New Book: ಶೆಲ್ಫಿಗೇರುವ ಮುನ್ನ; ಡಾ. ವಿನತೆ ಶರ್ಮ ಸಂಪಾದಿತ ‘ಭಾರತೀಯ ಮಹಿಳೆ ಮತ್ತು ವಿರಾಮ‘ ಕೃತಿ ಸದ್ಯದಲ್ಲೇ ಓದಿಗೆ | Shelfigeruva Munna excerpt of Bharatiya mahile mattu virama edited by Kannada Writer Dr Vinathe Sharma


Women and Men : ‘ಹೆಂಗಸರ ವಿರಾಮದ ವಿಷಯದಲ್ಲಿ ಗಂಡಸರ ಸಬಲತೆ ಅಡಗಿದೆ. ಏಕೆಂದರೆ, ಹೆಂಗಸರನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಬಯಸುವ ಗಂಡಸರು ಎಲ್ಲೆಲ್ಲೂ ಇದ್ದಾರೆ. ಆದರೆ ಸಬಲತೆಯಿರುವ ಗಂಡಸರು ಬಹಳ ಕಡಿಮೆ.’ ಡಾ. ವಿನತೆ ಶರ್ಮ

ಶೆಲ್ಫಿಗೇರುವ ಮುನ್ನ | Shelfigeruva Munna : ಮಾಹಿತಿಯ ಪ್ರವಾಹದ ನಡುವೆ ನಮ್ಮನ್ನು ನಾವು ದೃಢವಾಗಿ ನಿಲ್ಲಿಸಿಕೊಂಡು ನಮ್ಮ ಆಸಕ್ತಿಗಳ ಆಳ ತಲುಪಲು, ವಿಚಾರಗಳನ್ನು ಪರಾಮರ್ಶಿಸಿಕೊಳ್ಳಲು ವಿಷಯಾಧಾರಿತ ಅಧ್ಯಯನ ಬೇಕೇಬೇಕು. ಕಾಲಮಾನಕ್ಕೆ ತಕ್ಕಂತೆ ಜ್ಞಾನಸಂಪಾದನೆಗೆ ಈವತ್ತು ಸಾಕಷ್ಟು ಪರ್ಯಾಯ ಮತ್ತು ಕ್ಷಿಪ್ರ ಮಾರ್ಗಗಳಿದ್ದರೂ, ಸವಿಸ್ತಾರದ ಓದಿಗಾಗಿ ಪುಸ್ತಕ ಎಂಬ ಗಂಭೀರ ಮಾಧ್ಯಮವೇ ಅದಕ್ಕೆ ಒತ್ತಾಸೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ಪುಸ್ತಕಗಳು ಹೊರಬರುತ್ತ ಜ್ಞಾನಾಕಾಂಕ್ಷಿಗಳಿಗೆ ದಾರಿ ತೋರುತ್ತಲೇ ಇರುತ್ತವೆ. ಈಗಿಲ್ಲಿ ಪುಸ್ತಕದಂಗಡಿಗಳಿಗೆ ಹೊರಟುನಿಂತ ಬಂಡಲ್​ನಿಂದ ಒಂದು ಪ್ರತಿಯನ್ನು ಇಲ್ಲಿ ಇಳಿಸಿಕೊಂಡು, ಆಯ್ದ ಭಾಗವನ್ನು ನಿಮ್ಮ ಓದಿಗಾಗಿ ತೆರೆದಿಡಲಾಗಿದೆ. ಗಮನಿಸಿ, ಪ್ರಕಾಶಕರು ಮತ್ತು ಬರಹಗಾರರು ಬಿಡುಗಡೆಗೂ ಮುನ್ನ ಹೊಸ ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ಮೊಬೈಲ್​ ನಂಬರ್ ಕಳುಹಿಸಬಹುದು. ಇ ಮೇಲ್ : [email protected] 

ಕೃತಿ : ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ
ಸಂಪಾದಕಿ: ಡಾ. ವಿನತೆ ಶರ್ಮ, ಸಹ ಸಂಪಾದಕಿ: ಎನ್. ಲಕ್ಷ್ಮಿ
ಪುಟ : 260
ಬೆಲೆ : ರೂ. 260
ಮುಖಪುಟ ವಿನ್ಯಾಸ : ಚೇತನಾ ತೀರ್ಥಹಳ್ಳಿ
ಪ್ರಕಾಶನ : ಟೆಕ್‍ಫಿಜ಼್ ಇಂಕ್‍, ಬೆಂಗಳೂರು

