ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್​ ರೌಂಡ್​​ಅಪ್​​

ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್​ ರೌಂಡ್​​ಅಪ್​​

1. ಇಂದು ಎಸ್ಎಸ್ಎಲ್​​​ಸಿ ಪರೀಕ್ಷೆ ಭವಿಷ್ಯನಿರ್ಧಾರ
ಎಸ್ಎಸ್ಎಲ್​​​ಸಿ ಪರೀಕ್ಷೆ ಕುರಿತು ಸರ್ಕಾರ ಇಂದು ಮಹತ್ವದ ನಿರ್ಧಾರ ಘೋಷಿಸಲಿದೆ. ಈ ಕುರಿತು ವಿಕಾಸಸೌಧದಲ್ಲಿ ಮಹತ್ವದ ಸಭೆ ನಡೆಯಲಿದ್ದು, ಎಸ್ಎಸ್ಎಲ್ಸಿ ಪರೀಕ್ಷೆಯ ಬಗ್ಗೆ ಸರ್ಕಾರ ನಿರ್ಧಾರ ಪ್ರಕಟಿಸಲಿದೆ.. ಶಿಕ್ಷಣ ಸಚಿವ ಸುರೇಶ್ಕುಮಾರ್ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಸಭೆಯಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಸಂವಾದ ನಡೆಯಲಿದೆ.. ಬಳಿಕ ಮಧ್ಯಾಹ್ನ ಒಂದು ಗಂಟೆಗೆ ಶಿಕ್ಷಣ ಸಚಿವ ಸುರೇಶ್ಕುಮಾರ್ ಪರೀಕ್ಷೆಯ ನಿರ್ಧಾರವನ್ನ ಪ್ರಕಟಿಸಲಿದ್ದಾರೆ.

2. ಲಾಂಜ್​ನಿಂದ ನದಿಗೆ ಹಾರಿದ ಮಹಿಳೆ ರಕ್ಷಣೆ
ನೀರಿಗೆ ಹಾರಿದ ಮಹಿಳೆಯನ್ನ ಲಾಂಜ್​​ನಲ್ಲಿದ್ದ ಜನರೇ ರಕ್ಷಿಸಿದ ಘಟನೆ ಶಿವಮೊಗ್ಗದ ಸಿಗಂಧೂರು ಬಳಿ ನಡೆದಿದೆ. ಮಹಿಳೆಯನ್ನ ಹಾವೇರಿ ಜಿಲ್ಲೆಯ ಹಿರೇಕೆರೂರು ನಿವಾಸಿ ಅಂತ ಗುರ್ತಿಸಲಾಗಿದೆ. ಸಿಗಂಧೂರು ಚೌಡೇಶ್ವರಿ ದರ್ಶನ ಪಡೆದು ಸಾಗರ ಕಡೆಗೆ ಬರುತ್ತಿದ್ದ ವೇಳೆ, ಶರಾವತಿ ನದಿಯ ಹಿನ್ನೀರಿನ ಮಧ್ಯ ಭಾಗದಲ್ಲಿ ಸಿಗಂಧೂರು ಲಾಂಜ್​ನಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ವೇಳೆ ಲಾಂಜ್​ನಲ್ಲಿದ್ದ ಪ್ರಕಾಶ್, ಸುಧಾಕರ್, ಪ್ರಶಾಂತ್ ಎಂಬುವರು ತಕ್ಷಣ ಕಾರ್ಯ ಪ್ರವೃತರಾಗಿ ಮಹಿಳೆಯನ್ನು ರಕ್ಷಿಸಿದ್ದಾರೆ.

