ತಂತ್ರಜ್ಞಾನದ ಮ್ಯಾಜಿಕ್: ತೋಟ ಅಷ್ಟೇ ಅಲ್ಲ ಗಡಿಯನ್ನೂ ಕಾಯುತ್ತದೆ ಈ ಡಾಗ್ ಆರ್ಮಿ

ತಂತ್ರಜ್ಞಾನದ ಮ್ಯಾಜಿಕ್: ತೋಟ ಅಷ್ಟೇ ಅಲ್ಲ ಗಡಿಯನ್ನೂ ಕಾಯುತ್ತದೆ ಈ ಡಾಗ್ ಆರ್ಮಿ

ರೋಬೋಟ್ ತಂತ್ರಜ್ಞಾನ ಒಂದಲ್ಲ ಒಂದು ಅಚ್ಚರಿಯನ್ನ ಹುಟ್ಟು ಹಾಕುತ್ತಲೇ ಇರುತ್ತೆ. ರೋಬೋ ಸೇವಕನಿಂದ ಹಿಡಿದು ವೈದ್ಯ ವೃತ್ತಿ ಮಾಡುವವರೆಗೂ ಮುಂದುವರೆದಿದೆ. ಈ ನಡುವೆ, ಇಲ್ಲೊಂದು ಸ್ಪೆಷಲ್ ರೋಬೋ ಎಂಟ್ರಿಯಾಗಿದೆ.

ಚೀನಾದಲ್ಲಿ ಗುಂಪು ಗುಂಪಾಗಿರೋ ರೋಬೋ ಶ್ವಾನ ಸೈನ್ಯದ ವಿಡಿಯೋ ಇತ್ತಿಚೆಗೆ ವೈರಲ್ ಆಗಿತ್ತು. ಇದನ್ನ ಚೀನಾದ ಡಾಗ್ ಆರ್ಮಿ ಎಂದೆ ಕರೆಯಲಾಗುತ್ತಿದೆ. ಮನೆಯಲ್ಲಿ ಒಂದು ನಾಯಿ ಸಾಕಿದರೆ ಅದು ಏನೇನೆಲ್ಲ ಕಾರ್ಯ ನಿರ್ವಹಿಸಬಹುದೋ ಅದನ್ನೆಲ್ಲ ಈ ರೋಬೋ ಶ್ವಾನಕ್ಕೆ ಪ್ರೋಗ್ರಾಮ್ ಮಾಡಲಾಗಿದೆ. ಇದಕ್ಕೆ ಬೊಗಳಲು ಹೇಳಿದರೆ ಮಾತ್ರ ಬೊಗಳುತ್ತೆ. ಮನೆಯ ಕೆಲಸವನ್ನು ಹೇಳಿದರೆ ಆ ಕೆಲಸವನ್ನು ಸ್ವತಃ ನಿರ್ವಹಿಸುತ್ತದೆ. ಇಷ್ಟಲ್ಲದೇ ಮನೆಯಲ್ಲಿ ಕುಳಿತು ಬೋರ್ ಆದಾಗ, ಡ್ಯಾನ್ಸ್ ಮಾಡಿ ಸಂತೋಷ ಪಡಿಸುತ್ತದೆ. ಇದನ್ನೆಲ್ಲ ಮೀರಿ ಈ ರೋಬೋ ಶ್ವಾನ, ಮಾನವರಂತೆ ಮಾತನ್ನು ಸಹ ಆಡುತ್ತೆ.