ಈ ಸಂಕಲನದಲ್ಲಿ 14 ಲೇಖನಗಳನ್ನು ಬರೆದಂತಹ 15 ಜನ ಮಹಿಳೆಯರು ಬೇರೆ ಬೇರೆ ವೃತ್ತಿಯವರು, ಬೇರೆ ಬೇರೆ ಊರಿನಲ್ಲಿ, ದೇಶಗಳಲ್ಲಿ ವಾಸಿಸುವವರು. ಬಿಡುವಿನ ಬಗ್ಗೆ ಸವಿಸ್ತಾರವಾಗಿ ತಮ್ಮ ಅನುಭವಗಳನ್ನು ಮತ್ತು ವಿರಾಮದ ಕುರಿತ ಗ್ರಹಿಕೆಯನ್ನು, ಅದರ ಬಗ್ಗೆ ನಡೆಸಿದ ಅಧ್ಯಯನವನ್ನು, ಆ ಕುರಿತು ತಮಗಿರುವ ಪ್ರಶ್ನೆಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಇಲ್ಲಿ ಸಾಮಾಜಿಕ ಕಾರ್ಯಕರ್ತೆಯರು, ಉಪನ್ಯಾಸಕಿಯರು, ವೈದ್ಯರು, ಶಿಕ್ಷಕರು, ವಿದ್ಯಾರ್ಥಿಗಳು, ಅಧ್ಯಯನಶೀಲರು, ಬರಹಗಾರರು, ಗೃಹಿಣಿಯರು ಮತ್ತು ಕಲಾವಿದರು, ಹೀಗೆ ವಿವಿಧ ವೃತ್ತಿಗಳಲ್ಲಿ ಕೆಲಸ ಮಾಡುವವರ ವಿವಿಧ ಅನುಭವಗಳು ದಾಖಲಾಗಿರುವುದು ವಿಶೇಷ. ಮಹಿಳೆಯ ವಿರಾಮಕ್ಕೆ ಸಂಬಂಧಪಟ್ಟಂತೆ ಈ ವಿಷಯ ಇಷ್ಟು ವಿಸ್ತೃತವಾಗಿ ಚರ್ಚೆಗೆ ಒಳಪಟ್ಟಿರುವುದು ನಿಜಕ್ಕೂ ಸ್ವಾಗತಾರ್ಹ. ಇಷ್ಟೆಲ್ಲದರ ನಡುವೆ ಬಹಳಷ್ಟು ಲೇಖಕಿಯರು ಪದೇ ಪದೇ ಅಭಿಪ್ರಾಯಪಟ್ಟಂತೆ ಭಾರತೀಯ ಮಹಿಳೆ ಎಂದರೆ ಒಂದೇ ಗುಂಪಿಗೆ ಸೇರಿಸಲಾಗುವುದಿಲ್ಲ. ಒಂದೇ ನೆಲೆಯಲ್ಲಿ ವ್ಯಾಖ್ಯಾನಿಸಲಾಗುವುದಿಲ್ಲ ಎಂಬ ಅರಿವಿನ ನಡುವೆಯೂ ಇನ್ನೂ ಬೇರೆ ಬೇರೆ ನೆಲೆಯಲ್ಲಿ ಕೆಲಸ ಮಾಡುತ್ತಿರುವ, ಬೇರೆ ಬೇರೆ ವರ್ಗ, ಜಾತಿ, ಪಂಗಡಗಳ ಹೆಣ್ಣುಗಳು ತಮ್ಮ ಅನುಭವದ ಮೂಸೆಯಲ್ಲಿ ಈ ವಿಷಯದ ಬಗ್ಗೆ ಮಾತಾಡಬೇಕಾಗಿರುವುದು ಇವತ್ತಿನ ತುರ್ತು. ಮತ್ತು ಅವರನ್ನು ಮಾತನಾಡಿಸಬೇಕಾಗಿರುವುದು, ಅವರ ಅಭಿಪ್ರಾಯ, ಅನುಭವಗಳನ್ನು ಅಭಿವ್ಯಕ್ತಿಸುವಂತಹ ಅವಕಾಶ ಮತ್ತು ಆವರಣಗಳನ್ನು ಅವರಿಗೆ ಬಿಟ್ಟುಕೊಡಬೇಕಾಗಿರುವ ಜವಾಬ್ದಾರಿಯನ್ನು ಎಚ್ಚರದಿಂದ ಎಲ್ಲರೂ ಕಾಪಿಡಬೇಕಾದ್ದು ಇವತ್ತು ಹೆಚ್ಚು ಅಗತ್ಯ.
ಎನ್. ಮಂಗಳಾ, ರಂಗ ನಿರ್ದೇಶಕಿ

