New Publication : ಭಾರತದ ಬಹುಭಾಷಾ ಸಾಹಿತ್ಯಕನ್ನಡಿ ‘ಬಹುವಚನ’; ಕನ್ನಡಕ್ಕೊಂದು ಹೊಸ ಪ್ರಕಾಶನ | An interview with Journalist Publisher Deepa Ganesh about Bahuvachana Publications Bengaluru


New Publication : ಭಾರತದ ಬಹುಭಾಷಾ ಸಾಹಿತ್ಯಕನ್ನಡಿ ‘ಬಹುವಚನ’; ಕನ್ನಡಕ್ಕೊಂದು ಹೊಸ ಪ್ರಕಾಶನ

ಹೊಸ ಪ್ರಕಾಶನ ಬಹುವಚನದಿಂದ ಸದ್ಯದಲ್ಲೇ ಬಿಡುಗಡೆಗೊಳ್ಳಲಿರುವ ಪುಸ್ತಕಗಳು

ಬಹುವಚನ-Bahuvachana : ‘ಇಂದು ಸಾಹಿತ್ಯ ಎನ್ನುವುದು ಜಾಗತಿಕ ಮಾರುಕಟ್ಟೆಯಾದ ನಂತರ, ಅನುವಾದ ದೊಡ್ಡ ವ್ಯಾಪಾರವಾಗಿದೆ. ಯಾವುದು ಶ್ರೇಷ್ಠ, ಯಾವುದು ನಿಕೃಷ್ಟ ಎಂದು Global Corporations ನಿರ್ಧರಿಸುತ್ತಿವೆ. ಓದುಗರಿಗೆ ಯಾವ ಪುಸ್ತಕವನ್ನು ಓದಬೇಕು ಎನ್ನುವುದನ್ನೂ ಇವೇ ನಿರ್ಧರಿಸುತ್ತಿವೆ, ಹೇಳುತ್ತಿವೆ. ಹಾಗಾಗಿ ಪ್ರಚಾರಕ್ಕೆ ಬಾರದ, ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗದ ಸಾಹಿತ್ಯ ಅಥವಾ ಲೇಖಕ, ಯಾವ ಪ್ರಶಸ್ತಿಗೂ ಅರ್ಜಿ ಹಾಕದೇ, ದೇಶ ವಿದೇಶಗಳ ಪ್ರಶಸ್ತಿ ಪಡೆಯದ ಲೇಖಕಕರನ್ನು ನಾವು ಗುರುತಿಸುವ ಸಹೃದಯತೆ ಕಳೆದುಕೊಳ್ಳುತ್ತಿದ್ದೇವೆ. ಓದು, ಅನುವಾದ, ಚಿಂತನೆ ಇವೆಲ್ಲ ಹವ್ಯಾಸವೂ ಅಲ್ಲ ಮನೋರಂಜನೆಯೂ ಅಲ್ಲ. ಸಾಹಿತ್ಯ ಎನ್ನುವುದು ಜೀವನ ಕ್ರಮ, ಬರಹದ ಮೂಲಕ ದಾಟಿಕೊಳ್ಳುವ ಮೌಲ್ಯವಲ್ಲ. ಹಾಗಾಗಿ ಇಂದಿನ ‘Glamour of Literature’ ಅನ್ನು ಹಳೆಯ ಲೋಕದ ‘Spirit of Literature’ನೊಂದಿಗೆ, ಹೊಸಲೋಕದ ಪರಿಕರಗಳನ್ನು ಬಳಸಿಕೊಂಡು ಚಾಲ್ತಿಗೆ ತರಬೇಕು.’
ದೀಪಾ ಗಣೇಶ್, ಬಹುವಚನ ಪ್ರಕಾಶನ, ಬೆಂಗಳೂರು

ಸಮಾನ ಅಭಿರುಚಿ, ಸಮಾನ ಮನಸ್ಕ ಸ್ನೇಹಿತರೊಂದಿಗೆ ಪತ್ರಕರ್ತೆ, ಅನುವಾದಕಿ ದೀಪಾ ಗಣೇಶ್ ಅವರು ವಿಶೇಷ ಪ್ರಯತ್ನಕ್ಕೆ ತೆರೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರೊಂದಿಗೆ ಮಾತುಕತೆ. 

