ಭಾರತದಲ್ಲಿ ಮತ್ತೆ ಶುರುವಾಗುತ್ತಾ ಟಿಕ್​ಟಾಕ್ ಹವಾ?

ಭಾರತದಲ್ಲಿ ಮತ್ತೆ ಶುರುವಾಗುತ್ತಾ ಟಿಕ್​ಟಾಕ್ ಹವಾ?

ಅದೊಂದು ಕಿರು ವಿಡಿಯೋ ಆ್ಯಪ್ ಆದ್ರೂ ಅದು ಸೃಷ್ಟಿಸಿದ ಸಂಚಲನ ಅಷ್ಟಿಷ್ಟಲ್ಲ. ಕೋಟಿ ಕೋಟಿ ಫಾಲೋವರ್ಸ್​ ಅದಕ್ಕಿದ್ರು. ಯಾವುದೋ ಹಳ್ಳಿಯ ಮೂಲೆಯಲ್ಲಿದ್ದ ಸಾಮಾನ್ಯ ವ್ಯಕ್ತಿ ರಾತ್ರಿ ಬೆಳಗಾಗುವುದರೊಳಗೆ ಸ್ಟಾರ್ ಆಗಿ ಬಿಡ್ತಿದ್ದ. ಅಂತಹ ಒಂದು ಆ್ಯಪ್ಗೆ ಭಾರತ, ಚೀನಾ ನಡುವಿನ ಬಿಕ್ಕಟ್ಟಿನಿಂದ ಬ್ಯಾನ್ ಬರೆ ಬಿದ್ದಿತ್ತು. ಇದೀಗ ಮತ್ತೆ ಆ ಆ್ಯಪ್ ಸದ್ದು ಮಾಡೋ ಸೂಚನೆ ಸಿಕ್ಕಿದೆ.

ಭಾರತ, ಚೀನಾ ಗಡಿಯಲ್ಲಿ ಯುದ್ಧ ವಿಮಾನಗಳ ಹಾರಾಟದ ಸದ್ದು. ಭಾರೀ ಸಂಖ್ಯೆಯ ಸೈನಿಕರ ಜಮಾವಣೆ. ಆಗಾಗ ಎರಡೂ ರಾಷ್ಟ್ರಗಳ ಸೈನಿಕರ ನಡುವೆ ಘರ್ಷಣೆ. ಮುಷ್ಟಿಕಾಳಗದಲ್ಲಿ ಭಾರತದ 20 ಸೈನಿಕರ ವೀರ ಮರಣ, ಚೀನಾದಲ್ಲಿಯೂ ಅಷ್ಟೇ ಸೈನಿಕರ ನಿಧನದ ವದಂತಿ. ಈ ಎಲ್ಲಾ ಘಟನೆಯಿಂದ ಇನ್ನೇನು ಯುದ್ಧವಾಗಿಯೇ ಬಿಡ್ತು ಅನ್ನೋ ಸನ್ನಿವೇಶ ಸೃಷ್ಟಿಯಾಗಿತ್ತು. ಇದು ಸಹಜವಾಗಿ ಭಾರತದಲ್ಲಿ ಚೀನಾ ವಿರೋಧಿ ಅಲೆಯನ್ನ ಬಿರುಗಾಳಿಯಂತೆ ಹಬ್ಬಿಸಿತ್ತು. ಹೇಗಾದ್ರೂ ಮಾಡಿ ಚೀನಾಗೆ ಬುದ್ಧಿ ಕಲಿಸಬೇಕು ಅಂತ ಭಾರತ ಪಣತೊಟ್ಟಿತ್ತು. ಆಗ ಆಗಿದ್ದೇ ನೂರಾರು ಚೀನಾ ಆ್ಯಪ್ಗಳ ಬ್ಯಾನ್. ಆ ಸಾಲಿನಲ್ಲಿದ್ದಿದ್ದೇ ಟಿಕ್​ಟಾಕ್. ಟಿಕ್​​ಟಾಕ್​ ಬ್ಯಾನ್​ ಆಗ್ತಿದ್ದಂಗೆ ಡಿಪ್ರೆಷನ್​ಗೆ ಹೋದವರು ಎಷ್ಟೋ ಜನ, ಪ್ರಾಣವನ್ನೇ ಬಿಟ್ಟ ಯುವಕರ ಕಥೆಗಳೂ ಇವೆ.. ಆದ್ರೆ, ಈಗ ಟಿಕ್​ಟಾಕ್​ ಅನ್ನ ಮತ್ತೆ ಇನ್​​ಸ್ಟಾಲ್​ ಮಾಡಿಕೊಳ್ಳೋ ಎಲ್ಲಾ ಸೂಚನೆಗಳೂ ಸಿಕ್ಕಿವೆ..

