಿಲ್ಲಿಸಿದ. ಕಾರ್ಮಿಕರಿಗೆ ಕೊಡಬೇಕಾಗಿದ್ದ ದುಡ್ಡು ಕೊಡಲಿಲ್ಲ. ಇವರೇ ಆತನಿಗೆ ಫೋನ್ ಮಾಡಿ ಕೇಳಿದಾಗ ಅವನಿಂದ ಕೆಲಸ ಮಾಡಿಸಿಕೊಂಡವರು ಕೊಟ್ಟಿಲ್ಲ, ಹಾಗಾಗಿ ತಾನು ಕೊಡುವ ಸ್ಥಿತಿಯಲ್ಲಿಲ್ಲ ಎಂದನಂತೆ. ಬೇರೆ ದಾರಿ ಇಲ್ಲದ ಈ ಕೆಲಸಗಾರರು, ತಾವು ಉಳಿಸಿದ್ದ ಅಷ್ಟೋ ಇಷ್ಟನ್ನೂ ಖರ್ಚು ಮಾಡಿ ಊಟದ ವ್ಯವಸ್ಥೆ ಮಾಡಿಕೊಂಡಿದ್ದರು. ಅದೂ ಬೇಗ ಬೇಗ ಖಾಲಿಯಾಗುತ್ತಿತ್ತು. ಏಪ್ರಿಲ್ 8ರ ಹೊತ್ತಿಗೆ ಏನೂ ಉಳಿದಿರಲಿಲ್ಲ.

ರಿತೇಶ್‌ಗೆ ತನ್ನ ಹಾಗೂ ಸಹವಾಸಿಗಳ ಪರಿಸ್ಥಿತಿಯ ಬಗ್ಗೆ ಸಣ್ಣದೊಂದು ವಿಡಿಯೋ ಮಾಡಿ ವಾಟ್ಸಾಪ್‌ಗೆ ಕಳುಹಿಸಲು ಸಾಧ್ಯವೇ ಕೇಳಿದೆ. ಆಯ್ತು ಎಂದ. ಸ್ವಲ್ಪ ಹೊತ್ತಿನಲ್ಲಿಯೇ ಒಂದಲ್ಲ ಐದು ವಿಡಿಯೋ ಕ್ಲಿಪ್‌ಗಳು ಬಂದವು. ಅವರ ಖಾಲಿ ಪಾತ್ರೆಗಳನ್ನು ಒಂದು ವೀಡಿಯೋದಲ್ಲಿ ತೋರಿಸಿದರೆ, ಮತ್ತೊಂದರಲ್ಲಿ ಖಾಲಿ ಎಲ್‌ಪಿಜಿ ಸಿಲಿಂಡರ್. ಅವರಲ್ಲಿಯೇ ಒಬ್ಬರು ಒಂದೇ ಕೈಯಲ್ಲಿ ಸಿಲಿಂಡರ್‌ನ್ನು ಎತ್ತಿ ಹಿಡಿದು ಖಾಲಿಯಾಗಿರುವುದನ್ನು ತೋರಿಸಿದ್ದರು. ಇನ್ನೊಂದು ವಿಡಿಯೋ ತುಣುಕಿನಲ್ಲಿ ಅವರ ಪಕ್ಕದ ಕೋಣೆಯಲ್ಲಿದ್ದ ಕಾರ್ಮಿಕರ ಪರಿಸ್ಥಿತಿ ದಾಖಲಾಗಿತ್ತು. ರಿತೇಶ್ ಕಳುಹಿಸಿದ ವಿಡಿಯೋ ತುಣುಕುಗಳು ಯಾವುದೇ ವೃತ್ತಿಪರ ವರದಿಗಾರನನ್ನೂ ನಾಚಿಸುವಂತಿದ್ದವು.

