ಭಾರತದ ವಿರುದ್ಧ ಮುಂದುವರೆದ ದಾಳಿ; ಈ ಬಾರಿ ಜಮ್ಮು ಕಾಶ್ಮೀರವನ್ನೇ ಬೇರೆ ಮಾಡಿದ ಟ್ವಿಟರ್

ಭಾರತದ ವಿರುದ್ಧ ಮುಂದುವರೆದ ದಾಳಿ; ಈ ಬಾರಿ ಜಮ್ಮು ಕಾಶ್ಮೀರವನ್ನೇ ಬೇರೆ ಮಾಡಿದ ಟ್ವಿಟರ್

ಭಾರತದ ಗ್ರಾಹಕರು ಮಾತ್ರ ಬೇಕು.. ಆದ್ರೆ ಈ ನೆಲದ ನಿಯಮಗಳನ್ನ ಮಾತ್ರ ಪಾಲಿಸಲು, ದೇಶದ ಸಾರ್ವಭೌಮತ್ವವನ್ನ ಗೌರವಿಸುವುದಿಲ್ಲ.. ಇದು ಸಾಮಾಜಿಕ ಜಾಲತಾಣ ದೈತ್ಯ ಟ್ವಿಟರ್​ನ ಧೋರಣೆಯಾಗಿರುವಂತೆ ಕಾಣ್ತಿದೆ.

ಇತ್ತೀಚೆಗೆ ಭಾರತದಲ್ಲಿ ಸಾಮಾಜಿಕ ಜಾಲತಾಣಗಳಿಗೆ ಹೊಸ ನಿಯಮಗಳನ್ನ ತರಲಾಗಿದೆ. ಆದ್ರೆ ಅವನ್ನ ಪಾಲಿಸದೇ ಟ್ವಿಟರ್, ಭಾರತ ಸರ್ಕಾರದ ​​ಕೆಂಗಣ್ಣಿಗೆ ಗುರಿಯಾಗಿದೆ. ಇದರ ಬೆನ್ನಲ್ಲೆ ಟ್ವಿಟರ್​ಗೆ ಇದ್ದ ಮಧ್ಯವರ್ತಿ ವೇದಿಕೆ ಸ್ಥಾನಮಾನವನ್ನ ರದ್ದು ಮಾಡಲಾಗತ್ತು. ಹೀಗೆ ಹಲವು ವಿಚಾರಗಳಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಜಟಾಪಟಿ ಮುಂದುವರೆಸಿರೋ ಸಂಸ್ಥೆ, ಈಗ ಭಾರತದ ಮ್ಯಾಪ್​​ನಲ್ಲಿ ದೇಶದ ಮುಕುಟವೆನಿಸಿಕೊಂಡಿರೋ ಜಮ್ಮು ಕಾಶ್ಮೀರವನ್ನೇ ಬೇರೆ ಮಾಡಿ ಉದ್ಧಟತನ ಮೆರೆದಿದೆ. ಇದು ಭಾರತೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಕೆರಿಯರ್ಸ್​ ಟ್ವಿಟರ್​ ಡಾಟ್​ ಕಾಮ್ ವೆಬ್​ಸೈಟ್​​ನಲ್ಲಿ ಭಾರತದ ನಕ್ಷೆಯನ್ನ ತಪ್ಪಾಗಿ ಪ್ರಕಟಿಸಲಾಗಿದೆ. ನಾವು ಜಾಗತಿಕ ತಂಡ ಅನ್ನೋ ಶಿರ್ಷಿಕೆ ಅಡಿ ಟಿಪ್ಪಣಿ ಪ್ರಕಟಿಸಿರೋ ಸಂಸ್ಥೆ, ಯಾವೆಲ್ಲಾ ದೇಶದಲ್ಲಿ ಟ್ವಿಟರ್​ಗಾಗಿ ಕೆಲಸ ಮಾಡುವ ಉದ್ಯೋಗಿಗಳು ಇದ್ದಾರೆ ಎಂಬುದನ್ನ ಮ್ಯಾಪ್​ನಲ್ಲಿ ಗುರುತು ಮಾಡಿ ತಿಳಿಸಿದೆ. ಜಮ್ಮು ಕಾಶ್ಮೀರ ಭಾರತಕ್ಕೆ ಸೇರಿದ್ದು ಅನ್ನೋದು ನಿರ್ವಿವಾದ. ಹೀಗಿದ್ರೂ ಟ್ವಿಟರ್​ ಸಂಸ್ಥೆ, ವಿಶ್ವದ ಭೂಪಟದಲ್ಲಿ ಭಾರತವನ್ನು ಗುರುತಿಸುವಾಗ ಜಮ್ಮು ಕಾಶ್ಮೀರವನ್ನ ಕೈಬಿಟ್ಟಿದೆ. ಇದನ್ನ ಹಲವಾರು ಜನರು ಖಂಡಿಸಿದ್ದಾರೆ. ಭಾರತದಲ್ಲಿ ಟ್ವಿಟರ್​ ಅನ್ನು ಬ್ಯಾನ್ ಮಾಡಲು ಹಿಂದೇಟು ಯಾಕೆ. ಇನ್ನೂ ಯಾಕೆ ಕಾಯುತ್ತಿದ್ದೀರ? ಟ್ವಿಟರ್​ ಬ್ಯಾನ್ ಮಾಡಿ ಅಂತ ಅನೇಕ ಜನರು ಆಗ್ರಹಿಸುತ್ತಿದ್ದಾರೆ.