ಭಾರತದಲ್ಲಿ ಮತ್ತೆ ಶುರುವಾಗುತ್ತಾ ಟಿಕ್​ಟಾಕ್ ಹವಾ?

ಚೀನಾದ ಸಾಲು ಸಾಲು ಆ್ಯಪ್ಗಳು ಬ್ಯಾನ್ ಆದರೂ ಜನರು ತಲೆ ಕೆಡಿಸಿಕೊಂಡಿರಲಿಲ್ಲ. ಆದ್ರೆ, ಟಿಕ್​ಟಾಕ್ ಬ್ಯಾನ್ ಜನರಲ್ಲಿ ಗೊಂದಲ ಸೃಷ್ಟಿಸಿತ್ತು. ಒಂದು ಕಡೆ ಚೀನಾ ಆ್ಯಪ್ಗಳ ಬ್ಯಾನ್ ಮಾಡಿದ್ದಕ್ಕೆ ಜನರಲ್ಲಿ ಖುಷಿ ಇತ್ತು. ಮತ್ತೊಂದೆಡೆ ಟಿಕ್ ಟಾಕ್ ಬ್ಯಾನ್ ಬೇಸರ ತರಿಸಿತ್ತು. ಆ ಆ್ಯಪ್ ಚೀನಾದ್ದು ಆಗಿರಬಾರದಿತ್ತು ಅಂಥ ಅಂದುಕೊಳ್ತಾ ಇದ್ರು ಜನ. ಯಾಕೆಂದ್ರೆ ಅದು ಜನರಿಗೆ ಅಷ್ಟೊಂದು ಹತ್ತಿರವಾಗಿ ಬಿಟ್ಟಿತ್ತು. ಅದರ ಮೋಡಿಗೆ ಚಿಕ್ಕಮಕ್ಕಳಿಂದ ಹಿಡಿದು ವೃದ್ಧರವರೆಗೂ ಮರುಳಾಗಿ ಬಿಟ್ಟಿದ್ರು. ಆದ್ರೆ, ಇದೀಗ ಮತ್ತೆ ಟಿಕ್​ಟಾಕ್​ ಭಾರತದಲ್ಲಿ ಆರಂಭವಾಗುತ್ತೆ ಅನ್ನೋ ವಿಷಯ ಭಾರೀ ಚರ್ಚೆ ಹುಟ್ಟುಹಾಕಿದೆ.

blank

ಹೊಸ ಐಟಿ ನಿಯಮ ಪಾಲಿಸುತ್ತೇವೆ ಅಂದ ಟಿಕ್​ಟಾಕ್!