ಬಸ್ಟನ್ ಡೈನಾಮಿಕ್ಸ್ ಕಂಪನಿ ಸಿದ್ಧ ಪಡಿಸಿದೆ ವಿಶೇಷ ರೋಬೋ ಡಾಗ್

ಈ ರೀತಿಯ ಶ್ವಾನವನ್ನ ಮೊದಲು ಡಿಸೈನ್ ಮಾಡಿದ್ದು ಬಸ್ಟನ್ ಡೈನಮಿಕ್ಸ್ ಎನ್ನುವ ಕಂಪನಿ. ಇದನ್ನು ಕಣ್ಣು ಕಾಣದವರಿಗಾಗಿ ಡಿಸೈನ್ ಮಾಡಲಾಗಿತ್ತು. ಈ ಶ್ವಾನದ ಸಹಾಯದೊಂದಿಗೆ ಅಂಧರು ಎಲ್ಲಾ ಕಡೆ ನಿರಾತಂಕವಾಗಿ ಓಡಾಡಬಹುದಿತ್ತು. ಅಮೆರಿಕದಲ್ಲಿ ಇಂತಹ ರೊಬೋಟಿಕ್ ಶ್ವಾನಗಳು ಮೊದಲು ಬಳಕೆಗೆ ಬಂದಿದ್ವು. ಆದರೆ, ಇದರ ಬೆಲೆ ಮಾತ್ರ ತುಂಬಾ ದುಬಾರಿ.

ತೋಟದ ಕಾವಲಿನಿಂದ ಹಿಡಿದು ಎಲ್ಲ ಕೆಲಸ ಮಾಡುವ ಶ್ವಾನ

ಈ ರೋಬೋ ಶ್ವಾನವನ್ನು ಇನ್ನೂ ಯಾವ ಯಾವ ಕೆಲಸಕ್ಕೆ ಬಳಸ್ತಾರೆ ಅಂತ ನೋಡೋದಾದ್ರೆ, ಇಂತಹ ಕೆಲಸ ಅನ್ನೊದೇ ಇಲ್ಲ. ಮನೆಯ ಕ್ಲೀನಿಂಗ್ ನಿಂದ ಹಿಡಿದು, ಗಾರ್ಡನಿಂಗ್ ಮಾಡಿ, ಮನೆಗೆ ಬಂದವರನ್ನು ಬಾಗಿಲು ತೆಗೆದು ಸ್ವಾಗತಿಸುತ್ತವೆ ಈ ರೋಬೋ ಡಾಗ್‌ಗಳು. ಇಂತಹ ರೊಬೊ ಶ್ವಾನಗಳನ್ನು ಹೊಲದ ಕಾವಲಿಗಾಗಿಯೂ ಬಳಸಲಾಗ್ತಿದೆ. ಮೈತುಂಬ ಕ್ಯಾಮರ ಕಣ್ಣುಗಳನ್ನು ಹೊತ್ತು ಈ ರೋಬೋ ನಾಯಿಗಳು ತರಕಾರಿ ಹಾಗೂ ಹಣ್ಣು ಬೆಳೆದ ತೋಟಗಳನ್ನು ಕಾಯುತ್ತವೆ. ಯಾವ ಪ್ರಾಣಿಗಳು ಬಂದರೂ ಫೈಟ್ ಮಾಡೋದಕ್ಕೆ ಈ ನಾಯಿ ರೆಡಿಯಾಗಿರುತ್ತೆ. ಫೈಟ್ ಮಾಡುವಾಗ ಬಿದ್ದರೂ, ಬೇರೆ ಪ್ರಾಣಿಗಳು ಕಚ್ಚಿದರೂ, ತಳ್ಳಿದರೂ, ಏನೆ ಮಾಡಿದರೂ ಈ ನಾಯಿ ಮತ್ತೆ ಮತ್ತೆ ಎದ್ದು ನಿಲ್ಲುತ್ತೆ. ಇನ್ನು ಕಳ್ಳರ ಕಾಟ ತಡೆಯಲು ಯಾವಾಗಲೂ ಕ್ಯಾಮರಾ ಕಣ್‌ ಗಾವಲಿನಲ್ಲಿ ಬ್ಯುಸಿಯಾಗಿರುತ್ತೆ.