*

ಬಹುವಚನ; ಪ್ರಕಾಶನಕ್ಕೆ ಯಾಕೆ ಈ ಹೆಸರನ್ನಿಡಬೇಕು ಎನ್ನಿಸಿತು?
ವಚನ ಅಂದರೆ ಮಾತೂ ಹೌದು, ಆಣೆಯೂ ಹೌದು. ಬಹುಭಾಷಾ ದೇಶವಾದ ಭಾರತದ ಸಾಹಿತ್ಯದ ಕನ್ನಡಿಯಾಗಬೇಕೆಂದೂ ಮತ್ತು ಕನ್ನಡದ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕೆಂಬ ಸ್ನೇಹಿತರ ನಡುವೆ ಆದ ಒಪ್ಪಂದವನ್ನೂ ಎತ್ತಿ ಹಿಡಿಯುವ ಹೆಸರು ‘ಬಹುವಚನ’ ಎನಿಸಿತು. ಬಹುಬಗೆಯ ಮಾತಿನ, ಸಂಸ್ಕೃತಿಯ, ಓದಿನ ಕನ್ನಡ ಜಗತ್ತು ಹಾಗೂ ಭಾರತೀಯ ಜಗತ್ತು ಇವೆರಡನ್ನೂ ಬೆಸೆಯಬೇಕು ಎನ್ನುವ ಉದ್ದೇಶ ನಮಗಿದ್ದಿದ್ದರಿಂದ ಈ ಹೆಸರು ಸೂಕ್ತ ಎನಿಸಿತು. ಕನ್ನಡ ದೇಶದ, ಕನ್ನಡ ಭಾಷೆಯ, ಕನ್ನಡ ಸಾಹಿತ್ಯದ ದಿಕ್ಕು-ದೆಸೆಗಳನ್ನು ಬದಲಾಯಿಸಿದ ವಚನ ಚಳುವಳಿಯೂ ನಮ್ಮ ಸ್ಮೃತಿಯಲ್ಲಿತ್ತು. ಕನ್ನಡದ ಕಿಟಕಿಯ ಮೂಲಕ ಉತ್ಕೃಷ್ಟ ಜ್ಞಾನವೆಲ್ಲವೂ ಹರಿದು ಬರಲಿ ಎನ್ನುವ ಭಾವ ನಮ್ಮಲ್ಲಿದ್ದುದರಿಂದ, ಬಹುವಚನ. ರವಿಕುಮಾರ ಕಾಶಿಯವರು ಪ್ರಕಾಶನದ ಲಾಂಛನ ಮಾಡಿದ್ದಾರೆ.