3. ಇಂದಿನಿಂದ ಮಹಾಕಾಳೇಶ್ವರ ದೇವಾಲಯ ರೀ-ಓಪನ್
ದೇಶದ ಸುಪ್ರಸಿದ್ದ ಯಾತ್ರಾ ಸ್ಥಳವಾದ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ಮಹಾಕಾಳೇಶ್ವರ ದೇವಾಲಯವು ಇಂದಿನಿಂದ ಭಕ್ತಾದಿಗಳ ದರ್ಶನಕ್ಕೆ ಮುಕ್ತವಾಗಲಿದೆ. ಮಧ್ಯಪ್ರದೇಶದಲ್ಲಿ ಕೋವಿಡ್ -19 ಪ್ರಕರಣಗಳು ಹೆಚ್ಚಾಗಿದ್ದ ಹಿನ್ನಲೆ, ಏಪ್ರಿಲ್ 9 ರಿಂದ ಬರೋಬ್ಬರಿ 80 ದಿನಗಳ ಕಾಲ ದೇವಾಲಯವನ್ನು ಮುಚ್ಚಲಾಗಿತ್ತು. ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ದೇವಸ್ಥಾನದ ಆಡಳಿತ ಮಂಡಳಿ, ‘ದರ್ಶನಕ್ಕಾಗಿ ಭಕ್ತಾದಿಗಳು ಆನ್ಲೈನ್ನಲ್ಲಿ ಬುಕ್ಕಿಂಗ್ ಮಾಡುವುದರ ಜೊತೆಗೆ ಕನಿಷ್ಠ ಒಂದು ಡೋಸ್ ಕೊರೊನಾ ಲಸಿಕೆ ಪಡೆದಿರಬೇಕೆಂಬ ಷರತ್ತು ವಿಧಿಸಿದೆ.

4. 100 ರೂ.ಗಾಗಿ ವಿಶ್ರಾಂತ ಮಾಜಿ ಕುಲಪತಿ ಕೊಲೆ
100 ರೂಪಾಯಿಗಾಗಿ ವಿಶ್ರಾಂತ ಕುಲಪತಿಯನ್ನೆ ಕೊಲೆ ಮಾಡಿರುವ ಘಟನೆ ಒಡಿಶಾದಲ್ಲಿ ನಡೆದಿದೆ. ಸಂಬಲ್ಬುರ ವಿಶ್ವವಿದ್ಯಾಯದ ವಿಶ್ರಾಂತ ಕುಲಪತಿ ಧುರ್ಭಾ ರಾಜ್ ನಾಯಕ್ರನ್ನು 100 ರೂಪಾಯಿಗಾಗಿ ಕೊಲೆ ಮಾಡಲಾಗಿದೆ. ಧುರ್ಭಾ ರಾಜ್ ನಾಯಕ್ ಮನೆಗೆ ನುಗ್ಗಿದ ಆರೋಪಿ 100 ರೂಪಾಯಿ ಕೊಡಿ ಅಂತಾ ಬೇಡಿಕೆ ಇಟ್ಟಿದ್ದ, ಆದ್ರೆ ಧುರ್ಭಾ ರಾಜ್ ನಾಯಕ್ ಹಣ ಕೊಡಲು ನಿರಾಕರಿಸಿದಾಗ ಕೊಡಲಿಯಿಂದ ಹಲ್ಲೆ ಮಾಡಿದ್ದಾನೆ.  ಗಾಯಗೊಂಡ ವಿಶ್ರಾಂತ ಕುಲಪತಿ ಸ್ಥಳದಲ್ಲೆ ಮೃತಪಟ್ಟಿದ್ದಾರೆ.