ಜರ್ಮನ್ ಶೆಫರ್ಡ್ ಮಾಡುವ ಕೆಲಸವೂ ಈ ರೋಬೋಗೆ ಗೊತ್ತು

ಜರ್ಮನ್ ಶೆಫರ್ಡ್ ಅನ್ನೊ ಈ ಬ್ರೀಡ್ ಯಾರಿಗೆ ಗೊತ್ತಿಲ್ಲ ಹೇಳಿ. ಇದರ ಕೆಲಸವೇ ಒಂದು ಕಾಲದಲ್ಲಿ ಕುರಿಗಳನ್ನು ಕಾಯುವುದಾಗಿತ್ತು, ಆದ್ರೀಗ ಈ ನಾಯಿಯೂ ಮನೆ ಮನೆಯಲ್ಲೂ ಪ್ರೀತಿಯಿಂದ ಸಾಕೋ ಪೆಟ್‌ಗಳಲ್ಲಿ ಒಂದು. ಆದ್ರೆ ಅದರ ಕೆಲಸ ನಿರ್ವಹಿಸಲು ಇದೀಗ ರೋಬೋ ನಾಯಿ ಸಜ್ಜಾಗಿದೆ. ಕುರಿ ಕಾಯುವ ಕೆಲಸವನ್ನ ಮಾಡಲು ಸಹ ಈ ರೋಬೋ ಸಿದ್ಧವಾಗಿದೆ. ಕಾಡು ಬೆಟ್ಟ ಗುಡ್ಡ ಪ್ರದೇಶಗಳಲ್ಲಿ ಸ್ಪಾಟ್ ರೋಬೋ ನಾಯಿ ಕುರಿಗಳ ಕಾವಲು ಕಾಯ್ತಿದೆ. ಕುರಿಗಳು ಆಗ್ಗಾಗೆ ದಾರಿ ತಪ್ಪಿದಾಗ ಬೊಗಳಿ ದಾರಿ ತೋರಿಸುವ ತಂತ್ರಜ್ಞಾನದಲ್ಲೂ ಈ ರೋಬೋ ಎಕ್ಸಪರ್ಟ್. ಅದಲ್ಲದೆ ನಾಲ್ಕು ರೋಬೋಗಳು ಸೇರಿ ಭಾರೀ ಗಾತ್ರದ ಕೆಟ್ಟಿರುವ ಟ್ರಕ್ ಅನ್ನು ಎಳೆದು ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ.

ಬಾಂಬ್ ಡಿಫ್ಯೂಸ್ ಮಾಡಲು ಈ ರೋಬೋ ಡಾಗ್ ಎಕ್ಸಪರ್ಟ್
ಅಮೆರಿಕನ್ ಆರ್ಮಿಯಲ್ಲಿ ಈ ರೋಬೋ ಡಾಗ್​ಗೆ ವಿಶೇಷ ಸ್ಥಾನ

ಇದೆಲ್ಲ ಬಿಟ್ಟು ಸ್ಪಾಟ್ ಅಮೆರಿಕಾದ ಆರ್ಮಿಯನ್ನೂ ಸೇರಿದೆ. ಕೆಲವು ನಿರ್ಜನ ಪ್ರದೇಶಗಳಲ್ಲಿ, ಬಾರ್ಡರ್ ನಲ್ಲಿ ಆರ್ಮಿ ಟೀಂ ಜೊತೆ ಈ ರೋಬೋ ರಕ್ಷಣಾ ಚಟುವಟಿಕೆಯಲ್ಲಿ ತೊಡಗಿದೆ. ರಿಮೋಟ್ ಜಾಗಗಳ ಇನ್ಸ್ಪೆಕ್ಷನ್, ಕ್ಯಾಮರ ಕಣ್ಗಾವಲು, ಸ್ಥಳ ಅನ್ವೇಷಣೆ ಹಾಗೂ ನಿರಂತರ ಕಾವಲು ಕಾಯಲು ಪ್ರೋಗ್ರಾಮ್ ಮಾಡಲಾಗಿದೆ. ಅಮೆರಿಕನ್ ಆರ್ಮಿಗಾಗಿಯೇ ಮಾಡಿರುವ ಈ ರೋಬೋ ಶ್ವಾನ ಒಂದು ಸೆಕೆಂಡ್​ಗೆ 7.5 ಫೀಟ್ ಸ್ಪೀಡ್ ನಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ.