ಪ್ರಕಾಶನದ ಉದ್ದೇಶ, ವೈಶಿಷ್ಟ್ಯ ಇತರೇ ಪ್ರಕಾಶನಗಳಿಗಿಂತ ಹೇಗೆ ಭಿನ್ನ?
ಈ ಪ್ರಕಾಶನದ ಕನಸು ಕಾಣುತ್ತಾ ಸುಮಾರು ವರ್ಷಗಳೇ ಸಂದವು. ನಾವೆಲ್ಲರೂ ನಮ್ಮ ನಮ್ಮ ಕಾರ್ಯಕ್ಷೇತ್ರಗಳಲ್ಲಿ, ಇತರ ಜವಾಬ್ದಾರಿಗಳಲ್ಲಿ ತೊಡಗಿಕೊಂಡಿದ್ದರಿಂದ ಇದನ್ನು ಮುಂದುವರೆಸಲು ಸಾಧ್ಯವಾಗಿರಲಿಲ್ಲ. ಈಗಾಗಲೇ ನಾನು ಹೇಳಿರುವ ಹಾಗೆ ನಾವು ಕನ್ನಡದ ಕಣ್ಣಿನ ಮೂಲಕ ಈ ಲೋಕವನ್ನು ಕಾಣಬೇಕು ಎಂದುಕೊಂಡಿದ್ದರಿಂದ, ಅನುವಾದ ನಮ್ಮ ಕೇಂದ್ರಬಿಂದು. ನಮ್ಮ ಕನಸು ನನಸಾಗುವ ಈ ವೇಳೆಯಲ್ಲಿ ಅನೇಕ ಪ್ರಕಾಶಕರು ಬೇರೆ ಪುಸ್ತಕಗಳ ಜೊತೆಗೆ ಅನುವಾದಗಳನ್ನೂ ಪ್ರಕಟಿಸುತ್ತಿದ್ದಾರೆ. ಹಾಗಾಗಿ ನಾವು ಮೊದಲಿಗರಲ್ಲ. ನಮ್ಮ ಉದ್ದೇಶ ಅತ್ಯುತ್ತಮ ಅನುವಾದಗಳನ್ನು ತರುವುದು ಮಾತ್ರವಲ್ಲದೇ, ಒಂದು ಜಿಜ್ಞಾಸಾ ಸಂಸ್ಕೃತಿಯನ್ನೂ ಬೆಳೆಸಬೇಕೆಂಬುದು. ಭಾಷಾ ಪ್ರಯೋಗದ ಬಗ್ಗೆ, ಅನುವಾದ ಸಂಸ್ಕೃತಿಯ ಬಗ್ಗೆ, ಸಾಹಿತ್ಯದ ಬಗ್ಗೆ, ಪಠ್ಯಗಳ ಆಯ್ಕೆಯ ಬಗ್ಗೆ. ಈ ಎಲ್ಲದರ ಬಗ್ಗೆಯೂ ಆಲೋಚಿಸುತ್ತಾ, ಬೇರೆ ಸಂಸ್ಕೃತಿಗಳ ಸಾಮಾಜಿಕ, ರಾಜಕೀಯ ಹಾಗೂ ತಾತ್ವಿಕ ದರ್ಶನಗಳನ್ನು ಪಡೆಯಬೇಕು, ಇವುಗಳನ್ನು ಪಡೆಯುತ್ತಲೇ ನಮ್ಮ ‘ಭಾವಿಸಿದ ಜಗತ್ತಿನ’ ವ್ಯಾಪ್ತಿ ಹೆಚ್ಚಿಸಬೇಕು, ಇದು ಇಂದಿನ ಭಾರತಕ್ಕೆ ಅತ್ಯಗತ್ಯ ಎನ್ನುವ ಅನೇಕ ವಿಚಾರಗಳು ನಮ್ಮ ಮನಸ್ಸುಗಳನ್ನು ಹಾದಿವೆ. ಈ ನಮ್ಮ ಕಾಣುವಿಕೆಯಲ್ಲಿ ಪ್ರಬುದ್ಧರಲ್ಲದೇ ಕಿರಿಯರೂ ಸೇರಿದ್ದಾರೆ. ಹಾಗಾಗಿ ಮುಂಬರುವ ದಿನಗಳಲ್ಲಿ ಆ ದಿಕ್ಕಿನಲ್ಲೂ ಕೆಲಸ ಮಾಡಬೇಕು.

ಮುದ್ರಣಕ್ಕಷ್ಟೇ ಇದು ಸೀಮಿತವಾ? ebook, audio book ಕೂಡ ಲಭ್ಯವಾ?
ಬಹುವಚನದ ಪುಸ್ತಕಗಳು ebook ಆಗಿಯೂ ಲಭ್ಯವಾಗಲಿದೆ. ನಮ್ಮೆಲ್ಲ ಪುಸ್ತಕಗಳ ebook ಅಕ್ಷರ ಪ್ರಕಾಶನ ಮಾಡುತ್ತದೆ. ಅದು ಹಲವು ಜಾಲತಾಣಗಳಲ್ಲಿಯೂ ದೊರೆಯುತ್ತದೆ.