ಆ ವಿಡಿಯೋಗಳ ಮೂಲಕ ನನಗೆ ರಾಮ್‌ಬಾಬು, ರಿತೇಶ್ ಹಾಗೂ ಆಶಿಶ್ ಕುಮಾರ್ ಮುಖಗಳು ಪರಿಚಯವಾದವು. ತಕ್ಷಣವೇ ಆ ಕ್ಲಿಪ್‌ಗಳನ್ನು ಟ್ವಿಟರ್‌ಗೆ ಹಾಕಿದೆ. ಕೆಲವು ಪ್ರಮುಖ ವ್ಯಕ್ತಿಗಳಿಗೆ ಟ್ಯಾಗ್ ಮಾಡಿದ್ದೆ. ಕೆಲ ನಾಗರಿಕರು ಹಾಗೂ ಗಾಜಿಯಾಬಾದ್‌ನ ಪೊಲೀಸರು ಪ್ರತಿಕ್ರಿಯಿಸಿದರು. ಉತ್ತರ ಪ್ರದೇಶದ ಸಹಾಯವಾಣಿ ಕೂಡ ಅವರಿಗೆ ಅಗತ್ಯ ನೆರವು ತಲುಪಿಸುವ ಭರವಸೆ ನೀಡಿತು. ಆದರೆ ಹಲವು ಗಂಟೆಗಳ ನಂತರವೂ ಯಾವ ನೆರವೂ ಅವರಿಗೆ ತಲುಪಲಿಲ್ಲ.

ಸ್ವಲ್ಪ ಹೊತ್ತಿನಲ್ಲಿಯೇ ಲೇಬರ್ ಚೌಕ್ ಹತ್ತಿರ ನೆಲೆಸಿದ್ದ ರೋಹಿತ್ ಎಂಬ ಪತ್ರಕರ್ತ ನನ್ನನ್ನು ಸಂಪರ್ಕಿಸಿದರು. ಅವರು ರಿತೇಶ್‌ನನ್ನು ಭೇಟಿಯಾಗಿ ನೆರವು ತಲುಪಿಸಲು ಪ್ರಯತ್ನಿಸುತ್ತೇನೆ ಎಂದರು. ಕೆಲ ಸಮಯದ ನಂತರ ರಿತೇಶ್ ನನಗೆ ಕರೆ ಮಾಡಿದ. ಪತ್ರಕರ್ತ ರೋಹಿತ್, ಅವರನ್ನು ಭೇಟಿ ಮಾಡಿ 30 ಜನರ ಗುಂಪಿಗೆ ನಾಲ್ಕು ದಿನಗಳಿಗೆ ಬೇಕಾಗುವ ಆಹಾರ ಸಾಮಗ್ರಿ ಕೊಳ್ಳಲು ಅಗತ್ಯವಿದ್ದಷ್ಟು ಹಣ ನೀಡಿದ್ದರು. ಆಮೇಲೆ ರಿತೇಶ್ ಅಂಗಡಿಯಿಂದ ತಂದ ಪದಾರ್ಥಗಳ ವಿಡಿಯೋ ಕೂಡ ಕಳುಹಿಸಿದ. ಜೊತೆಗೆ ಅಗತ್ಯ ಸಾಮಗ್ರಿ ಖರೀದಿಸಲು ಹೊರಗಡೆ ಹೋಗಿದ್ದಾಗ ಅವರ ಸಹಚರ ಸಂದೀಪ್ ಕುಮಾರ್‌ಗೆ ಪೊಲೀಸರು ಹೀನಾಯವಾಗಿ ಬಾರಿಸಿದ್ದನ್ನೂ ಹೇಳಿದ. ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಸಂದೀಪ್ ಹೊರಗೆ ಹೋಗಿದ್ದ ಎನ್ನುವುದು ಪೊಲೀಸರ ಲಾಟಿ ಏಟಿಗೆ ಕಾರಣ. ಊಟಕ್ಕೇನೂ ಇಲ್ಲದೆ ಖರೀದಿಸಲು ಹೊರ ಬಂದಿದ್ದೇನೆ ಎಂದರೂ ಪೊಲೀಸರು ಕರುಣೆ ತೋರಿಸಿರಲಿಲ್ಲ.