5 ದೇಶದ ಹಲವೆಡೆ ನೂರರ ಗಡಿ ದಾಟಿದ ತೈಲ
ಪೆಟ್ರೋಲ್ ಬೆಲೆ ಭಾರತದ ಬಹುತೇಕ ನಗರಗಳಲ್ಲಿ 100ರ ಗಡಿದಾಟಿದೆ. ಸತತವಾಗಿ ಏರಿಕೆ ಕಾಣುತ್ತಿರುವ ಪೆಟ್ರೋಲ್ ದರ ಶನಿವಾರ 35 ಪೈಸೆ ಹೆಚ್ಚಳವಾಗುವ ಮೂಲಕ 54 ದಿನಗಳಲ್ಲಿ 30ನೇ ಸಲ ದರ ಏರಿಕೆ ಕಂಡಂತಾಗಿದೆ. ಕಳೆದ ಮೇ 4ರಿಂದ ಪೆಟ್ರೋಲ್ ದರದಲ್ಲಿ ಬರೊಬ್ಬರಿ 7 ರೂ 71 ಪೈಸೆ ಹೆಚ್ಚಳವಾಗಿದ್ದರೆ, ಡೀಸೆಲ್ ಬೆಲೆಯಲ್ಲಿ 7 ರೂ. 92 ಪೈಸೆ ಏರಿಕೆ ಕಂಡಿದೆ. ನಾಲ್ಕು ರಾಜ್ಯಗಳಲ್ಲಿ ದರ ನೂರರ ಗಡಿ ದಾಟಿದ್ರೆ, ರಾಜಧಾನಿ ದೆಹಲಿಯಲ್ಲಿ ಹೊಸ ದಾಖಲೆ ಬರೆದಿದೆ.

6 ಸರ್ವಾಧಿಕಾರಿ ಕಿಮ್ ಆರೋಗ್ಯದಲ್ಲಿ ಏರುಪೇರು!?
ಉತ್ತರ ಕೋರಿಯಾ ನಾಯಕ ಕಿಮ್ ಜಾಂಗ್ ಉನ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಇತ್ತೀಚಿಗಿನ ಕಿಮ್ ದೇಹದ ತೂಕ ಭಾರೀ ಮಟ್ಟದಲ್ಲಿ ಇಳಿಕೆ ಆಗಿದ್ದು, ಸಾಕಷ್ಟು ಸಂಶಯಗಳನ್ನ ಹುಟ್ಟುಹಾಕಿದೆ..ದೇಶಾದ್ಯಂತ ಕಿಮ್ ವಿಡಿಯೋ ಸೋರಿಕೆ ಆಗದಂತೆ ಕ್ರಮವಹಿಸಲಾಗಿದೆ ಅಂತ ಹೇಳಲಾಗ್ತಿದೆ. ಗೌರವಾನ್ವಿತ ಪ್ರಧಾನ ಕಾರ್ಯದರ್ಶಿ ಕಿಮ್ ಜೊಂಗ್ ಉನ್ ಮನೋಹರವಾಗಿ ಕಾಣುತ್ತಿರುವುದು ನಮ್ಮ ಜನರ ಹೃದಯ ಬಡಿತ ಹೆಚ್ಚಿಸಿದೆ. ಪ್ರತಿಯೊಬ್ಬರು ತಮ್ಮ ಕಣ್ಣೀರಿನ ಮೂಲಕ ಹಾರೈಸುತ್ತಿದ್ದಾರೆ ಅಂತ ಕೋರಿಯನ್ ಸರ್ಕಾರಿ ಸುದ್ಧಿ ಸಂಸ್ಥೆ ಬಿತ್ತರಿಸಿದೆ.