ಭಾರತದಲ್ಲಿ ಸಾಮಾಜಿಕ ಜಾಲತಾಣಗಳ ನಿಯಂತ್ರಣಕ್ಕಾಗಿಯೇ ಹೊಸ ಐಟಿ ನಿಯಮ ಜಾರಿಗೆ ಬಂದಿದೆ. ಪ್ರತಿಯೊಂದು ಸಾಮಾಜಿಕ ಜಾಲತಾಣವೂ ಅದನ್ನು ಪಾಲಿಸಲೇಬೇಕು. ಒಮ್ಮೆ ಪಾಲಿಸಿಲ್ಲ ಅಂದ್ರೆ ಗೇಟ್​ಪಾಸ್​​ ಗ್ಯಾರಂಟಿ. ಇದೀಗ ಇದೇ ವಿಚಾರವಾಗಿ ಟಿಕ್ಟಾಕ್ ಭಾರತದ ಐಟಿ ಸಚಿವಾಲಯ ಮತ್ತು ಪ್ರಧಾನಿ ಕಾರ್ಯಾಲಯದ ಜೊತೆ ಸಂಪರ್ಕದಲ್ಲಿದೆ. ತಾವು ಭಾರತದಲ್ಲಿ ಜಾರಿಗೆ ತಂದಿರೋ ಹೊಸ ಐಟಿ ನಿಯಮವನ್ನು ಪಾಲಿಸುತ್ತೇವೆ, ತಮಗೆ ಅವಕಾಶ ನೀಡಿ ಎಂದು ಕೇಳಿಕೊಳ್ಳುತ್ತಿದೆ. ಅದು ಹೌದೋ ಅಲ್ಲವೋ ಅನ್ನೋದು ಕೆಲವೇ ದಿನಗಳಲ್ಲಿ ಖಚಿತವಾಗುತ್ತೆ. ಆದ್ರೆ, ಈ ವಿಷ್ಯ ಮಾತ್ರ ಜೋರಾಗಿಯೇ ಸದ್ದು ಮಾಡ್ತಾ ಇದೆ.

ಕೇಂದ್ರ ಸರ್ಕಾರ ಟಿಕ್​ಟಾಕ್​ಗೆ ಒಪ್ಪಿಗೆ ನೀಡುತ್ತಾ?
ಮತ್ತೆ ಮೋಡಿ ಮಾಡಲು ಬರುತ್ತಾ ಟಿಕ್​ಟಾಕ್?

ಕೇಂದ್ರ ಸರ್ಕಾರ ಟಿಕ್​ಟಾಕ್​ಗೆ ಒಪ್ಪಿಗೆ ನೀಡುತ್ತೋ ಇಲ್ವೋ ಅನ್ನೋದನ್ನು ಖಚಿತವಾಗಿ ಹೇಳಲಾಗದು. ಆದ್ರೆ, ಇದೇ ರೀತಿ ಬ್ಯಾನ್ ಆಗಿದ್ದ ಪಬ್ ಜಿ ಗೇಮಿಂಗ್ ಆ್ಯಪ್ ಮತ್ತೆ ಪ್ರವೇಶ ಪಡೆದಿದೆ. ಕೆಲವು ನಿರ್ಬಂಧಗಳನ್ನು ಹೇರಿ ಅವಕಾಶ ನೀಡಲಾಗಿದೆ. ಹೀಗಾಗಿ ಟಿಕ್​ಟಾಕ್​ಗೂ ಕೂಡ ಅವಕಾಶ ಸಿಕ್ಕರೂ ಅಚ್ಚರಿ ಇಲ್ಲ.

blank

ಭಾರತದಲ್ಲಿ ಟಿಕ್​ಟಾಕ್​ಗೆ ಇದ್ರು 20 ಕೋಟಿ ಗ್ರಾಹಕರು
ಭಾರತದಿಂದಲೇ ಕೋಟಿ ಕೋಟಿ ದುಡಿಯುತ್ತಿದ್ದ ಟಿಕ್​ಟಾಕ್​