Acchigoo Modhalu Vinod Kapri Satish GT 1232 km

ಗಾಜಿಯಾಬಾದ್‌ನಿಂದ ಶುರುವಾದ ಈ ಪ್ರಯಾಣ ಕೊನೆಗೊಳ್ಳುವುದು ಬಿಹಾರದ ಸಹರ್ಸಾದಲ್ಲಿ

ನಾಲ್ಕು ದಿನಗಳ ನಂತರ ರಿತೇಶ್ ಮತ್ತೆ ಫೋನ್ ಮಾಡಿದ. ಖರೀದಿಸಿದ್ದ ಆಹಾರ ಸಾಮಗ್ರಿ ಎಲ್ಲಾ ಖಾಲಿ. ಐದು ಸಾವಿರ ರೂಪಾಯಿಗಳಲ್ಲಿ ಖರೀದಿಸಿದ ಆಹಾರ ಪದಾರ್ಥ ಮತ್ತೆಷ್ಟು ದಿನಗಳಿಗೆ ಆಗಲಿಕ್ಕೆ ಸಾಧ್ಯ? ಅವರು 30 ಜನರಿದ್ದಾರೆ.

ಆಗ ನನಗೆ ಅರ್ಥವಾಯಿತು. ಪೊಲೀಸರು, ಆಡಳಿತ ವ್ಯವಸ್ಥೆಯ ಸಹಾಯವಾಣಿ, ಶಾಸಕರು ಎಲ್ಲರೂ ಟ್ವೀಟ್‌ಗಳಿಗೆ ಪ್ರತಿಕ್ರಿಯಿಸುತ್ತಾರೆಯೇ ಹೊರತು, ನಿಜಕ್ಕೂ ಅವರು ಯಾವ ರೀತಿಯ ನೆರವನ್ನೂ ನೀಡುವುದಿಲ್ಲ. ಅವರ ಉದ್ದೇಶ ಸಾಮಾಜಿಕ ತಾಣಗಳಲ್ಲಿ ಪ್ರತಿಕ್ರಿಯೆ ನೀಡುವ ಮೂಲಕ ತಮ್ಮ ಇಮೇಜಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುವುದಷ್ಟೆ. ನಾನು ರಿತೇಶ್‌ನ ಬ್ಯಾಂಕ್ ಖಾತೆ ಸಂಖ್ಯೆ ಪಡೆದು 5,000 ರೂ.ಗಳನ್ನು ಕಳುಹಿಸಿದೆ. ಗೊತ್ತಿತ್ತು, ಅದು ಕೂಡ ಸಾಕಾಗುವುದಿಲ್ಲ ಎಂದು. ಮೂರು ದಿನಗಳ ನಂತರ ಮತ್ತೆ ರಿತೇಶ್ ಕರೆ ಮಾಡಿದ. ನಾನು ಕರೆ ಸ್ವೀಕರಿಸಿದ ಕೂಡಲೇ, “ಸರ್, ನಾನು ಈ ಬಾರಿ ನಿಮ್ಮಿಂದ ಯಾವುದೇ ನೆರವು ಕೇಳಲು ಫೋನ್ ಮಾಡಿಲ್ಲ” ಎಂದ. ಗಾಬರಿಯಾಗಿ, ‘ಮತ್ತೆ ಏಕೆ?’ ಎಂದೆ. ಅತ್ತ ರಿತೇಶ್ ಕಡೆಯಿಂದ ಬಂದ ಉತ್ತರದಿಂದ ನನ್ನ ಎದೆ ಒಡೆದಂತಾಯ್ತು.