7 ‘ಸಾಧನೆ ಯಾರ ಸ್ವತ್ತು ಅಲ್ಲ’
ಕೇರಳದ ವರ್ಕಳ ಎಂಬ ಊರಲ್ಲಿರುವ ಶಿವಗಿರಿ ಆಶ್ರಮ ಪ್ರದೇಶವೊಂದಿದೆ. ಹತ್ತು ವರ್ಷಗಳ ಹಿಂದೆ ಅಲ್ಲಿಗೆ ಬರುತ್ತಿದ್ದ ಪ್ರವಾಸಿಗರಿಗೆ ಜ್ಯೂಸ್‌ ಹಾಗೂ ಐಸ್‌ ಕ್ರೀಮ್ ಮಾರಾಟ ಮಾಡಿ ಯುವತಿಯೊಬ್ಬಳು ಜೀವನ ಮಾಡ್ತಿದ್ದಳು. ಆದ್ರೆ, ಕೆಲ ದಿನಗಳ ಬಳಿಕ ಕಾಣೆ ಆಗಿದ್ದ ಆಕೆ, ಇದೀಗ ಅದೇ ಊರಲ್ಲಿ ಪೊಲೀಸ್‌ ಸಬ್ ಇನ್ಸ್ಪೆಕ್ಟರ್‌ ಆಗಿ ಪ್ರತ್ಯಕ್ಷಳಾಗಿದ್ದಾಳೆ. 31ರ ಹರೆಯದ ಆನಿ ಶಿವ ಎಂಬ ಈ ತರುಣಿ, ಪತಿ ಮತ್ತು ಕುಟುಂಬದಿಂದ ತ್ಯಜಿಸಲ್ಪಟ್ಟಿದ್ಲು. 6 ತಿಂಗಳ ಮಗುವಿನೊಂದಿಗೆ ಬೀದಿಗೆ ಬಿದ್ದಿದ್ದಾಕೆಗೆ, ಈ ಅವಮಾನಗಳೆ ಸಾಧನೆಯ ಮೆಟ್ಟಿಲುಗಳಾಗಿ ಮಾಡಿಕೊಂಡು, ಸಬ್ ಇನ್ಸ್ಪೆಕ್ಟರ್ ಆಗಿ ನೇಮಕಗೊಂಡಿದ್ದಾಳೆ.

8 ನೀರಲ್ಲಿ ಆಕ್ಸಿಜನ್ ಕೊರತೆಯಿಂದ ಮೀನುಗಳ ಸಾವು
ಕೊರೊನಾದಿಂದ ಆಕ್ಸಿಜನ್ ಲೆವೆಲ್ ಕಡಿಮೆಯಾಗಿ ಜನರು ಸಾವನ್ನಪ್ಪಿದ್ದ ಘಟನೆಯಂತೆ, ನೀರಿನಲ್ಲಿ ಆಕ್ಸಿಜನ್ ಲೆವೆಲ್ ಕಡಿಮೆಯಾಗಿ ನೂರಾರು ಮೀನುಗಳು ಪ್ರಾಣಬಿಟ್ಟಿರುವ ಘಟನೆ ಅಸ್ಸಾಂನ ಗವಾಹಾಟಿಯಲ್ಲಿ ನಡೆದಿದೆ. ದಿಗ್ನಿಪುಕುರಿ ನದಿಯಲ್ಲಿ ಆಕ್ಸಿಜನ್ ಲೆವೆಲ್ ಕಡಿಮೆಯಾಗಿ ಮೀನುಗಳು ಸಾವನ್ನಪ್ಪಿವೆ ಅಂತ ಮೀನುಗಾರಿಕೆ ಸಚಿವ ಪರಿಮಳ ಶುಕ್ಲಬೈದ್ಯೆ ತಿಳಿಸಿದ್ದಾರೆ. ಸದ್ಯ ಸತ್ತ ಮೀನುಗಳ ದೇಹವನ್ನ ಪರೀಕ್ಷಿಸಿದಾಗ, ನೀರಿನಲ್ಲಿ ಅತಿಯಾದ ಸಾವಯವ ವಸ್ತುಗಳ ಒತ್ತಡದಿಂದ ಆಕ್ಸಿಜನ್ ಲೆವೆಲ್ ಕಡಿಮೆಯಾಗಿದೆ ಅಂತ ತಿಳಿದುಬಂದಿದೆ.

