ಸಂಸತ್ ಭವನದ ನೂತನ ಕಟ್ಟಡವನ್ನು ಉದ್ಘಾಟಿಸುವ ಹಕ್ಕು ಪ್ರಧಾನಿ ನರೇಂದ್ರ ಮೋದಿಯವರಿಗೆ ಇದೆ. ಅದನ್ನು ಅವರೇ ಮಾಡಬೇಕಲ್ಲದೆ ಪಾಕಿಸ್ತಾನದ ಪ್ರಧಾನಿ ಮಾಡಬೇಕಾದ್ದಲ್ಲ ಎಂದು ಅಖಿಲ ಭಾರತ ಮುಸ್ಲಿಂ ಜಮಾತ್ ರಾಷ್ಟ್ರೀಯ ಅಧ್ಯಕ್ಷ ಮೌಲಾನಾ ಮುಫ್ತಿ ಶಹಾಬುದ್ದೀನ್ ರಜ್ವಿ ಹೇಳಿದ್ದಾರೆ.

ಮೌಲಾನಾ ಮುಫ್ತಿ ಶಹಾಬುದ್ದೀನ್ ರಜ್ವಿ
ಬರೇಲಿ: ಸಂಸತ್ ಭವನದ ನೂತನ ಕಟ್ಟಡವನ್ನು (New Parliament) ಉದ್ಘಾಟಿಸುವ ಹಕ್ಕು ಪ್ರಧಾನಿ ನರೇಂದ್ರ ಮೋದಿಯವರಿಗೆ (Narendra Modi) ಇದೆ. ಅದನ್ನು ಅವರೇ ಮಾಡಬೇಕಲ್ಲದೆ ಪಾಕಿಸ್ತಾನದ ಪ್ರಧಾನಿ ಮಾಡಬೇಕಾದ್ದಲ್ಲ ಎಂದು ಅಖಿಲ ಭಾರತ ಮುಸ್ಲಿಂ ಜಮಾತ್ ರಾಷ್ಟ್ರೀಯ ಅಧ್ಯಕ್ಷ ಮೌಲಾನಾ ಮುಫ್ತಿ ಶಹಾಬುದ್ದೀನ್ ರಜ್ವಿ (maulana mufti shahabuddin razvi) ಹೇಳಿದ್ದಾರೆ. ಉತ್ತರ ಪ್ರದೇಶದ ಬರೇಲಿಯಲ್ಲಿ ಮಾತನಾಡಿದ ಅವರು, ನೂತನ ಸಂಸತ್ ಭವನ ಲೋಕಾರ್ಪಣೆ ವಿಚಾರವಾಗಿ ಕೇಂದ್ರ ಸರ್ಕಾರವನ್ನು ಬೆಂಬಲಿಸಿ ಹೇಳಿಕೆ ನೀಡಿದ್ದಾರೆ. ಮೇ 29 ರಂದು ಸಂಸತ್ತಿನ ನೂತನ ಕಟ್ಟಡವನ್ನು ಮೋದಿ ಲೋಕಾರ್ಪಣೆ ಮಾಡಲಿದ್ದಾರೆ. ಮೋದಿ ಅವರು ಉದ್ಘಾಟನೆ ಮಾಡುವುದನ್ನು ಪ್ರತಿಭಟಿಸಿ ಸುಮಾರು 20 ಪ್ರತಿಪಕ್ಷಗಳು ಸಮಾರಂಭವನ್ನು ಬಹಿಷ್ಕರಿಸುವುದಾಗಿ ಘೋಷಿಸಿರುವ ಸಂದರ್ಭದಲ್ಲೇ ಮೌಲಾನಾ ಮುಫ್ತಿ ಶಹಾಬುದ್ದೀನ್ ರಜ್ವಿ ಈ ಹೇಳಿಕೆ ನೀಡಿದ್ದಾರೆ.
ಕೇಂದ್ರ ಸರ್ಕಾರದ ನೇತೃತ್ವದಲ್ಲಿ ಈ ನೂತನ ಸಂಸತ್ ಭವನದ ಕಾಮಗಾರಿ ಪೂರ್ಣಗೊಂಡಿದೆ. ಸ್ವತಃ ಪ್ರಧಾನಿಯೇ ಇದರ ನಿರ್ಮಾಣಕ್ಕೆ ಹೆಚ್ಚಿನ ಆಸಕ್ತಿ ವಹಿಸಿದ್ದನ್ನು ನಾವೆಲ್ಲರೂ ನೋಡಿದ್ದೇವೆ. ಅವರ ನೇತೃತ್ವದಲ್ಲಿ ಈ ಹೊಸ ಸಂಸತ್ ಭವನ ಪೂರ್ಣಗೊಂಡಿದೆ. ಇಂತಹ ಪರಿಸ್ಥಿತಿಯಲ್ಲಿ ಪ್ರಧಾನಿಗೆ ಮಾತ್ರ ಉದ್ಘಾಟನೆ ಮಾಡುವ ಹಕ್ಕು ಇದೆ ಎಂದು ರಜ್ವಿ ಹೇಳಿದ್ದಾರೆ.
ಪ್ರತಿಭಟಿಸುವವರಿಗೆ ನಾಚಿಕೆಯಾಗಬೇಕೆಂದ ರಜ್ವಿ
ಸಂಸತ್ ಭವನದ ಹೊಸ ಕಟ್ಟಡವನ್ನು ಭಾರತದ ಪ್ರಧಾನಿ ಉದ್ಘಾಟಿಸದೆ, ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಮಾಡಬೇಕೇ? ಇದನ್ನು ವಿರೋಧಿಸುತ್ತಿರುವವರಿಗೆ ನಾಚಿಕೆಯಾಗಬೇಕು ಎಂದಿದ್ದಾರೆ. ನೂತನ ಸಂಸತ್ ಭವನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಸಂಸತ್ತಿನ ಎಲ್ಲಾ ಮುಸ್ಲಿಂ ಸದಸ್ಯರಲ್ಲಿ ನಾನು ಮನವಿ ಮಾಡುತ್ತೇನೆ ಎಂದೂ ಹೇಳಿದ್ದಾರೆ.