ಟ್ವಿಟರ್​ ಉದ್ಧಟತನ ಇದೇ ಮೊದಲಲ್ಲ

ಟ್ವಿಟರ್ ಭಾರತದ ನಕ್ಷೆಯನ್ನ ತಪ್ಪಾಗಿ ತೋರಿಸಿರೋದು ಇದೇ ಮೊದಲೇನಲ್ಲ. ಈ ಹಿಂದೆ ಭಾರತದ ಲಡಾಖ್​ನಲ್ಲಿರೋ ಲೇಹ್​ ಪಾಂತ್ಯವನ್ನ ಚೀನಾದ ಭಾಗವೆಂದು ತೋರಿಸಿತ್ತು. 2020ರ ಅಕ್ಟೋಬರ್​ನಲ್ಲಿ ನಿತಿನ್ ಎ ಗೋಖಲೆ ಎಂಬವರು ಇದನ್ನ ಗುರುತಿಸಿದ್ದರು.

ಸ್ಟ್ರಾಟ್ ನ್ಯೂಸ್ ಗ್ಲೋಬಲ್​ನ ಸಂಸ್ಥಾಪಕರಾದ ಗೋಖಲೆ ತಮ್ಮ ಒಂದು ಲೈವ್ ವಿಡಿಯೋದಲ್ಲಿ ತಾವಿರುವ ಸ್ಥಳವನ್ನು ‘ಹಾಲ್ ಆಫ್ ಫೇಮ್ ಲೇಹ್’ ಎಂದು ಮಾರ್ಕ್ ಮಾಡಿದ್ದರು. ಆದ್ರೆ ಟ್ವಿಟರ್ ಆ ಪ್ರದೇಶವನ್ನ ಚೀನಾದ ಒಂದು ಭಾಗವಾಗಿ ತೋರಿಸಿತ್ತು.

ಭಾರತದ ನಕ್ಷೆಯನ್ನು ತಪ್ಪಾಗಿ ತೋರಿಸಿದ್ದಕ್ಕೆ, ಭಾರತ ಸರ್ಕಾರ ಟ್ವಿಟರ್​ ಸಿಇಒ ಜ್ಯಾಕ್ ಡಾರ್ಸಿಗೆ ಎಚ್ಚರಿಕೆ ನೀಡಿತ್ತು. ಇಂತಹ ಪ್ರಯತ್ನ ಟ್ವಿಟರ್‌ಗೆ ಅಪಖ್ಯಾತಿಯನ್ನು ತಂದುಕೊಡುವುದಲ್ಲದೆ, ಮಧ್ಯವರ್ತಿಯಾಗಿ ತನ್ನ ತಟಸ್ಥತೆ ಮತ್ತು ನ್ಯಾಯಯುತ ನಡವಳಿಕೆ ಬಗ್ಗೆ ಪ್ರಶ್ನೆ ಹುಟ್ಟುಹಾಕುತ್ತದೆ ಅಂತ ಟ್ವಿಟರ್‌ಗೆ ನೋಟಿಸ್ ನೀಡಲಾಗಿತ್ತು.

The post ಭಾರತದ ವಿರುದ್ಧ ಮುಂದುವರೆದ ದಾಳಿ; ಈ ಬಾರಿ ಜಮ್ಮು ಕಾಶ್ಮೀರವನ್ನೇ ಬೇರೆ ಮಾಡಿದ ಟ್ವಿಟರ್ appeared first on News First Kannada.

Source: newsfirstlive.com

Source link