9 ಸೂಪರ್​​ ಸ್ಟಾರ್ ರಜಿನಿ ಆರೋಗ್ಯ ಕ್ಷೇಮ
ಸೂಪರ್ ಸ್ಟಾರ್ ರಜಿನಿಕಾಂತ್ ಕುಟುಂಬ ಸದ್ಯ ಅಮೆರಿಕಾದಲ್ಲಿ ಬೀಡುಬಿಟ್ಟಿದೆ.. ಆರೋಗ್ಯ ಚೆಕಪ್ಗಾಗಿ ಅಮೆರಿಕಾಕ್ಕೆ ರಜಿನಿಕಾಂತ್ ತೆರಳಿದ್ದು, ಗೀತರಚನೆಕಾರ ಆಪ್ತ ವೈರಮುತ್ತುರನ್ನ ಕರೆಸಿಕೊಂಡಿದ್ದಾರೆ.. ಈ ಬಗ್ಗೆ ಟ್ವೀಟ್ ಮಾಡಿರುವ ವೈರಮುತ್ತು.. ಸದೃಢರಾಗಿದ್ದು, ಆರೋಗ್ಯದಿಂದ ಇದ್ದಾರೆ ಅಂತ ವೈದ್ಯರು ತಿಳಿಸಿದ್ದಾಗಿ ಹೇಳಿದ್ದಾರೆ.. ಕಳೆದ ಜೂನ್ 19ರಂದು ಚೆನ್ನೈ ವಿಮಾನ ನಿಲ್ದಾಣದ ಮೂಲಕ ಪತ್ನಿ ಲತಾ ಜೊತೆ ರಜಿನಿ ಅಮೆರಿಕಾ ತೆರಳಿದ್ದರು.. ಈ ಹಿಂದೆ 2016ರಲ್ಲಿ ಕಿಡ್ನಿ ಕಸಿ ಮಾಡಿಸಿಕೊಂಡಿದ್ದರು..

10 ಟ್ವಿಟರ್‌ ಕುಂದುಕೊರತೆ ಅಧಿಕಾರಿ ರಾಜೀನಾಮೆ
ದಿಢೀರ್‌ ಬೆಳವಣಿಗೆಯೊಂದರಲ್ಲಿ ಟ್ವಿಟರ್‌ ಸಂಸ್ಥೆಯಲ್ಲಿ ಭಾರತೀಯ ಗ್ರಾಹಕರ ಕುಂದು ಕೊರತೆ ನಿವಾರಣಾ ಅಧಿಕಾರಿಯಾಗಿ ಇತ್ತೀಚೆಗಷ್ಟೇ ನೇಮಕವಾಗಿದ್ದ ಧರ್ಮೇಂದ್ರ ಚತುರ್‌, ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಕೇಂದ್ರದ ಐಟಿ ನಿಯಮ ಪ್ರಕಾರ, ಭಾರತದಲ್ಲಿ ಕುಂದುಕೊರತೆ ನಿವಾರಣಾ ಅಧಿಕಾರಿ ನೇಮಿಸುವುದು ಎಲ್ಲಾ ಸಾಮಾಜಿಕ ಜಾಲತಾಣ ಸಂಸ್ಥೆಗಳಿಗೆ ಕಡ್ಡಾಯವಾಗಿದೆ.. ಹಾಗಾಗಿ, ಚತುರ್‌ರನ್ನ ಟ್ವಿಟರ್‌ ನೇಮಿಸಿಕೊಂಡಿತ್ತು.. ಐಟಿ ನಿಯಮ ಪಾಲನೆ ಮಾಡದ ಟ್ವಿಟರ್‌ ಹಾಗೂ ಕೇಂದ್ರದ ನಡುವೆ ಕಾರ್ಮೋಡದ ವಾತಾವರಣ ಆವರಿಸಿರುವ ನಡುವೆಯೇ ಚತುರ್‌ ಹುದ್ದೆಯಿಂದ ನಿರ್ಗಮಿಸಿದ್ದಾರೆ. ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಲು ಟ್ವಿಟರ್‌ ನಿರಾಕರಿಸಿದೆ.

The post ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್​ ರೌಂಡ್​​ಅಪ್​​ appeared first on News First Kannada.

Source: newsfirstlive.com

Source link