ನಿಮ್ಮ ಓದುಗರು ಯಾರು? ಹವ್ಯಾಸ ಮತ್ತು ಮನೋರಂಜನೆಯ ವ್ಯಾಖ್ಯಾನಗಳು ಪುನರ್ನವೀಕರಣಗೊಳ್ಳುತ್ತಲೇ ಇರುವ ಸಂದರ್ಭದಲ್ಲಿ ಸಾಹಿತ್ಯದ ಓದು ಸವಾಲಿನದು ಎನ್ನಿಸುತ್ತಿಲ್ಲವೆ?
ಅನುವಾದ ಇಂದಿನದಲ್ಲ, ನಮ್ಮ ದೇಶದ ಶ್ರೇಷ್ಠ ಚಿಂತಕರು ಅನುವಾದದ ಬಗ್ಗೆ ಸುದೀರ್ಘವಾಗಿ ಬರೆದಿದ್ದಾರೆ. ಶ್ರೀ ಅರವಿಂದರಿಂದ ಹಿಡಿದು ಬಿಎಂಶ್ರೀ, ಕುವೆಂಪು, ಜಿಎಸ್ಎಸ್ ಅವರ ವರೆಗೂ, ಎ.ಕೆ. ರಾಮಾನುಜನ್, ಕೆ.ವಿ. ಸುಬ್ಬಣ್ಣ, ಯು.ಆರ್. ಅನಂತಮೂರ್ತಿ, ಲಂಕೇಶ್, ತೇಜಸ್ವಿ ಅವರನ್ನೂ ಒಳಗೊಂಡಂತೆ ಅನೇಕರು ದುಡಿದ ಕ್ಷೇತ್ರ. ಆದರೆ ಇಂದು, ಸಾಹಿತ್ಯ ಎನ್ನುವುದು ಜಾಗತಿಕ ಮಾರುಕಟ್ಟೆಯಾದ ನಂತರ, ಅನುವಾದ ದೊಡ್ಡ ವ್ಯಾಪಾರವಾಗಿದೆ. ಯಾವುದು ಶ್ರೇಷ್ಠ, ಯಾವುದು ನಿಕೃಷ್ಟ ಎಂದು Global Corporations ನಿರ್ಧರಿಸುತ್ತಿವೆ. ಓದುಗರಿಗೆ ಯಾವ ಪುಸ್ತಕವನ್ನು ಓದಬೇಕು ಎನ್ನುವುದನ್ನೂ ಇವೇ ನಿರ್ಧರಿಸುತ್ತಿವೆ, ಹೇಳುತ್ತಿವೆ. ಹಾಗಾಗಿ ಪ್ರಚಾರಕ್ಕೆ ಬಾರದ, ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗದ ಸಾಹಿತ್ಯ ಅಥವಾ ಲೇಖಕ, ಯಾವ ಪ್ರಶಸ್ತಿಗೂ ಅರ್ಜಿ ಹಾಕದೇ, ದೇಶ ವಿದೇಶಗಳ ಪ್ರಶಸ್ತಿ ಪಡೆಯದ ಲೇಖಕಕರನ್ನು ನಾವು ಗುರುತಿಸುವ ಸಹೃದಯತೆ ಕಳೆದುಕೊಳ್ಳುತ್ತಿದ್ದೇವೆ. ಓದು, ಅನುವಾದ, ಚಿಂತನೆ ಇವೆಲ್ಲ ಹವ್ಯಾಸವೂ ಅಲ್ಲ ಮನೋರಂಜನೆಯೂ ಅಲ್ಲ. ಸಾಹಿತ್ಯ ಒಂದು ಜೀವನ ಕ್ರಮ, ಬರಹದ ಮೂಲಕ ದಾಟಿಕೊಳ್ಳುವ ಮೌಲ್ಯವಲ್ಲ. ನಮ್ಮ ಅನೇಕ ಹಿರಿಯ ಸಾಹಿತಿಗಳು ಅಂತೆಯೇ ಬದುಕಿದರು- ಟಿಎಸ್ ವೆಂಕಣ್ಣಯ್ಯ, ಪುತಿನ, ಗೌರೀಶ ಕಾಯ್ಕಿಣಿ, ನಂಜನಗೂಡು ತಿರುಮಲಾಂಬಾ, ಕಲ್ಯಾಣಮ್ಮ… ಇವರೆಲ್ಲಾ ನಮಗೆ ದಾರಿದೀಪ. ಹಾಗಾಗಿ ಇಂದಿನ ‘Glamour of Literature’ ಅನ್ನು ಹಳೆಯ ಲೋಕದ ‘Spirit of Literature’ನೊಂದಿಗೆ, ಹೊಸಲೋಕದ ಪರಿಕರಗಳನ್ನು ಬಳಸಿಕೊಂಡು ಚಾಲ್ತಿಗೆ ತರಬೇಕು. ನಮ್ಮ ಓದುಗರು ಇಲ್ಲೇ ನಮ್ಮ ನಡುವೆಯೇ ಇದ್ದಾರೆ, ಅವರನ್ನು ನಾವು ಕಾಣಬೇಕು.