ಅಮೆರಿಕಾದ ಬಸ್ಟನ್ ಡೈನಮಿಕ್ಸ್ ತಯಾರಿಸಿದ ಇನ್ನೊಂದು ಸ್ಪೆಷಲ್ ರೋಬೋ ನಾಯಿ ಬಾಂಬ್ ಡಿಟೆಕ್ಷನ್ ಡಾಗ್. ಈ ನಾಯಿಗೆ ವಾಸನೆ ಗ್ರಹಿಸುವ ಸೆನ್ಸಾರ್ ಸಹ ಅಳವಡಿಸಲಾಗಿದೆ. ಇದಕ್ಕೆ ಬಾಂಬ್ ಡಿಟೆಕ್ಷನ್ ಹಾಗೂ ರೆಸ್ಕ್ಯೂ ಆಪರೇಷನ್ ನಲ್ಲಿ ಎಕ್ಸಪರ್ಟ್ ಪ್ರೊಗ್ರಾಮಿಂಗ್ ಮಾಡಲಾಗಿದೆ. ಅಲ್ಲದೆ ಬಾಂಬ್ ಎಲ್ಲಿದೆ ಎಂದು ಕಂಡುಹಿಡಿದ ಬಳಿಕ ತನ್ನ ರೋಬೋಟಿಕ್ ಆರ್ಮ್ ಸಹಾಯದಿಂದ ಡಿಫ್ಯೂಸ್‌ ಕೂಡ ಮಾಡುತ್ತೆ ಈ ರೋಬೋ.

ಕೊರೊನಾ ನಿಯಂತ್ರಿಸಲು ಎಚ್ಚರಿಕೆ ನೀಡ್ತಾ ಇದೆ ರೋಬೋ ಡಾಗ್
ಸಿಂಗಾಪೂರದಲ್ಲಿ ಸೋಷಿಯಲ್ ಡಿಸ್ಟೆನ್ಸ್ ಬಗ್ಗೆ ಪಾಠ ಹೇಳುತ್ತೆ ಸ್ಪಾಟ್

ಕೊರೊನಾ ವೈರಸ್ ಸಾಂಕ್ರಾಮಿಕತೆ ತಡೆಗಟ್ಟಲು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಕಳೆದ ವರ್ಷದಿಂದ ಹೇಳುತ್ತಾ ಬಂದಿದ್ದೇವೆ. ಆದ್ರೂ ಎಚ್ಚೆತ್ತುಕೊಳ್ಳದೆ ಕೊರೊನಾ ನಿಂಯತ್ರಣಕ್ಕೆ ಬರದಷ್ಟು ವೇಗವಾಗಿ ಹರಡುತ್ತಿದೆ. ಬಾಯಿಯಿಂದ ಕೇಳದೆ ಇದ್ದಾಗ ಸಿಂಗಾಪೂರದಲ್ಲಿ ಈ ರೋಬೋ ನಾಯಿಗಳು ಎಲ್ಲಿ ಸಾಮಾಜಿಕ ಅಂತರವಿರುವುದಿಲ್ಲವೋ ಅಲ್ಲಲ್ಲಿ ಹೋಗಿ ಜನರಿಗೆ ಎಚ್ಚರಿಕೆ ಹೇಳಿ ಬಂದಿವೆ. ಮಾಸ್ಕ್ ಧರಿಸಿದವರನ್ನು ಗುರುತಿಸಿ ಮಾಸ್ಕ್ ಹಾಕಿ ಎನ್ನುವ ಕಮ್ಯಾಂಡ್ ಮಾಡಿದ್ದು ಸೋಷಿಯಲ್ ಮೀಡಿಯದಲ್ಲಿ ವೈರಲ್ ಆಗಿತ್ತು. ಪ್ಲೀಸ್ ವೇರ್‌ ಅ ಮಾಸ್ಕ್‌, ಮೈಂಟೈನ್ ಸೋಷಿಯಲ್ ಡಿಸ್ಟೆನ್ಸಿಂಗ್ ಎಂದು ಎಚ್ಚರಿಸುತ್ತಿರುವ ದೃಶ್ಯಗಳನ್ನ ನೀವೆ ನೋಡಿ.