ಅತ್ಯಂತ ವೇಗವಾಗಿ ಯುವಜನರನ್ನು ಆಕರ್ಷಿಸಿದ ಆ್ಯಪ್ ಅಂದ್ರೆ ಅದು ಟಿಕ್​ಟಾಕ್. ಅದರಲ್ಲಿ ಎರಡು ಮಾತಿಲ್ಲ. ಬ್ಯಾನ್ ಆಗುವ ಮುನ್ನ ಭಾರತದಲ್ಲಿ ಅದಕ್ಕೆ ಇದ್ದ ಗ್ರಾಹಕರ ಸಂಖ್ಯೆ 200 ಮಿಲಿಯನ್. ಅಂದ್ರೆ ಬರೋಬ್ಬರಿ 20 ಕೋಟಿ ಜನ. ಅದರ ವ್ಯಾಮೋಹ ಎಷ್ಟಿತ್ತು ಅನ್ನೋದನ್ನ ಅದನ್ನ ಹೊಂದಿದ್ದ ಗ್ರಾಹಕರ ಸಂಖ್ಯೆಯೇ ಹೇಳುತ್ತಿತ್ತು. ಪ್ರತಿವರ್ಷ ಭಾರತದಿಂದಲೇ ಕೋಟಿ ಕೋಟಿ ಹಣ ಟಿಕ್​ಟಾಕ್​ಗೆ ಹರಿದುಹೋಗುತ್ತಿತ್ತು. ಇದು ಪಡೆದಷ್ಟು ಜನಪ್ರಿಯತೆ ಯಾವ ತುಣುಕು ವಿಡಿಯೋ ಆ್ಯಪ್ಕೂಡ ಪಡೆದಿರಲಿಲ್ಲ.

ಟಿಕ್​ಟಾಕ್​ ಬಳಸುತ್ತಿದ್ದವರು ಬೇರೆ ಆ್ಯಪ್ಗೆ ಶಿಫ್ಟ್!

ಕಳೆದ ವರ್ಷ ಟಿಕ್ಟಾಕ್ ಬ್ಯಾನ್ ಆದ ಕೂಡ್ಲೆ ಜನ ವಿಚಲಿತರಾಗಿದ್ದಾರೆ. ಮಾಡಿರೋ ವಿಡಿಯೋ ಎಲ್ಲಾ ಹೋಯ್ತಲ್ಲ ಅಂತ ಗೋಳಾಡಿದ್ದಾರೆ. ಆದ್ರೆ, ಅದೇ ಕ್ಷಣಕ್ಕೆ ಮೋಜ್, ಜೋಶ್, ಶೇರ್ ಚಾಟ್, ಎಂಎಸ್ ಟಕಾಟಟ್​​​ನಂತಹ ಆ್ಯಪ್ಗಳು ಬಂದಿವೆ. ಟಿಕ್​ಟಾಕ್​ನಲ್ಲಿದ್ದ ಬಹುತೇಕ ಗ್ರಾಹಕರು ಇದೀಗ ಅಂತಹ ಆ್ಯಪ್ಗಳಿಗೆ ಶಿಫ್ಟ್ಆಗಿ ಬಿಟ್ಟಿದ್ದಾರೆ. ಆದರೂ, ತಾಂತ್ರಿಕವಾಗಿ ಟಿಕ್​ಟಾಕ್​ಗೆ ಯಾವ ಆ್ಯಪ್​ಕೂಡ ಸ್ಪರ್ಧೆ ನೀಡದು ಅಂತಾರೆ ಟಿಕ್​ಟಾಕ್​ ಮೋಹಿಗಳು.

blank

ಟಿಕ್​ಟಾಕ್​ನಲ್ಲಿತ್ತು ಭರ್ಜರಿ ಮನರಂಜನೆ!

ವಾಟ್ಸ್ಯಾಪ್, ಫೇಸ್ಬುಕ್ ಹೇಗೆ ಫೇಮಸ್ ಆಗಿತ್ತೋ ಅದೇ ರೀತಿ ಟಿಕ್ ಟಾಕ್ ಕೂಡ ಫೇಮಸ್ ಆಗಿತ್ತು. ಉಳಿದೆಲ್ಲಾ ಸಾಮಾಜಿಕ ಜಾಲತಾಣಕ್ಕೆ ಹೋಲಿಸಿದರೆ ಅತ್ಯಂತ ವೇಗವಾಗಿ ಬೆಳದಿದ್ದು ಟಿಕ್​ಟಾಕ್. ಅಲ್ಲಿ ಹಾಸ್ಯ ಇತ್ತು, ಅಭಿನಯಕ್ಕೆ ಅವಕಾಶ ಇತ್ತು, ಮನರಂಜನೆ ಇತ್ತು, ಜ್ಞಾನಕ್ಕೂ ದಾರಿ ಇತ್ತು. ಜಗತ್ತಿನ ಯಾವುದೇ ಮೂಲೆಯಲ್ಲಿ ಏನೇ ಘಟನೆ ಅದ್ರೂ ಕ್ಷಣಾರ್ಧದಲ್ಲೇ ಟಿಕ್​ಟಾಕ್​ ಆಗಿ ಬಿಡ್ತಾ ಇತ್ತು.

ಟಿಕ್​ಟಾಕ್​ನಲ್ಲಿ ಹುಚ್ಚಾಟವೂ ವಿಪರೀತವಾಗಿತ್ತು!

ಹೌದು, ಟಿಕ್​ಟಾಕ್​ ಮಾಡುವರಲ್ಲಿ ಹುಚ್ಚಾಟವೂ ವಿಪರೀತವಾಗಿತ್ತು. ನದಿಗೆ ಹಾರುವುದು, ಬಿಲ್ಡಿಂಗ್ ಮೇಲಿಂದ ಜಿಗಿಯುವುದು, ವಿಷದ ಹಾವಿನ ಜೊತೆ ಆಟ ಆಡುವುದು.. .ಹೀಗೆ ಒಂದಾ ಎರಡಾ, ಎಲ್ಲಾ ರೀತಿಯ ಹುಚ್ಚಾಟವೂ ಇತ್ತು. ಎಷ್ಟೋ ಜನ ಟಿಕ್​ಟಾಕ್​ ವಿಡಿಯೋ ಮಾಡುತ್ತಲೇ ಸಾವನ್ನಪ್ಪಿದ್ದಾರೆ. ತುಂಬಾ ಜನ ಟಿಕ್ ಟಾಕ್​ ಮಾಡುತ್ತಾ ಆತ್ಮಹತ್ಯೆ ಮಾಡಿಕೊಂಡ್ಡಾರೆ. ಇದೇ ಕಾರಣಕ್ಕೆ ಟಿಕ್​ಟಾಕ್​ ವಿರುದ್ಧ ಆಕ್ರೋಶವೂ ಇತ್ತು. ಇದೆಲ್ಲಾ ಕಾರಣಗಳಿಂದ ಟಿಕ್​ಟಾಕ್​ ಮತ್ತೆ ಬೇಡ ಅನ್ನುವವರೂ ಇದ್ದಾರೆ.

ಆ್ಯಪ್​ ಬ್ಯಾನ್​ ಮಾಡುಬ ಮೂಲಕ ಸರ್ಕಾರ ಚೀನಾಗೆ ಭರ್ಜರಿ ಹೊಡೆತವನ್ನೇ ನೀಡಿತ್ತು. ಆದ್ರೆ, ಈಗ ಭಾರತದ ಹೊಸ ಐಟಿ ಕಾಯ್ದೆ ಪಾಲಿಸುತ್ತೇವೆ ಅಂತ ಟಿಕ್​ಟಾಕ್​ ಬಂದಿದೆ. ಒಪ್ಪಿಗೆ ಸಿಗುತ್ತೋ ಇಲ್ವೋ ಅನ್ನೋದನ್ನು ಕಾದು ನೋಡಬೇಕಿದೆ. ಸಿಕ್ರೆ ಮತ್ತು ಕುಣಿಯೋರಿಗೆ, ಕುಣಿಸೋರಿಗೆ, ನಟಿಸೋರಿಗೆ ಹಬ್ಬವೇ ಅನ್ನೋದ್ರಲ್ಲಿ ಅನುಮಾನವಿಲ್ಲ.

The post ಭಾರತದಲ್ಲಿ ಮತ್ತೆ ಶುರುವಾಗುತ್ತಾ ಟಿಕ್​ಟಾಕ್ ಹವಾ? appeared first on News First Kannada.

Source: newsfirstlive.com

Source link