an interview with Journalist Publisher Deepa Ganesh about Bahuvachana Publications Bengaluru

ವಿದೇಶಿ ಭಾಷೆಯ ಕೃತಿಗಳು ಅನುವಾದಗೊಳ್ಳುವುದು ಇಂಗ್ಲಿಷಿನ ಮೂಲಕವೇ ಹೊರತು ಮೂಲಕೃತಿಗಳಿಂದ ಅಲ್ಲ. ಹೀಗಿರುವಾಗ ಒಂದು ಕೃತಿ ಅನುವಾದಗೊಳ್ಳುವ ಪ್ರಕ್ರಿಯೆಯಲ್ಲಿ ತನ್ನ ಪರಿಮಳವನ್ನು ಎರಡು ಹಂತಗಳಲ್ಲಿ ಬಿಟ್ಟುಕೊಟ್ಟಿರುವ ಸಾಧ್ಯತೆ ಇರುತ್ತದೆ. ಹಾಗಾಗಿ ಕನ್ನಡದ ಕೆಲ ಓದುಗರು ಇಂಗ್ಲಿಷಿನಲ್ಲಿಯೇ ಓದಲು ಇಷ್ಟಪಡುತ್ತಾರೆ. ಆದ್ದರಿಂದ ಅನುವಾದ ಯಾರಿಗಾಗಿ, ಯಾಕೆ ಬೇಕು, ಇದರ ಪ್ರಸ್ತುತತೆಯ ಬಗ್ಗೆ ತಿಳಿಸಿ.