ಸ್ಪಾಟ್ ಖರೀದಿಸಲು ಬೇಕು 75 ಸಾವಿರ ಡಾಲರ್

ಅಮೆರಿಕಾದ ಬಸ್ಟನ್ ಡೈನಮಿಕ್ಸ್ ಸಿದ್ದ ಪಡಿಸಿದ ಈ ರೋಬೋ ನಾಯಿಯ ಬೆಲೆ ಕೇಳಿದರೆ ನೀವು ಶಾಕ್ ಆಗ್ತೀರ. ಇದರ ಬೆಲೆ ಬರೋಬರಿ 75,000 ಅಮೆರಿಕನ್ ಡಾಲರ್. ಅಂದ್ರೆ ಭಾರತೀಯ ಕರೆನ್ಸಿಗೆ ಹೋಲಿಸಿದರೆ ಅದು 55 ಲಕ್ಷ ರೂಪಾಯಿ ಆಗುತ್ತದೆ. ಈ ರೋಬೋವನ್ನು ಅಮೆರಿಕದ ಆರ್ಮಿ ಬಿಟ್ಟರೆ ಕೆಲವೇ ಕೆಲವರು ಖರೀದಿಸಿದ್ದಾರೆ. ಕಾರಣ ಇದರ ಬೆಲೆ ಅಷ್ಟಿದೆ. ಇದೀಗ ಚೀನಾವೂ ಇದೇ ರೀತಿಯ ಶ್ವಾನವೊಂದನ್ನ ಮಾರುಕಟ್ಟೆಗೆ ಬಿಟ್ಟಿದೆ. ಚೀನಾ ಅಂದ್ರೆ ಸಾಕು ನಮಗೆ ಕಾಣೋದೆ ಕಡಿಮೆ ಬೆಲೆಯ ಕಳಪೆ ಪದಾರ್ಥಗಳು. ಹೀಗೆ ಅಮೆರಿಕದ ರೋಬೋ ಶ್ವಾನದ ರೀತಿಯಲ್ಲೇ ಚೀನಾವೂ ತಯಾರಿಸಿ ಅತಿ ಕಡಿಮೆ ದರದಲ್ಲಿ ಮಾರುಕಟ್ಟೆಗೆ ಬಿಟ್ಟಿದೆ.

ಈ ಶ್ವಾನದಲ್ಲಿ ಬಹಳ ವಿಶೇಷತೆಗಳಿವೆ. ಇದಕ್ಕೆ ಚೀನಾದ ಕಂಪನಿ ಆಲ್ಫಾ ಡಾಗ್ ಎಂದು ನಾಮಕರಣ ಮಾಡಿದ್ದಾರೆ. ಅಮೆರಿಕದ ಸ್ಪಾಟ್ ರೋಬೋ ನಾಯಿ ಮಾಡುವ ಎಲ್ಲ ಕೆಲಸಗಳನ್ನು ಆಲ್ಫಾ ಡಾಗ್ ಮಾಡಬಲ್ಲದು. ಕಣ್ಣಿಲ್ಲದವರಿಗೆ ದಾರಿ ತೋರಿಸುವ, ಮನೆಯಲ್ಲಿ ಎಲ್ಲರನ್ನೂ ಮನರಂಜಿಸುವ ಎಲ್ಲ ಹತ್ತು ಹಲವು ಕೆಲಸವನ್ನು ಈ ಆಲ್ಫಾ ರೋಬೋ ಶ್ವಾನ ಮಾಡಲು ಸಿದ್ದವಾಗಿರುತ್ತದೆ. ಅಲ್ಲದೆ ಫೈವ್(5)ಜಿ ತಂತ್ರಜ್ಞಾನವನ್ನು ಈ ಆಲ್ಫಾದಲ್ಲಿ ಅಳವಡಿಸಲಾಗಿದೆ. ಈ ಆಲ್ಫಾ ಡಾಗ್ ನ ಬೆಲೆ ಎಷ್ಟು ಕಡಿಮೆ ಎಂದರೆ, ಅದನ್ನು ಈಗಾಗಲೆ ಖರೀದಿಸಿರುವವರ ಸಂಖ್ಯೆ ಕೇಳಿಯೆ ಊಹಿಸಬಹುದು. ಈ ಆಲ್ಫಾ ಶ್ವಾನವನ್ನು ಮಾರುಕಟ್ಟೆಗೆ ಬಿಟ್ಟ ಎರಡೇ ವಾರದಲ್ಲಿ 1800 ಡಾಗ್ ಗಳು ಮಾರಾಟವಾಗಿವೆ.