ಮಹಿಳೆಯರ ವಿರಾಮ ಎಂಬುದು ಜಗತ್ತಿನ ಜನಜೀವನದ ಒಂದು ಮುಖ್ಯ ಪ್ರಶ್ನೆಗಳಲ್ಲೊಂದು. ಮಾನವ ಸಮಾಜದ ಬೆಳವಿಗೆಯ ಬಹು ದೊಡ್ಡ ಪ್ರಶ್ನೆಗಳಲ್ಲೊಂದು ಕೂಡಾ. ಹಲವು ಆಯಾಮಗಳನ್ನು ಹೊಂದಿರುವ ಈ ಪ್ರಶ್ನೆ ಒಂದು ಕಡೆ ಮಹಿಳೆಯ ವಿರಾಮದ ಸಾಧ್ಯತೆಗಳನ್ನು ನಿರ್ಧರಿಸುವ ಅವಳ ದುಡಿಮೆ, ಅದರ ಪರಿಮಾಣ (quantity) ಮತ್ತು ತೀವ್ರತೆ (intensity), ಆ ದುಡಿಮೆಯ ನಿರ್ಧಾರಕ ಅಂಶವಾದ ಅವಳ ಸಾಮಾಜಿಕ ಪಾತ್ರ ಮತ್ತು ಸ್ಥಿತಿಯ ಅಧ್ಯಯನ ಮತ್ತು ವಿಶ್ಲೇಷಣೆ ಮಾಡಬೇಕೆಂದು ಒತ್ತಾಯಿಸುತ್ತದೆ. ಮತ್ತೊಂದು ಕಡೆ ಮಹಿಳೆಯ ವ್ಯಕ್ತಿತ್ವದ ಬೆಳವಣಿಗೆ ಮತ್ತು ಅಭಿವ್ಯಕ್ತಿಗೆ ವಿರಾಮದ ಅವಶ್ಯಕತೆ, ವಿರಾಮವನ್ನು ಹೇಗೆ ವಿನಿಯೋಗಿಸಬೇಕೆಂಬ ನಿರ್ಧಾರ ಕೈಗೊಳ್ಳುವಲ್ಲಿ ಮಹಿಳೆಯ ಸ್ವಾತಂತ್ರ್ಯ ಅಥವಾ ಅಸ್ವಾತಂತ್ರ್ಯ, ವಿರಾಮವನ್ನು ಉಪಯೋಗಿಸುವುದರ ಮೇಲಿನ ಸಾಮಾಜಿಕ ಒತ್ತಡಗಳನ್ನು ಅಧ್ಯಯನಕ್ಕೊಳಪಡಿಸಬೇಕಾಗುತ್ತದೆ. ಮಹಿಳೆಯ ವಿರಾಮ ಎಲ್ಲ ಕಾಲಕ್ಕೂ, ಎಲ್ಲ ಮಹಿಳೆಯರಿಗೂ ಒಂದೇ ಆಗಿಲ್ಲ ಎಂಬುದು ಎಲ್ಲರೂ ಒಪ್ಪುವ ವಿಷಯ. ಇಂದು, 21 ಶತಮಾನದ ಆದಿಯಲ್ಲಿ, ಮಹಿಳೆಯ ವಿರಾಮದ ಲಭ್ಯತೆ ಮತ್ತು ಅದರ ವಿನಿಯೋಗದ ಬಗ್ಗೆ ಒತ್ತು ನೀಡುವಾಗಲೂ ಗಮನಕ್ಕೆ ಬರುವ ಮುಖ್ಯ ಅಂಶವೊಂದು ಎದ್ದು ಕಾಣುತ್ತದೆ. ಇಂದಿನ ಬೆಳವಣಿಗೆಗಳು ಬಹು ದೊಡ್ಡ ಸಂಖ್ಯೆಯ ಮಹಿಳೆಯರ ವಿರಾಮದ ಮೇಲೆ ಇಂದಿನ ಬೆಳವಣಿಗೆಗಳು ಬೀರುವ ಪ್ರಭಾವಕ್ಕಿಂತ ಹಿಂದಿನಿಂದಲೂ ಬಂದ ಮಹಿಳೆಯ ಸಾಮಾಜಿಕ ಪಾತ್ರ ಹಾಗೂ ಸ್ಥಿತಿಯ ಪಾತ್ರವೇ ಪ್ರಧಾನವಾಗಿ ಕಾಣುತ್ತದೆ. ಈ ಅಂಶವನ್ನು ಅಧ್ಯಯನ ಮಾಡುವುದು, ಅದರ ಪ್ರಭಾವವನ್ನು ಕುಗ್ಗಿಸುವುದು ಇಂದಿನ ಮಹಿಳೆಯರ ವಿರಾಮದ ಪರಿಮಾಣ ಮತ್ತು ವಿನಿಯೋಗದ ಗುಣಮಟ್ಟವನ್ನು ಹೆಚ್ಚಿಸುವುದಕ್ಕೆ ಹಾಗೂ ಅದರ ಮೂಲಕ ಮಹಿಳೆಯರ ವ್ಯಕ್ತಿತ್ವದ ವಿಕಸನಕ್ಕೆ ಅವಶ್ಯವಾಗಿದೆ.
ಜಿ.ಎನ್. ನಾಗರಾಜ್, ಸಾಮಾಜಿಕ ಚಿಂತಕರು