ಇಲ್ಲ ಹಾಗೇನಿಲ್ಲ. ನಮ್ಮಲ್ಲಿ ಗ್ರೀಕ್, ಫ್ರೆಂಚ್ ತಿಳಿದಿರುವ ಅನೇಕ ವಿದ್ವಾಂಸರಿದ್ದರು. ಗೋವಿಂದ್ ಪೈಗಳು ಗ್ರೀಕ್ ಬಲ್ಲವರಾಗಿದ್ದರು. ಇತ್ತೀಚಿನ ವರ್ಷಗಳಲ್ಲಿ ಡಾ. ವಿಜಯಾ ಗುತ್ತಲ ಅವರು ದೊಡ್ಡ ಗ್ರೀಕ್ ವಿದ್ವಾಂಸರು, ಅನುವಾದಕರು. ಇದು ವಿದೇಶಿ ಭಾಷೆಗಳ ವಿಷಯವಾದರೆ, ದೇಶ ಭಾಷೆಗಳ ಕಥೆಯೂ ಹೀಗೇ ಇದೆ. ಅಹೋಬಲ ಶಂಕರ ಮತ್ತು ಹೆಚ್. ವಿ. ಸಾವಿತ್ರಮ್ಮನವರು ಬೆಂಗಾಲಿ ಸಾಹಿತ್ಯವನ್ನು ಕನ್ನಡಕ್ಕೆ ತಂದ ಮೊದಲಿಗರು. ಮಾಣಿಕ್ ಬ್ಯಾನರ್ಜಿ, ಬಿಭೂತಿಭೂಷಣ್ ಬಂದೋಪಾಧ್ಯಾಯ, ರವೀಂದ್ರನಾಥ ಟಾಗೋರ್ ಮುಂತಾದ ಲೇಖಕರನ್ನು ಮೂಲದಿಂದಲೇ ಅನುವಾದಿಸಿದ ಮಹನೀಯರು. ಇಂದು ಇಂಗ್ಲಿಷ್ ಭಾಷೆಯು ಜಗತ್ತಿನ Lingua Franca ಆಗಿರುವ ಹೊತ್ತಿಗೆ ನಮಗೆ ಎಲ್ಲವೂ ಇಂಗ್ಲಿಷ್​ಮಯವಾಗಿಯೇ, ಇಂಗ್ಲಿಷ್ ಮೂಲಕವೇ ಕಾಣುವುದು ಸಹಜ. ಆದರೆ ಇಂಗ್ಲಿಷಿಗೆ ಅನುವಾದವಾದ ಎಷ್ಟೋ ಕೃತಿಗಳು, Twice removed ಆಗಿರುವುದೂ ನಿಜ. ರಶಿಯನ್​ನಿಂದ ಪೋಲಿಷ್​ಗೂ, ಪೋಲಿಷ್​ನಿಂದ ಫ್ರೆಂಚ್​ಗೂ ನಂತರ ಇಂಗ್ಲಿಷಿಗೆ ಅನುವಾದಗೊಂಡ ಅನೇಕ ಉದಾಹರಣೆಗಳಿವೆ. ಇದು ಒಂದು ಭಾಗವಾದರೆ, ಇಂಗ್ಲಿಷ್ ಬಾರದ, ಬಂದರೂ ಅದು ಅವರ ಅನುಭವದ ಭಾಷೆಯಲ್ಲದ ಅನೇಕ ಓದುಗರಿದ್ದಾರೆ. ಕನ್ನಡ ಅನುವಾದಗಳು ಅವರಿಗೆ. ಅಥೆಂಟಿಸಿಟಿ ಎನ್ನುವುದು ಸಾಹಿತ್ಯದಲ್ಲಿ, ಅನುವಾದದಲ್ಲಿ ದೊಡ್ಡ ಪ್ರಶ್ನೆ. ಕವಾಬಾಟ ಅಂತ ದೊಡ್ಡ ಜಪಾನೀ ಲೇಖಕನ ಕಥೆಗಳು ಅನುವಾದಗೊಂಡಾಗ ಇಂಗ್ಲಿಷಿಗೆ ಎಷ್ಟು ದೂರವೋ ಕನ್ನಡಕ್ಕೂ ಅಷ್ಟೇ ದೂರ. ಅಂತೆಯೇ, ಇಂಗ್ಲಿಷಿಗೆ ಎಷ್ಟು ಹತ್ತಿರವೋ ಕನ್ನಡಕ್ಕೂ ಅಷ್ಟೇ ಹತ್ತಿರ. ಭಾಷೆಯೇ ಭಾವ, ಹಾಗಾಗಿ ಈ ಹತ್ತಿರ ದೂರಗಳನ್ನು ನಿರ್ಧರಿಸುವುದು ಓದುಗನ ಭಾವಜಗತ್ತು.

ನಾವು ಊಹಿಸಲಾರದ ವ್ಯಾಪ್ತಿ ಪಡೆದಿರುವ ಇಂಗ್ಲಿಷ್ ಮಾರುಕಟ್ಟೆ, ಇಂಗ್ಲಿಷ್ ಅನುವಾದವೇ ಶ್ರೇಷ್ಠ ಎಂದು ಹೇಳುತ್ತಿರುತ್ತದೆ, Most authentic ಎಂದು ಸ್ಥಾಪಿಸಿಕೊಳ್ಳುತ್ತಿರುತ್ತದೆ. ಇಂಗ್ಲಿಷ್ ಭಾಷೆಗೆ ಅಪಾರ ವಿಸ್ತಾರವಿರುವುದರಿಂದ ಅದಕ್ಕೆ ಹೆಚ್ಚು ಅಭಿವ್ಯಕ್ತಿ ಸಾಮರ್ಥ್ಯ ಇರಬಹುದೇನೋ ಎಂದು ಅನಿಸಿದರೂ ಕನ್ನಡ ಓದುಗನಿಗೆ Tolstoy ಅನ್ನು ಕನ್ನಡದಲ್ಲಿ ಓದುವ ಸುಖವೇ ದೊಡ್ಡದು.