*

ವಿನೋದ್ ಕಾಪ್ರಿ : ಇವರು ಪತ್ರಕರ್ತ ಮತ್ತು ಸಿನಿಮಾ ನಿರ್ದೇಶಕ. ಇವರು ನಿರ್ದೇಶಿಸಿದ ‘ಕಾಂಟ್ ಟೇಕ್ ದಿಸ್ ಶಿಟ್ ಎನಿಮೋರ್’ (2014) ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ದೊರೆತಿದೆ. ವಿಮರ್ಶಕರ ಮನ್ನಣೆಗೆ ಪಾತ್ರವಾದ ಅವರ ‘ಪಿಹು’ (2017) ಚಿತ್ರಕ್ಕೆ ಎರಡು ಅಂತಾರಾಷ್ಟ್ರೀಯ ಪ್ರಶಸ್ತಿಗಳು ಸಂದಿವೆ. ಸಿನಿಮಾ ಕ್ಷೇತ್ರಕ್ಕೆ ಕಾಲಿಡುವ ಮುನ್ನ ಅವರು 23 ವರ್ಷಗಳ ಕಾಲ ಅಮರ್ ಉಜಾಲ, ಝೀ ನ್ಯೂಸ್, ಸ್ಟಾರ್ ನ್ಯೂಸ್, ಇಂಡಿಯಾ ಟಿವಿ ಮತ್ತು ಟಿವಿ9 ವಾಹಿನಿಗಳಲ್ಲಿ ಪತ್ರಕರ್ತರಾಗಿ ಕಾರ್ಯನಿರ್ವಹಿಸಿದ್ದರು.

ಸತೀಶ ಜಿ. ಟಿ. : ಪ್ರಸ್ತುತ ‘ದಿ ಹಿಂದು’ ಪತ್ರಿಕೆಯ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿರುವ ಸತೀಶ್ ಅವರ ಮೂರನೇ ಅನುವಾದಿತ ಕೃತಿ ಇದು. ಇವರು ಅಜಿತ್ ಪಿಳ್ಳೈಯವರ ‘ಇದು ಯಾವ ಸೀಮೆಯ ಚರಿತ್ರೆ’ ಕೃತಿಯನ್ನು ಅನುವಾದಿಸಿದ್ದಾರೆ. ವಿನೋದ್ ಮೆಹ್ತಾ ಅವರ ‘ಲಖನೌ ಹುಡುಗ’ ಕೃತಿಯನ್ನು ಶಶಿ ಸಂಪಳ್ಳಿಯವರೊಡನೆ ಕನ್ನಡಕ್ಕೆ ತಂದಿದ್ದಾರೆ. ಮೂಲತಃ ಚಿತ್ರದುರ್ಗದವರಾದ ಸತೀಶ್, ಮೈಸೂರು ಮಾನಸ ಗಂಗೋತ್ರಿಯಲ್ಲಿ ಆಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ ನಂತರ ವಿಜಯ ಟೈಮ್ಸ್ ಹಾಗೂ ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ್ದರು. ಇವರು ರಚಿಸಿದ ಪತ್ರಕರ್ತ ಬಿ. ವಿ. ವೈಕುಂಠರಾಜು ಅವರ ಬದುಕು-ಬರಹ ಕುರಿತ ಕೃತಿ ನಾಟಕ ಅಕಾಡೆಮಿಯಿಂದ ಪ್ರಕಟವಾಗಿದೆ.

(ಪುಸ್ತಕದ ಖರೀದಿಗೆ ಲಿಂಕ್ :  https://imojo.in/4bnehkj)

ಇದನ್ನೂ ಓದಿ : New Novel : ಅಚ್ಚಿಗೂ ಮೊದಲು ; ಡಾ. ಚಂದ್ರಶೇಖರ ಕಂಬಾರರ ‘ಚಾಂದಬೀ ಸರಕಾರ’ ಬರುತ್ತಿದ್ದಾರೆ!

TV9 Kannada

Leave a comment

Your email address will not be published. Required fields are marked *