*

ಡಾ. ವಿನತೆ ಶರ್ಮ ಬರೆದ ‘ಭಾರತೀಯ ಮಹಿಳೆಯ ವಿರಾಮವೊಂದು ಲಿಂಗನ್ಯಾಯದ ಪ್ರಶ್ನೆ’ ಆಯ್ದ ಭಾಗ

‘ಅಬ್ಬಬ್ಬಾ, ಒಂದಿಷ್ಟೂ ಕೂಡ ಪುರುಸೊತ್ತಿಲ್ಲದೆ ಹೇಗೆ ದುಡಿಯುತ್ತಾಳೆ ನೋಡು, ಅವಳನ್ನ ನೋಡಿ ಕಲ್ತ್ಕೋ’ ಅನ್ನೊ ಮಾತನ್ನ ಕೇಳುತ್ತಲೇ ಬೆಳೆದ ಹೆಣ್ಣುಮಕ್ಕಳು ನಾವು. ಮಧ್ಯಮ ಕುಟುಂಬ ವರ್ಗಕ್ಕೆ ಸೇರಿದ ನಮ್ಮ ತಂದೆತಾಯಂದಿರು ಅವರುಗಳ ಆಗಿನ ಕೌಟುಂಬಿಕ ಪರಿಸ್ಥಿತಿಗೆ ಓಗೊಟ್ಟು ಸಮಾಜಕ್ಕೆ ಒಪ್ಪಿಗೆಯಾಗುವ ಮಟ್ಟಕ್ಕೆ ಶಾಲೆಯ ವಿದ್ಯಾಭ್ಯಾಸ ಮುಗಿಸಿ, ನಂತರ ಡಿಗ್ರಿ ಪದವಿ ಇಲ್ಲವೇ ಟೀಚರ್ಸ್ ಟ್ರೇನಿಂಗ್ ಮಾಡಿಯೊ ಶಿಕ್ಷಣವನ್ನು ಮುಗಿಸಿ ನೌಕರರಾಗಿ ದುಡಿದವರು. ಅವರ ಕಾಲದಲ್ಲಿ ಬೆಳೆಯುತ್ತಿದ್ದ ಹೆಣ್ಣುಮಕ್ಕಳಿಗೆ ಪುರುಸೊತ್ತಿಲ್ಲದೆ ದುಡಿಯುವ ಹೆಂಗಸರನ್ನು ಮಾದರಿಯನ್ನಾಗಿ ತೋರಿಸುವುದಿತ್ತು. ಬಹುಶಃ ಆ ಮನೋಭಾವ ಈ ಇಪ್ಪತ್ತೊಂದನೆ ಶತಮಾನದ ಆದಿಕಾಲದಲ್ಲಿ ಬದಲಾಗಿದೆ ಎಂದು ತೋರಿದರೂ ಭಾರತೀಯ ಮಹಿಳೆಯ ಜೀವನದಲ್ಲಿ ಪುರುಸೊತ್ತು, ವಿಶ್ರಾಂತಿ, ಆರಾಮ ಮತ್ತು ವಿರಾಮ ಎನ್ನುವುದು ವಿವಾದಾಸ್ಪದ ವಿಷಯ. ಪ್ರತಿನಿತ್ಯ ಜೀವನದಲ್ಲಿ ಪುರುಸೊತ್ತು, ವಿಶ್ರಾಂತಿ ಮತ್ತು ಆರಾಮ ಎನ್ನುವ ಪದಗಳು ಆಗಾಗ ನುಸುಳುತ್ತಿರುತ್ತವೆ. ಆದರೆ, ವಿರಾಮ ಎನ್ನುವ ಪದ ಸ್ವಲ್ಪ ಅಪರೂಪವಾದದ್ದು. ಆ ಪದವನ್ನು ನಾವು ಕೇಳಿದರೂ ಕೂಡ ಅದು ಪುರುಸೊತ್ತು, ವಿಶ್ರಾಂತಿ ಮತ್ತು ಆರಾಮ ಎನ್ನುವ ಪದಗಳಿಗೆ ಸಮಾನವಾಗಿ ಅಥವಾ ಪರ್ಯಾಯವಾಗಿ ಬಳಕೆಯಾಗುತ್ತದೆ. ವಿರಾಮ ಎನ್ನುವ ಪದಕ್ಕೆ ಅದರದೆ ಪ್ರತ್ಯೇಕ ಅರ್ಥವಿದೆಯೆ ಎನ್ನುವ ಪ್ರಶ್ನೆಯೇಳುತ್ತದೆ. ಹಾಗಾದಲ್ಲಿ, ವಿರಾಮವೆನ್ನುವುದು ಏನು, ಭಾರತೀಯ ಮಹಿಳೆಯರ ಪ್ರತಿದಿನದ ಜೀವನದಲ್ಲಿ ಅದ್ಯಾಕೆ ಅಪರೂಪದ ವಿಷಯವಾಗುತ್ತದೆ ಎನ್ನುವುದನ್ನು ನಾನು ಈ ಲೇಖನದಲ್ಲಿ ವಿಶ್ಲೇಷಿಸಲು ಪ್ರಯತ್ನಿಸಿದ್ದೀನಿ.

ನಾವು ಇಪ್ಪತ್ತೊಂದನೇ ಶತಮಾನಕ್ಕೆ ಕಾಲಿಟ್ಟು ಏನೆಲ್ಲಾ ಪ್ರಗತಿಗಳನ್ನು ಸಾಧಿಸಿದ್ದರೂ, ಭಾರತೀಯ ಹೆಣ್ಣಿನ ಅದೇ ಪ್ರತೀಕ ಇನ್ನೂ ಮುಂದುವರೆದಿದೆ. ಇವತ್ತಿಗೂ ಗಂಡಿನ ಸ್ಥಾನಕ್ಕೇ ಹೆಚ್ಚು ಮಾನ್ಯತೆಯಿದೆ ಮತ್ತು ಬಲವಿದೆ. ಈಗಿನ ಆಧುನಿಕ ಕಾಲದಲ್ಲಿ ಬೇಕಾದಷ್ಟು ಯಂತ್ರ ಸಹಾಯವಿದ್ದರೂ, ಸ್ವಂತಿಕೆಯಿದ್ದರೂ, ಕೆಲಸದವರಿದ್ದರೂ, ನಾವೆಷ್ಟೆ ವಿದ್ಯಾವಂತರಾಗಿ ನೌಕರಿಯಲ್ಲಿದ್ದರೂ, ನಮ್ಮ ಮನೆಗಳಲ್ಲಿನ ಗಂಡಸರು ಲಿಂಗಾಧಾರಿತ ಸಮಾನತೆಯನ್ನು ನಂಬಿದ್ದರೂ ಮಹಿಳೆಯ ವಿರಾಮ ಎನ್ನುವ ವಿಷಯ ಇನ್ನೂ ಹೊಸತು.

ವಿನತೆ ಶರ್ಮಾ ಬರೆದ

TV9 Kannada


Leave a Reply

Your email address will not be published. Required fields are marked *