ತನ್ನ ಪ್ರೀತಿಯ ಶ್ವಾನದ ನೆನಪಿನಲ್ಲಿ ರೋಬೋ ಸಿದ್ಧ ಪಡಿಸಿದ ವಿಜ್ಞಾನಿ
ಪ್ರೀತಿ ತೋರಿದರೆ ಈ ರೋಬೋ ನಾಯಿ ಬಾಲವನ್ನು ಆಡಿಸುತ್ತೆ

ರೋಬೋಟಿಕ್ ಶ್ವಾನ ಪ್ರಪಂಚಕ್ಕೆ ಹೊಸದೇನಲ್ಲ. ಹಲವು ವರ್ಷಗಳಿಂದ ಈ ರೀತಿಯ ಶ್ವಾನ ಮಾರುಕಟ್ಟೆಯಲ್ಲಿದೆ. ಈ ರೀತಿ ಶ್ವಾನದ ಒಂದು ಭಾವುಕ ಕಥೆಯು ಸಹ ಇದೆ. ಜೀನಿ ಎನ್ನುವ ಲಾಬ್ರೊಡಾರ್ ಜಾತಿಯ ನಾಯಿಯನ್ನು ಅಮೆರಿಕದ ವಿಜ್ಞಾನಿ ಮನೆಯಲ್ಲಿ ಸಾಕಿದ್ದರು. ಅಕಾಲಿಕವಾಗಿ ಅದು ಮರಣ ಹೊಂದಿದ ಬಳಿಕ, ಆ ಶ್ವಾನದ ನೆನಪಲ್ಲಿ ಮನೆಯವರೆಲ್ಲ ಮಂಕಾಗಿದ್ದರು. ಮನೆಯವರ ಮನಸ್ಥಿತಿ ಸರಿ ಮಾಡಲು ಈ ವಿಜ್ಞಾನಿ ಜೀನಿಯ ರೂಪ, ಮೈ-ಬಣ್ಣ ಅದರ ವರ್ತನೆಯನ್ನು ಪ್ರೋಗ್ರಾಮ್ ಮಾಡಿ ರೋಬೋ ಜೀನಿಯನ್ನು ಮನೆಗೆ ತಂದಿದ್ದರು. ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಇರುವ ಎಂದಿನಂತೆ ಪ್ರೀತಿ ತೋರಿಸಿದಾಗ ತನ್ನ ಬಾಲವನ್ನ ಆಡಿಸಿ, ಮೆನೆಯವರ ಲಾಲನೆಗೆ ಪಾತ್ರವಾಗಿದೆ. ಜೀನಿ ಶ್ವಾನದ ಮೇಲಿರುವ ಪ್ರೀತಿ ಈಗ ರೋಬೋ ಜೀನಿ ಪಡೆಯುತ್ತಿದೆ. ಹೀಗೆ ರೊಬೋ ಶ್ವಾನಗಳ ಬಗ್ಗೆ ಹೇಳ್ತಾ ಹೋದ್ರೆ ಮುಗಿಯದಷ್ಟು ಇಂಟರೆಸ್ಟಿಂಗ್ ವಿಷಯಗಳು ಸಿಗ್ತಾನೇ ಹೋಗ್ತಾವೆ.

ರೊಬೊ ಜಗತ್ತಿನಲ್ಲಿ ಇನ್ನು ಏನೇನು ಬರುತ್ತೊ ಗೊತ್ತಿಲ್ಲ. ಈಗ ರೊಬೊಟಿಕ್ ಶ್ವಾನಗಳಂತೂ ಸಿಕ್ಕಾಪಟ್ಟೆ ಓಡಾಡ್ತಾ ಇದ್ದಾವೆ. ಮುಂದಿನ ದಶಕಗಳಲ್ಲಿ ಎಲ್ಲವೂ ರೊಬೋ ಮಾಡಿ ಬಿಟ್ರೆ ಮನುಷ್ಯರಿಗೆ ಮಾತ್ರ ಅಲ್ಲ, ಶ್ವಾನಗಳಿಗೂ ಕೆಲಸ ಇಲ್ಲದ ಹಾಗೆ ಆಗಬಹುದು.

The post ತಂತ್ರಜ್ಞಾನದ ಮ್ಯಾಜಿಕ್: ತೋಟ ಅಷ್ಟೇ ಅಲ್ಲ ಗಡಿಯನ್ನೂ ಕಾಯುತ್ತದೆ ಈ ಡಾಗ್ ಆರ್ಮಿ appeared first on News First Kannada.

Source: newsfirstlive.com

Source link