ನಿಮ್ಮ ಸಂಪಾದಕೀಯ ಬಳಗದ ಬಗ್ಗೆ ತಿಳಿಸಿ.
ಜೊತೆಗೆ ನಿಂತಿರುವ ಸ್ನೇಹಿತರ ಬಳಗ ದೊಡ್ಡದು. ಕನ್ನಡ ಲೇಖಕರಾದ ಅಕ್ಷರ ಕೆ.ವಿ. ಮತ್ತು ವಿವೇಕ ಶಾನಭಾಗರೊಂದಿಗೆ ಸಲಹಾ ಸಮಿತಿಯಲ್ಲಿ ಭಾರತದ ಅನೇಕ ಭಾಷೆಗಳ ಲೇಖಕರಿದ್ದಾರೆ. ಪೆರುಮಾಳ್ ಮುರುಗನ್, ಕೆಆರ್ ಮೀರಾ… ಹೀಗೆ ಅನೇಕರು. ಇದರ ಉದ್ದೇಶ ವಿಭಿನ್ನ ಭಾಷಾ ಸಾಹಿತ್ಯವನ್ನು ಅವರು ನಮ್ಮ ಗಮನಕ್ಕೆ ತರುವುದಲ್ಲದೇ, ನಮಗೆ ಬರುವ ಅನೇಕ Manuscript ಗಳಿರಬಹುದು, Proposal ಗಳಿರಬಹುದು, ಇವೆಲ್ಲವನ್ನೂ ಪರಿಷ್ಕರಿಸಿ, ಯಾವುದು ಪ್ರಕಟಣೆಗೆ ಯೋಗ್ಯ ಎಂದು ನಿರ್ಧರಿಸುವಲ್ಲಿ ಸಹಾಯ ಮಾಡುತ್ತಾರೆ. ಇದು ನಾವು ಸಂಪೂರ್ಣ ಅರಿವಿನಿಂದ ತೆಗೆದುಕೊಂಡ ನಿರ್ಧಾರ. ಆಯ್ಕೆಗಳು ವ್ಯಕ್ತಿಗತವಾದ ಕೂಡಲೇ ಬೇರೆಬೇರೆ ರೀತಿಯ ಒತ್ತಡಗಳು, ಪೂರ್ವಗ್ರಹಗಳು ತಲೆದೋರಬಹುದು. ಅಥವಾ ನಮ್ಮ ಸೀಮಿತ ಜ್ಞಾನದಿಂದಲೂ ತಪ್ಪುಗಳಾಗಬಹುದು. ಸದ್ಯ ನಾಲ್ಕು ಪುಸ್ತಕಗಳೊಂದಿಗೆ ನಮ್ಮ ಈ ಪ್ರಯಾಣ ಆರಂಭವಾಗಿದೆ. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚು ಅರ್ಥಪೂರ್ಣ ಕೆಲಸಗಳು ನಮ್ಮಿಂದಾಗಲೀ ಎನ್ನುವ ನಮ್ರ ಭಾವ ನಮ್ಮದು.

*

‘ಬಹುವಚನ’ದೊಂದಿಗೆ ಸಂಪರ್ಕದಲ್ಲಿರಲು : [email protected]
Facebook : https://www.facebook.com/Bahuvachana-100641469079045
ಫೋನ್ : 6362588659

ಇದನ್ನೂ ಓದಿ : Bookmark: ‘ಪುಸ್ತಕೋದ್ಯಮ ಪೂರ್ಣಪ್ರಮಾಣದ ಉದ್ಯಮವಾಗಿಲ್ಲ ಎನ್ನುವುದು ಅಭಿನಂದನೀಯ’

TV9 Kannada


Leave a Reply

Your email address will not be published. Required fields are marked *